ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪೊಡವಿಗೊಡೆಯನ ಊರಲ್ಲಿ ಅಷ್ಟಮಿ ಸಡಗರ

ಸಂಘ ಸಂಸ್ಥೆಗಳಿಂದ ಸ್ಪರ್ಧೆಗಳ ಆಯೋಜನೆ: ಎಲ್ಲೆಡೆ ಮುದ್ದು ಕೃಷ್ಣ, ರಾಧೆಯರ ಕಲರವ
Published : 26 ಆಗಸ್ಟ್ 2024, 3:37 IST
Last Updated : 26 ಆಗಸ್ಟ್ 2024, 3:37 IST
ಫಾಲೋ ಮಾಡಿ
Comments

ಉಡುಪಿ: ಕೃಷ್ಣನೂರು ಉಡುಪಿಯಲ್ಲಿ ಪ್ರತಿ ವರ್ಷವೂ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತದೆ. ಕೃಷ್ಣ ಮಠದಲ್ಲಿ ವಿಟ್ಲಪಿಂಡಿ ಉತ್ಸವ ರಂಗೇರಿದರೆ, ಜಿಲ್ಲೆಯ ವಿವಿಧೆಡೆ ಜನ್ಮಾಷ್ಟಮಿಯ ಸಂಭ್ರಮ ಕಳೆಗಟ್ಟುತ್ತದೆ.

ವಿವಿಧ ಸಂಘ ಸಂಸ್ಥೆಗಳು, ಯುವಕ ಮಂಡಲಗಳು ಮೊಸರು ಕುಡಿಕೆ ಉತ್ಸವ, ಮುದ್ದುಕೃಷ್ಣ ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ಹಬ್ಬವನ್ನು ಸಾರ್ವಜನಿಕವಾಗಿಯೂ ಆಚರಿಸಲಾಗುತ್ತದೆ.

ಉಡುಪಿ ನಗರ ವ್ಯಾಪ್ತಿಯಲ್ಲಿ ಕೆಲವು ಸಂಘಟನೆಗಳ ವತಿಯಿಂದ ಹುಲಿವೇಷ ಸ್ಪರ್ಧೆಗಳನ್ನೂ ಹಮ್ಮಿಕೊಳ್ಳಲಾಗುತ್ತದೆ. ಅಷ್ಟಮಿ ಬಂತೆಂದರೆ ಉಡುಪಿ ಭಾಗದಲ್ಲಿ ಹುಲಿಗಳ ಅಬ್ಬರ, ತಾಸೆ, ಡೋಲುಗಳ ಸದ್ದು ಅನುರಣಿಸುತ್ತದೆ.

ನಗರದ ಕಡೇಕಾರ್‌ನಲ್ಲಿ ಚೈತನ್ಯ ಫೌಂಡೇಶನ್‌ ಕಳೆದ ಆರು ವರ್ಷಗಳಿಂದ ಮುದ್ದುಕೃಷ್ಣ ಸ್ಪರ್ಧೆ ಹಮ್ಮಿಕೊಳ್ಳುವ ಮೂಲಕ ಅಷ್ಟಮಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದೆ.

ಅಂಬಲಪಾಡಿಯ ಜನಾರ್ದನ ಮತ್ತು ಮಹಾಕಾಳಿ ದೇವಾಲಯದ ಸಹಕಾರದಲ್ಲಿ ಅಂಬಲಪಾಡಿ ಯುವಕ ವೃಂದವು ಹಲವು ವರ್ಷಗಳಿಂದ ಜನ್ಮಾಷ್ಟಮಿ ಪ್ರಯುಕ್ತ ಚಿಣ್ಣರಿಗೆ ಮುದ್ದುಕೃಷ್ಣ ಸ್ಪರ್ಧೆಯನ್ನು ಆಯೋಜಿಸುತ್ತಿದೆ.

‘80ಕ್ಕೂ ಹೆಚ್ಚು ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ. ವಿಜೇತ ಮಕ್ಕಳಿಗೆ ಬಹುಮಾನ ನೀಡುತ್ತೇವೆ. ಭಾಗವಹಿಸಿದ ಎಲ್ಲ ಮಕ್ಕಳಿಗೂ ಪಾರಿತೋಷಕ ನೀಡುತ್ತೇವೆ’ ಎನ್ನುತ್ತಾರೆ ಮಂಡಳಿಯವರು.

ಜಯಂಟ್ಸ್ ಗ್ರೂಪ್ ಆಫ್ ಉಡುಪಿ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಮುದ್ದು ಕೃಷ್ಣ– ಮುದ್ದು ರಾಧೆ ಸ್ಪರ್ಧೆ ಹಮ್ಮಿಕೊಳ್ಳಲಾಗುತ್ತಿದೆ. ಈ ಬಾರಿ ಬೈಲೂರಿನ ವಾಸುದೇವ ಕೃಪಾ ವಿದ್ಯಾಮಂದಿರ ಆಂಗ್ಲಮಾಧ್ಯಮ ಶಾಲೆಯಲ್ಲಿ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು.

ಹಿರಿಯಡ್ಕ ವ್ಯಾಪ್ತಿಯಲ್ಲಿ ವಿಶ್ವ ಹಿಂದೂ ಪರಿಷತ್‌, ಬಜರಂಗದಳ ಪೆರ್ಡೂರು ಘಟಕದ ವತಿಯಿಂದ 22 ವರ್ಷಗಳಿಂದ ಮುದ್ದು ಕೃಷ್ಣ, ಮುದ್ದು ರಾಧೆ ವೇಷ ಸ್ಪರ್ಧೆ ನಡೆಯುತ್ತಿದೆ. ವಿಜೇತ ಮಕ್ಕಳಿಗೆ ಸ್ಮರಣಿಕೆ, ಪ್ರಮಾಣಪತ್ರ ನೀಡಿ ಗೌರವಿಸಲಾಗುತ್ತದೆ.

ಅದಮಾರಿನ ಆದರ್ಶ ಯುವಕ ಸಂಘದ ವತಿಯಿಂದ ನಡೆದ ಮುದ್ದುಕೃಷ್ಣ ಸ್ಪರ್ಧೆ
ಅದಮಾರಿನ ಆದರ್ಶ ಯುವಕ ಸಂಘದ ವತಿಯಿಂದ ನಡೆದ ಮುದ್ದುಕೃಷ್ಣ ಸ್ಪರ್ಧೆ
ಮುನಿಯಾಲು ಸಮೀಪದ ಪಾಲ್ಜಡ್ಡು ಸಂಗಮ್‌ ಫ್ರೆಂಡ್ಸ್‌ ವತಿಯಿಂದ ನಡೆದ ಮೊಸರು ಕುಡಿಕೆ ಸ್ಪರ್ಧೆ
ಮುನಿಯಾಲು ಸಮೀಪದ ಪಾಲ್ಜಡ್ಡು ಸಂಗಮ್‌ ಫ್ರೆಂಡ್ಸ್‌ ವತಿಯಿಂದ ನಡೆದ ಮೊಸರು ಕುಡಿಕೆ ಸ್ಪರ್ಧೆ

ಆದರ್ಶ ಯುವಕ ಸಂಘದ ಮೊಸರುಕುಡಿಕೆ

ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಅದಮಾರಿನಲ್ಲಿ ಮೊಸರುಕುಡಿಕೆ ಬಹಳ ವಿಜೃಂಭಣೆಯಿಂದ ನಡೆಯುತ್ತದೆ. ಇಲ್ಲಿನ ಆದರ್ಶ ಯುವಕ ಸಂಘದ ವತಿಯಿಂದ ಈ ಕಾರ್ಯಕ್ರಮ ಸುಮಾರು 15 ವರ್ಷಗಳಿಂದ ನಡೆಯುತ್ತಿದೆ. ಊರಿನ ಆಸುಪಾಸಿನ ಜನರು ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ. ಈ ವೇಳೆ ಕೃಷ್ಣ ವೇಷ ಹಗ್ಗಜಗ್ಗಾಟ ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆಯುತ್ತವೆ. ಸಂಜೆ ಮೊಸರು ಕುಡಿಕೆ ಉತ್ಸವ ರಂಗೇರುತ್ತದೆ. ಈ ಎಲ್ಲ ಕಾರ್ಯಕ್ರಮಕ್ಕೂ ಮೊದಲು ಅಷ್ಟಮಠಗಳಲ್ಲಿ ಒಂದಾದ ಅದಮಾರು ಮೂಲಮಠದಿಂದ ಪೇಟೆವರೆಗೆ ಮೆರವಣಿಗೆ ನಡೆಯುತ್ತದೆ. ಈ ವೇಳೆ ದೇವರಿಗೆ ಪೂಜೆ ಸಲ್ಲಿಸಲಾಗುತ್ತದೆ. ಆದರ್ಶ ಯುವಕ ಮಂಡಲದ ಸಂತೋಷ್ ಜೆ. ಶೆಟ್ಟಿ ಬರ್ಪಾಣಿ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯುತ್ತದೆ.

ಜಂಗಮೇಶ್ವರ ಮಠದಲ್ಲಿ ಶ್ರೀಕೃಷ್ಣ ಲೀಲೋತ್ಸವ‌ ಹೆಬ್ರಿ: ಮುನಿಯಾಲು ಕಾಡುಹೊಳೆಯ ಜಂಗಮೇಶ್ವರ ಮಠದಲ್ಲಿ ಪ್ರಧಾನ ಅರ್ಚಕ ವಿದ್ವಾನ್‌ ರಾಘವೇಂದ್ರ ಭಟ್‌ ನೇತೃತ್ವದಲ್ಲಿ ಆಡಳಿತ ಮೋಕ್ತೇಸರ ಚಿರಂಜಿತ್‌ ಅಜಿಲ ಕಾಡುಹೊಳೆ ಶ್ರೀಮಹಾಲಿಂಗೇಶ್ವರ ಭಜನಾ ಮಂಡಳಿ ಮಹಿಳಾ ಭಜನಾ ಮಂಡಳಿ ಸಹಕಾರದಲ್ಲಿ 21 ವರ್ಷದಿಂದ ಶ್ರೀಕೃಷ್ಣ ಲೀಲೋತ್ಸವ ನಡೆಯುತ್ತಿದೆ. 6 ವರ್ಷದಿಂದ ಮುನಿಯಾಲು ಪರಿಸರದ 9ನೇ ತರಗತಿ ಮಕ್ಕಳಿಗೆ ರಾಮಾಯಣ ಮಹಾಭಾರತ ಶ್ರೀಕೃಷ್ಣ ಕಥಾ ಸ್ಪರ್ಧೆ ನಡೆಸಲಾಗುತ್ತಿದೆ. ಶ್ರೀಕೃಷ್ಣಾ ಜನ್ಮಾಷ್ಠಮಿಯಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಮುದ್ದು ಕೃಷ್ಣ ಸ್ಪರ್ಧೆ ನಡೆಯುತ್ತದೆ. ಧಾರ್ಮಿಕ ಸಭೆಯ ಮೂಲಕ ಊರಿನ ಹಿರಿಯ ಸಾಧಕರನ್ನು ಗೌರವಿಸಲಾಗುತ್ತಿದೆ. ಅಷ್ಟಮಿಯಂದು ಭಕ್ತರಿಂದ ವಿಶೇಷ ವ್ರತಾಚರಣೆಯೂ ನಡೆಯುತ್ತದೆ ಎಂದು ಮಠದ ಪ್ರಧಾನ ಅರ್ಚಕ ಅಜೆಕಾರು ಗುಡ್ಡೆಯಂಗಡಿ ರಾಘವೇಂದ್ರ ಭಟ್ ತಿಳಿಸಿದರು.

ಪಾಲ್ಜಡ್ಡು ಸಂಗಮ್‌ ಫ್ರೆಂಡ್ಸ್‌ನಿಂದ ಜನ್ಮಾಷ್ಟಮಿ ಹೆಬ್ರಿ: ಇಲ್ಲಿನ ಮುನಿಯಾಲು ಪಾಲ್ಜಡ್ಡು ಸಂಗಮ್‌ ಫ್ರೆಂಡ್ಸ್‌ ವತಿಯಿಂದ 15 ವರ್ಷದಿಂದ ಶ್ರೀಕೃಷ್ಣಾ ಜನ್ಮಾಷ್ಟಮಿ ಆಚರಿಸಲಾಗುತ್ತದೆ. ಪಾಲ್ಜಡ್ಡು ಎಂಬಲ್ಲಿ ಉದಯ ನಾಯ್ಕ್‌ ಪಾಲ್ಜಡ್ಡು ಅವರ ಗೌರವಾಧ್ಯಕ್ಷತೆಯಲ್ಲಿ ಶೇಖರ ನಾಯ್ಕ್‌  ಅಧ್ಯಕ್ಷತೆಯಲ್ಲಿ ಸಮಾನ ಮನಸ್ಕ 36 ಸದಸ್ಯರು 20 ವರ್ಷದ ಹಿಂದೆ ಸಂಗಮ್‌ ಫ್ರೆಂಡ್ಸ್‌ ಸ್ಥಾಪಿಸಿದ್ದರು. ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಮೊಸರುಕುಡಿಕೆ ಉತ್ಸವ ಆಚರಿಸಿಕೊಂಡು ಬರಲಾಗುತ್ತದೆ. ಜೊತೆಗೆ ಕ್ರೀಡಾಕೂಟ ಸಾಮಾಜಿಕ ಸೇವೆ ಅಶಕ್ತರಿಗೆ ಅನಾರೋಗ್ಯ ಪೀಡಿತರಿಗೆ ನೆರವು ಸೇರಿದಂತೆ ವಿವಿಧ ಜನಪರ ಕಾರ್ಯಗಳನ್ನೂ ಸಂಸ್ಥೆ ಮಾಡುತ್ತಿದೆ.

ಫ್ರೆಂಡ್ಸ್ ಕ್ಲಬ್‌ನಿಂದ ಸಾರ್ವಜನಿಕ ಕೃಷ್ಣಾಷ್ಟಮಿ ಕಾರ್ಕಳ: ತಾಲ್ಲೂಕಿನ ಕೌಡೂರು ಗ್ರಾಮದ ನಿಂಜೂರು ಮಾರುತಿ ನಗರ ಅನ್ಯಾರಕಟ್ಟೆಯ ಫ್ರೆಂಡ್ಸ್ ಕ್ಲಬ್ 25 ವರ್ಷಗಳಿಂದ ‘ಕೃಷ್ಣಾಷ್ಟಮಿ’ ಸಾರ್ವಜನಿಕವಾಗಿ ಆಚರಿಸುತ್ತಿದೆ. ಸಾಮೂಹಿಕ ಗೋ ಪೂಜೆ ಮುದ್ದು ಕೃಷ್ಣ ವೇಷ ಸ್ಪರ್ಧೆ ಯಕ್ಷಗಾನ ಬಯಲಾಟ ಮಡಿಕೆ ಒಡೆಯುವುದು ನೃತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಶ್ರೀಕೃಷ್ಣ ಕ್ಷೇತ್ರ ಸೇವಾದಳ: ಆನೆಕೆರೆ ಕೃಷ್ಣ ಕ್ಷೇತ್ರದಲ್ಲಿ ಶ್ರೀಕೃಷ್ಣ ಕ್ಷೇತ್ರ ಸೇವಾದಳದ ಆಶ್ರಯದಲ್ಲಿ 23 ವರ್ಷಗಳಿಂದ ಸಾರ್ವಜನಿಕ ಕೃಷ್ಣಾಷ್ಟಮಿ ಆಚರಿಸಲಾಗುತ್ತಿದೆ. ಆ ಪ್ರಯುಕ್ತ ಮುದ್ದುಕೃಷ್ಣ ವೇಷ ಸ್ಪರ್ಧೆ ಕೃಷ್ಣನ ಚಿತ್ರ ಬಿಡಿಸುವ ಸ್ಪರ್ಧೆ ಹೂಮಾಲೆ ಕಟ್ಟುವ ಸ್ಪರ್ಧೆ ಮಡಿಕೆ ಒಡೆಯುವ ಸ್ಪರ್ಧೆಗಳನ್ನು ನಡೆಸಿ ವಿಜೇತರಿಗೆ ಆಕರ್ಷಕ ಬಹುಮಾನ ವಿತರಿಸಲಾಗುತ್ತಿದೆ. ಈ ಬಾರಿ 24ನೇ ವರ್ಷದ ಸಾರ್ವಜನಿಕ ಕೃಷ್ಣಾಷ್ಟಮಿ ಇದೇ 27ರಂದು ಆಚರಿಸಲಾಗುತ್ತಿದೆ. ದುರ್ಗಾ ಪರಮೇಶ್ವರಿ ಫ್ರೆಂಡ್ಸ್ ಕ್ಲಬ್: ತಾಲ್ಲೂಕಿನ ನಂದಳಿಕೆ ಅಬ್ಬನಡ್ಕ ಶ್ರೀದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ ನೇತೃತ್ವದಲ್ಲಿ 8 ವರ್ಷಗಳಿಂದ ಕೃಷ್ಣವೇಷ ಸ್ಪರ್ಧೆ ಮೊಸರು ಕುಡಿಕೆ ಉತ್ಸವ ಗಣೇಶೋತ್ಸವದಂದು ನಡೆಸಿಕೊಂಡು ಬರಲಾಗುತ್ತಿದೆ. ಈ ವರ್ಷ ಕೃಷ್ಣಾಷ್ಟಮಿ ಪ್ರಯುಕ್ತ ಕೃಷ್ಣವೇಷ ಸ್ಪರ್ಧೆ ಬಾಲಕೃಷ್ಣ ಚೆಲ್ವಕೃಷ್ಣ ಹಾಗೂ ಯಶೋದೆ ಕೃಷ್ಣ ಸ್ಪರ್ಧೆ ನಡೆಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT