ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಡುಬಿದ್ರಿ: ಸರ್ವಜ್ಞ ಪೀಠ ಏರಲಿದ್ದಾರೆ ಅದಮಾರು ಕಿರಿಯ ಶ್ರೀ

ಹಿರಿಯ ಯತಿ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಘೋಷಣೆ
Last Updated 6 ಜನವರಿ 2020, 15:49 IST
ಅಕ್ಷರ ಗಾತ್ರ

ಪಡುಬಿದ್ರಿ: ಈ ಭಾರಿಯ ಅದಮಾರು ಮಠದ ಪರ್ಯಾಯ ಮಹೋತ್ಸವದಲ್ಲಿ ಕಿರಿಯ ಯತಿ ಈಶಪ್ರಿಯ ತೀರ್ಥ ಸ್ವಾಮೀಜಿ ಸರ್ವಜ್ಞ ಪೀಠವನ್ನೇರಲಿದ್ದಾರೆ ಎಂದು ಅದಮಾರು ಮಠದ ಹಿರಿಯಯತಿ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಘೋಷಿಸಿದರು.

ಸೋಮವಾರ ಅದಮಾರು ಮೂಲಮಠದಲ್ಲಿ ಸುದ್ದಿಗೋಷ್ಠಿ ನಡೆಸಿದ ಹಿರಿಯ ಶ್ರೀಗಳು, ‘1956 ಹಾಗೂ 1972ರಲ್ಲಿ ಹಿಂದಿನ ಹಿರಿಯ ಗುರುಗಳಾದ ವಿಭುದೇಶ ತೀರ್ಥರು ಪರ್ಯಾಯ ನಡೆಸಿದ್ದರು. ಬಳಿಕ 1988ರಲ್ಲಿ ಹಾಗೂ 2004ರಲ್ಲಿ ನಮಗೆ ಪರ್ಯಾಯ ಪೀಠವೇರಲು ಅವಕಾಶ ಕಲ್ಪಿಸಿದ್ದರು. ಅದರಂತೆ, ಮುಂದಿನ ಪರ್ಯಾಯವನ್ನು ಕಿರಿಯ ಯತಿಗಳು ಉತ್ತಮವಾಗಿ ನಡೆಸುವ ವಿಶ್ವಾಸವಿದೆ’ ಎಂದು ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಹೇಳಿದರು.

ಹಿಂದಿನ ಪರ್ಯಾಯದ ನಂತರ ಪರ್ಯಾಯ ಮೆರವಣಿಗೆಯಲ್ಲಾಗಲೀ, ದರ್ಬಾರಿನಲ್ಲಾಗಲೀ ಪಾಲ್ಗೊಂಡಿರಲಿಲ್ಲ. ಈ ಬಾರಿಯೂ ಪರ್ಯಾಯ ಮೆರವಣಿಗೆ ಸಹಿತ ದರ್ಬಾರಿನಲ್ಲಿ ಪಾಲ್ಗೊಳ್ಳುವುದಿಲ್ಲ. ಗುರುಗಳ ಸಂಪ್ರದಾಯವನ್ನು ನಾನೂ ಪಾಲಿಸುತ್ತಿದ್ದೇನೆ ಎಂದರು.

ಈ ಬಾರಿಯ ಪರ್ಯಾಯ ಪೀಠಾರೋಹಣ ವಿಚಾರವಾಗಿ ಗೊಂದಲಗಳು ಸೃಷ್ಟಿಯಾಗಿ, ಹಲವರು ಟೀಕೆಗಳನ್ನು ಮಾಡಿದ್ದರು. ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಆದರೆ, ಟೀಕೆಗಳನ್ನು ಮಾಡುವಾಗ ಯೋಚಿಸಿ ಮಾಡಬೇಕು. ಆಧ್ಯಾತ್ಮಿಕ ವಿಷಯದಲ್ಲಿ ಮನಸ್ಸಿಗೆ ಖುಷಿ ಬಂದಂತೆ ನಾಲಿಗೆ ಹರಿಬಿಡಬಾರದು ಎಂದು ಶ್ರೀಗಳು ಈಚೆಗಿನ ಮಠದ ಬೆಳವಣಿಗೆಗಳ ಕುರಿತು ಅಸಮಾಧಾನ ಹೊರಹಾಕಿದರು.

ಅಧಿಕಾರ ಬಿಟ್ಟುಕೊಟ್ಟಿದ್ದಕ್ಕೆ ನೋವಿಲ್ಲ

ಕಿರಿಯ ಯತಿಗಳಿಗೆ ಅಧಿಕಾರ ಬಿಟ್ಟುಕೊಟ್ಟಿರುವ ಬಗ್ಗೆ ನೋವಿಲ್ಲ. ಆದರೆ, ಪರ್ಯಾಯ ಪೀಠಾರೋಹಣ ವಿಚಾರವಾಗಿ ಕೇಳಿಬಂದ ಟೀಕೆಗಳಿಗೆ ನೋವಾಯಿತು. ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ವಿಷಯಗಳೂ ಬೇಸರ ತರಿಸಿದವು ಎಂದರು.

ಉಡುಪಿಯಲ್ಲಿರುವಾಗ ಪ್ರವಚನ ನಿರಾತಂಕವಾಗಿ ಮುಂದುವರಿಯಲಿದೆ. ಜತೆಗೆ, ಶಿಕ್ಷಣ ಸಂಸ್ಥೆಗಳ ನಿಭಾವಣೆ ಹೊಣೆಗಾರಿಕೆ ಇರುವುದರಿಂದ ಸಂಚಾರದಲ್ಲಿ ಹೆಚ್ಚಾಗಿ ಇರುತ್ತೇನೆ. ಪರ್ಯಾಯ ಅವಧಿಯಲ್ಲಿ ಕಿರಿಯ ಯತಿಗಳಿಗೆ ಸಲಹೆ ಸೂಚನೆಗಳನ್ನು ನೀಡುತ್ತೇನೆ. ಮಠದಲ್ಲಿ ನೀರಿಂಗಿಸುವ ಕಾರ್ಯಕ್ರಮ ಯಶಸ್ವಿಯಾಗಿದೆ. ಇಂತಹ ಸಮಾಜಮುಖಿ ಕಾರ್ಯಕ್ರಮಗಳು ಪರ್ಯಾಯದ ಅವಧಿಯಲ್ಲಿ ನಡೆಯಲಿವೆ ಎಂದರು.

ದರ್ಬಾರು ಸಮಯ ಬದಲಾವಣೆ

ಅದಮಾರು ಮಠದ ಕಿರಿಯ ಯತಿ ಈಶಪ್ರಿಯ ತೀರ್ಥ ಸ್ವಾಮೀಜಿ ಮಾತನಾಡಿ, ರಾತ್ರಿಯಿಡೀ ನಿದ್ದೆ ಗೆಡುವುದನ್ನು ತಪ್ಪಿಸಲು ಎಲ್ಲಾ ಸ್ವಾಮೀಜಿಗಳ ಒಪ್ಪಿಗೆಯಂತೆ ಪರ್ಯಾಯ ದರ್ಬಾರು ಸಮಯ ಬದಲಾವಣೆ ಮಾಡಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT