ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಳಿಯಾರು: ಕುಡಿವ ನೀರಿಗೆ ಟ್ಯಾಂಕರ್‌ ಮೊರೆ

Published 7 ಮೇ 2024, 13:32 IST
Last Updated 7 ಮೇ 2024, 13:32 IST
ಅಕ್ಷರ ಗಾತ್ರ

ಹುಳಿಯಾರು: ಹೋಬಳಿ ವ್ಯಾಪ್ತಿಯಲ್ಲಿ ಮಳೆ ಬರುವ ಮುನ್ಸೂಚನೆ ಕಾಣಿಸದಿರುವುದು ರೈತರ ನಿದ್ದೆಗೆಡಿಸಿದೆ. ದಿನೇ ದಿನೇ ಟ್ಯಾಂಕರ್‌ ನೀರಿಗೆ ಬೇಡಿಕೆ ಹೆಚ್ಚುತ್ತಲೇ ಇದೆ. ಮಳೆ ಇಂದು ಬರಬಹುದು ನಾಳೆ ಬರಬಹುದು ಎಂದು ಕಾಯುತ್ತಲೇ ಟ್ಯಾಂಕರ್‌ ನೀರಿನ ಮೊರೆ ಹೋಗುತ್ತಿದ್ದಾರೆ.

ಕಳೆದ ವರ್ಷ ಮಳೆಯಾಗದ ಕಾರಣ ನವೆಂಬರ್-ಡಿಸೆಂಬರ್‌ ತಿಂಗಳಲ್ಲಿಯೇ ನೀರಿನ ಕೊರತೆ ಎದುರಾಗಿತ್ತು. ಮೊದಮೊದಲು ಅಡಿಕೆ ಹಾಗೂ ತೆಂಗು ಬೆಳೆಗೆ ಮಾತ್ರ ಟ್ಯಾಂಕರ್‌ ನೀರು ಹರಿಸುತ್ತಿದ್ದವರು ಈಗ ಕುಡಿಯುವ ನೀರಿಗೂ ಟ್ಯಾಂಕರ್ ನೀರು ಅವಲಂಬಿಸುವ ಸ್ಥಿತಿ ಬಂದೊದಗಿದೆ.

ಬೇಸಿಗೆ ಆರಂಭದಲ್ಲಿಯೇ ಆರಂಭವಾದ ಟ್ಯಾಂಕರ್‌ ನೀರಿನ ಬೇಡಿಕೆ ಮೇ ತಿಂಗಳು ಮಧ್ಯ ಭಾಗಕ್ಕೆ ಬಂದರೂ ಹೆಚ್ಚಾಗುತ್ತಲೇ ಇದೆ. ಆರಂಭದಲ್ಲಿ ₹600ರಿಂದ ₹700ಕ್ಕೆ ಲಭ್ಯವಾಗುತ್ತಿದ್ದುದು ಈಗ ಒಂದು ಸಾವಿರದ ಗಡಿ ದಾಟಿದೆ. ಕಳೆದೆರಡು ವರ್ಷದ ಹಿಂದೆ ಬಿದ್ದ ಮಳೆಗೆ ತುಂಬಿದ್ದ ಕೆರೆಗಳಲ್ಲಿ ಉಳಿದ ನೀರನ್ನೆಲ್ಲ ಟ್ಯಾಂಕರ್‌ ಮೂಲಕ ಬೆಳೆಗಳಿಗೆ ಹರಿಸಿ ಕೆರೆ ನೀರು ಮುಗಿದು ಹೋಗಿದೆ. ಈಗಾಗಲೇ ಹೋಬಳಿ ವ್ಯಾಪ್ತಿಯ ಯಾವ ಕೆರೆಗಳಲ್ಲೂ ನೀರು ಸಿಗದ ಕಾರಣ ಬೋರನಕಣಿವೆ ಜಲಾಶಯ ನೀರಿನ ಆಶ್ರಯ ತಾಣವಾಗಿದೆ.

ಕೆಲ ರೈತರ ಕೊಳವೆಬಾವಿಗಳಲ್ಲಿ ನೀರು ಸಿಗುತ್ತಿದ್ದು ಬಿಸಿಲ ಧಗೆಗೆ ಅವು ಬತ್ತಿ ಹೋಗಿರುವ ಕಾರಣ ಜಲಾಶಯದ ನೀರನ್ನೆ ನೆಚ್ಚಿಕೊಳ್ಳುವಂತಾಗಿದೆ. ದೂರ ಹಾಗೂ ನೀರು ಸಿಗದಿರುವ ಕಾರಣ ಸಹಜವಾಗಿಯೇ ಟ್ಯಾಂಕರ್‌ ನೀರಿನ ಬೆಲೆ ಹೆಚ್ಚಿಸಬೇಕಾಗಿದೆ ಎಂದು ಟ್ಯಾಂಕರ್‌ ಮಾಲೀಕರು ಹೇಳುತ್ತಾರೆ. ಟ್ಯಾಂಕರ್‌ ನೀರು ಎಷ್ಟೆ ಅಡಿಕೆ-ತೆಂಗಿಗೆ ಹರಿಸಿದರೂ ಬಿಸಿಲ ಧಗೆಗೆ ಗಿಡಗಳು ಒಣಗಿ ಹೋಗುತ್ತಿವೆ.

ಕುಡಿಯುವ ನೀರಿಗೂ ಟ್ಯಾಂಕರ್:‌ ಈಗಾಗಲೇ ಕುಡಿಯುವ ನೀರಿಗೂ ಗ್ರಾಮಗಳಲ್ಲಿ ತಾತ್ವಾರ ಉಂಟಾಗಿದ್ದು ಟ್ಯಾಂಕರ್‌ ನೀರಿನ ಮೊರೆ ಹೋಗುತ್ತಿದ್ದಾರೆ. ಹೋಬಳಿ ವ್ಯಾಪ್ತಿಯಲ್ಲಿ ಬಹಳಷ್ಟು ಗ್ರಾಮಗಳಲ್ಲಿ ನೀರು ಲಭ್ಯವಾಗದೆ ಟ್ಯಾಂಕರ್‌ ನೀರು ಹಾಗೂ ತೋಟದ ಕೊಳವೆಬಾವಿಗಳತ್ತ ಹೋಗುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT