ಬುಧವಾರ, ಜನವರಿ 29, 2020
27 °C
ಪರ್ಯಾಯ ಪೀಠವೇರಲು ಸಜ್ಜಾಗಿರುವ ಅದಮಾರು ಮಠದ ಕಿರಿಯ ಯತಿ ಈಶಪ್ರಿಯ ತೀರ್ಥರು

ಈಶಪ್ರಿಯ ತೀರ್ಥರ ಸಂದರ್ಶನ: ಹಿರಿಯ ಯತಿಗಳ ಮಾರ್ಗದರ್ಶನದಲ್ಲಿ ಪರ್ಯಾಯ

ಬಾಲಚಂದ್ರ ಎಚ್‌. Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಅದಮಾರು ಮಠದ ಕಿರಿಯ ಯತಿಗಳಾದ ಈಶಪ್ರಿಯ ತೀರ್ಥರಿಗೆ ಮೊದಲ ಪರ್ಯಾಯದ ಸಂಭ್ರಮ. ಹಿರಿಯ ಯತಿ ವಿಶ್ವಪ್ರಿಯ ತೀರ್ಥರ ಸಲಹೆ, ಸೂಚನೆ, ಮಾರ್ಗದರ್ಶನದೊಂದಿಗೆ ಪರ್ಯಾಯ ಪೀಠವೇರಲು ಸಿದ್ಧರಾಗಿದ್ದಾರೆ. ಪುರಪ್ರವೇಶಕ್ಕೆ ಕಾಲ್ನಡಿಗೆಯಲ್ಲಿ ಬಂದು ಹೊಸತನಕ್ಕೆ ನಾಂದಿ ಹಾಡಿದ್ದಾರೆ. ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಿ ಪರಿಸರ ಕಾಳಜಿ ತೋರಿದ್ದಾರೆ. ಹೀಗೆ ಮಾದರಿ ಕೆಲಸಗಳ ಮೂಲಕ ಗಮನ ಸೆಳೆದಿರುವ ಈಶಪ್ರಿಯ ತೀರ್ಥರು ಮಾಧ್ಯಮಗಳ ಮುಂದೆ ಮುಂದಿನ ಹಾದಿಯನ್ನು ತೆರೆದಿಟ್ಟರು.

* ಮೊದಲ ಬಾರಿಗೆ ಪರ್ಯಾಯ ಪೀಠ ಏರುತ್ತಿದ್ದೀರಿ ಹೇಗನಿಸುತ್ತದೆ ?
ಪರ್ಯಾಯ ಪೀಠಾರೋಹಣ ಅಷ್ಟಮಠಗಳ ಸಂಪ್ರದಾಯ ಹಾಗೂ ಯತಿಗಳ ಆದ್ಯ ಕರ್ತವ್ಯ. ಅದರಲ್ಲಿ ಅಂಥ ವಿಶೇಷವೇನಿಲ್ಲ. ಕೃಷ್ಣನ ಪೂಜೆಯನ್ನು ಎಲ್ಲ ಯತಿಗಳು ಮಾಡುತ್ತಾರೆ. ಆದರೆ, ನಿರ್ಧಿಷ್ಟವಾಗಿ ಮೂರು ಪೂಜೆಗಳನ್ನು ಮಾಡುವ ಹೊಣೆಗಾರಿಕೆ ಪರ್ಯಾಯ ಯತಿಗಳಿಗೆ ಸಿಗುವುದು ವಿಶೇಷ.

* ಪರ್ಯಾಯಕ್ಕೆ ಅವಕಾಶ ಸಿಕ್ಕಿದ್ದರ ಬಗ್ಗೆ ನಿಮ್ಮ ಅಭಿಪ್ರಾಯ ?

ತುಂಬಾ ನಿರೀಕ್ಷೆಗಳು ಇರಲಿಲ್ಲ. ಹಿರಿಯ ಶ್ರೀಗಳು ಯಾವುದೇ ನಿರ್ಧಾರ ತೆಗೆದುಕೊಳ್ಳಬೇಕಾದರೂ ತುಂಬಾ ಯೋಚಿಸಿ ತೆಗೆದುಕೊಂಡಿರುತ್ತಾರೆ. ಅವರ ಆಜ್ಞೆಯಂತೆ ನಡೆದುಕೊಳ್ಳುತ್ತೇನೆ.‌ ಪರ್ಯಾಯ ನಡೆಸುವುದರ ಹಿಂದೆ, ಆಚಾರ್ಯರ, ಹಿರಿಯ ಗುರುಗಳ ಶಕ್ತಿ ಇದೆ. ಅವರೇ ಹಿಂದೆ ನಿಂತು ಪರ್ಯಾಯ ನಡೆಸಲು ಶಕ್ತಿ ಕೊಡುತ್ತಾರೆ. 

* ಮಠದ ಸಂಪ್ರದಾಯ, ಹಳೆಯ ವಸ್ತುಗಳನ್ನು ಮುನ್ನೆಲೆಗೆ ತರುವ ಚಿಂತನೆ ಇದೆಯೇ ?

ಹಳೆಯ ಸಂಪ್ರದಾಯಗಳನ್ನು ಮೂಲೆಗೆ ಸರಿಸಿ ಎಲ್ಲದರಲ್ಲೂ ಹೊಸತನ್ನು ಅಳವಡಿಸಿಕೊಳ್ಳುವುದು ಅಷ್ಟು ಸರಿಯಲ್ಲ. ಮೂಲವನ್ನು ಕಾಪಾಡಿಕೊಂಡು ಹೋಗಲು ಕೃಷ್ಣಸೇವಾ ಬಳಗಕ್ಕೆ ಸೂಚನೆ ನೀಡಲಾಗಿದೆ. ಮಠದಲ್ಲಿ ತಾಮ್ರದ ವಸ್ತುಗಳ ಬಳಕೆಗೂ ಉತ್ತೇಜನ ನೀಡಲಾಗುವುದು.

* ಪರ್ಯಾಯ ಅವಧಿಯಲ್ಲಿ ಯಾವ ವಿಚಾರಗಳಿಗೆ ಒತ್ತು ನೀಡುವಿರಿ ?

ಪರಿಸರ ರಕ್ಷಣೆ ನಿಟ್ಟಿನಲ್ಲಿ ನಿರಂತರ ಪ್ರಯತ್ನಗಳು ನಡೆಯಲಿವೆ. ಆರೋಗ್ಯದ ದೃಷ್ಟಿಯಿಂದ ಭಕ್ತರ ಪ್ರಸಾದಕ್ಕೆ ಮೈದಾ ಬಳಕೆಯನ್ನು ಈಗಾಗಲೇ ಪಲಿಮಾರು ಶ್ರೀಗಳು ನಿಷೇಧಿಸಿದ್ದಾರೆ. ಅದನ್ನು ಮುಂದುವರಿಸಿಕೊಂಡು ಹೋಗಲಾಗುವುದು. ಮಠದ ತ್ಯಾಜ್ಯ ಸಂಸ್ಕರಣೆಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು.

* ದೇಸಿ ತಳಿಯ ಭತ್ತ ಉಳಿವಿಗೆ ಮುಂದಾಗಿದ್ದೀರಿ, ಮುಂದೆ ಪ್ರಸಾದಕ್ಕೆ ಬಳಸುವ ಉದ್ದೇಶ ಇದೆಯೇ ?

ದೇಸಿ ತಳಿಯ ಭತ್ತ ಬಳಕೆಯ ಬಗ್ಗೆ ಆಸಕ್ತಿ ಇದೆ. ಆದರೆ, ಹೊರೆ ಕಾಣಿಕೆಗೆ ಭಕ್ತರು ಸಾವಯವ ವಸ್ತುಗಳನ್ನೇ ಕೊಡಲು ಸಾಧ್ಯವಿಲ್ಲ. ಒಂದೇಬಾರಿಗೆ ಸಾವಯವ ವಸ್ತುಗಳನ್ನೇ ಕೊಡಿ ಎಂದು ಒತ್ತಡ ಹಾಕುವುದು ಸರಿಯಲ್ಲ. ಹಾಗಾಗಿ, ಸಾಧ್ಯವಾದಷ್ಟು ಸಾವಯವ ವಸ್ತುಗಳ ಬಳಕೆಗೆ ಭಕ್ತರಲ್ಲಿ ಜಾಗೃತಿ ಮೂಡಿಸಲಾಗುವುದು.

* ಎಂಜಿನಿಯರ್‌ ಆಗಿದ್ದವರು ಪೀಠಾಧಿಪತಿಗಳಾಗಿದ್ದೀರಿ ಏನನಿಸುತ್ತಿದೆ ?

ಪ್ರತಿಯೊಬ್ಬರೂ ಜೀವನದಲ್ಲಿ ಒಂದೊಂದು ಸಮಯದಲ್ಲಿ ಎಂಜಿನಿಯರ್ಸ್‌, ಡಾಕ್ಟರ್‌ಗಳಾಗಿರುತ್ತಾರೆ. ಎಂಜಿನಿಯರ್‌ ಪದವಿ ಪಡೆದು ಪೀಠಾಧಿಪತಿಯಾದ ಬಳಿಕ ಅಂಥ ದೊಡ್ಡ ವ್ಯತ್ಯಾಸಗಳು ಕಾಣುತ್ತಿಲ್ಲ.

ಪ್ರತಿಕ್ರಿಯಿಸಿ (+)