ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂದಾಪುರ | ಕಲಿತ ಶಾಲೆ ದತ್ತು ಪಡೆದ ನಟ ರಿಷಬ್‌ ಶೆಟ್ಟಿ

Published 18 ಡಿಸೆಂಬರ್ 2023, 6:26 IST
Last Updated 18 ಡಿಸೆಂಬರ್ 2023, 6:26 IST
ಅಕ್ಷರ ಗಾತ್ರ

ಕುಂದಾಪುರ: ತಾಲ್ಲೂಕಿನ ಗ್ರಾಮೀಣ ಭಾಗದ ಕೆರಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ‘ರಿಷಬ್ ಫೌಂಡೇಶನ್’ ಮೂಲಕ ದತ್ತು ತೆಗೆದುಕೊಂಡು ಮುಂದಿನ 5 ವರ್ಷಗಳ ಅವಧಿಯಲ್ಲಿ ಮೂಲ ಸೌಲಭ್ಯಗಳನ್ನು ಒದಗಿಸುವುದಾಗಿ ನಟ, ನಿರ್ದೇಶಕ ರಿಷಬ್ ಶೆಟ್ಟಿ ಘೋಷಿಸಿದರು.

ಭಾನುವಾರ ಶಾಲೆ ಆವರಣದಲ್ಲಿ ನಡೆದ ಪೋಷಕರ, ಶಿಕ್ಷಕರ, ಊರ ಪ್ರಮುಖರ, ಶಿಕ್ಷಣ ಇಲಾಖೆಯ ಅಧಿಕಾರಿಗಳ ಹಾಗೂ ಶಿಕ್ಷಕರ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳು ಉಳಿಯಬೇಕು, ಬೆಳೆಯಬೇಕು ಎನ್ನುವುದು ನನ್ನ ದೊಡ್ಡ ಆಸೆ. ಎಲ್ಲವೂ ಸರ್ಕಾರದಿಂದಲೇ ಆಗಬೇಕು ಎಂದೇನಿಲ್ಲ. ಒಳ್ಳೆಯ ಮನಸ್ಸು, ಗುರಿ ಇದ್ದಾಗ ಉದ್ದೇಶ ಸಾರ್ಥಕವಾಗುತ್ತದೆ. ಕನ್ನಡ ಶಾಲೆಗಳ ಉಳಿವಿನ ಉದ್ದೇಶದಿಂದಲೇ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಸಿನಿಮಾ ಮಾಡಿದ್ದೆ ಎಂದು ತಿಳಿಸಿದರು.

‘ರಿಷಬ್ ಫೌಂಡೇಶನ್’ ಮೂಲಕ ಕನ್ನಡ ಶಾಲೆಗಳ ಅಭಿವೃದ್ಧಿಗೆ ಒಂದಷ್ಟು ಸಹಾಯ ಮಾಡಬೇಕು ಎನ್ನುವ ಚಿಂತನೆ ಇದೆ. ಈ ಹಿನ್ನೆಲೆಯಲ್ಲಿ ಪ್ರಾಥಮಿಕ ಶಿಕ್ಷಣ ನೀಡಿ ನನ್ನನ್ನು ಬೆಳೆಸಿದ ನನ್ನೂರಿನ ಕೆರಾಡಿ ಶಾಲೆಯನ್ನು ಮೊದಲ ಆದ್ಯತೆ ಯಲ್ಲಿ ಪರಿಗಣಿಸಬೇಕು ಎನ್ನುವುದಕ್ಕಾಗಿ ಶಿಕ್ಷಣ ಇಲಾಖೆಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದರು.

ವಕೀಲ ಪ್ರಸನ್ನ ಕುಮಾರ್ ಶೆಟ್ಟಿ ಮಾತನಾಡಿ, ಮುಂದಿನ 5 ವರ್ಷಗಳ ಅವಧಿಯಲ್ಲಿ ಶಾಲೆಯನ್ನು ಸಂಪೂರ್ಣವಾಗಿ ಅಭಿವೃದ್ಧಿಗೊಳಿಸುವ ಗುರಿ ಇರಿಸಿಕೊಳ್ಳಲಾಗಿದೆ. ಕಟ್ಟಡ, ಪೀಠೋಪಕರಣ, ಬೋಧನಾ ಸಾಮಾಗ್ರಿ, ಕ್ರೀಡಾಂಗಣ, ಗ್ರಂಥಾಲಯ, ಕಂಪ್ಯೂಟರ್, ಇಂಗ್ಲಿಷ್ ಭಾಷಾಭ್ಯಾಸ, ಯುಕೆಜಿ, ಎಲ್‌ಕೆಜಿ ಸೇರಿದಂತೆ ಹೊಸ ತಂತ್ರಜ್ಞಾನ ಸಹಾಯದಿಂದ ಶಿಕ್ಷಣ ವ್ಯವಸ್ಥೆಯ ಎಲ್ಲಾ ಆಯಾಮಗಳಲ್ಲಿಯೂ ಸುಧಾರಣೆ ತರಲಾಗುವುದು ಎಂದರು.

ವಿದ್ಯಾರ್ಥಿಗಳ, ಶಿಕ್ಷಕರ ಕೊರತೆ: ಕೆರಾಡಿ ಶಾಲೆ ತಾಲ್ಲೂಕಿನ ಹಿರಿಯ ಶಾಲೆಗಳಲ್ಲಿ ಒಂದು. ಸಾವಿರಾರು ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ನೆರವಾಗಿದ್ದ ಈ ಶಾಲೆ ಈಚಿನ ವರ್ಷಗಳಲ್ಲಿ ವಿದ್ಯಾರ್ಥಿಗಳ, ಶಿಕ್ಷಕರ ಕೊರತೆ ಎದುರಿಸುತ್ತಿದೆ. ಶಾಲೆಯಲ್ಲಿನ ಪ್ರಸ್ತುತ 71 ವಿದ್ಯಾರ್ಥಿ ಗಳಿಗೆ ಒಬ್ಬರೇ ಕಾಯಂ ಶಿಕ್ಷಕರಿದ್ದಾರೆ. ರಿಷಬ್ ಶೆಟ್ಟಿ ಅವರು ಸೇರಿದಂತೆ ದಾನಿಗಳ ನೆರವಿನಿಂದ 4 ಗೌರವ ಶಿಕ್ಷಕರು ಮಕ್ಕಳ ವಿದ್ಯಾರ್ಜನೆಗೆ ನೆರವಾಗುತ್ತಿದ್ದಾರೆ.

ಸಭೆಯಲ್ಲಿ ಬೈಂದೂರು ವಲಯ ಶಿಕ್ಷಣಾಧಿಕಾರಿ ನಾಗೇಶ್ ನಾಯಕ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಸುದರ್ಶನ್ ಶೆಟ್ಟಿ, ಉಪಾಧ್ಯಕ್ಷೆ ಕುಸುಮಾ ಪೂಜಾರಿ, ವಂಡ್ಸೆ ಸಿಎ ಬ್ಯಾಂಕ್ ನಿರ್ದೇಶಕ ಭುಜಂಗ ಶೆಟ್ಟಿ, ಕೆರಾಡಿಯ ಸಿದ್ದಿ ವಿನಾಯಕ ಪದವಿಪೂರ್ವ ಕಾಲೇಜು ನಿರ್ದೇಶಕ ಪ್ರದೀಪ್ ಕುಮಾರ್ ಶೆಟ್ಟಿ, ಉದ್ಯಮಿ ಸುರೇಶ್ ಶೆಟ್ಟಿ ಕಾಲ್ತೋಡು ಇದ್ದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸುರೇಶ್ ಕೊಠಾರಿ ಸ್ವಾಗತಿಸಿದರು. ಮುಖ್ಯಶಿಕ್ಷಕ ವಿಜಯ್ ಕುಮಾರ್ ಶೆಟ್ಟಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT