ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ.ಪಂ ನಿರೀಕ್ಷೆಯಲ್ಲಿ ವೈ.ಎನ್.ಹೊಸಕೋಟೆ

Published 20 ನವೆಂಬರ್ 2023, 7:31 IST
Last Updated 20 ನವೆಂಬರ್ 2023, 7:31 IST
ಅಕ್ಷರ ಗಾತ್ರ

ವೈ.ಎನ್.ಹೊಸಕೋಟೆ: ಪಾವಗಡ ತಾಲ್ಲೂಕಿನ 2ನೇ ದೊಡ್ಡ ಪಟ್ಟಣವಾದ ಹೋಬಳಿ ಕೇಂದ್ರವು ಬಹುದಿನಗಳಿಂದ ಪಟ್ಟಣ ಪಂಚಾಯಿತಿಯಾಗುವ ನಿರೀಕ್ಷೆ ಹೊತ್ತಿದೆ.

ಐತಿಹಾಸಿಕವಾಗಿ ಪಾಳೆಗಾರರ ಸಂಸ್ಥಾನ ಕೇಂದ್ರವಾಗಿದ್ದ ಪಟ್ಟಣವು ಸುತ್ತಲೂ 2-3 ಕಿ.ಮೀ ವ್ಯಾಪ್ತಿಯವರೆಗೆ ಪಸರಿಸಿದೆ. ಒಳಕೋಟೆ, ಹೊರಕೋಟೆ, ಹಳೆಪೇಟೆ, ವಿವಿಧ ಬಡಾವಣೆಗಳು ಮತ್ತು ಲೇಔಟ್‌ ಒಳಗೊಂಡಂತೆ ಒಟ್ಟು ಎಂಟು ವಾರ್ಡ್‌ಗಳನ್ನು ಹೊಂದಿದೆ. 1954ರಿಂದ ಪುರಸಭೆಯಾಗಿದ್ದು, 1987ರಲ್ಲಿ ಮಂಡಲ ಪಂಚಾಯಿತಿಯಾಗಿ, 1994ರಿಂದ ಗ್ರಾಮ ಪಂಚಾಯಿತಿಯಾಗಿ ಮುಂದುವರೆಯುತ್ತಿದೆ.

2011ರ ಜನಗಣತಿಯಂತೆ 12,593 ಇದ್ದ ಜನಸಂಖ್ಯೆ ಇಂದು 18 ಸಾವಿರದ ಗಡಿ ದಾಟಿದೆ. ನಾಡಕಚೇರಿ, ಸರ್ಕಾರಿ ಆಸ್ಪತ್ರೆ, ಪೊಲೀಸ್‌ ಠಾಣೆ, ಬೆಸ್ಕಾಂ ಕಚೇರಿ, ವಿದ್ಯುತ್ ಪ್ರಸರಣ ಕೇಂದ್ರ, ಅಂಚೆಕಚೇರಿ, ರೇಷ್ಮೆ ಇಲಾಖೆ, ಕೃಷಿ ಇಲಾಖೆ ಇನ್ನಿತರೆ ಸರ್ಕಾರಿ ಕಚೇರಿಗಳಿದ್ದು, ನಿತ್ಯ ದಟ್ಟಣೆ ಕಂಡುಬರುತ್ತದೆ.

ಸರ್ಕಾರಿ ಮತ್ತು ಖಾಸಗಿಯ ಐದು ಪ್ರೌಢಶಾಲೆ, ಪದವಿಪೂರ್ವ ಕಾಲೇಜು, ಏಳು ಮಾಧ್ಯಮಿಕ ಶಾಲೆಗಳಿದ್ದು, ಸಾವಿರಾರು ವಿದ್ಯಾರ್ಥಿಗಳ ಶಿಕ್ಷಣ ಪಡೆಯುತ್ತಿದ್ದಾರೆ.

ಶೇಂಗಾಬೀಜ ಸುಲಿಯುವ ಸಣ್ಣ ಕೈಗಾರಿಕೆ, ಇಟ್ಟಿಗೆ ಕಾರ್ಖಾನೆ, ರೇಷ್ಮೆ ಕೈಮಗ್ಗ ಮತ್ತು ಪವರ್ ಲೂಮ್ಸ್, ಕಟ್ಟಡ ನಿರ್ಮಾಣ, ಕಂಬಳಿ ನೇಕಾರಿಕೆ ಮತ್ತು ವ್ಯವಸಾಯ ಚಟುವಟಿಗಳು ಸಾವಿರಾರು ಸಂಖ್ಯೆಯ ಉದ್ಯೋಗವನ್ನು ಸೃಷ್ಟಿಸುತ್ತಿವೆ. ಗಡಿಭಾಗದ ಉದ್ಯೋಗ ವಲಯವಾಗಿರುವ ಈ ಪಟ್ಟಣಕ್ಕೆ ದಿನೇ ದಿನೇ ವಲಸಿಗರ ಒಳಹರಿವು ಹೆಚ್ಚಾಗಿದ್ದು, ಮೂಲ ಸೌಲಭ್ಯಗಳ ಪೂರೈಕೆ ಸವಾಲಾಗಿ ಪರಿಣಮಿಸಿದೆ.

ಕಿರಾಣಿ, ಬಟ್ಟೆ, ಕಟ್ಟಡ ನಿರ್ಮಾಣ ವಸ್ತು, ಬೆಳ್ಳಿ-ಬಂಗಾರ ಆಭರಣ, ಗೃಹಪಯೋಗಿ ವಸ್ತು, ದ್ವಿಚಕ್ರ ವಾಹನ, ರೇಷ್ಮೆಸೀರೆ ಇತ್ಯಾದಿಗಳ ವ್ಯಾಪಾರ ಪ್ರಧಾನವಾಗಿದ್ದು, ಕೋಟ್ಯಾಂತರ ರೂಪಾಯಿ ವಹಿವಾಟು ನಡೆಯುತ್ತಿದೆ. ರಾಷ್ಟ್ರೀಕೃತ, ಖಾಸಗಿ, ಸಹಕಾರಿ ಬ್ಯಾಂಕ್‌ ಹಣಕಾಸಿನ ವ್ಯವಹಾರಕ್ಕೆ ಪೂರಕವಾಗಿವೆ. ನಿತ್ಯ 50-60 ಬಸ್‌ ಸಂಚಾರವಿದ್ದು, ಆಂಧ್ರಪ್ರದೇಶದ ಹಲವು ಹಳ್ಳಿಗಳು ಸೇರಿದಂತೆ ಸುತ್ತಮುತ್ತಲಿನ ಜನರಿಗೆ ಸಂತೆ ಮತ್ತು ವ್ಯಾಪಾರ ವ್ಯವಹಾರಗಳಿಗೆ ಇದೇ ಕೇಂದ್ರಸ್ಥಾನ.

ಹಳೆ ಪಟ್ಟಣದಲ್ಲಿ ಸ್ಥಳಾವಕಾಶದ ಕೊರತೆಯಿಂದಾಗಿ ರಸ್ತೆಗಳ ಒತ್ತುವರಿ ಅನಿಯಂತ್ರಿತವಾಗಿದೆ. ಪುರಬೀದಿಗಳು ಮತ್ತು ದೊಡ್ಡ ರಸ್ತೆಗಳು ಗಲ್ಲಿಗಳಾಗುತ್ತಿದ್ದು, ಸಂಚಾರ ದುಸ್ತರವಾಗಿದೆ.

ಮೂರು ಸಾವಿರಕ್ಕೂ ಅಧಿಕ ಕುಟುಂಬಗಳ ವ್ಯಾಪ್ತಿಯ ಗ್ರಾಮ ಪಂಚಾಯಿತಿಯಲ್ಲಿ 32 ಸದಸ್ಯರಿದ್ದಾರೆ. ನೆಲಬಾಡಿಗೆ, ಮಳಿಗೆ ಬಾಡಿಗೆ, ಮನೆ ಕಂದಾಯ, ನೀರಿನ ಕಂದಾಯ, ತೆರಿಗೆ, ಪರವಾನಗಿ ಇನ್ನಿತರೆ ಮೂಲದಿಂದ ₹12 ಲಕ್ಷ ಮಾಸಿಕ ಆದಾಯವಿದೆ. ಪಟ್ಟಣ ದೊಡ್ಡದಾಗಿರುವುದರಿಂದ ಸರ್ಕಾರ ನಿಗದಿಗಿಂತ ಅಧಿಕ ಸಂಖ್ಯೆಯಲ್ಲಿರುವ ಸಿಬ್ಬಂದಿ ಮತ್ತು ಅಸಮರ್ಪಕ ಕಂದಾಯ ವಸೂಲಾತಿಯಿಂದಾದ ಆದಾಯ ಸಂಗ್ರಹದಲ್ಲಿ ಬಹುಪಾಲು ವೇತನಕ್ಕೆ ವ್ಯಯವಾಗುತ್ತಿದೆ. ಪಟ್ಟಣದ ಪ್ರಗತಿ ಕಾರ್ಯಗಳಿಗೆ ಹಣಕಾಸಿನ ಕೊರತೆ ಸದಾ ಕಾಡುತ್ತಿದೆ.

ಇಂತಹ ಹತ್ತು ಹಲವು ಸಮಸ್ಯೆಗಳಿಗೆ ಪರಿಹಾರವಾಗಿ ಗ್ರಾಮ ಪಂಚಾಯಿತಿಯು ಪಟ್ಟಣ ಪಂಚಾಯಿತಿಯಾಗಿ ಪರಿವರ್ತನೆಯಾಗಲೇಬೇಕು ಎನ್ನುವುದು ಜನರ ಬಹುದಿನದ ಬೇಡಿಕೆ

ಪಟ್ಟಣ ಪಂಚಾಯಿತಿ ನಿರೀಕ್ಷೆಯಲ್ಲಿ ವೈ.ಎನ್.ಹೊಸಕೋಟೆ ಗ್ರಾಮದ ಗ್ರಾಮ ಪಂಚಾಯಿತಿ ಕಚೇರಿ
ಪಟ್ಟಣ ಪಂಚಾಯಿತಿ ನಿರೀಕ್ಷೆಯಲ್ಲಿ ವೈ.ಎನ್.ಹೊಸಕೋಟೆ ಗ್ರಾಮದ ಗ್ರಾಮ ಪಂಚಾಯಿತಿ ಕಚೇರಿ
ಚುರುಕುಪಡೆಯದ ಕಡತದ ವೇಗ
2012-13ನೇ ಸಾಲಿನಲ್ಲಿ 10 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇರುವ ಗ್ರಾಮ ಪಂಚಾಯಿತಿಗಳನ್ನು ಪಟ್ಟಣ ಪಂಚಾಯಿತಿಗಳನ್ನಾಗಿಸಲು ಸರ್ಕಾರ ಆದೇಶ ಹೊರಡಿಸಿತು. ಅದರನ್ವಯ ಯಾವುದೇ ತೊಡಕಿಲ್ಲದ ರೀತಿಯಲ್ಲಿ ಅರ್ಜಿ ಸಲ್ಲಿಸಿಕೆಯಾಗಿದೆ. ನಂತರದ ವಿಧಾನಸಭೆಯ ಕಲಾಪ ಚರ್ಚೆಯ ಮಾನದಂಡ ಜನಸಂಖ್ಯೆಯನ್ನು 15 ಸಾವಿರಕ್ಕೆ ನಿಗದಿಪಡಿಸಿದ್ದು ತೊಡಕಾಗಿ ಕಡತವು ನಗರಾಭಿವೃದ್ಧಿ ಇಲಾಖೆಗೆ ತಲುಪಿ ನಿಂತಿದೆ.
ಆರ್ಥಿಕ ಚಟುವಟಿಕೆಗೆ ಪೂರಕ
ಪಟ್ಟಣವು ಇಂದಿಗೂ ಗ್ರಾಮ ಪಂಚಾಯಿತಿ ಸ್ಥಾನಮಾನ ಹೊಂದಿರುವುದರಿಂದ ನೋಂದಣಿ ಇಲಾಖೆಯನುಸಾರ ಸ್ಥಳೀಯ ಆಸ್ತಿ ಮೌಲ್ಯ ಕಡಿಮೆ ಇದೆ. ಸಣ್ಣ ಕೈಗಾರಿಕೆ ಪವರ್ ಲೂಮ್ಸ್‌ಗಳಂತಹ ಚಟುವಟಿಕೆಗಳನ್ನು ಕೈಗೊಳ್ಳುವ ಸಲುವಾಗಿ ಬ್ಯಾಂಕ್ ಇನ್ನಿತರೆ ಆರ್ಥಿಕ ಸಂಸ್ಥೆಗಳಲ್ಲಿ ಸಾಲ ಪಡೆಯುವ ವೇಳೆ ಸಮಸ್ಯೆಯಾಗುತ್ತಿದೆ. ಪಟ್ಟಣ ಪಂಚಾಯಿತಿಯಾದರೆ ಸ್ವತ್ತುಗಳ ಮೌಲ್ಯವೇರಿ ಸಾಲ ಸೌಲಭ್ಯಗಳು ಪ್ರಮಾಣ ಹೆಚ್ಚಾಗಿ ಆರ್ಥಿಕ ಚಟುವಟಿಕೆಗಳಿಗೆ ಅನುಕೂಲವಾಗುತ್ತದೆ. ಟಿ.ಉಮೇಶ್ ಮುಖಂಡರು ವೈ.ಎನ್.ಹೊಸಕೋಟೆ ಹೆಚ್ಚಿನ ಅನುದಾನ ಅಗತ್ಯ ಗ್ರಾಮ ಪಂಚಾಯಿತಿಗೆ ನೀಡುತ್ತಿರುವ ಸರ್ಕಾರದ ಅನುದಾನ ಸಾಕಾಗುತ್ತಿಲ್ಲ. ದೊರೆಯುವ ಸಂಪನ್ಮೂಲಗಳಿಂದ ಪಟ್ಟಣದ ಕುಡಿಯುವ ನೀರು ಇನ್ನಿತರೆ ಮೂಲ ಸೌಕರ್ಯಗಳ ಸಮಸ್ಯೆಗಳ ನಿವಾರಣೆ ಸಾಧ್ಯವಾಗುತ್ತಿಲ್ಲ. ಪಟ್ಟಣ ಬದಲಾಗಬೇಕಾದರೆ ಹೆಚ್ಚಿನ ಆದಾಯ ಮತ್ತು ಅನುದಾನ ಗಳಿಸುವುದು ಅನಿವಾರ್ಯ. ಜಿ.ಬಿ.ಸತ್ಯನಾರಾಯಣ ಮುಖಂಡರು ವೈ.ಎನ್.ಹೊಸಕೋಟೆ ಕಸ ತುಂಬಿದ ಚರಂಡಿ ಹೆಚ್ಚಾಗುತ್ತಿರುವ ಜನಸಂಖ್ಯೆಗನುಗುಣವಾಗಿ ಮನೆ ಲೇಔಟ್‌ಗಳು ನಿರ್ಮಾಣವಾಗುತ್ತಿವೆ. ರಸ್ತೆ ಬೀದಿದೀಪ ಮತ್ತು ಚರಂಡಿಗಳ ಸಮಸ್ಯೆ ಕಾಡುತ್ತಿದೆ. ಎಲ್ಲೆಡೆ ತೆರೆದ ಚರಂಡಿ ವ್ಯವಸ್ಥೆ ಇರುವುದರಿಂದ ಕಸ ತುಂಬಿ ಕೊಳಚೆ ಶೇಖರಣೆಗೊಂಡು ಕ್ರಿಮಿಕೀಟಗಳ ಹೆಚ್ಚಾಗಿ ರೋಗಗಳಿಗೆ ಕಾರಣವಾಗುತ್ತಿದೆ. ಪಟ್ಟಣ ಪಂಚಾಯಿತಿಯಾದರೆ ಒಳ ಚರಂಡಿ ವ್ಯವಸ್ಥೆ ನಿರ್ಮಾಣಕ್ಕೆ ಅವಕಾಶವಿದೆ. ವೆಂಕಟೇಶ್ ಮುಖಂಡರು ವೈ.ಎನ್.ಹೊಸಕೋಟೆ ಸಮಸ್ಯೆಗಳಿಗಿಲ್ಲ ಪರಿಹಾರ ಪಟ್ಟಣದಲ್ಲಿ ಒಟ್ಟು 9 ವಾರ್ಡ್‌ಗಳಿದ್ದು ಪ್ರತಿ ವಾರ್ಡ್‌ನಿಂದ 4-5 ಜನ ಸದಸ್ಯರಿದ್ದಾರೆ. ವಾರ್ಡ್‌ನಲ್ಲಿ ಸಮಸ್ಯೆ ಉದ್ಭವಿಸಿ ಸದಸ್ಯರ ಬಳಿ ಹೋದಾಗ ರಾಜಕೀಯ ಜಾತಿ ವೈಯುಕ್ತಿಕ ಸಮಸ್ಯೆಗಳ ಉದ್ದೇಶದಿಂದ ಒಬ್ಬರ ಮೇಲೆ ಮತ್ತೊಬ್ಬರು ಹೇಳಿ ನುಣುಚಿಕೊಳ್ಳುತ್ತಾರೆ. ಸಮಸ್ಯೆ ಬಗೆ ಹರಿಯುವುದಿಲ್ಲ. ಪಟ್ಟಣ ಪಂಚಾಯಿತಿಯಾದರೆ ಒಂದು ವಾರ್ಡ್‌ಗೆ ಒಬ್ಬನೇ ಸದಸ್ಯ ಇರುವುದರಿಂದ ನುಣಿಚಿಕೊಳ್ಳಲು ಸಾಧ್ಯವಿಲ್ಲದೆ ಸಮಸ್ಯೆಗಳ ನಿವಾರಣೆಗೆ ಒತ್ತು ನೀಡಲೇಬೇಕಾಗುತ್ತದೆ. ನೂರ್ ಮಹಮ್ಮದ್ ವ್ಯಾಪಾರಿ ವೈ.ಎನ್.ಹೊಸಕೋಟೆ ಜನಪ್ರತಿನಿಧಿಗಳಿಗಿಲ್ಲ ಆಸಕ್ತಿ ನಾವು ಅರ್ಜಿ ಸಲ್ಲಿಸಿದ ನಂತರ ಅರ್ಜಿ ಸಲ್ಲಿಸಿದ್ದ ಹುಳಿಯಾರು ಪಟ್ಟಣ ಪಂಚಾಯಿತಿಯಾಗುವಲ್ಲಿ ಯಶಸ್ವಿಯಾಗಿದೆ. ಅಲ್ಲಿನ ಜನಪ್ರತಿನಿಧಿಗಳ ಆಸಕ್ತಿಯು ಈ ಕಾರ್ಯದಲ್ಲಿ ಹೆಚ್ಚು ಪ್ರಭಾವ ಬೀರಿದೆ. ಅಂತಹುದೇ ಕೆಲಸ ಇಲ್ಲಿ ನಡೆಯಬೇಕು. ಲೀಲಾವತಿ ತಿಪ್ಪೇಸ್ವಾಮಿ ಗ್ರಾಮ ಪಂಚಾಯಿತಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT