ಬುಧವಾರ, ಫೆಬ್ರವರಿ 19, 2020
25 °C

ತುಮಕೂರು: ಸುಸ್ಥಿತಿಯ ಜಿ.ಪಂ.ಕಚೇರಿ ನವೀಕರಣಕ್ಕೆ ಲಕ್ಷ–ಲಕ್ಷ ವ್ಯಯ

ಪೀರ್‌ಪಾಷ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಗಾಳಿ, ಬೆಳಕಿನ ಸುವ್ಯವಸ್ಥೆ ಸೇರಿದಂತೆ ಕಚೇರಿಯ ಎಲ್ಲ ಸೌಕರ್ಯ ಒಳಗೊಂಡ ಚೆಂದದ ಕೊಠಡಿಗಳನ್ನೆ ಲಕ್ಷ–ಲಕ್ಷ ವೆಚ್ಚದಲ್ಲಿ ನವೀಕರಣ ಮಾಡುವ ಕೆಲಸಕ್ಕೆ ತುಮಕೂರು ಜಿಲ್ಲಾ ಪಂಚಾಯಿತಿ ಕೈಹಾಕಿದೆ.

ಸುಸ್ಥಿತಿಯಲ್ಲಿಯೇ ಇರುವ ಟೈಲ್ಸ್‌ಗಳ ನೆಲಹಾಸು ಬದಲಾಗುತ್ತಿದೆ. ಬಣ್ಣ ಬಳಿದಿರುವ ಆಕರ್ಷಕ ಗೋಡೆಗಳಿಗೆ ಹಲಗೆಯ ಹಾಳೆಗಳನ್ನು (ವುಡ್‌ ಫಿನಿಷಿಂಗ್‌) ಜೋಡಿಸಲು ಯೋಜಿಸಲಾಗಿದೆ. ಗಟ್ಟಿಮುಟ್ಟಾಗಿಯೇ ಇರುವ ಕುರ್ಚಿ–ಮೇಜುಗಳನ್ನು ಮೂಲೆಗೆ ಹಾಕಲಾಗುತ್ತಿದೆ.

ಜಿಲ್ಲಾ ಪಂಚಾಯಿತಿಯಲ್ಲಿನ ಯೋಜನಾ ಶಾಖೆಯ ಕೊಠಡಿ, ಇದೇ ಶಾಖೆಯ ಎರಡನೇ ಉಪಕಾರ್ಯದರ್ಶಿ ಕೊಠಡಿ ಮತ್ತು ಜಿ.ಪಂ.ಸದಸ್ಯರ ವಿಶ್ರಾಂತಿ ಕೊಠಡಿಗಳಿಗೆ ನವೀಕರಣದ ‘ಭಾಗ್ಯ’ ಸಿಕ್ಕಿದೆ.

ಯೋಜನಾ ಶಾಖೆಯಲ್ಲಿ ಚನ್ನಾಗಿಯೇ ಇರುವ ಟೈಲ್‌ಗಳನ್ನು ಕಿತ್ತುಹಾಕಿ, ಹೊಸದನ್ನು ಜೋಡಿಸಲು ನಿರ್ಧರಿಸಿದ್ದಾರೆ. ಗೋಡೆಗಳನ್ನು ಮತ್ತಷ್ಟು ಆಕರ್ಷಕವಾಗಿಸಲು ವುಡ್‌ ಫಿನಿಷಿಂಗ್‌ ಮಾಡಲಾಗುತ್ತಿದೆ. ಕಡತಗಳನ್ನು ಜೋಡಿಸಿಡಲು ಹೊಸ ಕಪಾಟುಗಳನ್ನು ಸಿದ್ಧಪಡಿಸಲಾಗುತ್ತಿದೆ. ಇರುವ ಕಪಾಟುಗಳನ್ನು ಗುಜರಿಗೆ ಹಾಕಲಾಗುತ್ತಿದೆ.

ಉಪಕಾರ್ಯದರ್ಶಿ ಕೊಠಡಿಗೂ ವುಡ್‌ ಫಿನಿಷಿಂಗ್‌ ಮಾಡಲಾಗುತ್ತಿದೆ. ಇದೇ ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿಗಾಗಿ ಪ್ರತ್ಯೇಕ ವಿಭಾಗಗಳನ್ನು (ಪಾರ್ಟಿಷನ್‌) ನಿರ್ಮಿಸಲಾಗುತ್ತಿದೆ.

ಪಂಚಾಯಿತಿ ಕಟ್ಟಡ ಆವರಣದ ತಡೆಗೋಡೆಯನ್ನೂ (ಕಾಂಪೌಂಡ್‌) 5 ಅಡಿಯಿಂದ 7 ಅಡಿಗೆ ಎತ್ತರಿಸಲಾಗುತ್ತಿದೆ. ಇದಕ್ಕೆ ಪಕ್ಕದಲ್ಲಿನ ‘ಕುಂಚಿಟಿಗ ಸಮುದಾಯ ಭವನದಿಂದ ಶಬ್ದಮಾಲಿನ್ಯ ಆಗುತ್ತಿದೆ’ ಎಂಬ ಕಾರಣ ನೀಡಲಾಗುತ್ತಿದೆ.

ವಾಹನ ನಿಲುಗಡೆಗಾಗಿ ಇರುವ ಚಾವಣಿಯೇ ನಿರ್ವಹಣೆಯಿಂದ ಸೊರಗುತ್ತಿದೆ. ಈಗ ಹೊಸದೊಂದು ಚಾವಣಿ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ.

ವಿಶ್ರಾಂತಿಗೆ ಹೊಸ ಸೋಫಾ

ಪಂಚಾಯಿತಿಯ ಸದಸ್ಯರು ಆರಾಮಾಗಿ ಕೂರಲು ವಿಶ್ರಾಂತಿ ಕೊಠಡಿಯಲ್ಲಿ ಈಗಾಗಲೇ ಮೆತ್ತನೆಯ ಮೂರು ಸೋಫಾಗಳು ಇವೆ. ಇವುಗಳ ಮೇಲೆ ಏಕಕಾಲಕ್ಕೆ 15 ಸದಸ್ಯರು ಕೂರಬಹುದು. ಟಿ.ವಿ.ಯೂ ಸಹ ಚೆನ್ನಾಗಿಯೇ ಕಾರ್ಯನಿರ್ವಹಿಸುವ ಸ್ಥಿತಿಯಲ್ಲಿಯೇ ಇದೆ. ಇವುಗಳನ್ನು ಬದಲಿಸಲು ಪಂಚಾಯಿತಿ ಲೆಕ್ಕಚಾರ ಹಾಕಿದೆ.

‘ಎಷ್ಟು ಸೋಫಾ ತರಿಸುತ್ತಿದ್ದಿರಾ, ಎಷ್ಟು ಇಂಚಿನ ಹೊಸ ಟಿ.ವಿ. ಕೊಳ್ಳುತ್ತಿದ್ದಿರಾ’ ಎಂಬ ಪ್ರಶ್ನೆಗೆ ‘ಅವೆಲ್ಲ ಬಾಯಲ್ಲಿ ಇಲ್ಲ. ಹೇಳಕಾಗಲ್ಲ’ ಎಂದು ಅಧಿಕಾರಿಯೊಬ್ಬರು ಖಾರವಾಗಿ ಉತ್ತರಿಸಿ, ಕಡತ ಪರಿಶೀಲನೆಯಲ್ಲಿ ತೊಡಗಿದರು. ಕಚೇರಿ ನಿರ್ವಹಿಸಲು ವಾರ್ಷಿಕವಾಗಿ ₹50 ಲಕ್ಷ ಅನುದಾನ ಬರುತ್ತದೆ. ಇಂತಿಂಥ ಕೊಠಡಿಗಳ ಕಿಟಕಿ–ಬಾಗಿಲು, ಕರ್ಟನ್‌, ವೈರಿಂಗ್‌, ಶೌಚಾಲಯಗಳನ್ನು ಬದಲಾಯಿಸಿ ಎಂದು ಹಿರಿಯ ಅಧಿಕಾರಿಗಳು ಹೇಳುತ್ತಾರೆ. ಅದರಂತೆ ನಾವು ಮಾಡುತ್ತೇವೆ. ಇಲ್ಲದಿದ್ದರೆ, ಬಂದ ಅನುದಾನ ವಾಪಸ್ಸು ಹೋಗುತ್ತದೆ ಎಂದು ಅವರು ವಿವರಿಸಿದರು.

‘ಸ್ಥಳಾವಕಾಶ ಬಳಸಿಕೊಳ್ಳುತ್ತಿದ್ದೇವೆ’

ಈ ಹಿಂದೆ ಇದ್ದ ಕಚೇರಿಯ ಕೊಠಡಿಗಳ ರಚನೆಯಲ್ಲಿ ಸ್ಥಳಾವಕಾಶ ಸಮರ್ಪಕವಾಗಿ ಬಳಕೆ ಆಗಿರಲಿಲ್ಲ. ಹಾಗಾಗಿ ನವೀಕರಣ ಮಾಡಲಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ನವೀಕರಣಕ್ಕಾಗಿಯೇ ಪ್ರತ್ಯೇಕ ಅನುದಾನ ಬಂದಿಲ್ಲ. ಪಂಚಾಯಿತಿ ಕಟ್ಟಡ, ಹಿರಿಯ ಅಧಿಕಾರಿಗಳ ವಸತಿ ಸಮುಚ್ಚಯ ನಿರ್ವಹಣೆ, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಕಚೇರಿಗಳ ನಿರ್ವಹಣೆಗಾಗಿ ಅನುದಾನ ಬರುತ್ತದೆ. ಅದರಲ್ಲಿ ಶೇ 80 ಅನ್ನು ನಿರ್ವಹಣೆಗೆ ಬಳಸುತ್ತಿದ್ದೇವೆ. ಉಳಿದ ಶೇ 20 ಅನ್ನು ಮಾತ್ರ ನವೀಕರಣಕ್ಕೆ ವಿನಿಯೋಗಿಸುತ್ತಿದ್ದೇವೆ ಎಂದು ಅವರು ಹೇಳಿದರು.

ಚೆನ್ನಾಗಿರೋದನ್ನು ಬದಲಿಸಲು ತಲೆ ಕೆಟ್ಟಿದಿಯಾ ನಮಗೆ. ಅಗತ್ಯತೆಗೆ ಅನುಸಾರ ನವೀಕರಣ ಮಾಡಲಾಗುತ್ತಿದೆ.

ಲತಾ ರವಿಕುಮಾರ್‌, ಅಧ್ಯಕ್ಷೆ, ಜಿಲ್ಲಾ ಪಂಚಾಯಿತಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)