ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಟಿ, ಬಿಟಿ ಬರಲಿ; ಉದ್ಯೋಗ ಸೃಷ್ಟಿಯಾಗಲಿ

ಪ್ರತಿಭಾ ಪಲಾಯನ ತಪ್ಪಿಸಿ: ಜಿಲ್ಲೆಯ ಯುವಜನತೆಯ ಮನದಾಳ
Last Updated 26 ಆಗಸ್ಟ್ 2022, 15:57 IST
ಅಕ್ಷರ ಗಾತ್ರ

ಉಡುಪಿ: ಆಡಳಿತಾತ್ಮಕ ಹಾಗೂ ಅಧಿಕಾರ ವಿಕೇಂದ್ರೀಕರಣ ದೃಷ್ಟಿಯಿಂದ 1997ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಬೇರ್ಪಟ್ಟ ಉಡುಪಿ ಜಿಲ್ಲೆ ಕಳೆದ 25 ವರ್ಷಗಳಲ್ಲಿ ಹಲವು ಕ್ಷೇತ್ರಗಳಲ್ಲಿ ಅಭಿವೃದ್ಧಿಯಾಗಿದೆ. ಹಾಗೆಯೇ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಬಾಕಿ ಉಳಿದಿವೆ.

ಮಣಿಪಾಲದ ಕಸ್ತೂರಬಾ ಆಸ್ಪತ್ರೆ ಹಾಗೂ ಮೆಡಿಕಲ್‌ ಕಾಲೇಜು ಆರೋಗ್ಯ ಕ್ಷೇತ್ರದಲ್ಲಿ ಉಡುಪಿ ಹೆಸರನ್ನು ಜಾಗತಿಕವಾಗಿ ಗುರುತಿಸಿಕೊಳ್ಳುವಂತೆ ಮಾಡಿದೆ. ಇಲ್ಲಿನ ಪ್ರಸಿದ್ಧ ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಉಡುಪಿಗೆ ಶಿಕ್ಷಣ ಕಾಶಿ ಎಂಬ ಹೆಸರು ತಂದುಕೊಟ್ಟಿದೆ.

ಕೃಷ್ಣಮಠ, ಅಷ್ಟಮಠ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ, ಮಂದಾರ್ತಿ, ಕಮಲಶಿಲೆ, ಹಟ್ಟಿಯಂಗಡಿ ದೇವಸ್ಥಾನಗಳು ಧಾರ್ಮಿಕ ಪ್ರವಾಸೋದ್ಯಮ ಬೆಳೆಯಲು ಕಾರಣವಾಗಿವೆ. ಜಿಲ್ಲೆಯ ಸುಂದರ ಕಡಲ ತೀರಗಳು, ಪ್ರೇಕ್ಷಣೀಯ ಸ್ಥಳಗಳು ಪ್ರವಾಸೋದ್ಯಮ ಅಭಿವೃದ್ಧಿಗೆ ಕಾರಣವಾಗಿವೆ.

ಆದರೆ, ಉಡುಪಿ ಜಿಲ್ಲೆ ತಂತ್ರಜ್ಞಾನ ಕ್ಷೇತ್ರದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಬೆಳೆದಿದೆಯೇ ಎಂಬ ಪ್ರಶ್ನೆಗೆ ‘ಖಂಡಿತ ಇಲ್ಲ’ ಎಂಬ ಉತ್ತರ ಇಲ್ಲಿನ ಯುವ ಜನತೆಯದ್ದು. ಶಿಕ್ಷಣ, ಧಾರ್ಮಿಕ, ಪ್ರವಾಸೋದ್ಯಮ ಕ್ಷೇತ್ರದಲ್ಲಿ ಬೆಳೆದಿರುವ ಉಡುಪಿ ಜಿಲ್ಲೆ ತಂತ್ರಜ್ಞಾನ ಕ್ಷೇತ್ರದಲ್ಲಿ ಮಾತ್ರ ಹಿಂದೆ ಬಿದ್ದಿದೆ.

ಪ್ರತಿವರ್ಷ ಜಿಲ್ಲೆಯಿಂದ ಸಾವಿರಾರು ವಿದ್ಯಾರ್ಥಿಗಳು ಬಿ.ಇ, ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಪದವಿ ಸೇರಿದಂತೆ ವೃತ್ತಿಪರ ಕೋರ್ಸ್‌ಗಳನ್ನು ಮುಗಿಸುತ್ತಾರೆ. ಆದರೆ, ವಿದ್ಯಾರ್ಥಿಗಳ ವಿದ್ಯಾರ್ಹತೆಗೆ ತಕ್ಕಂತೆ ಉದ್ಯೋಗಗಳು ಜಿಲ್ಲೆಯಲ್ಲಿ ಲಭ್ಯವಾಗುತ್ತಿಲ್ಲ. ಪರಿಣಾಮ ಪ್ರತಿಭಾ ಪಲಾಯನ ನಡೆಯುತ್ತಿದೆ.

ಉಡುಪಿ ಹಾಗೂ ಮಣಿಪಾಲದಲ್ಲಿರುವ ಬೆರಳೆಣಿಕೆ ಐಟಿ, ಬಿಟಿ ಕಂಪನಿಗಳಲ್ಲಿ ಬೇಡಿಕೆಯಷ್ಟು ಉದ್ಯೋಗಗಳು ಸಿಗುತ್ತಿಲ್ಲ. ಪರಿಣಾಮ ಯುವಜನತೆ ಉದ್ಯೋಗ ಅರಸಿ ದೂರದ ಬೆಂಗಳೂರು, ಮುಂಬೈ, ಹೈದರಾಬಾದ್‌ನಂತಹ ಮಹಾನಗರಗಳಿಗೆ ವಲಸೆ ಹೋಗಿ ಅಲ್ಲಿಯೇ ಬದುಕು ಕಟ್ಟಿಕೊಳ್ಳುತ್ತಿದ್ದಾರೆ.

ವಿದ್ಯಾವಂತ ಯುವಜನತೆಯ ವಲಸೆಯ ಕಾರಣದಿಂದ ಯುವಶಕ್ತಿಯ ಕೊರತೆ ಕಾಡುತ್ತಿದೆ. ಜತೆಗೆ, ಮಕ್ಕಳಿಂದ ದೂರವಾಗಿ ಪೋಷಕರು ಒಂಟಿಯಾಗಿ ಜೀವನ ಸಾಗಿಸುತ್ತಿದ್ದಾರೆ.

ಉಡುಪಿ ಜಿಲ್ಲೆ ತಂತ್ರಜ್ಞಾನ ಕ್ಷೇತ್ರದಲ್ಲಿ ಹಿಂದುಳಿಯಲು ಕಾರಣಗಳನ್ನು ಹುಡುಕಿದರೆ ಮುಖ್ಯವಾಗಿ ಕಾಣುವುದು ಆಡಳಿತ ವ್ಯವಸ್ಥೆಯಲ್ಲಿನ ಲೋಪದೋಷಗಳು. ಜಿಲ್ಲೆಗೆ ಐಟಿ, ಬಿಟಿ ಕಂಪೆನಿಗಳನ್ನು ಸೆಳೆಯಲು ವ್ಯವಸ್ಥೆ ವಿಫಲವಾಗಿರುವ ಕಾರಣ ತಂತ್ರಜ್ಞಾನ ಕಂಪೆನಿಗಳು ಜಿಲ್ಲೆಗೆ ಕಾಲಿಡಲು ಹಿಂದೇಟು ಹಾಕುತ್ತಿವೆ.

ತಂತ್ರಜ್ಞಾನ ಕಂಪೆನಿಗಳು ನೆಲೆಯೂರಲು ಅಗತ್ಯ ಪ್ರಮಾಣದ ಭೂಮಿ ಲಭ್ಯವಾಗುತ್ತಿಲ್ಲ. ಒಂದೆಡೆ ಪಶ್ಚಿಮ ಘಟ್ಟ ಹಾಗೂ ಮತ್ತೊಂದೆಡೆ ಕಡಲತೀರಗಳನ್ನು ಹೊಂದಿರುವ ಉಡುಪಿ ಜಿಲ್ಲೆಯಲ್ಲಿ ಸಿಆರ್‌ಝೆಡ್‌ ಹಾಗೂ ಡೀಮ್ಡ್‌ ಫಾರೆಸ್ಟ್‌ ಸಮಸ್ಯೆಗಳು ತೊಡಕಾಗಿ ಕಾಡುತ್ತಿವೆ ಎನ್ನುತ್ತಾರೆ ಅಧಿಕಾರಿಗಳು.

ಜಿಲ್ಲೆಯಲ್ಲಿ ವಿಮಾನ ನಿಲ್ದಾಣವಾದರೆ ಬೆಂಗಳೂರು ಕೇಂದ್ರೀತ ಕೆಲವು ತಂತ್ರಜ್ಞಾನ ಕಂಪೆನಿಗಳು ಹಾಗೂ ಜಾಗತಿಕ ಸಂಸ್ಥೆಗಳು ಕರಾವಳಿಯತ್ತ ಮುಖ ಮಾಡಬಹುದು. ವಿಮಾನ ನಿಲ್ದಾಣದ ಜತೆಗೆ, ಬೆಂಗಳೂರು, ಮುಂಬೈ, ಹೈದರಾಬಾದ್ ಸೇರಿದಂತೆ ಮಹಾ ನಗರಗಳನ್ನು ಸಂಪರ್ಕಿಸಲು ಸುಲಭವಾದ ರೈಲು ಹಾಗೂ ರಸ್ತೆ ಮಾರ್ಗ ನಿರ್ಮಾಣಕ್ಕೂ ಒತ್ತು ಸಿಗಬೇಕು ಎನ್ನುತ್ತಾರೆ ಯುವಜನತೆ.

ದಶಕಗಳ ಹಿಂದೆ ಜಿಲ್ಲೆಯ ಬೈಂದೂರು ತಾಲ್ಲೂಕಿನಲ್ಲಿ ವಿಮಾನ ನಿಲ್ದಾಣ ನಿರ್ಮಿಸುವ ಪ್ರಸ್ತಾವ ಸಿದ್ಧಪಡಿಸಲಾಗಿತ್ತು. ಆದರೆ, ಕಾರಣಾಂತರಗಳಿಂದ ನನೆಗುದಿಗೆ ಬಿದ್ದಿತ್ತು. ಈಗಲೂ ಸರ್ಕಾರ ಇಚ್ಛಾಶಕ್ತಿ ಪ್ರದರ್ಶಿಸಿದರೆ ವಿಮಾನ ನಿಲ್ದಾಣ ಪ್ರಸ್ತಾವಕ್ಕೆ ಮರುಜೀವ ಕೊಡಬಹುದು.

ವಲಸೆ ಅನಿವಾರ್ಯ
ಉಡುಪಿ ಜಿಲ್ಲೆಯಲ್ಲಿ ಉದ್ಯೋಗ ಸಿಗದ ಪರಿಣಾಮ ಯುವಜನತೆ ಉದ್ಯೋಗ ಹುಡುಕಿಕೊಂಡು ಮಹಾನಗರಗಳತ್ತ ವಲಸೆ ಹೋಗುತ್ತಿದ್ದಾರೆ. ಜಿಲ್ಲೆಯಲ್ಲಿಯೇ ತಂತ್ರಜ್ಞಾನ ಕಂಪೆನಿಗಳು ಸ್ಥಾಪನೆಯಾದರೆ ಹೆಚ್ಚು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ವಾಯು, ರಸ್ತೆ ಹಾಗೂ ರೈಲು ಸಂಪರ್ಕ ಅನುಷ್ಠಾನವಾಗಬೇಕು.
–ಶೋಧನ್‌, ವಿದ್ಯಾರ್ಥಿ

‘ಸ್ಟಾರ್ಟ್‌ ಅಪ್‌ಗಳಿಗೆ ಆದ್ಯತೆ ಸಿಗಲಿ’
ರಜತ ಮಹೋತ್ಸವ ಸಂಭ್ರಮದಲ್ಲಿರುವ ಉಡುಪಿ ಜಿಲ್ಲೆಯಲ್ಲಿ ಯುವಕರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗಬೇಕು. ಹೆಚ್ಚು ಕಂಪೆನಿಗಳು ಸ್ಥಾಪನೆಯಾಗಬೇಕು. ಸ್ಟಾರ್ಟ್ ಆಪ್‌ಗಳು ಆರಂಭವಾಗಬೇಕು. ಇದರಿಂದ ಪ್ರತಿಭಾ ಪಲಾಯನ ತಪ್ಪಲಿದೆ.
–ನೀರಜ್‌, ವಿದ್ಯಾರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT