ಉಡುಪಿ: ಯಕ್ಷಗಾನ ಸಮ್ಮೇಳನದ ಗೋಷ್ಠಿಗಳ ಉದ್ಘಾಟನೆ ಹಾಗೂ ದಿಕ್ಸೂಚಿ ಭಾಷಣ ಮಾಡಲು ಆಗಮಿಸಿದ ಲೇಖಕ ರೋಹಿತ್ ಚಕ್ರತೀರ್ಥ ವಿರುದ್ಧ ಬಿಲ್ಲವ ಸಂಘಟನೆಗಳ ಮುಖಂಡರು ಶನಿವಾರ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.
ನಾರಾಯಣ ಗುರುಗಳ ಪಠ್ಯವನ್ನು ಕೈಬಿಟ್ಟು ಗುರುಗಳಿಗೆ ಹಾಗೂ ಬಿಲ್ಲವ ಸಮಾಜಕ್ಕೆ ರೋಹಿತ್ ಚಕ್ರತೀರ್ಥ ಅವಮಾನ ಮಾಡಿದ್ದು ಸಮ್ಮೇಳನದಲ್ಲಿ ಭಾಷಣ ಮಾಡಲು ಅವಕಾಶ ನೀಡಬಾರದು ಎಂದು ಘೋಷಣೆ ಕೂಗಿದರು.
ಸಮ್ಮೇಳನ ನಡೆಯುವ ಸ್ಥಳದ ಕಡೆಗೆ ಹೊರಟ ಪ್ರತಿಭಟನಾಕಾರರನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ಪೊಲೀಸರು ತಡೆದರು. ಈ ಸಂದರ್ಭ ಪೊಲೀಸರು ಹಾಗೂ ಪ್ರತಿಭಟನಾಕಾರರ ಮಧ್ಯೆ ವಾಗ್ವಾದ ನಡೆಯಿತು.
ಈ ಸಂದರ್ಭ ಮಾತನಾಡಿದ ಗೆಜ್ಜೆಗಿರಿ ಮೇಳದ ಜಿಲ್ಲಾ ಸಂಚಾಲಕ ನವೀನ್ ಅಮೀನ್ ‘ಜಗತ್ತಿಗೆ ಮಾನವತೆಯ ಸಂದೇಶ ಸಾರಿದ ನಾರಾಯಣ ಗುರುಗಳ ಪಠ್ಯವನ್ನು ಕೈಬಿಟ್ಟಿರುವ ರೋಹಿತ್ ಚಕ್ರತೀರ್ಥಗೆ ಸಮ್ಮೇಳನದಲ್ಲಿ ದಿಕ್ಸೂಚಿ ಭಾಷಣಕ್ಕೆ ಅವಕಾಶ ನೀಡಿದರೆ ಮುಂದೆ ಮತ್ತಷ್ಟು ಮಾರಕ ಬರಹಗಳನ್ನು ಪಠ್ಯದಲ್ಲಿ ತುಂಬುವ ಅಪಾಯವಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಲ್ಲವ ಯುವ ವೇದಿಕೆ ಅಧ್ಯಕ್ಷ ಪ್ರವೀಣ್ ಪೂಜಾರಿ ಮಾತನಾಡಿ, ‘ನಾರಾಯಣ ಗುರುಗಳಿಗೆ ಮಾತ್ರವಲ್ಲ; ನಾಡಗೀತೆಗೂ ಅವಮಾನ ಮಾಡಿದ ವ್ಯಕ್ತಿಯನ್ನು ಸಮ್ಮೇಳನದಲ್ಲಿ ದಿಕ್ಸೂಚಿ ಭಾಷಣ ಮಾಡಲು ಕರೆತಂದಿರುವುದು ಖಂಡನೀಯ’ ಎಂದರು.
ಮುಖಂಡರಾದ ಸುನೀಲ್ ಬಂಗೇರ, ಮಾಧವ ಬನ್ನಂಜೆ, ದೀಪಕ್ ಕೋಟ್ಯಾನ್ ಸೇರಿದಂತೆ ಹಲವು ಸಮಾಜದ ಮುಖಂಡರು ಇದ್ದರು.