ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಕ್ತದ ಕಾಂಡಕೋಶ ದಾನ; ರೋಗಿಗಳಿಗೆ ವರದಾನ: ಆರೋಹಿ ತ್ರಿಪಾಠಿ

ಬ್ಲಡ್‌ ಸ್ಟೆಮ್‌ ಸೆಲ್‌ ದಾನದ ಬಗ್ಗೆ ಜಾಗೃತಿಗೆ ಮಣಿಪಾಲ್ ಮ್ಯಾರಥಾನ್ ಜೊತೆ ಡಿಕೆಎಂಎಸ್ ಬಿಎಂಎಸ್‌ಟಿ ಸಹಭಾಗಿತ್ವ
Published 9 ಫೆಬ್ರುವರಿ 2024, 14:14 IST
Last Updated 9 ಫೆಬ್ರುವರಿ 2024, 14:14 IST
ಅಕ್ಷರ ಗಾತ್ರ

ಉಡುಪಿ: ರಕ್ತದ ಕ್ಯಾನ್ಸರ್ ಮತ್ತು ರಕ್ತದ ಕಾಂಡಕೋಶ (ಬ್ಲಡ್ ಸ್ಟೆಮ್ ಸೆಲ್) ದಾನದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹಾಗೂ ದಾನಿಗಳ ನೋಂದಣಿ ಮಾಡುವ ನಿಟ್ಟಿನಲ್ಲಿ ಡಿಕೆಎಂಎಸ್ ಬಿಎಂಎಸ್‌ಟಿ ಫೌಂಡೇಷನ್ ಇಂಡಿಯಾ ಸ್ವಯಂಸೇವಾ ಸಂಸ್ಥೆಯು ಮಣಿಪಾಲ್ ಮ್ಯಾರಥಾನ್ ಜೊತೆಗೆ ಕೈಜೋಡಿಸಿದೆ ಎಂದು ಡಿಕೆಎಂಎಸ್ ಬಿಎಂಎಸ್‌ಟಿ ಫೌಂಡೇಷನ್‌ನ ಆರೋಹಿ ತ್ರಿಪಾಠಿ ಹೇಳಿದರು.

ಶುಕ್ರವಾರ ಕೆಎಂಸಿ ಗ್ರೀನ್ಸ್‌ನಲ್ಲಿ ಮಾತನಾಡಿದ ಅವರು, ದೇಶದಲ್ಲಿ ಪ್ರತಿ ವರ್ಷ ಲಕ್ಷಕ್ಕೂ ಹೆಚ್ಚು ಜನರು ರಕ್ತದ ಕ್ಯಾನ್ಸರ್‌ ಅಥವಾ ಸಂಬಂಧಿತ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ರಕ್ತದ ಕ್ಯಾನ್ಸರ್ ರೋಗಿಗಳಿಗೆ ರಕ್ತದ ಕಾಂಡಕೋಶ ಕಸಿ ಮಾಡಲು ಎಚ್‌ಎಲ್‌ಎ ಹೊಂದಾಣಿಕೆಯಾಗುವ ದಾನಿಯ ಕೊರತೆ ಕಾಡುತ್ತಿದೆ.

ದೇಶದಲ್ಲಿ ಕೇವಲ ಶೇ 0.03ರಷ್ಟು ದಾನಿಗಳು ಮಾತ್ರ ರಕ್ತದ ಕಾಂಡಕೋಶದ ದಾನಿಗಳಿರುವುದು ಸಮಸ್ಯೆಯ ಗಂಭೀರತೆ ತಿಳಿಸುತ್ತದೆ. ಬ್ಲಡ್ ಸ್ಟೆಮ್‌ ಸೆಲ್ ದಾನಿಗಳ ಸಂಖ್ಯೆ ತೀರಾ ಕಡಿಮೆ ಇದ್ದು ದಾನಿಗಳನ್ನು ಪತ್ತೆ ಹೆಚ್ಚುವುದು ಸವಾಲಿನ ಕಾರ್ಯವಾಗಿದೆ. ರಕ್ತದ ಕಾಂಡಕೋಶದ ಬಗ್ಗೆ ಯುವ ಜನರಲ್ಲಿ ಹೆಚ್ಚಿನ ಅರಿವು ಮೂಡಬೇಕು, ಹೆಚ್ಚು ದಾನಿಗಳು ನೋಂದಣಿ ಮಾಡಿಸಿಕೊಳ್ಳಬೇಕು ಎಂಬುದು ಸಂಸ್ಥೆಯ ಉದ್ದೇಶ ಎಂದರು.

ರಕ್ತದ ಕಾಂಡಕೋಶ ದಾನ ಸಂಕೀರ್ಣ ಪ್ರಕ್ರಿಯೆಯಾಗಿದ್ದು ನೋಂದಣಿ ಮಾಡಿಸಿದವರೆಲ್ಲರೂ ದಾನಿಗಳಾಗಲು ಸಾಧ್ಯವಿಲ್ಲ. ದಾನಿಯ ಎಚ್‌ಎಲ್‌ಎ ಹೊಂದಾಣಿಕೆಯಾದರೆ ಮಾತ್ರ ರಕ್ತದ ಕಾಂಡಕೋಶ ದಾನ ಮಾಡಲು ಸಾಧ್ಯವಿದೆ. 18 ರಿಂದ 55 ವರ್ಷದೊಳಗಿನವರು ದಾನಿಗಳಾಗಲು ಅರ್ಹರು ಎಂದರು.

ಒಮ್ಮೆ ಬ್ಲಡ್‌ ಸ್ಟೆಮ್‌ಸೆಲ್‌ ದಾನ ಮಾಡಿದವರು ಸಾಮಾನ್ಯವಾಗಿ ಎರಡು ವರ್ಷ ಮಾಡದಿರಲು ಫೌಂಡೇಷನ್ ಸಲಹೆ ನೀಡುತ್ತದೆ. 55 ವರ್ಷದವರೆಗೂ ಬ್ಲಡ್‌ ಸ್ಟೆಮ್‌ಸೆಲ್‌ ದಾನ ಮಾಡಬಹುದಾಗಿದ್ದು ದಾನಿಗಳಿಗೆ ಯಾವುದೇ ಆರೋಗ್ಯ ಸಮಸ್ಯೆ ಕಾಡುವುದಿಲ್ಲ ಎಂದರು.

ರಕ್ತದ ಕಾಂಡಕೋಶ ದಾನಿಯಾದ ಬಳಿಕ ಅಂತರರಾಷ್ಟ್ರೀಯ ಸರ್ಚ್ ಪ್ಲಾಟ್‌ಫಾರಂನಲ್ಲಿ ದಾನಿಯ ಗುರುತು ಮರೆಮಾಚಿ ನೋಂದಣಿ ಮಾಡಲಾಗುತ್ತದೆ. ಈವರೆಗೆ ಡಿಕೆಎಂಎಸ್-ಬಿಎಂಎಸ್‌ಟಿ ಇಂಡಿಯಾ 1 ಲಕ್ಷಕ್ಕೂ ಹೆಚ್ಚು ದಾನಿಗಳನ್ನು ನೋಂದಣಿ ಮಾಡಿಕೊಳ್ಳಲಾಗಿದೆ. 2010ರಿಂದ ಇದುವರೆಗೂ 110ಕ್ಕೂ ಹೆಚ್ಚು ಕಸಿಗಳನ್ನು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ರಕ್ತದ ಕಾಂಡಕೋಶ ದಾನದಿಂದ ಅನಾರೋಗ್ಯ ಸಮಸ್ಯೆ ಕಾಡುವುದಿಲ್ಲ. ದೇಹದಲ್ಲಿ ಯಾವುದೇ ಬದಲಾವಣೆಯೂ ಕಾಣುವುದಿಲ್ಲ. ಆರೋಗ್ಯವಂತರಾಗಿರುವ ಎಲ್ಲರೂ ರಕ್ತದ ಕಾಂಡಕೋಶ ದಾನಕ್ಕೆ ಮುಂದಾಗಬೇಕು

-ಅಕ್ಷಯ್‌ ಕುಮಾ ಕೆಎಂಸಿಯ ಉದ್ಯೋಗಿ ಬ್ಲಡ್‌ಸ್ಟೆಮ್ ಸೆಲ್ ದಾನಿ

‘ರಕ್ತದ ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಎಲ್ಲರೂ ಕೈಜೋಡಿಸಿ’

ಈ ಬಾರಿಯ ಮಣಿಪಾಲ್ ಮ್ಯಾರಥಾನ್‌ಗೆ ಡಿಕೆಎಂಎಸ್ ಬಿಎಂಎಸ್‌ಟಿ ಫೌಂಡೇಷನ್ ಇಂಡಿಯಾ ಕೈ ಜೋಡಿಸಿದ್ದು ರಕ್ತದ ಕಾಂಡಕೋಶದ ದಾನದ ಬಗ್ಗೆ ಅರಿವು ಮೂಡಿಸುವುದರ ಜತೆಗೆ ರಕ್ತದ ಕ್ಯಾನ್ಸರ್ ತಲಸ್ಸೇಮಿಯಾ ರೋಗಗಳ ಬಗ್ಗೆ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ. ಮ್ಯಾರಥಾನ್‌ನಲ್ಲಿ ಪಾಲ್ಗೊಳ್ಳುವವರು ರಕ್ತಕಾಂಡ ಕೋಶದ ದಾನಿಗಳಾಗಿ ನೋಂದಣಿ ಮಾಡಿಸಿಕೊಳ್ಳಬಹುದು. ರಕ್ತದ ಕಾಂಡಕೋಶ ದಾನದ ಬಗ್ಗೆ ಕೆಲವು ಮಿಥ್ಯೆಗಳಿವೆ. ದಾನಿಯು ದವಡೆಯ ಸ್ವಾಬ್‌ ಮಾದರಿ ನೀಡುವ ಸರಳ ಪ್ರಕ್ರಿಯೆಯ ಮೂಲಕ ದಾನಿಯಾಗಿ ನೋಂದಣಿ ಮಾಡಿಸಿಕೊಳ್ಳಬಹುದು. ರಕ್ತದ ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಮಣಿಪಾಲ್ ಅಕಾಡೆಮಿ ಆಪ್ ಹೈಯರ್ ಎಜುಕೇಷನ್ ಸಹ ಕುಲಾಧಿಪತಿ ಎಚ್.ಎಸ್. ಬಲ್ಲಾಳ್ ಹೇಳಿದರು. ದೇಶದಲ್ಲಿ ಐದು ನಿಮಿಷಕ್ಕೆ ಒಬ್ಬರಿಗೆ ರಕ್ತದ ಕ್ಯಾನ್ಸರ್ ತಲಸ್ಸೇಮಿಯಾ ಅಪ್ಲಾಸ್ಟಿಕ್ ಅನೀಮಿಯಾದಂತಹ ರಕ್ತದ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ ಎಂದು ಸಂಶೋಧನೆ ಹೇಳುತ್ತದೆ. ರೋಗಿಗಳಲ್ಲಿ ಹೆಚ್ಚಿನವರು ಮಕ್ಕಳು ಹಾಗೂ ಯುವಕರಾಗಿರುವುದು ಆತಂಕಕಾರಿ. ರಕ್ತದ ಕಾಂಡಕೋಶದ ಕಸಿಯಿಂದ ಚೇತರಿಸಿಕೊಳ್ಳುವ ಅವಕಾಶ ರೋಗಗಳಿಗೆ ಇದ್ದು ಯಶಸ್ವಿ ಕಸಿಗೆ ರೋಗಿಗೆ ಎಚ್‌ಎಲ್‌ಎ ಹೋಲುವ ದಾನಿ ಅಗತ್ಯವಿದೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT