ಮಂಗಳವಾರ, ಆಗಸ್ಟ್ 9, 2022
20 °C

ಸುಳ್ಳನ್ನು ಪ್ರತಿಪಾದಿಸುವುದು ಬಿಜೆಪಿ ಬಂಡವಾಳ: ಕಾಂಗ್ರೆಸ್ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಕಾಂಗ್ರೆಸ್ ಪಕ್ಷದ ಅಧಿಕೃತ ಲೆಟರ್ ಹೆಡ್ ಮಾರ್ಪಡಿಸಿ ಟೂಲ್‍ಕಿಟ್ ಸೃಷ್ಟಿಸಿದ ಆರೋಪದ ಮೇಲೆ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ರಮಣ್ ಸಿಂಗ್ ಹಾಗೂ ವಕ್ತಾರ ಸಂಬಿತ್ ಪಾತ್ರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಆದರೂ ಬಿಜೆಪಿ ಜಿಲ್ಲಾ ನಾಯಕರು ಟೂಲ್‍ಕಿಟ್ ಜಪ ಮಾಡುತ್ತಿರುವುದು ನಾಚಿಕೆಗೇಡು ಎಂದು ಕಾಂಗ್ರೆಸ್ ವಕ್ತಾರ ಭಾಸ್ಕರ್ ರಾವ್‌ ಕಿದಿಯೂರು ತಿರುಗೇಟು ನೀಡಿದ್ದಾರೆ.

ಕೊರೊನಾ ಎರಡನೇ ಅಲೆಯ ಪರಿಣಾಮವನ್ನು ತಜ್ಞರು ಮುಂಚಿತವಾಗಿ ತಿಳಿಸಿದ್ದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗಂಭೀರವಾಗಿ ಪರಿಗಣಿಸದ ಪರಿಣಾಮ ಸೋಂಕು ವ್ಯಾಪಕವಾಗಿ ಹರಡಿತು. ಸೋಂಕು ಉಲ್ಬಣಕ್ಕೆ ಚುನಾವಣಾ ರ‍್ಯಾಲಿ ಹಾಗೂ ಕುಂಭ ಮೇಳ ಕಾರಣ. ಕೇಂದ್ರ ಸರ್ಕಾರ ವೈಫಲ್ಯವನ್ನು ಮರೆಮಾಚಲು ಟೂಲ್‍ಕಿಟ್ ಹೆಸರಲ್ಲಿ ಕಾಂಗ್ರೆಸ್‌ ವಿರುದ್ಧ ಆರೋಪ ಮಾಡುತ್ತಿದೆ. ಟ್ವಿಟರ್ ಈಗಾಗಲೇ ಟೂಲ್‍ಕಿಟ್ ಅಸಲಿಯಲ್ಲ; ಅದೊಂದು ತಿರುಚಲಾದ ಸುಳ್ಳು ಸುದ್ದಿ ಎಂದು ಸ್ಪಷ್ಟಪಡಿಸಿದೆ ಎಂದಿದ್ದಾರೆ.

ಯುಪಿಎ ಸರ್ಕಾರದ ಅವಧಿಯಲ್ಲಿ ಕಚ್ಚಾತೈಲ ಬೆಲೆ ಪ್ರತೀ ಬ್ಯಾರಲ್‍ಗೆ 140-150 ಡಾಲರ್ ಇದ್ದಾಗ ಪೆಟ್ರೋಲ್ ಬೆಲೆ ₹ 83 ರೂಪಾಯಿ ಇತ್ತು. ಈಗ ಕಚ್ಚಾ ತೈಲ ಬೆಲೆ ಬ್ಯಾರಲ್‍ಗೆ 59.35 ಡಾಲರ್ ಇದ್ದರೂ ಪೆಟ್ರೋಲ್ ಬೆಲೆ ₹ 100 ದಾಟಿದೆ. 2014ರಲ್ಲಿ ಕೇಂದ್ರ ಸರ್ಕಾರದ ತೆರಿಗೆ ₹ 9.48 ಇದ್ದರೆ, 2021ರಲ್ಲಿ ₹ 31.83 ಏರಿಕೆಯಾಗಿದೆ. ಸರ್ಕಾರದ ತೆರಿಗೆ ಏರಿಕೆಯಿಂದ ತೈಲ ಬೆಲೆ ಹೆಚ್ಚಾಗಿದೆ ಎಂದು ಟೀಕಿಸಿದ್ದಾರೆ.

ಯುಪಿಎ ಆಡಳಿತಾವಧಿಯಲ್ಲಿ ತೈಲ ಬೆಲೆ ಸ್ವಲ್ಪ ಹೆಚ್ಚಾದರೂ ಬೀದಿಯಲ್ಲಿ ರಂಪ ಮಾಡುತ್ತಿದ್ದವರು ಇಂದು ಮೌನಕ್ಕೆ ಶರಣಾಗಿದ್ದಾರೆ. ಅಧಿಕಾರ ಪಡೆದ ಕೂಡಲೇ ಜನರ ಸಂಕಷ್ಟಕ್ಕೆ ಸ್ಪಂದಿಸುವ ಗುಣವನ್ನು ಬಿಜೆಪಿ ಕಳೆದುಕೊಂಡಿದೆ. ಕೊರೊನಾ ಕಾಲದಲ್ಲಿ ಜನರ ಜನರ ಸಂಕಷ್ಠಕ್ಕೆ ಸ್ಪಂದಿಸುವ ಬದಲು ನಾಯಕತ್ವ ಬದಲಾವಣೆ ವಿಚಾರ ಮುನ್ನಲೆಗೆ ಬಂದಿರುವುದು ನಾಚಿಕೆಗೇಡು ಎಂದಿದ್ದಾರೆ.

ಬಿಜೆಪಿ ತಿರುಗೇಟು:

ಕೋವಿಡ್ ಸಂಕಷ್ಟದಲ್ಲಿರುವ ಜನರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ₹ 1,250 ಕೋಟಿ ಹಾಗೂ ₹ 500 ಕೋಟಿಗಳ ಎರಡು ಪ್ಯಾಕೇಜ್‍ಗಳ ಘೋಷಣೆ ಮಾಡಿದೆ. ಕೋವಿಡ್‍ನಿಂದ ಮೃತಪಟ್ಟ ಬಡ ಕುಟುಂಬಕ್ಕೆ ತಲಾ ₹ 1 ಲಕ್ಷ ಪರಿಹಾರ ನೀಡಲು ನಿರ್ಧಿರಿಸಿದೆ. ಬಿಜೆಪಿ ಸೇವಾ ಕಾರ್ಯಗಳೇ ವಿರೋಧ ಪಕ್ಷಗಳ ಟೀಕೆಗಳಿಗೆ ಸಮರ್ಪಕ ಉತ್ತರ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಚತುಷ್ಪಥ ರಸ್ತೆ ನಿರ್ಮಾಣದ ಕನಸನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಾಕಾರಗೊಳಿಸುತ್ತಿದೆ. ಉಡುಪಿ ಜಿಲ್ಲೆಯ ಹೆಬ್ರಿಯಿಂದ ಪರ್ಕಳದವರೆಗೆ 29.1 ಕಿ.ಮೀ ರಸ್ತೆ ಹಾಗೂ ಆದಿ ಉಡುಪಿ ಕರಾವಳಿ ಜಂಕ್ಷನ್‍ನಿಂದ ಮಲ್ಪೆ ಮೀನುಗಾರಿಕಾ ಬಂದರನ್ನು ಬೆಸೆಯುವ 3.7 ಕಿ.ಮೀ ರಸ್ತೆಯನ್ನು ಅಭಿವೃದ್ಧಿ ಪಡಿಸಿ ಚತುಷ್ಪಥಗೊಳಿಸಲು ₹ 350 ಕೋಟಿ ಹಾಗೂ ಮಳೆಗಾಲದಲ್ಲಿ ಮುಳುಗಡೆಯಾಗುವ ಸೀತಾನದಿ ಪ್ರದೇಶ ಹಾಗೂ ನೆಮ್ಮಾರು ಬಳಿಯ ರಸ್ತೆಯನ್ನು ಎತ್ತರಿಸಿ ತಡೆಗೋಡೆ ನಿರ್ಮಾಣಕ್ಕೆ ₹ 19 ಕೋಟಿ ಮೀಸರಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿ 66ರ ಕಟಪಾಡಿಯಲ್ಲಿ ಓವರ್ ಪಾಸ್ ನಿರ್ಮಾಣಕ್ಕೆ ₹ 22.72 ಕೋಟಿ ಅನುಮೋದನೆ ಸಿಕ್ಕಿದೆ. ವಿರೋಧ ಪಕ್ಷಗಳ ಅಪಪ್ರಚಾರದ ನಡುವೆ ಬಿಜೆಪಿ ಅಭಿವೃದ್ಧಿಯ ಸ್ಪಷ್ಟ ಗುರಿಯೊಂದಿಗೆ ಮುನ್ನಡೆಯುತ್ತಿದೆ ಎಂದು ಕುಯಿಲಾಡಿ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು