ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಾ: ಮಲಿನಗೊಂಡ ಜಾಜಮ್ಮನ ಕಟ್ಟೆ, ಅವಸಾನದತ್ತ ಜಲಮೂಲ

ಶಿರಾ ನಗರದ ಶೇ 90ರಷ್ಟು ಕೊಳವೆ ಬಾವಿಗಳಿಗೆ ಜಾಜಿ ಕಟ್ಟೆ ಆಧಾರ
Last Updated 28 ಮಾರ್ಚ್ 2022, 1:41 IST
ಅಕ್ಷರ ಗಾತ್ರ

ಶಿರಾ: ಕೆರೆ, ಕಟ್ಟೆಗಳು ಪರಿಸರದ ಅಮೂಲ್ಯ ಜಲರಾಶಿ. ಇಂತಹ ಜಲರಾಶಿಗೆ ನಗರದಲ್ಲಿ ಕಂಟಕ ಎದುರಾಗಿದೆ. ಜನತೆಯ ಜೀವನಾಡಿಯಾಗಿರುವ ಜಾಜಮ್ಮನ (ಜಾಜಿ) ಕಟ್ಟೆ ಅಭಿವೃದ್ಧಿ ಕಾಣದೆ ಅವಸಾನದ ಅಂಚಿಗೆ ತಲುಪಿದೆ.

ಜಾಜಮ್ಮನ ಕಟ್ಟೆ ಅಭಿವೃದ್ಧಿ ಕಾಣದೆ ಗಿಡ ಮರಗಳು ಬೆಳೆದುನಿಂತಿವೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷದಿಂದಾಗಿ ಮಲ, ಮೂತ್ರ, ಕೊಳಚೆ ನೀರು ಜಾಜಿ ಕಟ್ಟೆಯ ಮಡಿಲಿಗೆ ಹರಿಯುತ್ತಿರುವುದರಿಂದ ಜಲಮೂಲ ಮಲಿನಗೊಂಡಿದೆ.

ಬಾಲಾಜಿನಗರ, ವಿದ್ಯಾನಗರ, ಸಪ್ತಗಿರಿ ಬಡಾವಣೆಗೆ ಹೊಂದಿಕೊಂಡಿರುವ ಜಾಜಿ ಕಟ್ಟೆಯು ಕಲ್ಲುಕೋಟೆ ಸರ್ವೆ ನಂ 40ರಲ್ಲಿ 22 ಎಕರೆ 33 ಗುಂಟೆ ವಿಸ್ತೀರ್ಣವನ್ನು ಹೊಂದಿದೆ. ಆದರೆ ಪ್ರಸ್ತುತ ಜಾಜಮ್ಮನಕಟ್ಟೆಯನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ ಅದರ ವಿಸ್ತೀರ್ಣ ದಾಖಲೆಗಳಲ್ಲಿ ಮಾತ್ರ ಸೀಮಿತವಾಗಿದೆ.

ಶಿರಾ ದೊಡ್ಡ ಕೆರೆ ಭರ್ತಿಯಾಗಿದ್ದರು ಸಹ ನಗರದಲ್ಲಿ ಅಂತರ್ಜಲದ ಮಟ್ಟ ಹೆಚ್ಚುವುದಿಲ್ಲ. ಆದರೆ ಜಾಜಿ ಕಟ್ಟೆಯಲ್ಲಿ ನೀರಿದ್ದರೆ ಅಂತರ್ಜಲದ ಮಟ್ಟ ಹೆಚ್ಚಿ ನಗರದ ಬಹುತೇಕ ಕೊಳವೆಬಾವಿಗಳಲ್ಲಿ ನೀರು ಬರುತ್ತವೆ. ನಗರದ ಶೇ 90ರಷ್ಟು ಕೊಳವೆ ಬಾವಿಗಳಿಗೆ ಜಾಜಿ ಕಟ್ಟೆ ಆಧಾರವಾಗಿದೆ. ಜಾಜಿಕಟ್ಟೆಯ ನೀರನ್ನು ಯಾವುದೇ ಉದ್ದೇಶಕ್ಕೆ ಬಳಕೆ ಮಾಡದೆ ಕೇವಲ ಅಂತರ್ಜಲದ ಮಟ್ಟ ಹೆಚ್ಚಿಸಲು ಮಾತ್ರ ಬಳಕೆ ಮಾಡಲಾಗುತ್ತಿದೆ. ಬೇಸಿಗೆ ಸಮಯದಲ್ಲಿ ಪ್ರಾಣಿ, ಪಕ್ಷಿಗಳಿಗೆ ಕುಡಿಯುವ ನೀರಿನ ಆಸರೆಯಾಗಿದೆ.

ಹಿಂದೆ‌ ಜಾಜಿಕಟ್ಟೆಯಲ್ಲಿ ಲಾರಿ, ಕಾರು, ಬಸ್‌, ಟೆಂಪೋ, ಆಟೊ ಸೇರಿದಂತೆ ಇತರೇ ವಾಹನಗಳನ್ನು ತೊಳೆಯುವ ಮೂಲಕ ನೀರನ್ನು ಮಲಿನಗೊಳಿಸುತ್ತಿದ್ದರು. ಆದರೆ ಈಗ ಸುತ್ತಲು ಏರಿ ನಿರ್ಮಾಣ ಮಾಡಿದ ಕಾರಣ ವಾಹನಗಳು ಕಟ್ಟೆಯ ಒಳಗೆ ಬರದಂತಾಗಿದೆ.

ನೀರಿನ ಮೂಲ ಬಂದ್: ಜಾಜಿ ಕಟ್ಟೆಗೆ ಬರುತ್ತಿದ್ದ ನೀರಿನ ಮೂಲಗಳು ಬಹುತೇಕ ಕಡೆ ಮುಚ್ಚಿಹೋಗಿವೆ. ಬೈಪಾಸ್, ಲೇಔಟ್‌ಗಳ ನಿರ್ಮಾಣದಿಂದಾಗಿ ಬರುವ ನೀರಿಗೆ ತಡೆಯಾಗಿದೆ. ನೀರು ಬರಲು ರಾಜಕಾಲುವೆ ನಿರ್ಮಾಣ ಮಾಡಿದ್ದಾರೆ. ಇದು ಜಾಜಿ ಕಟ್ಟೆಗೆ ಅನುಕೂಲವಾಗುವ ಬದಲು ಹೆಚ್ವಿನ ಅನಾನುಕೂಲವನ್ನು ಮಾಡಿದೆ.

ರಾಜ ಕಾಲುವೆಯಲ್ಲಿ ಮಳೆ ನೀರು ಹರಿಯುವುದಕ್ಕಿಂತ ಹೆಚ್ಚಾಗಿ ಮನೆಗಳ ಶೌಚಾಲಯದ ನೀರು, ಮಲ, ಮೂತ್ರ ಹರಿದು ಬರುತ್ತಿದೆ. ಬಹುತೇಕ ಕಡೆ ಶೌಚಾಲಯದ ಮಲ, ಮೂತ್ರವನ್ನು ರಾಜಕಾಲುವೆಗೆ ಬಿಟ್ಟಿದ್ದಾರೆ.

ಜಾಜಿಕಟ್ಟೆಯಲ್ಲಿ ಹಿಂದೆ ಮೀನು ಸಾಗಾಣಿಕೆ ಮಾಡಲಾಗುತ್ತಿತ್ತು. ಇದರಿಂದ ಸರ್ಕಾರಕ್ಕೆ ಆದಾಯ ಬರುತ್ತಿತ್ತು. ಆದರೆ ಇಂದು ಕೆರೆಯಲ್ಲಿ ಅಂತರಗಂಗೆ ಬೆಳೆದುನಿಂತಿದೆ. ನೀರು ಇರುವುದು ಕಾಣದಂತಾಗಿದೆ. ಅಂತರಗಂಗೆ ಒಣಗಿದರೆ ಮಾತ್ರ ನೀರಿಲ್ಲ ಎನ್ನುವಂತಾಗಿದೆ. ಅಂತರಗಂಗೆಯನ್ನು ತೆರವುಗೊಳಿಸಲು ಹಲವು ಬಾರಿ ಪ್ರಯತ್ನ ನಡೆಸಿ ಅಲ್ಪಸ್ವಲ್ಪ ತೆಗೆಯಲಾಗಿತ್ತು. ಅದನ್ನು ಸಂಪೂರ್ಣ ತೆರವು ಮಾಡುವ ಕೆಲಸ ಇದುವರೆಗೂ ಮಾಡಿಲ್ಲ. ಇದರಿಂದಾಗಿ ಕಟ್ಟೆಯಲ್ಲಿದ್ದ ಅಪಾರ ಪ್ರಮಾಣದ ಜಲಚರಗಳು ಕಣ್ಮರೆಯಾಗುವಂತಾಗಿದೆ.

ಜಾಜಿಕಟ್ಟೆಯ ಅಭಿವೃದ್ದಿಗಾಗಿ 2017ರಲ್ಲಿ ಟಿ.ಬಿ.ಜಯಚಂದ್ರ ಅವರು ಸಚಿವರಾಗಿದ್ದ ಸಮಯದಲ್ಲಿ ₹ 2 ಕೋಟಿ ಬಿಡುಗಡೆ ಮಾಡಿಸಿದ್ದರು. 2018ರಲ್ಲಿ ಕಾಮಗಾರಿ ಪ್ರಾರಂಭಿಸಲಾಯಿತು. ಆದರೆ ಕಾಮಗಾರಿ ಇದುವರೆಗೂ ಪೂರ್ಣಗೊಂಡಿಲ್ಲ. ಜಾಜಿ ಕಟ್ಟೆಗೆ ಸುತ್ತಲೂ ಏರಿ ನಿರ್ಮಾಣ, ಏರಿಯ ಮೇಲೆ ವಾಯುವಿಹಾರ ನಡೆಸಲು ವಾಕಿಂಗ್ ಪಾತ್ ನಿರ್ಮಾಣ ಮಾಡಿ ವಿಶ್ರಾಂತಿ ಪಡೆಯಲು ಕುರ್ಚಿಗಳನ್ನು ಹಾಕಿಸುವುದಾಗಿ ಹೇಳಲಾಗಿತ್ತು. ಆದರೆ ಒತ್ತುವರಿ ತೆರವು ಮಾಡಲು ನಗರಸಭೆ ವಿಫಲವಾದ ಹಿನ್ನೆಲೆಯಲ್ಲಿ ಏರಿ ಕಾಮಗಾರಿ ಅಪೂರ್ಣಗೊಂಡಿದೆ.

ಏರಿಯ ಮೇಲೆ ವಾಯುವಿಹಾರ ನಡೆಸಲು ನಿರ್ಮಾಣ ಮಾಡಿದ್ದ ವಾಕಿಂಗ್ ಪಾತ್‌ ಇಂದು ಬಯಲು ಶೌಚಾಲಯವಾಗಿ ಮಾರ್ಪಾಡಾಗಿದೆ. ಏರಿಯ ಮೇಲೆ ಜಾಲಿ ಗಿಡಗಳು ಬೆಳೆದಿದ್ದು ಅಲ್ಲಿ ಹೋಗಲು ಸಾಧ್ಯವಾಗುತ್ತಿಲ್ಲ.

ಜಾಜಿಕಟ್ಟೆಗೆ ಮಲಿನ ನೀರು ಹರಿದುಬರುತ್ತಿದ್ದು ಗಬ್ಬು ವಾಸನೆ ಹೊಡೆಯುತ್ತಿದೆ. ರಾಜಕಾಲುವೆ ಹಾಗೂ ಕಟ್ಟೆಯ ಸುತ್ತಮುತ್ತಲು ಮನೆ ಇರುವರ ಸ್ಥಿತಿಯಂತು ಕೇಳುವರು ಇಲ್ಲದಂತಾಗಿದೆ. ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಇದೆ. ಜತೆಗೆ ಸೊಳ್ಳೆಗಳ ಕಾಟ ಹೇಳ ತೀರದಂತಾಗಿದೆ. ಜಾಜಿಕಟ್ಟೆಯ ಮುಂದೆಯೇ ಸರ್ಕಾರಿ ಆಸ್ಪತ್ರೆ ಇದ್ದು ಕಟ್ಟೆಯ ಮಲಿನತೆ ರೋಗಿಗಳ ಆರೋಗ್ಯದ ಮೇಲೆ ಪ್ರಭಾವ ಬೀರುತ್ತಿದೆ.

ಯಾರಿಗೆ ಸೇರುವುದು: ಜಾಜಿ ಕಟ್ಟೆ ಯಾವ ಇಲಾಖೆಗೆ ಸೇರುತ್ತದೆ ಎನ್ನುವ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಸಣ್ಣ ನೀರಾವರಿ, ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗ, ನಗರಸಭೆ, ಶಿರಾ ಯೋಜನಾ ಪ್ರಾಧಿಕಾರ ಸೇರಿದಂತೆ ಯಾರು ಸಹ ಅದರ ಜವಾಬ್ದಾರಿ ಹೊರಲು ಸಿದ್ದವಿಲ್ಲ. ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಕೈತೊಳೆದುಕೊಳ್ಳುವ ಕೆಲಸ ಮಾಡುತ್ತಾರೆ. 2017ರಲ್ಲಿ ₹ 2 ಕೋಟಿ ಬಿಡುಗಡೆಯಾದ ಸಮಯದಲ್ಲಿ ಶಿರಾ ಯೋಜನಾ ಪ್ರಾಧಿಕಾರ ಸೂಚನೆಯಂತೆ ಸಣ್ಣ ನೀರಾವರಿ ಇಲಾಖೆ ಅವರು ಏರಿ ನಿರ್ಮಾಣದ ಕಾಮಗಾರಿ ನಡೆಸಿದ್ದಾರೆ. ಉಳಿದಂತೆ ಈಗ ಯಾರು ಅದರ ಅಭಿವೃದ್ದಿಗೆ ಮುಂದಾಗದಿರುವುದು ಜನತೆಯ ದೌರ್ಭಾಗ್ಯವಾಗಿದೆ.

ಇಂದು ಜಾಜಿ ಕಟ್ಟೆ ತನ್ನ ಗತವೈಭವವನ್ನು ಕಳೆದುಕೊಳ್ಳುತ್ತಿದ್ದು ಅವಸಾನದ ಹಂಚಿಕೆ ಹೋಗುತ್ತಿದೆ ಈ ಬಗ್ಗೆ ಅಧಿಕಾರಿಗಳು ಹಾಗೂ ಸ್ಥಳೀಯ ಆಡಳಿತ ಎಚ್ಚೆತ್ತುಕೊಳ್ಳದಿದ್ದರೆ ಜಾಜಿ ಕಟ್ಟೆ ಕಣ್ಮರೆಯಾಗುವ ದಿನಗಳು ದೂರವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT