ಸೋಮವಾರ, ಜೂನ್ 21, 2021
29 °C
ಬೆಂಗಳೂರು ಬಸ್‌ಗಳು ಖಾಲಿ; ಮಾರುಕಟ್ಟೆ, ಬಾರ್‌ಗಳಲ್ಲಿ ದಟ್ಟಣೆ

ತವರಿನತ್ತ ವಲಸೆ ಕಾರ್ಮಿಕರು: ಬಸ್‌ಗಳು ಭರ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಕೋವಿಡ್ 2ನೇ ಅಲೆ ನಿಯಂತ್ರಣಕ್ಕೆ ಮೇ 12ರ ಮುಂಜಾನೆವರೆಗೆ ಕಠಿಣ ಕರ್ಫ್ಯೂ ಜಾರಿಯಾಗಿರುವ ಹಿನ್ನೆಲೆಯಲ್ಲಿ ಮಂಗಳವಾರ ನಗರದಲ್ಲಿ ಭಾರಿ ಜನದಟ್ಟಣೆ ಕಂಡುಬಂತು. ತರಕಾರಿ, ಹಣ್ಣು, ಮೀನು, ಮಾಂಸ ಮಾರಾಟ ಮಳಿಗೆಗಳು ಹಾಗೂ ದಿನಸಿ ಅಂಗಡಿಗಳು ಗ್ರಾಹಕರಿಂದ ತುಂಬಿ ತುಳುತ್ತಿದ್ದವು.

ಬಸ್ ನಿಲ್ದಾಣ ಭರ್ತಿ:

ಕರ್ಫ್ಯೂ ಸಂದರ್ಭ ಬಸ್‌ಗಳ ಸಂಚಾರಕ್ಕೆ ಅನುಮತಿ ಇಲ್ಲದ ಕಾರಣ ಕೆಎಸ್‌ಆರ್‌ಟಿಸಿ ಹಾಗೂ ಸರ್ವೀಸ್‌ ಬಸ್ ನಿಲ್ದಾಣಗಳು ಪ್ರಯಾಣಿಕರಿಂದ ಭರ್ತಿಯಾಗಿದ್ದವು. ನೂರಾರು ಸಂಖ್ಯೆಯಲ್ಲಿ ವಲಸೆ ಕಾರ್ಮಿಕರು ಬಟ್ಟೆ, ಪಾತ್ರೆ ಹಾಗೂ ಅಗತ್ಯ ವಸ್ತುಗಳನ್ನು ಮೂಟೆಕಟ್ಟಿಕೊಂಡು ಕುಟುಂಬ ಸಮೇತ ಸ್ವಂತ ಊರುಗಳಿಗೆ ತೆರಳುತ್ತಿದ್ದ ದೃಶ್ಯ ಕಂಡುಬಂತು.

ಹುಬ್ಬಳ್ಳಿ, ಧಾರವಾಡ, ಬಾಗಲಕೋಟೆ, ಹಾವೇರಿ, ಕೊಪ್ಪಳ, ಗದಗ ಸೇರಿದಂತೆ ಉತ್ತರ ಕರ್ನಾಟಕಕ್ಕೆ ತೆರಳುವ ಎಲ್ಲ ಬಸ್‌ಗಳು ಪ್ರಯಾಣಿಕರಿಂದ ತುಂಬಿದ್ದವು. ಮಕ್ಕಳು, ವೃದ್ಧರ ಸಹಿತ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು.

ಸಾಮಾನ್ಯವಾಗಿ ಉಡುಪಿ ನಿಲ್ದಾಣದಿಂದ ಹುಬ್ಬಳ್ಳಿಗೆ ಪ್ರತಿದಿನ ಮೂರು ಬಸ್‌ಗಳು ತೆರಳುತ್ತಿದ್ದವು. ಆದರೆ, ಮಂಗಳವಾರ ಹೆಚ್ಚುವರಿ ಬಸ್‌ಗಳು ಸೇರಿ 20ಕ್ಕಿಂತ ಹೆಚ್ಚು ಬಸ್‌ಗಳು ಪೂರ್ತಿ ಭರ್ತಿಯಾಗಿ ತೆರಳಿದವು ಎಂದು ಡಿಪೋ ಸಿಬ್ಬಂದಿ ಮಾಹಿತಿ ನೀಡಿದರು.

ಬೆಂಗಳೂರು ಬಸ್‌ಗಳಿಗೆ ಬೇಡಿಕೆ ಇಲ್ಲ:

ಉಡುಪಿಯಿಂದ ಬೆಂಗಳೂರಿಗೆ ತೆರಳುವ ಬಸ್‌ಗಳಲ್ಲಿ ದಟ್ಟಣೆ ಕಂಡುಬರಲಿಲ್ಲ. ಬೆಳಿಗ್ಗಿಯಿಂದ 8 ಬಸ್‌ಗಳು ಮಾತ್ರ ಸಂಚರಿಸಿವೆ. ರಾತ್ರಿ ಹೊರಡುವ ಬಸ್‌ಗಳು ಖಾಲಿ ಇವೆ. ಶಿವಮೊಗ್ಗ, ಮಂಗಳೂರು, ಕುಮಟಾ, ಭಟ್ಕಳ ಮಾರ್ಗದ ಬಸ್‌ಗಳಲ್ಲೂ ದಟ್ಟಣೆ ಹೆಚ್ಚಾಗಿದೆ ಎಂದು ತಿಳಿಸಿದರು.

ಮಾರುಕಟ್ಟೆಗಳಲ್ಲಿ ದಟ್ಟಣೆ:

ನಗರದ ರಿಲಯನ್ಸ್‌ ಹಾಗೂ ಬಿಗ್ ಬಜಾರ್ ಮಳಿಗೆಯಲ್ಲಿ ದಿನಸಿ ಖರೀದಿಗೆ ಗ್ರಾಹಕರು ಸರದಿ ಸಾಲಿನಲ್ಲಿ ನಿಂತಿದ್ದ ದೃಶ್ಯ ಕಂಡು ಬಂತು. ತರಕಾರಿ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿತ್ತು. ಬಾರ್‌ಗಳಲ್ಲಿಯೂ ಮದ್ಯಪ್ರಿಯರು ಸಾಲುಗಟ್ಟಿ ನಿಂತು ಮದ್ಯ ಖರೀದಿಸಿದರು. ಹೋಟೆಲ್‌ಗಳಲ್ಲಿ ಪಾರ್ಸೆಲ್‌ಗೆ ಮಾತ್ರ ಅವಕಾಶ ಇತ್ತು.

‘ಮತ್ತೆ ಮಹಾ ವಲಸೆ’

ಉತ್ತರ ಕರ್ನಾಟಕ ಭಾಗದಿಂದ ಬದುಕು ಕಟ್ಟಿಕೊಳ್ಳಲು ಉಡುಪಿ ಜಿಲ್ಲೆಗೆ ಬಂದಿರುವ ವಲಸೆ ಕಾರ್ಮಿಕರ ಸಂಖ್ಯೆ ಸರಿ ಸುಮಾರು 30000ಕ್ಕೂ ಹೆಚ್ಚಿದೆ. ಮಲ್ಪೆಯ ಬಂದರು, ಐಸ್ ಫ್ಯಾಕ್ಟರಿ, ಫಿಶ್ ಫ್ಯಾಕ್ಟರಿ, ಹೋಟೆಲ್‌, ವಸತಿ ಗೃಹ, ಸಣ್ಣ ಕೈಗಾರಿಕೆ ಹಾಗೂ ಕಟ್ಟಡ ಕಾರ್ಮಿಕರಾಗಿ ದುಡಿಯುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಕಳೆದ ವರ್ಷ ಲಾಕ್‌ಡೌನ್ ಘೋಷಣೆಯಾಗಿದ್ದಾಗ ಕೂಲಿ ಕೆಲಸ ಇಲ್ಲದೆ ಸಾವಿರಾರು ವಲಸೆ ಕಾರ್ಮಿಕರು ತವರಿನತ್ತ ಮುಖ ಮಾಡಿದ್ದರು. ಜಿಲ್ಲೆಯಲ್ಲಿ ಸೋಂಕು ಕ್ಷೀಣವಾದ ಬಳಿಕ ಬಹುತೇಕರು ಮರಳಿದ್ದರು. ಈಗ ಎರಡನೇ ಅಲೆಯ ಭೀತಿಯಿಂದ ಮತ್ತೆ ವಲಸೆ ಹೋಗುತ್ತಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು