ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾ.ಪಂ ವ್ಯಾಪ್ತಿಗೆ 210 ನೀರು ಘಟಕ

ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿ, ಕಪ್ಪುಪಟ್ಟಿಗೆ ಸೇರಿಸಲು ಪಟ್ಟು
Last Updated 3 ಜೂನ್ 2020, 11:02 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯ ವಿವಿಧೆಡೆ ಸ್ಥಾಪಿಸಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ಪೈಕಿ 210 ಘಟಕಗಳನ್ನು ಗ್ರಾಮ ಪಂಚಾಯಿತಿಗಳಿಗೆ ನೀಡಲು ಮಂಗಳವಾರ ನಡೆದ ಜಿಲ್ಲಾ ಪಂಚಾಯಿತಿ ವಿಶೇಷ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಲಾಯಿತು.

ಸಭೆಯ ಆರಂಭದಲ್ಲೇ ಜಿ.ಪಂ ಸದಸ್ಯರು ಜಿಲ್ಲೆಯ ವಿವಿಧೆಡೆ ನೀರಿನ ಘಟಕಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಗುತ್ತಿಗೆ ಪಡೆದ ಏಜೆನ್ಸಿಗಳ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿ, ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಪಟ್ಟುಹಿಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ರಮೇಶ್, ‘ನಿರ್ವಹಣೆಯ ಹೊಣೆ ಹೊತ್ತಿರುವ ಏಜೆನ್ಸಿಗಳಿಗೆ ಈಗಾಗಲೇ ನೋಟಿಸ್ ನೀಡಿದ್ದು, ಶೀಘ್ರದಲ್ಲೇ ಠೇವಣಿ ಹಣವನ್ನು ಮುಟ್ಟುಗೋಲು ಹಾಕಿಕೊಂಡು, ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಕ್ರಮ ವಹಿಸಲಾಗುವುದು’ ಎಂದು ತಿಳಿಸಿದರು.

ಜಿಲ್ಲೆಯ ವಿವಿಧೆಡೆ 210 ಘಟಕಗಳನ್ನು ಗ್ರಾ.ಪಂ.ಗಳಿಗೆ ವರ್ಗಾವಣೆ ಮಾಡಲು ತೀರ್ಮಾನಿಸಿದ್ದು, ಪ್ರತಿ ಘಟಕದ ನಿರ್ವಹಣೆಗೆಂದು
ಸರ್ಕಾರ ಪ್ರತಿ ತಿಂಗಳು ₹3 ಸಾವಿರ ನೀಡಲಿದೆ. ನಮ್ಮ ಬಳಿ ₹3ರಿಂದ 4 ಕೋಟಿಯಷ್ಟು ಅನುದಾನವಿದ್ದು, ಘಟಕಗಳನ್ನು ರಿಪೇರಿ ಮಾಡಿಸಿ ಹಸ್ತಾಂತರಿಸಲಾಗುವುದು. ಇನ್ನು ಒಂದೂವರೆ ತಿಂಗಳಲ್ಲಿ ಎಲ್ಲ
ಘಟಕಗಳ ನಿರ್ವಹಣೆಗೆ ಕ್ರಮ ವಹಿಸಲಾಗುವುದು ಎಂದು ಅವರು ತಿಳಿಸಿದರು.

ಶಿಷ್ಟಾಚಾರ ಉಲ್ಲಂಘನೆ: ಜಿಲ್ಲೆಯ ವಿವಿಧೆಡೆ ತಮ್ಮ ಗಮನಕ್ಕೆ ಬಾರದೇ ಶಿಷ್ಟಾಚಾರ ಉಲ್ಲಂಘಿಸಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿದ್ದಾರೆ ಎಂದು ಅಸಮಾಧಾನಗೊಂಡ ಸದಸ್ಯರು, ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಚನ್ನವೀರಸ್ವಾಮಿ ಅವರನ್ನು ತರಾಟೆಗೆ ತೆಗೆದುಕೊಂಡರು. ಶಾಸಕ, ಸಂಸದರ ಅನುದಾನದಡಿ ಘಟಕ ಸ್ಥಾಪಿಸುವ ಸಂದರ್ಭದಲ್ಲಿ ನಮಗೆ ಆಹ್ವಾನ ನೀಡದಿದ್ದರೂ ಪರವಾಗಿಲ್ಲ. ಜಿಲ್ಲಾ ಪಂಚಾಯಿತಿ ಅನುದಾನದಡಿ ಸದಸ್ಯರ ಗಮನಕ್ಕೆ ಬಾರದೇ ಘಟಕಗಳನ್ನು ಹೇಗೆ ಸ್ಥಾಪಿಸುತ್ತೀರಿ ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕಾರ್ಯಪಾಲಕ ಎಂಜಿನಿಯರ್, ‘ನಮ್ಮಿಂದ ತಪ್ಪಾಗಿದೆ. ಇನ್ನುಮುಂದೆ ಈ ತಪ್ಪು ಮರುಕಳಿಸಿದಂತೆ ನೋಡಿಕೊಳ್ಳುತ್ತೇವೆ’ ಎಂದು ಕ್ಷಮೆ ಕೋರಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಲತಾ ರವಿಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಶಾರದ ನರಸಿಂಹಮೂರ್ತಿ, ಸಿಇಒ ಶುಭಾ ಕಲ್ಯಾಣ್ ಇದ್ದರು.

ನರೇಗಾ ಅವ್ಯವಹಾರ; ಅಧಿಕಾರಿಗಳು ಶಾಮೀಲು

ಜಿಲ್ಲಾ ಪಂಚಾಯಿತಿ ಸದಸ್ಯರಿಗೆ ನರೇಗಾ ಯೋಜನೆಯ ಬಗ್ಗೆ ಸಮಪರ್ಕವಾಗಿ ಅಧಿಕಾರಿಗಳು ಮಾಹಿತಿ ನೀಡುತ್ತಿಲ್ಲ. ಇದರಲ್ಲಿ ಕೋಟ್ಯಂತರ ಅವ್ಯವಹಾರ ನಡೆಯುತ್ತಿದೆ. ಗ್ರಾಮ ಪಂಚಾಯಿತಿ ಪಿಡಿಒ ಮೂಲಕ ಅಧಿಕಾರಿಗಳು ಅಕ್ರಮ ವ್ಯವಹಾರ ನಡೆಸುತ್ತಿದ್ದಾರೆ. ಇದನ್ನು ತನಿಖೆಗೊಳಪಡಿಸಬೇಕು. ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಜಿಲ್ಲಾ ಪಂಚಾಯಿತಿ ಕೆಲ ಸದಸ್ಯರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT