ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸಭಾ ಚುನಾವಣೆ| ಮೀನುಗಾರರಿಗೆ ₹ 10 ವಿಮೆ, ₹ 1 ಲಕ್ಷ ಬಡ್ಡಿರಹಿತ ಸಾಲ: ರಾಹುಲ್‌

Published 27 ಏಪ್ರಿಲ್ 2023, 14:12 IST
Last Updated 27 ಏಪ್ರಿಲ್ 2023, 14:12 IST
ಅಕ್ಷರ ಗಾತ್ರ

ಉಡುಪಿ: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೀನುಗಾರರಿಗೆ ₹ 10 ಲಕ್ಷದ ಜೀವ ವಿಮಾ ಸೌಲಭ್ಯ, ಮೀನುಗಾರ ಮಹಿಳೆಯರಿಗೆ ₹ 1 ಲಕ್ಷದವರೆಗೆ ಶೂನ್ಯಬಡ್ಡಿದರದ ಸಾಲ ಹಾಗೂ ಡೀಸೆಲ್ ಮೇಲಿನ ಸಬ್ಸಿಡಿಯನ್ನು ₹ 25ಕ್ಕೆ ಹೆಚ್ಚಿಸಿ ಪ್ರತಿದಿನ 500 ಲೀಟರ್ ಡೀಸೆಲ್ ವಿತರಿಸಲಾಗುವುದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಘೋಷಿಸಿದರು.

ಕಾಪು ತಾಲ್ಲೂಕಿನ ಉಚ್ಚಿಲದಲ್ಲಿ ಗುರುವಾರ ಮೀನುಗಾರರ ಜತೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಮೀನುಗಾರರ ಸಂಕಷ್ಟಗಳಿಗೆ ಸ್ಪಂದಿಸಲು ಸರ್ಕಾರ ಬದ್ಧವಾಗಿದ್ದು ಕರಾವಳಿಯ ಬಂದರುಗಳನ್ನು ನಿಯಮಿತವಾಗಿ ಹೂಳೆತ್ತಲು ಕ್ರಮ ತೆಗೆದುಕೊಳ್ಳಲಾಗುವುದು. ಸಮುದ್ರದ ಮಧ್ಯೆ ಮೀನುಗಾರರಿಗೆ ಅನಾರೋಗ್ಯ ಕಾಡಿದರೆ ತುರ್ತು ವೈದ್ಯಕೀಯ ನೆರವು ನೀಡಲು ಸೀ ಆಂಬುಲೆನ್ಸ್‌ ಸೌಲಭ್ಯ ನೀಡಲಾಗುವುದು ಎಂದು ರಾಹುಲ್ ಭರವಸೆ ನೀಡಿದರು.

ಮೀನುಗಾರಿಕಾ ವೃತ್ತಿಯಲ್ಲಿ ಎದುರಾಗುವ ಸಮಸ್ಯೆ, ಸವಾಲುಗಳ ಬಗ್ಗೆ ಅರಿವಿದೆ. ದೇಶಕ್ಕೆ ಅನ್ನ ಕೊಡುವ ರೈತರಿಗೆ ಸಿಗುತ್ತಿರುವ ಎಲ್ಲ ಸೌಲಭ್ಯಗಳು ಮೀನುಗಾರರಿಗೂ ಸಿಗಬೇಕು. ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದರೆ ಪ್ರತ್ಯೇಕ ಮೀನುಗಾರಿಕಾ ಸಚಿವಾಲಯ ತೆರೆಯಲಾಗುವುದು. ಸಣ್ಣ ಮೀನುಗಾರರ ಹಿತ ಕಾಯಲಾಗುವುದು ಎಂದು ಹೇಳಿದರು.

ಜಿಎಸ್‌ಟಿ, ಡೀಸೆಲ್ ದರ ಹೆಚ್ಚಳ, ಸೀಮೆಎಣ್ಣೆ ಅಲಭ್ಯತೆ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಮೀನುಗಾರರೂ ತೊಂದರೆಗೆ ಸಿಲುಕಿದ್ದಾರೆ. ಕಡಲ ಮಕ್ಕಳ ಹಿತ ಕಾಯುವುದು ಪ್ರಮುಖ ಆದ್ಯತೆಯಾಗಿದ್ದು, ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಕೂಡಲೇ ಮುಖ್ಯಮಂತ್ರಿ ಜತೆ ಚರ್ಚಿಸಿ, ಮೀನುಗಾರರ ಜತೆ ಮತ್ತೊಮ್ಮೆ ಸಂವಾದ ನಡೆಸಿ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದರು.

ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದ ಜಾತಿ ಜನಗಣತಿಯ ವರದಿ ಬಿಡುಗಡೆ ಮಾಡುವಂತೆ ಹಾಗೂ ಶೇ 50ರ ಮೀಸಲಾತಿ ಮಿತಿ ಪ್ರಮಾಣ ಮಿತಿಯನ್ನು ತೆಗೆದು ಹಾಕುವಂತೆ ಪ್ರಧಾನಿ ಮೋದಿ ಅವರಿಗೆ ಹಲವು ಬಾರಿ ಮನವಿ ಮಾಡಿದರೂ ಸ್ಪಂದಿಸಲಿಲ್ಲ. ಆಯಾ ಜಾತಿಗಳ ಜನಸಂಖ್ಯೆಗೆ ಅನುಗುಣವಾಗಿ ಸರ್ಕಾರದ ಸೌಲಭ್ಯಗಳು ಸಿಗಬೇಕು ಎಂಬುದು ಪಕ್ಷದ ನಿಲುವಾಗಿದ್ದು ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಜಾತಿ ಜನಗಣತಿ ವರದಿ ಬಿಡುಗಡೆ ಮಾಡುವುದರ ಜತೆಗೆ ಶೇ 50ರ ಮೀಸಲಾತಿ ಮಿತಿಯನ್ನು ತೆಗೆದು ಹಾಕಲಾಗುವುದು ಎಂದು ರಾಹುಲ್ ಹೇಳಿದರು.

ಕಾರ್ಯಕ್ರಮದಲ್ಲಿ ನಾಯಕರಾದ ಕೆ.ಸಿ.ವೇಣುಗೋಪಾಲ್, ಬಿ.ಕೆ.ಹರಿಪ್ರಸಾದ್‌ ಸೇರಿದಂತೆ ಹಲವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT