ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾರಿ ಭಾಷೆ ಉಳಿವಿಗೆ ಲಿಪಿ ಅಗತ್ಯ: ರಹೀಂ ಉಚ್ಚಿಲ್

ಬ್ಯಾರಿ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಗೆ ಸಿಎಂ ಬಳಿ ನಿಯೋಗ
Last Updated 10 ಮಾರ್ಚ್ 2021, 12:56 IST
ಅಕ್ಷರ ಗಾತ್ರ

ಉಡುಪಿ: ಬ್ಯಾರಿ ಸಮುದಾಯದ ಅಭಿವೃದ್ಧಿ ದೃಷ್ಟಿಯಿಂದ ಬ್ಯಾರಿ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಗೆ ಒತ್ತಾಯಿಸಿ ಮುಖ್ಯಮಂತ್ರಿ ಬಳಿ ನಿಯೋಗ ತೆರಳಿ ಒತ್ತಾಯಿಸಲಾಗುವುದು ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್ ಹೇಳಿದರು.

ಬುಧವಾರ ಬ್ರಹ್ಮಗಿರಿಯ ಲಯನ್ಸ್ ಭವನದಲ್ಲಿ ಜಿಲ್ಲಾ ಬ್ಯಾರಿ ಸಂಸ್ಕೃತಿ ಮತ್ತು ಸಾಹಿತ್ಯ ಪರಿಷತ್‌ ಉದ್ಘಾಟಿಸಿ ಮಾತನಾಡಿದ ಅವರು, ಬ್ಯಾರಿ ಸಮುದಾಯದ ಹೋರಾಟದ ಫಲವಾಗಿ ಬ್ಯಾರಿ ಸಾಹಿತ್ಯ ಅಕಾಡೆಮಿ ರಚನೆಯಾಗಿದೆ. ಬ್ಯಾರಿ ಭಾಷೆಯ ಸಂಘಟನೆಯ ಹೆಸರಿನಲ್ಲಿ ಸಮುದಾಯ ಒಂದಾಗಬೇಕು. ಬ್ಯಾರಿ ಸಂಘಟನೆಗಳು ಧರ್ಮದ ಚೌಕಟ್ಟಿನೊಳಗೆ ಕಾರ್ಯ ನಿರ್ವಹಿಸಲು ಧರ್ಮಗುರುಗಳ ಮಾರ್ಗದರ್ಶನ ಅಗತ್ಯ ಎಂದರು.

1,400 ವರ್ಷಗಳ ಇತಿಹಾಸ ಹೊಂದಿರುವ ಬ್ಯಾರಿ ಭಾಷೆಯ ಉಳಿವಿಗೆ ಲಿಪಿ ಅಗತ್ಯ. ಈವರೆಗೆ ಬ್ಯಾರಿ ಭಾಷೆಯ ಬರವಣಿಗೆಗೆ ಕನ್ನಡ ಅವಲಂಬಿಸಬೇಕಾಗಿತ್ತು. ಭಾಷೆಯ ಶ್ರೀಮಂತಿಕೆ ಉಳಿಸಲು, ಮುಂದಿನ ಜನಾಂಗ ಬ್ಯಾರಿ ಭಾಷೆಯನ್ನು ಕಲಿಯಲು ಅನುಕೂಲವಾಗುವಂತೆ ಲಿಪಿ ರಚನೆಯಾಗಿದೆ ಎಂದು ರಹೀಂ ಉಚ್ಚಿಲ್ ಹೇಳಿದರು.

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಯಾಕುಬ್ ಖಾದರ್ ಗುಲ್ವಾಡಿ ಮಾತನಾಡಿ, ಇತರ ಭಾಷೆ ಮತ್ತು ಸಮುದಾಯದಗಳಿಗೆ ರಚನೆ ಮಾಡಿರುವಂತೆ ಬ್ಯಾರಿ ಭಾಷೆಗೂ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಯಾಗಬೇಕು. ಈ ನಿಟ್ಟಿನಲ್ಲಿ ಸಮುದಾಯದ ಪ್ರಮುಖರು ಒಟ್ಟಾಗಿ ಹೋರಾಟ ಮಾಡಬೇಕು. ಬ್ಯಾರಿ ಭಾಷೆಯ ಸಿನಿಮಾವನ್ನು ಬ್ಯಾರಿ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿರುವ ಮಂಗಳೂರು, ಉಡುಪಿ, ಚಿಕ್ಕಮಗಳೂರು, ಮೈಸೂರಿನಲ್ಲಿ ಪ್ರದರ್ಶಿಸಲು ಅಕಾಡೆಮಿ ಸಹಕಾರ ನೀಡಬೇಕು ಎಂದರು.

ಉಪನ್ಯಾಸಕ ಅಬೂಬಕ್ಕರ್ ಉಚ್ಚಿಲ ಪೆರ್ನಾಲ್ ಸೌಹಾರ್ದ ಸಂದೇಶ ನೀಡಿ, ಬ್ಯಾರಿಗಳ ಮೂಲ ವೃತ್ತಿ ವ್ಯಾಪಾರವಾಗಿದ್ದು, ವ್ಯವಹಾರ ಸುಗಮವಾಗಿ ನಡೆಯಬೇಕಾದರೆ ಸಮಾಜದಲ್ಲಿ ಸೌರ್ಹಾದತೆ ಅಗತ್ಯ. ಬ್ಯಾರಿಗಳು ಹಿಂದಿನಿಂದಲೂ ಸೌಹಾರ್ದ ಕಾಪಾಡಿಕೊಂಡು ಬರುತ್ತಿದ್ದು, ಸೌಹಾರ್ದತೆಯ ಬೇರುಗಳು ಗಟ್ಟಿಯಾಗಿ ಉಳಿದಿವೆ ಎಂದರು.

ಮುಖ್ಯ ಅತಿಥಿಗಳಾಗಿ ಬ್ಯಾರಿ ಸಂಸ್ಕೃತಿ ಮತ್ತು ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಪಿ.ಉಮರ್ ಫಾರೂಕ್, ಕಾರ್ಯದರ್ಶಿ ಇಸ್ಮಾಯಿಲ್ ಹುಸೇನ್ ಬ್ಯಾರಿ, ಕರ್ನಾಟಕ ಹಜ್ ಸಮಿತಿಯ ಮಾಜಿ ಸದಸ್ಯ ಸಲೀಂ ಅಂಬಾಗಿಲು, ಅಕಾಡೆಮಿ ಸದಸ್ಯ ಶಂಶೀರ್ ಬುಡೋಳಿ ಉಪಸ್ಥಿತರಿದ್ದರು. ಅಕಾಡೆಮಿ ರಿಜಿಸ್ಟ್ರಾರ್ ಪೂರ್ಣಿಮ ಸ್ವಾಗತಿಸಿದರು. ಸದಸ್ಯ ಸಂಚಾಲಕ ನಝೀರ್ ಪೊಲ್ಯ ವಂದಿಸಿದರು. ಹುಸೇನ್ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು. ಮಂಗಳೂರು ಬ್ಯಾರಿ ಸಾಹಿತ್ಯ ಮತ್ತು ಸಂಸ್ಕೃತಿ ಸಂಘದ ಅಧ್ಯಕ್ಷ ಬಶೀರ್ ಬೈಕಂಪಾಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT