ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಗಾಂಧೀಜಿ ಕರಾವಳಿ ಭೇಟಿಗೆ 100 ವರ್ಷ

ಎಂಜಿಎಂ ಕಾಲೇಜಿನಲ್ಲಿ ಗಾಂಧಿ ಭೇಟಿಯ ಶತಮಾನೋತ್ಸವ
Last Updated 19 ಆಗಸ್ಟ್ 2020, 19:31 IST
ಅಕ್ಷರ ಗಾತ್ರ

ಉಡುಪಿ: ಅಸಹಕಾರ ಚಳವಳಿಗೆ ಮಾರ್ಗದರ್ಶನ ನೀಡಲು ಖಿಲಾಫತ್‌ ನಾಯಕ ಮೌಲಾನಾ ಶೌಕತ್ ಅಲಿ ಅವರ ಜತೆ ಮಹಾತ್ಮ ಗಾಂಧೀಜಿ ಆ.19, 1920ರಂದು ಮಂಗಳೂರಿಗೆ ಬಂದಿದ್ದರು. ಗಾಂಧೀಜಿ ಅವರ ಕರಾವಳಿಯ ಮೊದಲ ಭೇಟಿಗೆ ನೂರು ವರ್ಷಗಳು ಕಳೆದಿವೆ ಎಂದು ಎಂಜಿಎಂ ಕಾಲೇಜಿನ ಗಾಂಧಿ ಅಧ್ಯಯನ ಕೇಂದ್ರದ ಮುಖ್ಯಸ್ಥ ವಿನೀತ್ ರಾವ್ ತಿಳಿಸಿದರು.

ಗಾಂಧಿ ಭೇಟಿಯ ಶತಮಾನೋತ್ಸವ ಅಂಗವಾಗಿ ಎಂಜಿಎಂ ಕಾಲೇಜಿನ ಇತಿಹಾಸ ವಿಭಾಗದಿಂದ ಗಾಂಧಿ ಅಧ್ಯಯನ ಕೇಂದ್ರಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಅವರು, ಆ.19ರಂದು ಮಧ್ಯಾಹ್ನ 1ರ ಹೊತ್ತಿಗೆ ಮಂಗಳೂರುರೈಲು ನಿಲ್ದಾಣಕ್ಕೆ ಬಂದ ಗಾಂಧೀಜಿಗೆ ಸ್ವಾಗತ ಕೋರಲಾಯಿತು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿ, ಬಂಟ್ವಾಳ, ಮೂಲ್ಕಿ, ಕಾರ್ಕಳ, ಕುಂದಾಪುರ, ಪುತ್ತೂರು, ಕಾಸರಗೋಡಿನಿಂದ ಸಾವಿರಾರು ಜನರು ಭಾಗವಹಿಸಿದ್ದರು ಎಂದು ಸ್ಮರಿಸಿದರು.

ಬಿಳಿ ಖಾದಿ ಟೋಪಿ, ಜುಬ್ಬಾ ದೋತರ ಧರಿಸಿದ್ದ ಗಾಂಧೀಜಿ ಸರಳತೆ ಎಲ್ಲರಿಗೂ ಅಚ್ಚರಿಯಾಗಿ ಕಂಡಿತ್ತು. ಅಂದು ಗಾಂಧೀಜಿ ಅವರನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು ಎಂದರು.

ಗಾಂಧೀಜಿ ಭಾಷಣ:

ಸಂಜೆ ಮಂಗಳೂರಿನ ಕೇಂದ್ರ ಮೈದಾನದಲ್ಲಿ ನಡೆದ ಬಹಿರಂಗ ಸಭೆಯಲ್ಲಿ 10,000 ಜನರನ್ನು ಉದ್ದೇಶಿಸಿ ಗಾಂಧೀಜಿ ಮಾತನಾಡಿ, ‘ಮಂಗಳೂರು ಜನತೆ, ಅಸಹಕಾರ ಚಳವಳಿಯ ಮಹತ್ವ ಅರಿತು ಸರ್ವಧರ್ಮ ಸಮಭಾವ ಹಾಗು ಒಗ್ಗಟ್ಟಿಂದ ರಾಷ್ಟ್ರದ ಸ್ವಾಭಿಮಾನವನ್ನು ಎತ್ತಿಹಿಡಿಯಬೇಕು ಎಂದು ಕರೆ ನೀಡಿದರು.

ಖಾನ್, ಬಹದ್ದೂರ್, ರಾವ್, ಸಾಹೇಬ್ ಮುಂತಾದ ಪದವಿ, ಪ್ರಶಸ್ತಿಗಳ ತ್ಯಾಗ, ಶಾಸನಸಭೆಯ ಬಹಿಷ್ಕಾರ, ವಕೀಲಿ ಬಹಿಷ್ಕಾರ, ಸರ್ಕಾರದ ಸಹಾಯ ಪಡೆವ ಶಾಲೆಗಳ ಬಹಿಷ್ಕಾರಗಳ ಬಗ್ಗೆ ತಿಳಿಸಿ ಜಾಗೃತಿ ಮೂಡಿಸಿದರು. ಸ್ವದೇಶಿ ವಸ್ತುಗಳ ಬಳಕೆ ಹಾಗೂ ಜನರಲ್ಲಿರಬೇಕಾದ ಒಗ್ಗಟ್ಟಿನ ಮಹತ್ವ ತಿಳಿಸಿ ಜನರ ಮನಸ್ಸು ಬೆಸೆಯುವ ಸಂದೇಶ ನೀಡಿದರು ಎಂದು ವಿನೀತ್ ರಾವ್ ಸ್ಮರಿಸಿದರು.

ಬ್ರಿಟೀಷರ ಆಳ್ವಿಕೆಯು ಪ್ಲೇಗ್‌ಗಿಂತಲೂ ಅಪಾಯಕಾರಿ, ಭೂಕಂಪ ಪ್ರವಾಹಗಳಿಗಿಂತಲೂ ಭಯಂಕರ ವಿಪತ್ತು ಎಂದು ಎಚ್ಚರಿಸಿದರು.ಸಾರ್ವಜನಿಕ ಸಭೆಯ ಬಳಿಕ ಪುರುಷೋತ್ತಮ ಶೇಟರ ವರ್ತಕ ವಿಲಾಸ ನಿವಾಸದಲ್ಲಿ ಸಂವಾದ ಸಭೇ ನಡೆಸಿದ್ದರು. ಮರುದಿನ ಬೆಳಿಗ್ಗೆ ರೈಲಿನಲ್ಲಿ ಸೇಲಂಗೆ ತೆರಳಿದರು ಎಂದರು.

ಪ್ರಾಂಶುಪಾಲ ಡಾ.ಎಂ.ಜಿ. ವಿಜಯ್ ಅಧ್ಯಕ್ಷತೆ ವಹಿಸಿದ್ದರು. ಇತಿಹಾಸ ವಿಭಾಗದ ಮುಖ್ಯಸ್ಥ ಸುಬೋಧ ಪೈ ಸ್ವಾಗತಿಸಿದರು. ಗ್ರಂಥಪಾಲಕ ಎಚ್‌.ವಿ. ಕಿಶೋರ್ ವಂದಿಸಿದರು. ಎನ್‌ಎಸ್ಎಸ್ ಅಧಿಕಾರಿ ಸುಚಿತ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT