ತನಿಖೆಯ ದಿಕ್ಕು ಬದಲಿಸಿದ ಮೂಳೆಗಳು

ಉಡುಪಿ: ಕರಾವಳಿಯಲ್ಲಿ ಭಾರಿ ಸಂಚಲನ ಮೂಡಿಸಿದ್ದ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ವಿಚಾರಣೆ ಅಂತ್ಯ ಗೊಂಡಿದ್ದು, ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಭಾಸ್ಕರ್ ಶೆಟ್ಟಿ ಅವರ ಪತ್ನಿ ರಾಜೇಶ್ವರಿ ಶೆಟ್ಟಿ, ಪುತ್ರ ನವನೀತ್, ಜ್ಯೋತಿಷಿ ನಿರಂಜನ್ ಭಟ್ ಶಿಕ್ಷೆಗೆ ಒಳಗಾದ ಅಪರಾಧಿಗಳು.
ಪ್ರಕರಣದ ವಿವರ: 2016ರ ಜು.28ರಂದು ಮಧ್ಯಾಹ್ನ 3 ಗಂಟೆಗೆ ಇಂದ್ರಾಳಿಯ ಮನೆಯಲ್ಲಿ ಭಾಸ್ಕರ್ ಶೆಟ್ಟಿ ಅವರ ಕೊಲೆಯಾಗಿತ್ತು. ಬಳಿಕ ಮೃತದೇಹವನ್ನು ನಂದಳಿಕೆಯಲ್ಲಿರುವ ನಿರಂಜನ ಭಟ್ ಮನೆಯಲ್ಲಿನ ಹೋಮ ಕುಂಡದಲ್ಲಿ ಹಾಕಿ ಸುಟ್ಟಿದ್ದರು. ಸಾಕ್ಷ್ಯನಾಶ ಮಾಡಲು ಅವಶೇಷಗಳನ್ನು ನಂದಳಿಕೆ ಬಳಿ ನೀರಿಗೆ ಹಾಕಲಾಗಿತ್ತು.
ಜು.31ರಂದು ಭಾಸ್ಕರ್ ಶೆಟ್ಟಿ ತಾಯಿ, ತನ್ನ ಮಗ ನಾಪತ್ತೆಯಾಗಿರುವುದಾಗಿ ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ನಾಪತ್ತೆ ಪ್ರಕರಣದ ತನಿಖೆಗೆ ಇಳಿದ ಪೊಲೀಸರಿಗೆ ಕೊಲೆ ಮಾಡಿರುವುದು ಖಚಿತವಾಗಿತ್ತು.
ನಂದಳಿಕೆ ಬಳಿ ಭಾಸ್ಕರ್ ಶೆಟ್ಟಿ ಮೂಳೆಗಳು ಸಿಕ್ಕಿದ್ದು ಪೊಲೀಸರ ತನಿಖೆಗೆ ಹೊಸ ಆಯಾಮ ನೀಡಿತು. ಮೂಳೆಗಳ ಡಿಎನ್‌ಎ ಪರೀಕ್ಷೆ ನಡೆಸಲಾಗಿದ್ದು, ಇದು ಭಾಸ್ಕರ್ ಶೆಟ್ಟಿ ಅವರ ತಾಯಿಯ ಡಿಎನ್‌ಎ ಮಾದರಿಗೆ ಹೊಂದಾಣಿಕೆಯಾಗಿತ್ತು. ಇದರಿಂದ ಸಾಕ್ಷ್ಯಗಳನ್ನು ರೂಪಿಸುವಲ್ಲಿ ಪೊಲೀಸರಿಗೆ ಸಹಕಾರಿಯಾಗಿತ್ತು.
ಪ್ರಕರಣದ ಪ್ರಮುಖ ಆರೋಪಿ ಭಾಸ್ಕರ್ ಶೆಟ್ಟಿ ಪತ್ನಿ ರಾಜೇಶ್ವರಿ ಶೆಟ್ಟಿಗೆ ಜಾಮೀನು ದೊರೆತಿತ್ತು. ಮಗ ನವನೀತ್ ಶೆಟ್ಟಿ ಹಾಗೂ ನಂದಳಿಕೆಯ ಜೋತಿಷಿ ನಿರಂಜನ್ ಭಟ್ ಬೆಂಗಳೂರು ಜೈಲಿನಲ್ಲಿದ್ದಾರೆ. ಸಾಕ್ಷ್ಯನಾಶ ಆರೋಪಿಗಳಲ್ಲಿ ನಿರಂಜನ್ ಭಟ್‌ನ ತಂದೆ ಶ್ರೀನಿವಾಸ ಭಟ್ ವಿಚಾರಣೆ ಮಧ್ಯೆ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.
ಪ್ರಾಸಿಕ್ಯೂಶನ್ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಶಾಂತರಾಮ್ ಶೆಟ್ಟಿ ಅಂತಿಮ ವಾದ ಮಂಡಿಸಿದ್ದರು. ನಂತರ ಆರೋಪಿಗಳ ಪರ ವಕೀಲರು ಪ್ರತಿವಾದವನ್ನು ಮಂಡಿಸಿದ್ದರು. ವಾದ ಪ್ರತಿವಾದದ ಆಲಿಸಿದ ನ್ಯಾಯಾಧೀಶ ಸುಬ್ರಹ್ಮಣ್ಯ ಜೆ.ಎನ್., ಅಂತಿಮ ತೀರ್ಪನ್ನು ಜೂನ್ 8 ರಂದು ಪ್ರಕಟಿಸುವುದಾಗಿ ಘೋಷಿಸಿದ್ದರು.
ಸಾಂದರ್ಭಿಕ ಸಾಕ್ಷ್ಯಗಳ ಆಧಾರದಲ್ಲಿ ತೀರ್ಪು: ‘ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ ದಲ್ಲಿ ಪ್ರತ್ಯಕ್ಷದರ್ಶಿಗಳು ಇರಲಿಲ್ಲ. ಕೇವಲ ಸಾಂದರ್ಭಿಕ ಸಾಕ್ಷ್ಯಗಳನ್ನು ಆಧರಿಸಿ ಪ್ರಕರಣವನ್ನು ಭೇದಿಸಿರುವುದು ವಿಶೇಷ. ಕೊಲೆ ಮಾಡಿದ ಬಳಿಕ ಆರೋಪಿಗಳು ಭಾಸ್ಕರ್ ಶೆಟ್ಟಿ ಮೃತದೇಹವನ್ನು ಯಾಗಶಾಲೆಯಲ್ಲಿ ಸುಟ್ಟು, ಪಳ್ಳಿಯ ಸಮೀಪದ ಹೊಳೆಗೆ ಶವದ ಅವಶೇಷಗಳನ್ನು ಬಿಸಾಡಿದ್ದರು. ತನಿಖೆಯ ಸಂದರ್ಭ ಆರೋಪಿಗಳು ನೀಡಿದ ಹೇಳಿಕೆ ಆಧರಿಸಿ ಪೊಲೀಸರು ಮೂಳೆಗಳನ್ನು ವಶಪಡಿಸಿಕೊಂಡು ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದರು. ವಶಪಡಿಸಿಕೊಂಡ ಮೂಳೆಗಳು ಭಾಸ್ಕರ್ ಶೆಟ್ಟಿ ಅವರ ತಾಯಿ ಹಾಗೂ ಸಹೋದರನ ಡಿಎನ್‌ಎಗೆ ಹೊಂದಿಕೆಯಾಗಿತ್ತು. ಇದರಿಂದ ಪ್ರಕರಣ ಬೇಧಿಸಲು ಸುಲಭವಾಯಿತು’ ಎಂದು ಪ್ರಾಸಿಕ್ಯೂಷನ್ ಪರ ವಕೀಲರಾದ ಶಾಂತಾರಾಮ್ ಶೆಟ್ಟಿ ಮಾಧ್ಯಮಗಳಿಗೆ ತಿಳಿಸಿದರು.
ಪತ್ನಿ, ಪುತ್ರ ಕೊಡಲಿಲ್ಲ ದೂರು: ‘ಭಾಸ್ಕರ್ ಶೆಟ್ಟಿ ನಾಪತ್ತೆಯಾಗಿದ್ದಾರೆ ಎಂದು ತಾಯಿ ಗುಲಾಬಿ ಶೆಟ್ಟಿ ಅವರು ಮಣಿಪಾಲದ ಠಾಣೆಗೆ ದೂರು ನೀಡಿದ್ದು ಬಿಟ್ಟರೆ, ಪತ್ನಿ ರಾಜೇಶ್ವರಿ ಶೆಟ್ಟಿಯಾಗಲಿ, ಮಗ ನವನೀತ ಶೆಟ್ಟಿಯಾಗಲಿ ದೂರು ನೀಡಿರಲಿಲ್ಲ. ಈ ಅಂಶ ಕೂಡ ಪ್ರಕರಣದಲ್ಲಿ ಪತ್ನಿ ಹಾಗೂ ಪುತ್ರನ ಕಡೆ ಅನುಮಾನ ಬರಲು ಕಾರಣವಾಗಿತ್ತು. ಆರಂಭದಲ್ಲಿ ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆ.7, 2016ರಂದು ಆರೋಪಿಗಳು ನೀಡಿದ ಹೇಳಿಕೆ ಆಧರಿಸಿ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರಕರಣದಲ್ಲಿ 167 ಸಾಕ್ಷಿಗಳ ಪೈಕಿ 78 ಸಾಕ್ಷಿಗಳ ವಿಚಾರಣೆ ನಡೆದಿತ್ತು. 270 ದಾಖಲೆಗಳು, 130 ಎಂಒಎಸ್‌ಗಳನ್ನು ಮಾರ್ಕಿಂಗ್ ಮಾಡಲಾಗಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.