ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಟೋಲ್‌ಗೇಟ್ ಶಾಶ್ವತ ರದ್ದುಗೊಳಿಸಿ: ಜನಾಂದೋಲನಾ ಸಭೆಯಲ್ಲಿ ಒಕ್ಕೊರಲಿನ ಆಗ್ರಹ

Published : 25 ಆಗಸ್ಟ್ 2024, 5:10 IST
Last Updated : 25 ಆಗಸ್ಟ್ 2024, 5:10 IST
ಫಾಲೋ ಮಾಡಿ
Comments

ಪಡುಬಿದ್ರಿ: ಪಡುಬಿದ್ರಿ–ಕಾರ್ಕಳ ರಾಜ್ಯ ಹೆದ್ದಾರಿಯ ಕಂಚಿನಡ್ಕದಲ್ಲಿ ಟೋಲ್‌ ಕೇಂದ್ರ ತಾತ್ಕಾಲಿಕ ರದ್ದು ಮಾತ್ರ ಅಲ್ಲ ಶಾಶ್ವತವಾಗಿ ರದ್ದುಗೊಳಿಸಬೇಕು. ಅದುವರೆಗೂ ಹೋರಾಟ ಮುಂದುವರಿಯಲಿದೆ ಎಂದು ಪಡುಬಿದ್ರಿ– ಬೆಳ್ಮಣ್– ಕಾರ್ಕಳ ಟೋಲ್‌ವಿರೋಧಿ ಹೋರಾಟ ಸಮಿತಿ ಒತ್ತಾಯಿಸಿದೆ.

ಪಡುಬಿದ್ರಿಯ ಕಂಚಿನಡ್ಕದಲ್ಲಿ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆದ ಜನಾಂದೋಲನಾ ಸಭೆಯಲ್ಲಿ ಒಕ್ಕೊರಲಿನಿಂದ ಆಗ್ರಹಿಸಲಾಯಿತು.

ಜಿಲ್ಲೆಯ ವಿವಿಧ ಸಂಘಟನೆಗಳು, ಕಾಪು, ಕಾರ್ಕಳ, ಉಡುಪಿ, ಮೂಲ್ಕಿ ತಾಲ್ಲೂಕು, ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳ ಮುಖಂಡರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಸುತ್ತಲಿನ 40 ಗ್ರಾಮಗಳ ಸಾರ್ವಜನಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಸಭೆಯ ಬಳಿಕ ಕಂಚಿನಡ್ಕದಿಂದ ಪಡುಬಿದ್ರಿ ಜಂಕ್ಷನ್‌ವರೆಗೆ ಮೆರವಣಿಗೆಯಲ್ಲಿ ಸಾಗಿ ಬಳಿಕ ಕಂಚಿನಡ್ಕದಲ್ಲಿ ಸಮಾಪ್ತಿಗೊಂಡಿತು.

ಹೋರಾಟ ಸಮಿತಿ ಅಧ್ಯಕ್ಷ ಸುಹಾಸ್ ಹೆಗ್ಡೆ ನಂದಳಿಕೆ ಮಾತನಾಡಿ, ನಮ್ಮ ಊರಿಗೆ ಬಂದಿರುವ ಟೋಲ್‌ಗೇಟ್ ಎಂಬ ಕಂಟಕ ಒದ್ದೋಡಿಸುವ ಹೋರಾಟಕ್ಕೆ ಪಕ್ಷಾತೀತವಾಗಿ ಎಲ್ಲರೂ ಕೈ ಜೋಡಿಸಿರುವುದು ಹೋರಾಟಕ್ಕೆ ಬಲ ಬಂದಿದೆ. ಕಾರ್ಯಾದೇಶಕ್ಕೆ ತಾತ್ಕಾಲಿಕ ತಡೆ ಸ್ವಾಗತಾರ್ಹವೇ ಆಗಿದ್ದು, ಕಾರ್ಕಳ– ಪಡುಬಿದ್ರಿ ನಡುವಿನ ರಸ್ತೆಯಿಂದ ಸಂಪೂರ್ಣ ಎತ್ತಂಗಡಿಯಾಗುವವರೆಗೂ ಹೋರಾಟ ಮುಂದುವರಿಯಲಿದೆ. ಸರ್ಕಾರ ಕೂಡಲೇ ಸಂಪೂರ್ಣ ರದ್ದುಪಡಿಸಿ ಆದೇಶ ಹೊರಡಿಸಲಿ ಎಂದು ಆಗ್ರಹಿಸಿದರು.

ಕೇಮಾರು ಸಾಂದೀಪನಿ ಸಾಧನಾಶ್ರಮದ ಈಶವಿಠಲದಾಸ ಸ್ವಾಮೀಜಿ ಮಾತನಾಡಿ, ಈ ಟೋಲ್ ಹೋರಾಟ ಜನರನ್ನು ಒಗ್ಗೂಡಿಸಿದೆ. ಎಲ್ಲಾ ಪಕ್ಷಗಳು, ಧರ್ಮ–ಜಾತಿಗಳ ಜನರು ಒಗ್ಗೂಡಿದ್ದು ರಾಜಕೀಯ ರಹಿತ ಹೋರಾಟಕ್ಕೆ ಸರ್ಕಾರ ತಲೆಬಾಗುವುದು ನಿಶ್ಚಯ. ಅವಿಭಜಿತ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯನ್ನು ಟೋಲ್‌ಮುಕ್ತ ಜಿಲ್ಲೆಯನ್ನಾಗಿಸುವಲ್ಲಿ ನಾವೆಲ್ಲರೂ ಒಗ್ಗೂಡೋಣ ಎಂದರು.

ಮುದರಂಗಡಿ ಚರ್ಚ್‌ ಧರ್ಮಗುರು ಫೆಡ್ರಿಕ್ ಡಿಸೋಜ ಮಾತನಾಡಿ, ಇದು ಜನಪರ ಸಭೆಯಾಗಿದ್ದು, ನಮ್ಮ ರಾಜ್ಯ ರಸ್ತೆಯಲ್ಲಿ ಟೋಲ್‌ಗೇಟ್ ಆಗಲು ಅವಕಾಶ ಮಾಡಿಕೊಡಬಾರದು ಎಂದರು.

ಶಾಸಕ ಯಶ್‌ಪಾಲ್ ಸುವರ್ಣ, ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ, ಮಾಜಿ ಶಾಸಕರಾದ ಲಾಲಾಜಿ ಆರ್.ಮೆಂಡನ್, ಕೆ. ರಘುಪತಿ ಭಟ್, ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಕುಮಾರ್ ಶೆಟ್ಟಿ, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ, ಬಿಜೆಪಿ ಮುಖಂಡ ಮಟ್ಟಾರು ರತ್ನಾಕರ ಹೆಗ್ಡೆ, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಅನ್ಸಾರ್ ಅಹಮದ್ ಮಾತನಾಡಿದರು.

ಕೆಎಂಎಫ್ ಅಧ್ಯಕ್ಷ ಕೆ. ಸುಚರಿತ ಶೆಟ್ಟಿ, ನಂದಿಕೂರು ದುರ್ಗಾಪರಮೇಶ್ವರಿ ದೇವಸ್ಥಾನದ ಮಧ್ವರಾಯ ಭಟ್ ನಂದಿಕೂರು, ಜಿಲ್ಲಾ ಕೃಷಿಕ ಸಂಘದ ರಾಮಕೃಷ್ಣ ಶರ್ಮ ಬಂಟಕಲ್ಲು, ರೇಷ್ಮಾ ಉದಯ ಶೆಟ್ಟಿ ಇದ್ದರು. ಸರ್ವಜ್ಞ ತಂತ್ರಿ ನಿರೂಪಿಸಿದರು.

ಕಂಚಿನಡ್ಕದಲ್ಲಿ ನಡೆದ ಪ್ರತಿಭಟನೆಯ ಬಳಿಕ ಪಡುಬಿದ್ರಿಯವರೆಗೆ ಪ್ರತಿಭನಾ ಮೆರವಣಿಗೆ ನಡೆಯಿತು. 
ಕಂಚಿನಡ್ಕದಲ್ಲಿ ನಡೆದ ಪ್ರತಿಭಟನೆಯ ಬಳಿಕ ಪಡುಬಿದ್ರಿಯವರೆಗೆ ಪ್ರತಿಭನಾ ಮೆರವಣಿಗೆ ನಡೆಯಿತು. 
ಲೋಕೋಪಯೋಗಿ ಇಲಾಖೆ ಸಚಿವರು ತಾತ್ಕಾಲಿಕ ರದ್ದು ಆದೇಶ ಹೊರಡಿಸಿದ್ದಾರೆ. ಈ ಆದೇಶ ಶಾಶ್ವತ ರದ್ದುಪಡಿಸಲು ಸಚಿವರನ್ನು ಭೇಟಿ ಮಾಡಿ ಒತ್ತಾಯಿಸಲಾಗುವುದು
ಕೋಟ ಶ್ರೀನಿವಾಸ ಪೂಜಾರಿ ಸಂಸದ
ಜನರ ಬಲವೇ ಹೋರಾಟಕ್ಕೆ ಶಕ್ತಿ ತುಂಬಿದೆ. ರಾಜಕೀಯ ಬಣ್ಣ ತುಂಬದೆ ಪಕ್ಷಾತೀತವಾಗಿ ಎಲ್ಲರೂ ಕೈ ಜೋಡಿಸುವ ಮೂಲಕ ಒಂದು ಹಂತದ ಜಯ ನಮ್ಮದಾಗಿದೆ
ಗುರ್ಮೆ ಸುರೇಶ್ ಶೆಟ್ಟಿ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT