ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಪ್ರಜಾವಾಣಿ ಅಮೃತ ಮಹೋತ್ಸವದ ಪ್ರಯುಕ್ತ ವಾಕಥಾನ್

Last Updated 21 ಜನವರಿ 2023, 16:02 IST
ಅಕ್ಷರ ಗಾತ್ರ

ತುಮಕೂರು: ‘ಪ್ರಜಾವಾಣಿ’ ರಾಜ್ಯ, ದೇಶ, ವಿದೇಶದ ಪತ್ರಿಕೆಯಾಗಿ ಹೊರಹೊಮ್ಮಿರುವುದು ಕನ್ನಡಿಗರ ಹೆಮ್ಮೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಹೇಳಿದರು.

‘ಪ್ರಜಾವಾಣಿ–75’ ಅಮೃತ ಮಹೋತ್ಸವದ ಅಂಗವಾಗಿ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಾಕಥಾನ್ ಮುಕ್ತಾಯ ಸಮಾರಂಭದಲ್ಲಿ ಮಾತನಾಡಿದರು.

ಪ್ರಜಾವಾಣಿ ವಿಶ್ವಾಸ, ವಿಶ್ವಾಸಾರ್ಹತೆಯಲ್ಲಿ ದಾಖಲೆ ಮಾಡಿದೆ. ಇಂದಿಗೂ ವಿಶ್ವಾಸ ಕಾಯ್ದುಕೊಂಡು ಎಲ್ಲರನ್ನು ತಲುಪುವಲ್ಲಿ ಯಶಸ್ವಿಯಾಗಿದೆ ಎಂದರು.

‘ಪ್ರಜಾವಾಣಿಗೂ ನನಗೂ ವಿಶೇಷವಾದ ನಂಟು ಮತ್ತು ಸಂಬಂಧ. ಪ್ರಜಾವಾಣಿಯಲ್ಲಿ ಎಂಟು ವರ್ಷ ವರದಿಗಾರನಾಗಿ ಕೆಲಸ ಮಾಡಿದ್ದೇನೆ. ಚಿಕ್ಕಂದಿನಿಂದಲೂ ಪತ್ರಿಕೆ ಎಂದರೆ ಪ್ರಜಾವಾಣಿ ಕಣ್ಮುಂದೆ ಬರುತ್ತದೆ. ವಿಶ್ವಾಸಾರ್ಹ, ಗುಣಮಟ್ಟದ ಸುದ್ದಿ ಕೊಡುತ್ತಿದೆ. ಹೀಗಾಗಿ ಪತ್ರಿಕೆ ಓದಲು ಶಿಕ್ಷಕರು ಮಾರ್ಗದರ್ಶನ ಮಾಡುತ್ತಿದ್ದರು. ಅಲ್ಲಿಂದ ಪತ್ರಿಕೆ ಓದಲು ಆರಂಭಿಸಿದೆ’ ಎಂದು ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡರು.

ಸಿದ್ಧಗಂಗಾ ಆಸ್ಪತ್ರೆಯ ನಿರ್ದೇಶಕ ಡಾ.ಎಸ್. ಪರಮೇಶ್, ‘ಚಿಕ್ಕ ವಯಸ್ಸಿನಿಂದಲೂ ಪ್ರಜಾವಾಣಿ ಓದಿಕೊಂಡು ಬೆಳೆದಿದ್ದೇವೆ. ಗುಣಾತ್ಮಕವಾದ ವಿಷಯಗಳ ಮೂಲಕ ಜನರನ್ನು ತಲುಪುತ್ತಿದೆ. ವಿಶ್ವಾಸ ಉಳಿಸಿಕೊಂಡು ಮುಂದೆ ಸಾಗುತ್ತಿದೆ’ ಎಂದು ತಿಳಿಸಿದರು.

ಸಿದ್ಧಗಂಗಾ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ ಹಾಗೂ ಸ್ಮಾರ್ಟ್ ಸಿಟಿ ಸಹಯೋಗದಲ್ಲಿ ವಾಕಥಾನ್ ಹಮ್ಮಿಕೊಳ್ಳಲಾಗಿತ್ತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್‌.ಕೆ. ಶಹಪೂರವಾಡ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ. ವಿದ್ಯಾಕುಮಾರಿ, ಸಿದ್ಧಗಂಗಾ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ.ಶಾಲಿನಿ, ಜಗನ್ನಾಥ್ ಜೋಯಿಷ್ ಮೊದಲಾದವರು ಉಪಸ್ಥಿತರಿದ್ದರು.

**

ಪ್ರಜಾವಾಣಿಯಲ್ಲಿ ಸುದ್ದಿ ಬಂದರೆ ಸರ್ಕಾರ ಸ್ಪಂದನೆ

ಪ್ರಜಾವಾಣಿಯಲ್ಲಿ ಬಂದ ವರದಿಗಳಿಗೆ ಸರ್ಕಾರಗಳು, ಅಧಿಕಾರಿಗಳು ತಕ್ಷಣ ಸ್ಪಂದಿಸುತ್ತಾರೆ ಎಂದು ವೈ.ಎಸ್‌. ಪಾಟೀಲ ಹೇಳಿದರು.

‘ನಾನು ಪ್ರಜಾವಾಣಿಯಲ್ಲಿ ವರದಿಗಾರನಾಗಿದ್ದಾಗ ಚಿಕ್ಕೋಡಿ, ಬೆಳಗಾವಿ ಭಾಗದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಎದುರಾಗಿತ್ತು. ಕೊಯ್ನಾ ಜಲಾಶಯದಿಂದ ನೀರು ಬಿಡಲು ರಾಜ್ಯ ಸರ್ಕಾರ ಸುಮಾರು ₹6.43 ಕೋಟಿ ಬಾಕಿ ಉಳಿಸಿಕೊಂಡಿತ್ತು. ಈ ಬಗ್ಗೆ ಬರೆದಿದ್ದ ವರದಿ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಮರು ದಿನವೇ ಅಂದಿನ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಪತ್ರಿಕೆಯ ವರದಿ ಆಧರಿಸಿ ಮಹಾರಾಷ್ಟ್ರ ಮುಖ್ಯಮಂತ್ರಿ ಜೊತೆ ಮಾತನಾಡಿ, ಬಾಕಿ ಹಣ ಬಿಡುಗಡೆ ಮಾಡಿದರು. ಒಂದೇ ದಿನಕ್ಕೆ ನೀರು ಬಿಟ್ಟರು’ ಎಂದು ತಮ್ಮ ವರದಿಗಾರಿಕೆಯ ದಿನಗಳನ್ನು ಮೆಲುಕು ಹಾಕಿದರು.

ಇದರ ನಂತರ ಬರಗಾಲದ ಸಮಯದಲ್ಲಿ ಚಿಕ್ಕೋಡಿಯಲ್ಲಿ ಗೋಶಾಲೆ ಆರಂಭವಾಗಬೇಕಿತ್ತು. ಈ ಕುರಿತು ವರದಿ ಮಾಡಿದ ಬಳಿಕ ಚಿಕ್ಕೋಡಿಯಲ್ಲಿ ರಾಜ್ಯದಲ್ಲಿಯೇ ಮೊದಲಿಗೆ ಗೋಶಾಲೆ ಪ್ರಾರಂಭವಾಯಿತು. ಪ್ರಜಾವಾಣಿ ಪ್ರಾರಂಭದಿಂದಲೂ ಸುದ್ದಿ, ವರದಿಯಿಂದಲೇ ಜನರನ್ನು ತಲುಪುವ ಕೆಲಸ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬೇರೆ ಪತ್ರಿಕೆಗಳಿಗಿಂತ ಪ್ರಜಾವಾಣಿಯಲ್ಲಿ ಸುದ್ದಿ ಬಂದಿದೆಯೇ ಎಂಬುದನ್ನು ಓದಿ, ಕೇಳಿ, ಖಚಿತ ಪಡಿಸಿಕೊಳ್ಳುತ್ತೇವೆ. ಆ ವಿಶ್ವಾಸವನ್ನು ಇಂದಿಗೂ ಉಳಿಸಿಕೊಂಡಿದೆ. ಶ್ರೇಷ್ಠತೆ ಕಾಯ್ದುಕೊಂಡಿದೆ. ಯಾವುದೇ ಪಕ್ಷ, ವ್ಯಕ್ತಿಯ ಪರವಾಗಿ ನಿಲ್ಲದೆ, ಸರ್ವ ಜನರನ್ನು ಒಳಗೊಳ್ಳುವ ಪತ್ರಿಕೆಯಾಗಿದೆ ಎಂದು ಪ್ರಜಾವಾಣಿಯ ವಿಶ್ವಾಸಾರ್ಹತೆ ಬಗ್ಗೆ ತಿಳಿಸಿಕೊಟ್ಟರು.

ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಪತ್ರಿಕೆಯಲ್ಲಿನ ಸುದ್ದಿ ಆಧರಿಸಿ ಬಹಳಷ್ಟು ಸುಧಾರಣೆಯ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಕೋವಿಡ್, ಬರಗಾಲದ ಸಮಯದಲ್ಲಿ ಪತ್ರಿಕೆಯ ವರದಿ, ಸುದ್ದಿಗಳಿಂದಲೂ ಜನರಿಗೆ ನೆರವಾಗಿದ್ದೇವೆ ಎಂದು ಸ್ಮರಿಸಿದರು.

ಸಾಮಾಜಿಕ ಜಾಲತಾಣ, ವಿದ್ಯುನ್ಮಾನ ಮಾಧ್ಯಮಗಳ ಮಧ್ಯೆ ಮುದ್ರಣ ಮಾಧ್ಯಮ ಉಳಿದುಕೊಳ್ಳುವುದು ಬಹಳ ಕಷ್ಟ. ಇಂತಹ ಸಮಯದಲ್ಲೂ ಎಲ್ಲ ಸಂಕಷ್ಟಗಳನ್ನು ಎದುರಿಸಿ, ಪ್ರಜಾವಾಣಿ ಯಶಸ್ವಿಯಾಗಿ ಮುಂದುವರಿಯುತ್ತಿದೆ ಎಂದು ತಿಳಿಸಿದರು.

**

‘ಪ್ರಜಾವಾಣಿ’ ಪ್ರೀತಿಸುವವರ ಸಂಖ್ಯೆ ಹೆಚ್ಚು

‘ದಿನೇ ದಿನೇ ಸ್ಪರ್ಧಾತ್ಮಕ ಜಗತ್ತು ತೆರೆದುಕೊಳ್ಳುತ್ತಿದ್ದೆ. ಇದರ ಮಧ್ಯೆ ಪ್ರಜಾವಾಣಿ ಯಶಸ್ವಿಯಾಗಿ 75 ವರ್ಷ ಪೂರೈಸಿ‌ ಮುಂಚೂಣಿಯಲ್ಲಿ ಸಾಗುತ್ತಿದೆ. ಪ್ರಜಾವಾಣಿಯನ್ನು ಪ್ರೀತಿಸುವವರ ಸಂಖ್ಯೆಯೂ ಹೆಚ್ಚುತ್ತಿದೆ’ ಎಂದು ತುಮಕೂರು ವಿಶ್ವವಿದ್ಯಾನಿಲಯ ಕುಲಪತಿ ಪ್ರೊ.ಎಂ. ವೆಂಕಟೇಶ್ವರಲು ಅಭಿಪ್ರಾಯಪಟ್ಟರು.

‘ಪ್ರಜಾಪ್ರಭುತ್ವದಲ್ಲಿ ದಿನಪತ್ರಿಕೆಗಳ ಪಾತ್ರ ಪ್ರಮುಖವಾದುದು. ಜನಾಭಿಪ್ರಾಯವನ್ನು ಸರ್ಕಾರ, ವಿರೋಧ ಪಕ್ಷದವರಿಗೆ ತಿಳಿಸುವ ಮಹತ್ವದ ಪಾತ್ರ ನಿರ್ವಹಿಸುತ್ತವೆ. ಸರ್ಕಾರ ಸಮರ್ಥವಾಗಿ ಆಡಳಿತ ನಡೆಸಲು ಪತ್ರಿಕೆಗಳು ನೆರವಾಗುತ್ತವೆ. ಅಂತಹ ಮಹತ್ವದ ಕಾರ್ಯದಲ್ಲಿ ಪ್ರಜಾವಾಣಿ ಪತ್ರಿಕೆ ಸಾಗುತ್ತಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT