ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಾಂತಿಯಿಂದ ವಾಂತಿ: ಸ್ವಾಮೀಜಿ

Last Updated 15 ಫೆಬ್ರುವರಿ 2021, 7:16 IST
ಅಕ್ಷರ ಗಾತ್ರ

ತುಮಕೂರು: ‘ನನಗೆ ಕ್ರಾಂತಿ ಬೇಡ. ಜಗತ್ತಿನ ಇತಿಹಾಸದಲ್ಲಿ ಕ್ರಾಂತಿಗಳು ವಾಂತಿ ತಂದಿವೆ. ಯಾವುದೇ ಕ್ರಾಂತಿ ಮನುಷ್ಯನ ಅಭ್ಯುದಯವನ್ನು ಸಕಾರಾತ್ಮಕವಾಗಿ ತೆಗೆದುಕೊಂಡು ಹೋಗಿಲ್ಲ’ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ವಿರೇಶಾನಂದ ಸರಸ್ವತಿ ಭಾನುವಾರ ಇಲ್ಲಿ ಹೇಳಿದರು.

ನಗರದ ರೈಲ್ವೆ ನಿಲ್ದಾಣ ರಸ್ತೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಳೇ ವಿದ್ಯಾರ್ಥಿಗಳ ಸಂಘದ ವತಿಯಿಂದ ನಡೆದ ‘ಸ್ನೇಹ ಸಂಗಮ’ ಕಾರ್ಯಕ್ರಮದಲ್ಲಿ ಮಾತನಾಡಿದರು. ‘ನಾನು ಜಾತಿ ಇಲ್ಲದ, ಜಾಥಾ ಒಲ್ಲದ ಸ್ವಾಮೀಜಿ. ನನಗೆ ಪ್ರಾಯೋಗಿಕ ಬೆಳವಣಿಗೆಗಳು ಬೇಕು’ ಎಂದರು.

‘ಸುಳ್ಳು, ಮೋಸ, ವಂಚನೆಯ ಮಾತುಗಳು ಜೀವನದಲ್ಲಿ ಎಂದಿಗೂ ಸಹಾಯಕ್ಕೆ ಬರುವುದಿಲ್ಲ. ಕಾಲೇಜಿನಲ್ಲಿ ಮೆರಿಟ್‌ ಗೌರವಿಸದಿದ್ದರೆ ಸಹಜವಾಗಿ ಬೇರೆಡೆಗೆ ಹರಿದು ಹೋಗುತ್ತದೆ. ಮೆರಿಟ್ ಹೊಂದಿದವರು ವಿಶ್ವಪ್ರಜೆಯಾಗುತ್ತಾನೆ. ಮೆರಿಟ್ ಇದ್ದರೆ ಪ್ರಪಂಚ ನಿಮ್ಮನ್ನು ಬಯಸುತ್ತದೆ’ ಎಂದು ಅಭಿಪ್ರಾಯಪಟ್ಟರು.

ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ.ಗೌಡ, ‘ರಾಜ್ಯದಲ್ಲಿ 400ಕ್ಕೂ ಹೆಚ್ಚು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿದ್ದು, ಅದರಲ್ಲಿ 398 ಕಾಲೇಜುಗಳಲ್ಲಿ ಪ್ರಾಂಶುಪಾಲರ ಹುದ್ದೆಗಳು ಖಾಲಿ ಇವೆ. ಮನೆಯಲ್ಲಿ ಮನೆಯ ಯಜಮಾನನೇ ಇಲ್ಲವಾದರೆ ಆ ಮನೆ ಹೇಗೆ ನಡೆಯುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬಹುದು’ ಎಂದರು.

ಕಾಲೇಜು ಪ್ರಾಂಶುಪಾಲ ಪ್ರೊ.ಜಗದೀಶ್, ‘ಸರ್ಕಾರಿ ಪ್ರಥಮ ದರ್ಜೆ ಕಾಲೇಜು 2011-12ರಲ್ಲಿ ಆರಂಭವಾಗಿದ್ದು, ಕೆಲವೇ ತಿಂಗಳಲ್ಲಿ ದಶಮಾನೋತ್ಸವ ಆಚರಿಸಿಕೊಳ್ಳಲಿದೆ’ ಎಂದು ತಿಳಿಸಿದರು.

ಕಾಲೇಜಿನ ಹಳೇ ವಿದ್ಯಾರ್ಥಿ ಸಬ್‌ಇನ್ಸ್‌ಪೆಕ್ಟರ್ ಎನ್.ರಂಗನಾಥ್, ನಿವೃತ್ತ ಪ್ರಾಂಶುಪಾಲ ಪ್ರೊ.ಚಿಕ್ಕಹನುಮಯ್ಯ, ಬಿಸಿಎ ವಿಭಾಗದಲ್ಲಿ 7ನೇ ರ‍್ಯಾಂಕ್ ಪಡೆದ ಸೌಂದರ್ಯ ಅವರನ್ನು ಗೌರವಿಸಲಾಯಿತು.

ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ.ಗಂಗಾಧರ್, ಡಿ.ಚಂದ್ರಪ್ಪ, ಸಿಂಡಿಕೇಟ್ ಸದಸ್ಯ ಆರ್.ಕೆ.ಶ್ರೀನಿವಾಸ್, ಪ್ರೊ.ಎ.ಆರ್.ಮಹೇಶ್, ಸುಹಾಸ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT