ಸೋಮವಾರ, ಆಗಸ್ಟ್ 15, 2022
24 °C
ಕೋರಂ ಕೊರತೆ; ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ ಮುಂದಕ್ಕೆ

ತುಮಕೂರು ಜಿ.ಪಂ. ಅಧ್ಯಕ್ಷರ ವಿರುದ್ಧ ಅವಿಶ್ವಾಸಕ್ಕೆ 48 ಸದಸ್ಯರ ಸಹಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಲತಾ ರವಿಕುಮಾರ್ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ. ಅವರ ಕಾರ್ಯವೈಖರಿಯಲ್ಲಿ ವಿಶ್ವಾಸ ಇಲ್ಲ ಎಂದು ಸುಮಾರು 48 ಜಿಲ್ಲಾ ಪಂಚಾಯಿತಿ ಸದಸ್ಯರು ಮಂಗಳವಾರ ನಡೆಯಬೇಕಿದ್ದ ಸಾಮಾನ್ಯ ಸಭೆ ಬಹಿಷ್ಕರಿಸಿದರು. 

ಕಳೆದ ಮೂರು ಸಾಮಾನ್ಯ ಸಭೆಗೆ ವಿರೋಧ ವ್ಯಕ್ತಪಡಿಸಿದ್ದ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಸದಸ್ಯರು ನಾಲ್ಕನೇ ಸಭೆಗೂ ಅಸಮಾಧಾನ ಹೊರಹಾಕಿದರು. ಬಿಜೆಪಿಯ 19, ಕಾಂಗ್ರೆಸ್‌ನ 19, ಜೆಡಿಎಸ್‌ನ 14 ಸದಸ್ಯರು ಸಭೆ ಬಹಿಷ್ಕಾರಿಸಿದರು.

ಸಿಸಿ ಟಿವಿ ಕ್ಯಾಮೆರಾ ಖರೀದಿ ಹಗರಣಗಳನ್ನು ಲೋಕಾಯುಕ್ತ ತನಿಖೆಗೆ ವಹಿಸಬೇಕು ಎಂದು ಜೆಡಿಎಸ್‌, ಕಾಂಗ್ರೆಸ್‌, ಬಿಜೆಪಿ ಸದಸ್ಯರು ಲತಾ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ ಬಳಿಕ ಬಹುಮತ ಸಾಬೀತುಪಡಿಸದೆ ಸಭೆ ನಡೆಸುವಂತಿಲ್ಲ ಎಂದು ಹೊಯ್ಸಳಕಟ್ಟೆ ಜಿಲ್ಲಾ ಪಂಚಾಯಿತಿ ಸದಸ್ಯ ಮಹಾಲಿಂಗಯ್ಯ ತಿಳಿಸಿದರು.

ಅಧ್ಯಕ್ಷರು ಸದಸ್ಯರ ವಿಶ್ವಾಸ ಉಳಿಸಿಕೊಳ್ಳಬೇಕು. ಆದರೆ ಅಧ್ಯಕ್ಷರು ಸದಸ್ಯರ ವಿಶ್ವಾಸ ಉಳಿಸಿಕೊಂಡಿಲ್ಲ ಎಂದು ರಾಮಕೃಷ್ಣ ಆರೋಪಿಸಿದರು.

ಅಕ್ಷರ ದಾಸೋಹ, ಸಿಸಿ ಟಿವಿ ಕ್ಯಾಮೆರಾ ಹಗರಣ ಕುರಿತು ಲೋಕಾಯುಕ್ತ ತನಿಖೆ ನಡೆಸಬೇಕು ಎಂದು ಸದಸ್ಯರು ಒತ್ತಾಯಿಸಿದರೂ ಅಧ್ಯಕ್ಷರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

ಅಧ್ಯಕ್ಷೆ ಲತಾ ರವಿಕುಮಾರ್‌ ಮಾತನಾಡಿ, ಕೋರಂ ಕೊರತೆಯ ಕಾರಣದಿಂದ ಸಾಮಾನ್ಯ ಸಭೆ ಮುಂದೂಡಲಾಗಿದೆ. ನನ್ನ ಬಗ್ಗೆ ಅಸಮಾಧಾನ ಇದ್ದರೆ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಬೇಕಿತ್ತು. ಅದನ್ನು ಬಿಟ್ಟು ಸಭೆ ಬಹಿಷ್ಕಾರಿಸಿದ್ದು ಸರಿಯಲ್ಲ. ವರಿಷ್ಠರ ನಿರ್ಣಯದಂತೆ ಮುಂದುವರಿಯುತ್ತೇನೆ ಎಂದರು.

ಸದಸ್ಯರ ಮನವಿಗೆ ಸ್ಪಂದಿಸಲು, ಹಿಂದಿನ ಸಭೆಯಲ್ಲಿ ಚರ್ಚಿಸಿದ ಸಮಸ್ಯೆಗಳ ಪರಿಹಾರಕ್ಕಾಗಿ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಸಭೆಗೆ ಕರೆಸಲಾಗಿತ್ತು. ನಾನು ಪಕ್ಷಬೇಧ ಮಾಡದೇ ಕೆಲಸ ನಿರ್ವಹಿಸುತ್ತಿದ್ದೇನೆ. 15ನೇ ಹಣಕಾಸು ಯೋಜನೆಯಡಿ ₹ 6.40 ಕೋಟಿ ಬಂದಿದೆ. ಇದನ್ನು ಸದಸ್ಯರಿಗೆ ಹಂಚಿಕೆ ಮಾಡಲು, ಕ್ರಿಯಾಯೋಜನೆ, ಅನುಮೋದನೆ ಪಡೆಯಲು ತೀರ್ಮಾನಿಸಲಾಗಿತ್ತು ಎಂದರು.

ಜಿಲ್ಲಾ ಪಂಚಾಯಿತಿ ಅನುದಾನ ಕಡಿಮೆ ಇರುವುದರಿಂದ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಲು ಮುಖ್ಯಮಂತ್ರಿಗೆ ಒತ್ತಾಯಿಸಲು ನಿಯೋಗ ಭೇಟಿಯಾಗುವ ತೀರ್ಮಾನವಿತ್ತು ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು