ಬುಧವಾರ, ಜುಲೈ 28, 2021
20 °C

ಹೆಸರಿಗೆ ಹಳದಿ ರೋಗ- ಅರ್ಧದಷ್ಟು ಇಳುವರಿ ಕಡಿಮೆಯಾಗುವ ಸಾಧ್ಯತೆ: ರೈತರಿಗೆ ಆತಂಕ

ಪಾಂಡುರಂಗಯ್ಯ ಎ. Updated:

ಅಕ್ಷರ ಗಾತ್ರ : | |

Prajavani

ತುರುವೇಕೆರೆ: ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಪೂರ್ವ ಮುಂಗಾರು ಬೆಳೆ ಹೆಸರಿಗೆ ಹಳದಿ ಬಣ್ಣದ ನಂಜು ರೋಗ ಕಾಣಿಸಿಕೊಂಡಿದ್ದು, ರೈತರಿಗೆ ಆತಂಕ ಕಾಡುತ್ತಿದೆ.

ಪೂರ್ವ ಮುಂಗಾರು ಮಳೆ ಎಲ್ಲ ಕಡೆ ಸಮನಾಗಿ ಹಂಚಿಕೆಯಾಗದೆ ಕೆಲ ಪ್ರದೇಶಗಳಲ್ಲಿ ಮಳೆ ಸುರಿಯಿತು. ಭೂಮಿ ಹದ ಮಾಡಿಕೊಂಡಿದ್ದ ರೈತರು ಹೆಸರು ಬಿತ್ತನೆ ಮಾಡಿದ್ದರು. ಸಕಾಲಕ್ಕೆ ಉತ್ತಮ ಮಳೆಯಾಗಿದ್ದರಿಂದ ಅಲ್ಲಲ್ಲಿ ಹೆಸರು ತಾಕು ಸಮೃದ್ಧವಾಗಿ ಬೆಳೆದು ಹೂವು, ಕಾಯಿ ಕಟ್ಟಿ ಒಳ್ಳೆಯ ಇಳುವರಿ ಬರುವ ನಿರೀಕ್ಷೆ ರೈತರಲ್ಲಿತ್ತು.

ಆದರೆ ಕೆಲವೆಡೆ ಹೆಸರು ಗಿಡಕ್ಕೆ ಹಳದಿ ಬಣ‍್ಣದ ರೋಗ ತಗುಲಿ ಎಲೆಗಳು ಹಳದಿ ಬಣ‍್ಣಕ್ಕೆ ತಿರುಗಿವೆ. ಆರಂಭದಲ್ಲಿ ಒಂದೆರಡು ಗಿಡಕ್ಕೆ ಈ ರೋಗ ಕಾಣಿಸಿಕೊಂಡಿತು. ದಿನ ಕಳೆದಂತೆ ಹೊಲಕ್ಕೆಲ್ಲಾ ವ್ಯಾಪಿಸಿ ಹೆಸರು ಗಿಡವೆಲ್ಲ ಮುರುಟಾಗಿದೆ.

ಈ ಬಾರಿ ಲಾಕ್‍ಡೌನ್‍ ಇದ್ದುದರಿಂದ ಹೆಚ್ಚಿನ ಸಂಖ್ಯೆಯ ರೈತರು ಪೂರ್ವ ಮುಂಗಾರು ಬಿತ್ತನೆಗೆ ಒಲವು ತೋರಿದ್ದು, ಶೇ‌ 94ರಷ್ಟು ಬಿತ್ತನೆಯಾಗಿದೆ. ಬಾಣಸಂದ್ರ, ಕೊಂಡಜ್ಜಿ, ಗೊಪ್ಪೇನಹಳ್ಳಿ, ದುಂಡಾ, ಕುರುಬರಹಳ‍್ಳಿ ಬ್ಯಾಲ, ತಾಳಕೆರೆ, ಕಲ್ಕೆರೆ, ಎ.ಹೊಸಹಳ್ಳಿ, ಹುಲ್ಲೇಕೆರೆ, ಸಾರಿಗೇಹಳ್ಳಿ, ಮಾಯಸಂದ್ರ, ಕಸಬಾ, ದಂಡಿನಶಿವರ ಮತ್ತು ದಬ್ಬೇಘಟ್ಟ ಹೋಬಳಿಯ ಕೆಲವು ಭಾಗದಲ್ಲಿ ಹಳದಿ ರೋಗ ಕಾಣಿಸಿಕೊಂಡಿದೆ.

ಹಳದಿ ರೋಗದಿಂದಾಗಿ ಕಾಳುಗಳು ಸರಿಯಾಗಿ ಕಟ್ಟದೆ, ಸಣ್ಣಗಾಗಿ ಶೇಕಡಾ ಅರ್ಧದಷ್ಟು ಇಳುವರಿ ಕಡಿಮೆಯಾಗುವ ಸಾಧ್ಯತೆಯಿದೆ ಎನ್ನುತ್ತಾರೆ ರೈತ ಮಹಿಳೆ ಹಟ್ಟಿಹಳ್ಳಿ ಗೀತಾ.

ನಿಯಂತ್ರಣ ಹೇಗೆ: ಆರಂಭದಲ್ಲಿ ‘ಹಳದಿ ನಂಜು ರೋಗ ಕಾಣಿಸಿಕೊಂಡಾಗ ರೈತರು ರೋಗ ಬಾಧಿತ ಗಿಡಗಳನ್ನು ತಕ್ಷಣ ಬುಡಸಮೇತ ಕಿತ್ತು ನಾಶಪಡಿಸಬೇಕು. ಒಂದು ಲೀಟರ್‌ ನೀರಿಗೆ ಇಮಿಡಾಕ್ಲೋಪ್ರಿಡ್ ಅರ್ಧ ಎಂಎಲ್‍ ಅಥವಾ ಥಯೋಮೆಥಾಕ್ಸಾಮ್ ಅರ್ಧ ಎಂಎಲ್‍ ದ್ರಾವಣ ಸಿಂಪಡಿಸಬೇಕು. ಆಗ ತಕ್ಕಮಟ್ಟಿಗೆ ರೋಗ ತಹಬದಿಗೆ ಬರಲಿದೆ’ ಎನ್ನುತ್ತಾರೆ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕಿ ಬಿ.ಪೂಜಾ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು