ಸೋಮವಾರ, ಸೆಪ್ಟೆಂಬರ್ 27, 2021
25 °C
ಬಿಜೆಪಿ ಕಚೇರಿಯಲ್ಲಿ ಆಸ್ಕರ್‌ ಫರ್ನಾಂಡಿಸ್‌ ಅವರಿಗೆ ಶ್ರದ್ಧಾಂಜಲಿ ಸಲ್ಲಿಕೆ

ಉಡುಪಿ: ರಾಜಕೀಯ ಹಗೆತನ ತೋರದ ಆಸ್ಕರ್‌ -ಕೆ. ರಘುಪತಿ ಭಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಕಾಂಗ್ರೆಸ್ ನಾಯಕ ಆಸ್ಕರ್ ಫರ್ನಾಂಡಿಸ್ ಅವರಿಗೆ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಮಂಗಳವಾರ ಶ್ರದ್ಧಾಂಜಲಿ ಸಲ್ಲಿಸಿದ್ದು ವಿಶೇಷವಾಗಿತ್ತು. ಶಾಸಕರು, ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಆಸ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಗೌರವ ಸೂಚಿಸಿದರು.

ಕಾರ್ಯಕ್ರಮದಲ್ಲಿ ಉಡುಪಿ ಶಾಸಕ ಕೆ. ರಘುಪತಿ ಭಟ್ ಮಾತನಾಡಿ, ‘ವಿರೋಧ ಪಕ್ಷದವರಾದರೂ ಆಸ್ಕರ್ ಫೆರ್ನಾಂಡಿಸ್ ಉಡುಪಿ ಅಭಿವೃದ್ಧಿಗೆ ನೀಡಿದ ಸೇವೆ ಸ್ಮರಣೀಯ. ರಾಜಕೀಯ ಸಿದ್ಧಾಂತ ಬಿಡದೆ ಬೇರೆ ಪಕ್ಷದ ನಾಯಕರು ನಿಧನರಾದಾಗ ಪಕ್ಷದಿಂದ ಶ್ರದ್ಧಾಂಜಲಿ ಸಲ್ಲಿಸುವುದು ನಮ್ಮ ಕರ್ತವ್ಯ ಎಂದರು.

ಕಾರ್ಮಿಕ ಸಂಘಟನೆಗಳ ಮೂಲಕ ಬೆಳೆದು ನಾಯಕರಾದ ಆಸ್ಕರ್ ಹಗೆತನದ ರಾಜಕೀಯವನ್ನು ಮಾಡಿದವರಲ್ಲ. ಕಾಂಗ್ರೆಸ್ ಕಾರ್ಯಕರ್ತರು ಮಾಡಿದಾಗಲೂ ಆಸ್ಕರ್ ಬೆಂಬಲ ನೀಡಲಿಲ್ಲ. ಡಾ.ವಿ.ಎಸ್‌.ಆಚಾರ್ಯ ಅವರ ಜೊತೆ ಆತ್ಮೀಯ ಸಂಬಂಧ ಹೊಂದಿದ್ದರು. ಆಸ್ಕರ್ ಮಾನವೀಯ ಗುಣವಿದ್ದ ನಾಯಕ ಎಂದರು.

‘ವೈಯಕ್ತಿಕ ಜೀವನದಲ್ಲಿ ದುರ್ಘಟನೆ ನಡೆದಾಗ ಸಾಂತ್ವನ ಹೇಳಿ ಸಹಾಯ ಬೇಕಿದ್ದರೆ ಕೇಳುವಂತೆ ಸಂತೈಸಿದ್ದರು. ಕಾಂಗ್ರೆಸ್ ನಾಯಕರು ಟೀಕಿಸಿದಾಗಲೂ ಮಾನವೀಯ ಗುಣ ತೋರಿದ್ದರು. ಆಸ್ಕರ್ ಅತ್ಯಂತ ಒಳ್ಳೆಯ ಗುಣ ಹೊಂದಿರುವ ನಾಯಕ ಎಂದು ರಘುಪತಿ ಭಟ್ ಹೇಳಿದರು.

ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಉದಯ ಕುಮಾರ್ ಶೆಟ್ಟಿ ಮಾತನಾಡಿ, ವಿರೋಧಿಗಳನ್ನು ಪ್ರೀತಿಸುವ ಗುಣ ಆಸ್ಕರ್ ಅವರಲ್ಲಿತ್ತು. ಹಿಂದುತ್ವದ ಬಗ್ಗೆ ವಿಶ್ವಾಸ ಹಾಗೂ ಗೌರವ ಹೊಂದಿದ್ದರು. ಪಕ್ಷ ಮತ್ತು ನಾಯಕತ್ವದ ಮೇಲಿನ ನಿಷ್ಠೆಯನ್ನು ಆಸ್ಕರ್ ಅವರಿಂದ ಕಲಿಯಬೇಕು ಎಂದರು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿ, ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮರೆತು ಎಲ್ಲ ಪಕ್ಷಗಳು ಒಟ್ಟಾಗಿ ಕೆಲಸ ಮಾಡುವ ಸಂಪ್ರದಾಯವಿದ್ದರೆ ಅದು ಉಡುಪಿಯಲ್ಲಿ ಮಾತ್ರ. ಉಡುಪಿ ಮುನ್ಸಿಪಲ್ ಸದಸ್ಯರಾಗಿ ಕೇಂದ್ರ ಸಚಿವರಾಗುವವರೆಗೂ ಬೆಳೆದರು. 41 ವರ್ಷ ಸಂಸತ್ತಿನಲ್ಲಿ ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸಿದ್ದರು. ವಿಶಾಲ ಹೃದಯದ ದೂರದೃಷ್ಟಿವುಳ್ಳ ದಾರ್ಶನಿಕರು ಆಸ್ಕರ್ ಎಂದರು.

ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಗುರ್ಮೆ ಸುರೇಶ್ ಶೆಟ್ಟಿ, ಬಿ. ರವಿ ಅಮೀನ್, ಪ್ರಧಾನ ಕಾರ್ಯದರ್ಶಿಗಳಾದ ಕುತ್ಯಾರು ನವೀನ್ ಶೆಟ್ಟಿ, ಸದಾನಂದ ಉಪ್ಪಿನಕುದ್ರು, ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.