ಸೋಮವಾರ, ಅಕ್ಟೋಬರ್ 18, 2021
22 °C
ಉನ್ನತ ಶಿಕ್ಷಣ, ಕೌಶಲಾಭಿವೃದ್ಧಿ ಹಾಗೂ ಐಟಿ, ಬಿಟಿ ಸಚಿವ ಡಾ.ಅಶ್ವಥ್ ನಾರಾಯಣ

ಸಮಗ್ರ, ಪರಿಪೂರ್ಣತೆಯ ಶಿಕ್ಷಣಕ್ಕೆ ರಾಷ್ಟ್ರೀಯ ಶಿಕ್ಷಣ ನೀತಿ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಪ್ರಸ್ತುತ ಕಾಲಘಟ್ಟಕ್ಕೆ ಅಗತ್ಯವಾದ ಸಮಗ್ರ ಹಾಗೂ ಪರಿಪೂರ್ಣತೆಯ ಶಿಕ್ಷಣ ವಿದ್ಯಾರ್ಥಿಗಳಿಗೆ ಸಿಗಬೇಕು ಎಂಬ ದೃಷ್ಟಿಯಿಂದ ಕೇಂಧ್ರ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಿದೆ ಎಂದು ಉನ್ನತ ಶಿಕ್ಷಣ, ಕೌಶಲಾಭಿವೃದ್ಧಿ ಹಾಗೂ ಐಟಿ, ಬಿಟಿ ಸಚಿವ ಡಾ.ಅಶ್ವಥ್ ನಾರಾಯಣ ಹೇಳಿದರು.

ಶನಿವಾರ ಜಿ.ಶಂಕರ್‌ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಸ್ನಾತಕೋತ್ತರ ರಸಾಯನ ವಿಜ್ಞಾನದ ಪ್ರಯೋಗಾಲಯ ಮತ್ತು ಸುಸಜ್ಜಿತ ಗ್ರಂಥಾಲಯದ ಉದ್ಘಾಟಿಸಿ, ರಾಷ್ಟ್ರೀಯ ಶಿಕ್ಷಣ ನೀತಿ-2020 ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ಮೂರು ದಶಕಗಳಷ್ಟು ಹಳೆಯದಾದ ಶಿಕ್ಷಣ ಪದ್ಧತಿಯ ಬದಲಾವಣೆಯ ಅಗತ್ಯತೆಯನ್ನು ಮನಗಂಡ ಪ್ರಧಾನಿ ನರೇಂದ್ರ ಮೋದಿ 2014ರಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಸಂಕಲ್ಪ ಮಾಡಿದರು. 2015, ಜ.26ರಂದು ಮೊದಲ ಹೆಜ್ಜೆ ಇಡಲಾಯಿತು. ಬಳಿಕ ಏಕಾಏಕಿ ಹೊಸ ಶಿಕ್ಷಣ ನೀತಿಯನ್ನು ಜಾರಿಮಾಡದೆ ಸತತ 5 ವರ್ಷಗಳ ಕಾಲ ನಿರಂತರ ಅಧ್ಯಯನ ನಡೆಸಿ, ಶಿಕ್ಷಣ ತಜ್ಞರ ಸಲಹೆ ಸೂಚನೆಗಳನ್ನು ಸ್ವೀಕರಿಸಿ, ಈಗ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡಲಾಗಿದೆ ಎಂದರು.

ಎನ್‌ಇಪಿ ಜಾರಿಗೂ ಮುನ್ನ ವಿರೋಧ ಪಕ್ಷದವರ ಸಲಹೆ ಸೂಚನೆಗಳನ್ನು ಸ್ವೀಕರಿಸಲಾಗಿದೆ. ಎಲ್ಲ ರಾಜ್ಯಗಳ ಶಿಕ್ಷಣ ಸಚಿವರ ಸಭೆಗಳನ್ನು ನಡೆಸಿ ಅಭಿಪ್ರಾಯ ಪಡೆಯಲಾಗಿದೆ. ಎಲ್ಲ ಧರ್ಮಗಳ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರ ಜತೆ ಸಮಾಲೋಚನೆ ನಡೆಸಲಾಗಿದೆ. ಇಷ್ಟಾದರೂ ಎನ್‌ಇಪಿಯಿಂದ ಬಡ ವಿದ್ಯಾರ್ಥಿಗಳಿಗೆ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ ಎಂದು ವಿರೋಧ ಪಕ್ಷಗಳು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿರೋಧಿಸುತ್ತಿವೆ ಎಂದು ಟೀಕೆ ಮಾಡಿದರು.

ಪ್ರತಿಪಕ್ಷಗಳು ಎನ್‌ಇಪಿ ಗುಣಮಟ್ಟದ ಬಗ್ಗೆ ಮಾತನಾಡದೆ ಉಳ್ಳದವರು ಇಲ್ಲದವರು ಎಂದು ವಿಂಗಡಿಸಿ ಶಿಕ್ಷಣ ನೀತಿಯನ್ನು ನೋಡುತ್ತಿದ್ದಾರೆ. ಸಂವಿಧಾನಕ್ಕೆ ವಿರುದ್ಧವಾಗಿ ನೀತಿ ಜಾರಿಗೆ ತರಲು ಸಾಧ್ಯವಿಲ್ಲ ಎಂಬ ಸಾಮಾನ್ಯ ಜ್ಞಾನವೂ ಅವರಿಗಿಲ್ಲ ಎಂದು ಅಶ್ವತ್ಥ ನಾರಾಯಣ್ ವಾಗ್ದಾಳಿ ನಡೆಸಿದರು.

ಹಿಂದಿನ ಶಿಕ್ಷಣ ಪದ್ಧತಿಯಲ್ಲಿ ಕಲಾ ಮಾಧ್ಯಕ್ಕೆ ಸೇರಿದ ವಿದ್ಯಾರ್ಥಿ ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದ ವಿಷಯಗಳನ್ನು ಕಲಿಯಲು ಸಾದ್ಯವಿರಲಿಲ್ಲ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ವಿದ್ಯಾರ್ಥಿಗಳು ಇಷ್ಟದ, ಆಸಕ್ತಿಯ ವಿಷಯಗಳನ್ನು ಕಲಿಯಲು ಅವಕಾಶವಿದೆ. ಮುಖ್ಯವಾಗಿ ಪರಿಪೂರ್ಣತೆಯ ಕಲಿಕೆ ಸಾದ್ಯವಾಗಲಿದೆ ಎಂದು ಸಚಿವರು ಹೇಳಿದರು.

ಮೊದಲ ವರ್ಷದ ಪದವಿಯಲ್ಲಿ ಪ್ರೊಗ್ರಾಮಿಂಗ್, ಎರಡನೇ ವರ್ಷ ಕೃತಕ ಬುದ್ಧಿಮತ್ತೆ, ಮೂರನೇ ವರ್ಷ ಡೇಟಾ ಕಲಿಕೆಗೆ ಅವಕಾಶವಿದೆ. ಡಿಜಿಟಲ್ ಕಲಿಕೆಯ ಮೂಲಕ ವಿದ್ಯಾರ್ಥಿಗಳ ಕೌಶಲ ಹೆಚ್ಚಳವಾಗಲಿದೆ. ಭಾರತದ ಶಿಕ್ಷಣ ಪದ್ಧತಿ ವಿಶ್ವಮಟ್ಟಕ್ಕೆ ಬೆಳೆಯಲಿದೆ ಎಂದರು.

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಪಾಲಿಟೆಕ್ನಿಕ್, ಎಂಜಿನಿಯರಿಂಗ್ ಹಾಗೂ ಪದವಿ ಕಾಲೇಜುಗಳಿಗೆ ದಾಖಲಾಗುವ ಎಲ್ಲ ವಿದ್ಯಾರ್ಥಿಗಳಿಗೆ ಸರ್ಕಾರ ಟ್ಯಾಬ್‌ ನೀಡಲಿದೆ ಎಂದು ಸಚವ ಅಶ್ವತ್ಥ ನಾರಾಯಣ್ ಹೇಳಿದರು.

ರಾಜ್ಯದ ಪದವಿ, ಪಾಲಿಟೆಕ್ನಿಕ್ ಹಾಗೂ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಇಂಟರ್‌ನೆಟ್ ಆಧಾರಿತ 8,500 ಸ್ಮಾರ್ಟ್ಸ್‌ ಕ್ಲಾಸ್ ರೂಂಗಳನ್ನು ನಿರ್ಮಿಸಲಾಗಿದ್ದು, 2,500 ಸ್ಮಾರ್ಟ್‌ ಕ್ಲಾಸ್ ರೂಂಗಳು ಈಗಾಗಲೇ ಕಾರ್ಯ ನಿರ್ವಹಿಸುತ್ತಿವೆ. ಡಿಜಿಟಲ್ ಕಲಿಕಾ ವ್ಯವಸ್ಥೆ ಹಾಗೂ ಕಲಿಕಾ ನಿರ್ವಹಣಾ ವ್ಯವಸ್ಥೆಯ ಅನುಷ್ಠಾನದ ಮೂಲಕ ಸರ್ಕಾರಿ ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರ ಬದ್ಧವಾಗಿದೆ ಎಂದರು.

ಶಾಸಕ ಕೆ.ರಘುಪತಿ ಭಟ್‌, ಕಾಲೇಜು ಪ್ರಾಂಶುಪಾಲ ಡಾ.ಭಾಸ್ಕರ್ ಶೆಟ್ಟಿ, ಜಿಲ್ಲಾಧಿಕಾರಿ ಕೂರ್ಮಾರಾವ್‌, ಜಿಲ್ಲಾ ಪಂಚಾಯಿಸಿ ಸಿಇಒ ಡಾ.ವೈ.ನವೀನ್ ಭಟ್‌, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್‌, ಮುಖಂಡರಾದ ಯಶ್‌ಪಾಲ್ ಸುವರ್ಣ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.