ಶನಿವಾರ, ಫೆಬ್ರವರಿ 4, 2023
28 °C
ನೂತನ ವೆಬ್‌ಸೈಟ್‌ಗೆ ಸರ್ವರ್‌ ಸಮಸ್ಯೆ: ಕೆಲಸ ಮಾಡಲು ಸಿಬ್ಬಂದಿ ಪರದಾಟ

ತುಮಕೂರು: ನೀರಿನ ಗುಣಮಟ್ಟ ಪರೀಕ್ಷೆ ಸ್ಥಗಿತ

ಮೈಲಾರಿ ಲಿಂಗಪ್ಪ Updated:

ಅಕ್ಷರ ಗಾತ್ರ : | |

ತುಮಕೂರು: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದಿಂದ ಆರಂಭಿಸಿರುವ ನೀರು ಪರೀಕ್ಷಾ ಪ್ರಯೋಗಾಲಯಗಳಲ್ಲಿ ಕುಡಿಯುವ ನೀರಿನ ಮೂಲಗಳ ಗುಣಮಟ್ಟ ಪರೀಕ್ಷೆ ನಡೆಸಿ, ವರದಿ ನೀಡುವ ಕೆಲಸ ಕೆಲ ದಿನಗಳಿಂದ ಸ್ಥಗಿತಗೊಂಡಿದೆ.

ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಆವರಣ, ತಿಪಟೂರು ಮತ್ತು ಮಧುಗಿರಿ ಪಟ್ಟಣದಲ್ಲಿ ಪ್ರಯೋಗಾಲಯಗಳು ಕಾರ್ಯ ನಿರ್ವಹಿಸುತ್ತಿವೆ. ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಕೊರೆಸಿದ ಕೊಳವೆ ಬಾವಿಗಳ ನೀರಿನ ಗುಣಮಟ್ಟವನ್ನು ಈ ಪ್ರಯೋಗಾಲಯಗಳಲ್ಲಿ ಪರೀಕ್ಷೆ ಮಾಡಲಾಗುತ್ತದೆ. ಆದರೆ ಈಗ ಈ ಕೆಲಸ ಅರ್ಧಂಬರ್ಧ ನಡೆಯುತ್ತಿದೆ.

ಈ ಹಿಂದೆ ಪ್ರಯೋಗಾಲಯಗಳಲ್ಲಿ ಪರೀಕ್ಷೆ ನಡೆಸಿ, ಐಎಂಐಎಸ್‌ ವೆಬ್‌ಸೈಟ್‌ನಲ್ಲಿ ಮಾಹಿತಿ ಸಲ್ಲಿಸಿದ ತಕ್ಷಣಕ್ಕೆ ವರದಿಯ ಪ್ರಮಾಣ ಪತ್ರ ಪಡೆಯಬಹುದಾಗಿತ್ತು. ಆದರೆ, ಕಳೆದ ಆಗಸ್ಟ್‌ 16ರಿಂದ ಈ ವೆಬ್‌ಸೈಟ್‌ ಬದಲಾಗಿ ಜಲ ಜೀವನ್‌ ಮಿಷನ್‌ ಯೋಜನೆಯ ನೀರಿನ ಗುಣಮಟ್ಟ, ನಿರ್ವಹಣೆ, ಮಾಹಿತಿ, ತಂತ್ರಜ್ಞಾನ (ಡಬ್ಲ್ಯೂಕ್ಯೂಎಂಐಎಸ್‌)
ವೆಬ್‌ಸೈಟ್‌ ಮೂಲಕ ನೀರಿನ ಶುದ್ಧೀಕರಣದ ವರದಿ ನೀಡಲಾಗುತ್ತಿದೆ. ಇದರ ಮೂಲಕ ಎಲ್ಲಾ ಕೆಲಸಗಳು ನಡೆಯುತ್ತಿವೆ.

ಆದರೆ, ನೂತನ ವೆಬ್‌ಸೈಟ್‌ ಇನ್ನೂ ಸಮರ್ಪಕವಾಗಿ ಬಳಕೆಗೆ ಲಭ್ಯವಾಗುತ್ತಿಲ್ಲ. ಇದರಲ್ಲಿ ಅಗತ್ಯ ಮಾಹಿತಿ ಸಲ್ಲಿಸಲು ಆಗದೆ ಪ್ರಯೋಗಾಲಯದ ಸಿಬ್ಬಂದಿ ಪರದಾಡುತ್ತಿದ್ದಾರೆ. ಕೊಳವೆ ಬಾವಿಗಳ ಗುಣಮಟ್ಟ ಪರಿಶೀಲನೆ ನಡೆಸಿದರೂ, ಪ್ರಮಾಣ ಪತ್ರ ನೀಡಲು ಆಗುತ್ತಿಲ್ಲ. ವೆಬ್‌ಸೈಟ್‌ನಲ್ಲಿ ಸರ್ವರ್‌ ಬ್ಯುಸಿ ಎಂದು ತೋರಿಸುತ್ತಿದ್ದು, ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ.

ಜಿಲ್ಲೆಯಾದ್ಯಂತ ಪ್ರತಿ ನಿತ್ಯ ಸುಮಾರು 50 ನೀರಿನ ಮೂಲಗಳ ಗುಣಮಟ್ಟ ಪರೀಕ್ಷೆ ನಡೆಯುತ್ತಿದೆ. ಹಳೆಯ ವಿಧಾನದಂತೆ ಕೆಲಸ ನಡೆಯುತ್ತಿಲ್ಲ. ಹೊಸ
ವೆಬ್‌ಸೈಟ್‌ನಲ್ಲಿ ಪದೇ ಪದೇ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಈ ಹಿಂದಿನ ಮಾಹಿತಿಯೂ
ವೆಬ್‌ಸೈಟ್‌ನಲ್ಲಿ ಲಭ್ಯವಾಗುತ್ತಿಲ್ಲ. ಹೀಗಾಗಿ ತುಂಬಾ
ಜನರಿಗೆ ಗುಣಮಟ್ಟ ಪರೀಕ್ಷೆಯ ಪ್ರಮಾಣ ಪತ್ರ ನೀಡಲು ಆಗುತ್ತಿಲ್ಲ ಎಂದು ಪ್ರಯೋಗಾಲಯದ ಸಿಬ್ಬಂದಿಯೊಬ್ಬರು ತಮ್ಮ ಅಳಲು ತೋಡಿಕೊಂಡರು.

ವರದಿ ನೀಡುವಂತೆ ಪ್ರತಿ ನಿತ್ಯ ಸಾರ್ವಜನಿಕರು ಪ್ರಯೋಗಾಲಯಕ್ಕೆ ಅಲೆಯುವ ಕೆಲಸ ಮಾಡುತ್ತಿದ್ದಾರೆ. ಕೆಲವು ಕಡೆಗಳಲ್ಲಿ
ನೀರಿನ ಪರೀಕ್ಷೆ ಮಾಡದಿರುವ ಕೊಳವೆ ಬಾವಿಗಳಿಂದ ಜನರಿಗೆ ನೀರು ಪೂರೈಸುವ
ಕೆಲಸವಾಗುತ್ತಿದೆ. ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ವರದಿ ನೀಡುವ ಕೆಲಸಕ್ಕೆ ವೇಗ ಕೊಡಬೇಕು ಎಂದು ಜಿ.ಪಂ ಕಚೇರಿಗೆ ಭೇಟಿ ನೀಡಿದ್ದ ರೈತ ಬಸವರಾಜಪ್ಪ ಒತ್ತಾಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು