ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಜಿಲ್ಲೆಗೆ ಬಂತು 12,000 ಡೋಸ್‌ ಕೋವಿಡ್‌ ಲಸಿಕೆ

ಜ.16ರಿಂದ ಮೊದಲ ಹಂತದ ಲಸಿಕಾ ಅಭಿಯಾನ
Last Updated 14 ಜನವರಿ 2021, 12:39 IST
ಅಕ್ಷರ ಗಾತ್ರ

ಉಡುಪಿ: ಜ.16ರಿಂದ ದೇಶದಾದ್ಯಂತ ಮೊದಲ ಹಂತದ ಕೋವಿಡ್ ಲಸಿಕಾ ಅಭಿಯಾನ ಶುರುವಾಗಲಿದ್ದು, ಜಿಲ್ಲೆಯಲ್ಲೂ ಚಾಲನೆ ಸಿಗಲಿದೆ. ಗುರುವಾರ 12 ಸಾವಿರ ಡೋಸ್‌ ಕೋವಿಡ್‌ ಲಸಿಕೆಗಳು ಜಿಲ್ಲೆಗೆ ಬಂದಿವೆ.

ಜಾಗಟೆ ಸ್ವಾಗತ:ಬಿಗಿ ಭದ್ರತೆಯಲ್ಲಿ ಡಿಎಚ್‌ಒ ಕಚೇರಿ ಆವರಣಕ್ಕೆ ಬಂದ ಲಸಿಕಾ ವಾಹನಕ್ಕೆ ಆರೋಗ್ಯ ಇಲಾಖೆ ಸಿಬ್ಬಂದಿ ಜಾಗಟೆ ಹಾಗೂ ಗಂಟೆ ಬಾರಿಸಿ ಸ್ವಾಗತ ನೀಡಿದರು. ಜಿಲ್ಲಾಧಿಕಾರಿ ಜಿ.ಜಗದೀಶ್‌, ಜಿಲ್ಲಾ ಪಂಚಾಯಿತಿ ಸಿಇಒ ಡಾ.ನವೀನ್ ಭಟ್‌, ಡಿಎಚ್‌ಒ ಡಾ.ಸುಧೀರ್‌ಚಂದ್ರ ಸೂಡ ಸಮ್ಮುಖದಲ್ಲಿ ಕೋವಿಡ್‌ ಲಸಿಕೆಗಳನ್ನು ಡಿಎಚ್‌ಒ ಕಚೇರಿಯಲ್ಲಿ ನಿರ್ಮಿಸಲಾಗಿರುವ ಕೋವಿಡ್‌ ಲಸಿಕಾ ಸಂಗ್ರಹಾಗಾರಕ್ಕೆ ಕೊಂಡೊಯ್ಯಲಾಯಿತು.

ಈ ಸಂದರ್ಭ ಜಿಲ್ಲಾಧಿಕಾರಿ ಜಿ.ಜಗದೀಶ್‌ ಮಾತನಾಡಿ, ಮೊದಲ ಹಂತದಲ್ಲಿ ಲಸಿಕೆ ಪಡೆಯಲು ಖಾಸಗಿ ಹಾಗೂ ಸರ್ಕಾರಿ ಆರೋಗ್ಯ ಇಲಾಖೆಯ 22,230 ಸಿಬ್ಬಂದಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಈಗ 12,000 ಡೋಸ್‌ ಲಸಿಕೆಗಳು ಜಿಲ್ಲೆಗೆ ಬಂದಿವೆ. ಜ.16ರಂದು ಪ್ರಧಾನಿ ಮೋದಿ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಲಿದ್ದು, ಅಂದು ಜಿಲ್ಲೆಯಲ್ಲೂ ಲಸಿಕೆ ಹಾಕುವ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದರು.

16ರಂದು ಬೆಳಿಗ್ಗೆ 11.30ಕ್ಕೆ ಮೊದಲ ಹಂತದಲ್ಲಿ ಜಿಲ್ಲೆಯ 6 ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಹಾಕಲಾಗುವುದು. ಒಂದೊಂದು ಕೇಂದ್ರದಲ್ಲಿ ತಲಾ 100 ರಂತೆ 600 ಜನರಿಗೆ ಲಸಿಕೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ‘ಡಿ’ ದರ್ಜೆ ನೌಕರರಿಂದ ವೈದ್ಯರವರೆಗೂ ಆರೋಗ್ಯ ಇಲಾಖೆಯ ಸಿಬ್ಬಂದಿಯನ್ನು ಈಗಾಗಲೇ ಗುರುತಿಸಲಾಗಿದ್ದು, ಅವರ ಮೊಬೈಲ್‌ಗೆ ಲಸಿಕೆ ಪಡೆಯುವ ವಿವರಗಳನ್ನು ರವಾನಿಸಲಾಗುವುದು ಎಂದರು.

16ರ ನಂತರ ಜಿಲ್ಲೆಯಾದ್ಯಂತ ಈಗಾಗಲೇ ಗುರುತಿಸಲಾಗಿರುವ 94 ಕೇಂದ್ರಗಳಲ್ಲಿ ಲಸಿಕೆ ಹಾಕುವ ಅಭಿಯಾನ ಆರಂಭವಾಗಲಿದೆ. 74 ಸರ್ಕಾರಿ ಹಾಗೂ 20 ಖಾಸಗಿ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್‌ ಮಾಹಿತಿ ನೀಡಿದರು.

ಎರಡನೇ ಹಂತದಲ್ಲಿ ಕಂದಾಯ, ಪೊಲೀಸ್ ಹಾಗೂ ನಗರಾಭಿವೃದ್ಧಿ ಇಲಾಖೆಯ ಸಿಬ್ಬಂದಿಗೆ ಲಸಿಕೆ ಹಾಕಲಾಗುತ್ತಿದ್ದು, ಈಗಾಗಲೇ ನೋಂದಣಿ ಮಾಡಿಕೊಳ್ಳಲಾಗಿದೆ. ಮೂರನೇ ಹಂತದಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುವುದು. ಒಬ್ಬರಿಗೆ ಎರಡು ಡೋಸ್ ಹಾಕಲಾಗುವುದು. ಒಂದು ಡೋಸ್‌ ಹಾಕಿದ 28 ದಿನಗಳ ಬಳಿಕ ಎರಡನೇ ಡೋಸ್‌ ನೀಡಲಾಗುವುದು. ಜಿಲ್ಲೆಯಲ್ಲಿ ಯಾರೂ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕಿಲ್ಲ ಎಂದರು.

ಈ ಸಂದರ್ಭ ಜಿಲ್ಲಾ ಪಂಚಾಯಿತಿ ಸಿಇಒ ಡಾ.ನವೀನ್ ಭಟ್‌, ಕೋವಿಡ್‌ ನೋಡೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್‌, ಲಸಿಕಾ ಅಧಿಕಾರಿ ಡಾ.ಎಂ.ಜಿ.ರಾಮ, ಡಾ.ಪ್ರೇಮಾನಂದ ಇದ್ದರು.

ಸಂಗ್ರಹಾಗಾರದ ವಿಶೇಷತೆ
ಕೋವಿಡ್‌ ಲಸಿಕೆಗಳನ್ನು ಸುರಕ್ಷಿತ ಹಾಗೂ ವೈಜ್ಞಾನಿಕವಾಗಿ ಸಂಗ್ರಹಿಸಿಡಲು ಡಿಎಚ್‌ಒ ಕಚೇರಿಯಲ್ಲಿ ಲಸಿಕಾ ಕೊಠಡಿ (ವಾಕ್ ಇನ್‌ ಕೂಲರ್‌) ನಿರ್ಮಾಣ ಮಾಡಲಾಗಿದೆ. ಸಂಪೂರ್ಣ ಹವಾ ನಿಯಂತ್ರಣ ಸೌಲಭ್ಯ ಹೊಂದಿರುವ ಕೊಠಡಿಯಲ್ಲಿ 2.28 ಕೋಟಿ ಡೋಸ್ ಲಸಿಕೆಯನ್ನು ಸಂಗ್ರಹಿಸಿಡಬಹುದು. ಕೊಠಡಿಯಲ್ಲಿ 2 ರಿಂದ 8 ಡಿಗ್ರಿ ತಾಪಮಾನ ಕಾಯ್ದುಕೊಳ್ಳಲಾಗುತ್ತದೆ. ಜಿಲ್ಲೆಯಲ್ಲಿ 94 ಕೋಲ್ಡ್ ಚೈನ್ ಪಾಯಿಂಟ್‌ಗಳನ್ನು ಗುರುತಿಸಲಾಗಿದೆ.

ಲಸಿಕೆಯ ವಿಶೇಷತೆ
ಲಸಿಕೆ ಯಾವುದು:
ಕೋವಿಶೀಲ್ಡ್‌
ಲಸಿಕೆ ಉತ್ಪಾದಕ ಕಂಪೆನಿ: ಸೀರಂ ಇನ್‌ಸ್ಟಿಟ್ಯೂಟ್‌
ಒಂದು ಬಾಟೆಲ್‌ನಲ್ಲಿರುವ ಡೋಸ್: 10
ಜಿಲ್ಲೆಗೆ ಬಂದಿರುವ ಡೋಸ್‌: 12,000
ಆಟೊ ಡಿಸ್‌ಪೋಸಬಲ್ (ಎಡಿ) ಸಿರಿಂಜ್ ಬಳಕೆ
ಬಳಸಿದ ಸಿರಿಂಜ್‌ ಮರುಬಳಕೆ ಸಾಧ್ಯವಿಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT