ಗುರುವಾರ , ಮೇ 13, 2021
22 °C
2 ದಿನಗಳಲ್ಲಿ ಮಾರಾಟವಾಯ್ತು ₹ 8 ಲಕ್ಷದ ಕೃಷಿ ಉತ್ಪನ್ನ

ಉಡುಪಿ: ವಿದ್ಯಾರ್ಥಿಗಳಲ್ಲಿ ‘ಕೃಷಿ ಪ್ರೀತಿ’ ಬಿತ್ತಿದ ಕೃಷಿ ಸಮ್ಮಿಲನ

ಬಾಲಚಂದ್ರ ಎಚ್‌. Updated:

ಅಕ್ಷರ ಗಾತ್ರ : | |

Prajavani

ಉಡುಪಿ: ವಿದ್ಯಾರ್ಥಿಗಳಲ್ಲಿ ‘ಕೃಷಿಯ ಪ್ರೀತಿ’ ಬಿತ್ತುವುದರ ಜತೆಗೆ, ಕೃಷಿ ಕ್ಷೇತ್ರದಲ್ಲಿರುವ ಅವಕಾಶ ಹಾಗೂ ಸವಾಲುಗಳನ್ನು ಪರಿಚಯಿಸುವ ಸಲುವಾಗಿ ಈಚೆಗೆ ಎಂಜಿಎಂ ಕಾಲೇಜಿನಲ್ಲಿ ಆಯೋಜಿಸಿದ್ದ ‘ಕೃಷಿ ಸಮ್ಮಿಲನ’ ಗಮನ ಸೆಳೆಯಿತು. ಪಠ್ಯ, ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗೆ ಮಾತ್ರ ವೇದಿಕೆಯಾಗಿರುತ್ತಿದ್ದ ಕಾಲೇಜು ಅಂಗಳ 2 ದಿನಗಳ ಕಾಲ ಕೃಷಿ ವಿಶ್ವವಿದ್ಯಾಲಯವಾಗಿ ಬದಲಾಗಿತ್ತು.

ಒಂದೆಡೆ, ಸವಾಲುಗಳನ್ನು ಮೆಟ್ಟಿನಿಂತು ಸಾಧನೆ ಮಾಡಿದ ಪ್ರಗತಿಪರ ಕೃಷಿಕರ ಯಶೋಗಾಥೆಗಳು ವಿದ್ಯಾರ್ಥಿಗಳನ್ನು ಕೃಷಿಯೆಡೆಗೆ ಪ್ರೇರೇಪಿಸಿದರೆ, ಮತ್ತೊಂದೆಡೆ, ರೈತರು ಬೆಳೆದ ತರಕಾರಿ, ಸೊಪ್ಪು, ಹಣ್ಣುಗಳನ್ನು ವಿದ್ಯಾರ್ಥಿಗಳೇ ಮಾರಾಟ ಮಾಡಿ ಮಾರುಕಟ್ಟೆಯ ಅನುಭವ ಪಡೆದರು. ಕೃಷಿ ಕ್ಷೇತ್ರದ ಸವಾಲುಗಳನ್ನು ಸ್ವತಃ ಅರಿತರು.

ನಿತ್ಯದ ಬಳಕೆಯಿಂದ ಮರೆಯಾಗಿದ್ದ ಅಪರೂಪದ ಕಾಡುತ್ಪತ್ತಿ ಉತ್ಪನ್ನಗಳನ್ನು ಮತ್ತೊಮ್ಮೆ ನೋಡುವ ಅವಕಾಶ ಪಡೆದುಕೊಂಡರು. ಜತೆಗೆ, ತಜ್ಞರಿಂದ ಕೃಷಿಯ ಮೌಲ್ಯವರ್ಧನೆಯ ಪಾಠವನ್ನೂ ಕಲಿತರು. 2 ದಿನಗಳ ‘ಕೃಷಿ ಸಮ್ಮಿಲನ’ದಲ್ಲಿ ₹ 8 ಲಕ್ಷಕ್ಕೂ ಮೀರಿ ಕೃಷಿ ಉತ್ಪನ್ನಗಳು ಮಾರಾಟವಾಗಿದ್ದು ವಿಶೇಷ.

ರೈತರ ಹೊಲಗಳಿಂದ ನೇರವಾಗಿ ಬಂದಿದ್ದ ತಾಜಾ ಸೊಪ್ಪು, ತರಕಾರಿ, ಕಲ್ಲಂಗಡಿ, ಅನಾನಸ್‌, ನಿಟ್ಟೂರು ಕಜೆ ಅಕ್ಕಿ ಖರೀದಿಸಲು ಗ್ರಾಹಕರು ಆಸಕ್ತಿ ತೋರಿದರು. ಪ್ರದರ್ಶನಕ್ಕೆ ತಂದಿದ್ದ ಬಹುತೇಕ ಉತ್ಪನ್ನಗಳು ಮಾರಾಟವಾಗಿದ್ದು ಕಂಡುಬಂತು. ಪುರುಷೋತ್ತಮ ಅಡ್ವೆ ಸಂಗ್ರಹಿಸಿ ತಂದಿದ್ದ ಕಾಡುತ್ಪನ್ನಗಳು ವಿಶೇಷ ಆಕರ್ಷಣೆಯಾಗಿತ್ತು ಎಂದು ಮಾಹಿತಿ ನೀಡಿದರು ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಮಂಜುನಾಥ್ ಕಾಮತ್‌.

ಗರುಡಫಲ, ಕರಿ ಅರಿಶಿನ, ಕಸ್ತೂರಿ ಅರಿಶಿನ, ಬಿಳಿ ಮರಗೆಣಸು, ಕುಕ್ಕು ಶುಂಠಿ, ಚಂಪೆ ಹಣ್ಣು, ಕೆಸುವಿನ ಗಡ್ಡೆ, ಜಂಬು ನೇರಳೆ, ಈಚಲ ಹಣ್ಣು, ಜಾಯಿಕಾಯಿ, ಪುನರ್ಪುಳಿ, ವುಡ್ ಆ್ಯಪಲ್, ಎಲಿಫ್ಯಾಂಟ್ ಆ್ಯಪಲ್‌, ಕಾಡು ಬದನೆ, ದೊಡ್ಡ ಪತ್ರೆ, ರಾಮಪತ್ರೆ, ಕವಡೆಕಾಯಿ ಹೀಗೆ 50ಕ್ಕೂ ಹೆಚ್ಚು ಕಾಡುತ್ಪತ್ತಿಗಳು ಪ್ರದರ್ಶನದಲ್ಲಿದ್ದವು.

ಕಾಡುತ್ಪತ್ತಿ ಉತ್ಪನ್ನಗಳ ಪ್ರದರ್ಶನದ ಜತೆಗೆ ಅವುಗಳ ಔಷಧೀಯ ಗುಣ, ಮೌಲ್ಯವರ್ಧನೆ, ತಳಿಯ ಮಾಹಿತಿ, ಮಾರುಕಟ್ಟೆಯ ಬೇಡಿಕೆಯ ಬಗ್ಗೆಯೂ ವಿದ್ಯಾರ್ಥಿಗಳಿಗೆ ತಿಳಿಸಲಾಯಿತು. ಇದರ ಜತೆಗೆ, ಆಧುನಿಕತೆ ಭರಾಟೆಗೆ ಸಿಲುಕಿ ಹಿನ್ನೆಲೆಗೆ ಸರಿದಿದ್ದ ಬಿದಿರಿನ ಬುಟ್ಟಿ ಹಾಗೂ ಚಾಪೆ ಎಣೆಯುವ ಕಲೆಯನ್ನು ವಿದ್ಯಾರ್ಥಿಗಳಿಗೆ ತೋರಿಸಲಾಯಿತು. ಕೃಷಿ ಪರಿಕರಗಳ ಮಾರಾಟವೂ ಇತ್ತು.

ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ.ದೇವಿದಾಸ್ ನಾಯಕ್ ಕಾರ್ಯಕ್ರಮದ ರೂವಾರಿ. ಅವರಿಗೆ ಹೆಗಲು ಕೊಟ್ಟಿದ್ದು ಕಾಲೇಜಿನ ಎಲ್ಲ ಅಧ್ಯಾಪಕರು, ಸಿಬ್ಬಂದಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು