ಶನಿವಾರ, ಮೇ 28, 2022
30 °C
ಧಾರ್ಮಿಕ ಕಾರ್ಯಕ್ರಮಗಳಿಗೆ ಹಳೆಯ ಕಾರಿನಲ್ಲೇ ಪ್ರಯಾಣಿಸುವ ಕೃಷ್ಣಾಪುರ ಮಠದ ಯತಿಗಳು

ಉಡುಪಿ: ಕಾಲ ಬದಲಾದರೂ ಬದಲಾಗದ ಅಂಬಾಸಿಡರ್ ಕಾರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ‘ಮಠಾಧೀಶರು’ ಎಂಬ ಪದಕ್ಕೆ ಅನ್ವರ್ಥದಂತೆ ಬದುಕುತ್ತಿರುವ ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥರು ಐಶಾರಾಮಿ ಹಾಗೂ ಭೋಗದ ವಸ್ತುಗಳತ್ತ ತಿರುಗಿಯೂ ನೋಡಿಲ್ಲ. ಸರಳತೆಯನ್ನೇ ಮೈಗೂಡಿಸಿಕೊಂಡು ಜೀವಿಸುತ್ತಿರುವ ವಿದ್ಯಾಸಾಗರ ತೀರ್ಥರು ಇಂದಿಗೂ ಉಪಯೋಗಿಸುವುದು 1973ರ ಅಂಬಾಸಿಡರ್ ಕಾರು.

ಎಂಇಜಿ 653 ನೋಂದಣಿ ಸಂಖ್ಯೆಯ ಅಂಬಾಸಿಡರ್‌ ಕಾರು ಕಳೆದ 48 ವರ್ಷಗಳಿಂದಲೂ ಕೃಷ್ಣಾಪುರ ಮಠದ ಶ್ರೀಗಳನ್ನು ಹೊತ್ತು ಸಾಗುತ್ತಿದೆ. ಕಾಲ ಬದಲಾದರೂ ಶ್ರೀಗಳು ಕಾರು ಬದಲಿಸಿಲ್ಲ. ಬದಲಾಗಿ ಕಾಲಕಾಲಕ್ಕೆ ಕಾರನ್ನು ಸರ್ವೀಸ್‌ ಮಾಡಿಸಿ ಇಂದಿಗೂ ಸುಸ್ಥಿತಿಯಲ್ಲಿರಿಸಿದ್ದಾರೆ.

ಕೃಷ್ಣಾಪುರ ಶ್ರೀಗಳು ಸಭೆ, ಸಮಾರಂಭ, ಪ್ರವಚನ ಹಾಗೂ ಧಾರ್ಮಿಕ ಪ್ರವಾಸಗಳಿಗೆ ಇಂದಿಗೂ ಅಂಬಾಸಿಡರ್ ಕಾರನ್ನೇ ಬಳಸುತ್ತಾರೆ. ಐಶಾರಾಮಿ ಕಾರು ಖರೀದಿಸಬಹುದಲ್ಲವೇ ಎಂಬ ಆಪ್ತರ ಸಲಹೆಗಳು ಆಗಾಗ ಕಿವಿಗೆ ಬಿದ್ದರೂ ಎಂದಿಗೂ ತಲೆಗೆ ಹಾಕಿಕೊಂಡವರಲ್ಲ ಎನ್ನುತ್ತಾರೆ ಶ್ರೀಗಳನ್ನು ಹತ್ತಿರದಿಂದ ಬಲ್ಲವರು.

ಸರಳತೆ, ಸಂಪ್ರದಾಯಗಳ ಪಾಲನೆ, ಧಾರ್ಮಿಕ ವಿಚಾರಗಳ ಅನುಷ್ಠಾನದಲ್ಲಿ ಅಚಲವಾದ ನಂಬಿಕೆಯನ್ನು ಇರಿಸಿರುವ ಶ್ರೀಗಳು ಸಂಪತ್ತಿಗೆ, ಐಶಾರಾಮಿ ವಸ್ತುಗಳ ಬಳಕೆಗೆ ಎಂದೂ ಆಸಕ್ತಿ ತೋರಿದವರಲ್ಲ. ತಂತ್ರಜ್ಞಾನವನ್ನೂ ಬಹಳ ಹತ್ತಿರಕ್ಕೆ ಬಿಟ್ಟುಕೊಂಡಿಲ್ಲ. ಅವರು ಬದುಕಿನ ಹಾದಿಯೇ ಸರಳವಾಗಿದ್ದು, ಲೋಲುಪತೆಗೆ ಅವಕಾಶವೇ ಇಲ್ಲ ಎನ್ನುತ್ತಾರೆ ಆಪ್ತರು.

ಸದ್ಯ ಕೃಷ್ಣಾಪುರ ಮಠದ ಶೆಡ್‌ನಲ್ಲಿರುವ ಡೀಸೆಲ್ ಎಂಜಿನ್‌ ಅಂಬಾಸಿಡರ್‌ ಕಾರು ಕೃಷ್ಣಾಪುರ ಪರ್ಯಾಯದ ಆಕರ್ಷಣೆಗಳಲ್ಲೊಂದು. ಪರ್ಯಾಯಕ್ಕೆ ಬರುತ್ತಿರುವ ಭಕ್ತರು ಕಾರನ್ನು ಕುತೂಹಲದಿಂದ ವೀಕ್ಷಿಸುತ್ತ ಫೋಟೊ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ.

ಶಾಸಕರ ತಂದೆ ಕಾರಿನ ಚಾಲಕರು:

ಉಡುಪಿ ಶಾಸಕರಾದ ಕೆ.ರಘುಪತಿ ಭಟ್‌ ಅವರ ತಂದೆಯವರಾದ ಕರಂಬಳ್ಳಿ ಶ್ರೀನಿವಾಸ ಬಾರಿತ್ತಾಯರು ಸುಧೀರ್ಘ ಅವಧಿಗೆ ಕೃಷ್ಣಾಪುರ ಶ್ರೀಗಳ ಕಾರು ಚಾಲಕರಾಗಿದ್ದರು. 5 ದಶಕಗಳ ಕಾಲ ಶ್ರೀಗಳ ಕಾರು ಚಾಲಕರಾಗಿದ್ದವರು ಶ್ರೀನಿವಾಸ ಬಾರಿತ್ತಾಯರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು