ಭಾನುವಾರ, ಏಪ್ರಿಲ್ 5, 2020
19 °C
ಬಜೆಟ್‌ನಲ್ಲಿ ಉಡುಪಿಗೆ ಪ್ರಾತಿನಿಧ್ಯ; ಮೀನುಗಾರರಿಗೆ ಕಿಸಾನ್ ಕ್ರೆಡಿಟ್‌ ಕಾರ್ಡ್‌

ಕರಾವಳಿಯ ಬಂದರು, ಪ್ರವಾಸೋದ್ಯಮಕ್ಕೆ ಒತ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಉಡುಪಿ ಜಿಲ್ಲೆಗೆ ಒಂದಷ್ಟು ಕೊಡುಗೆಗಳು ಸಿಕ್ಕಿವೆ. ಬಂದರುಗಳ ಅಭಿವೃದ್ಧಿ, ಕಿಂಡಿ ಅಣೆಕಟ್ಟುಗಳ ನಿರ್ಮಾಣ, ಮೀನುಗಾರರಿಗೆ ಕಿಸಾನ್ ಕ್ರೆಡಿಟ್‌ ಕಾರ್ಡ್ ವಿತರಿಸಲು ಸರ್ಕಾರ ನಿರ್ಧರಿಸಿದೆ.

ಬಜೆಟ್‌ನಲ್ಲಿ ಉಡುಪಿಗೆ ಸಿಕ್ಕಿದ್ದೇನು ?

ರೈತರಿಗೆ ಕೊಡುವಂತೆ ಮೀನುಗಾರರಿಗೂ ಕಿಸಾನ್ ಕ್ರೆಡಿಟ್‌ ಕಾರ್ಡ್‌ ಕೊಡಬೇಕು ಎಂಬ ಬಹುದಿನಗಳ ಬೇಡಿಕೆಗೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ. ಮುಂದೆ ಮೀನುಗಾರರು ಕೂಡ ಕಡಿಮೆ ಬಡ್ಡಿದರದಲ್ಲಿ ₹ 3 ಲಕ್ಷದವರೆಗೂ ಸಾಲ ಪಡೆಯಬಹುದು.

ಕಿಂಡಿ ಅಣೆಕಟ್ಟುಗಳ ನಿರ್ಮಾಣ

ಪಶ್ಚಿಮಘಟ್ಟ ವ್ಯಾಪ್ತಿಯ ನದಿಗಳಿಗೆ ಅಡ್ಡಲಾಗಿ ಕಿಂಡಿ ಅಣೆಕಟ್ಟುಗಳ ನಿರ್ಮಾಣಕ್ಕೆ ಮಾಸ್ಟರ್‌ ಪ್ಲಾನ್‌ ರಚಿಸಲು ನಿರ್ಧರಿಸಿರುವುದು ಸ್ವಾಗತಾರ್ಹ. ಇದರಿಂದ ವ್ಯರ್ಥವಾಗಿ ಹರಿದು ಹೋಗುತ್ತಿರುವ ನದಿಗಳ ನೀರನ್ನು ಕಿಂಡಿ ಅಣೆಕಟ್ಟುಗಳ ಮೂಲಕ ಹಿಡಿದಿಡಬಹುದು. ಕೃಷಿ ಚಟುವಟಿಕೆಗಳಿಗೆ ಬಳಸಬಹುದು. ಅಂತರ್ಜಲವೂ ವೃದ್ಧಿಯಾಗಲಿದೆ.

ಮಹಿಳಾ ಮೀನುಗಾರರಿಗೆ ದ್ವಿಚಕ್ರ ವಾಹನ

ಮಹಿಳಾ ಮೀನುಗಾರರ ಸಬಲೀಕರಣ ಯೋಜನೆಯಡಿ 1,000 ಮಹಿಳೆಯರಿಗೆ ದ್ವಿಚಕ್ರ ವಾಹನ ವಿತರಿಸಲು ₹ 5 ಕೋಟಿ ತೆಗೆದಿರಿಸಲಾಗಿದೆ. ತಲೆ ಮೇಲೆ ಮೀನಿನ ಬುಟ್ಟಿಹೊತ್ತು ಮಾರುವ ಮಹಿಳೆಯರಿಗೆ ಯೋಜನೆಯ ಪ್ರಯೋಜನ ಸಿಗಲಿದೆ.

ಹೆಜಮಾಡಿ ಕೋಡಿಯಲ್ಲಿ ಬಂದರು

ಹೆಜಮಾಡಿ ಕೋಡಿಯಲ್ಲಿ ಬಂದರು ನಿರ್ಮಾಣ ಈ ಭಾಗದ ಬಹುಕಾಲದ ಬೇಡಿಕೆಯಾಗಿತ್ತು. ಬಜೆಟ್‌ನಲ್ಲಿ ಬಂದರು ನಿರ್ಮಾಣಕ್ಕೆ ಪರಿಷ್ಕೃತ ಅಂದಾಜು ವೆಚ್ಚ ₹ 181 ಕೋಟಿ ತೆಗೆದಿರಿಸಿರುವುದರಿಂದ ಮೀನುಗಾರಿಕೆಗೆ ಅನುಕೂಲವಾಗಲಿದೆ.

ಹೆಜಮಾಡಿ ಕೋಡಿಯಲ್ಲಿ ಬಂದರು ನಿರ್ಮಾಣವಾದರೆ ಗಂಗೊಳ್ಳಿ ಹಾಗೂ ಮಂಗಳೂರು ಬಂದರಿನ ಮೇಲಿನ ಅವಲಂಬನೆ ಕಡಿಮೆಯಾಗಲಿದೆ. ಜತೆಗೆ, ಮತ್ಸ್ಯೋದ್ಯಮಕ್ಕೆ ಪೂರಕ ವಾತಾವರಣ ನಿರ್ಮಾಣವಾಗಲಿದೆ.

ಹಂಗಾರಕಟ್ಟೆ ಬಂದರು ಅಭಿವೃದ್ಧಿಗೆ ₹ 130 ಕೋಟಿ, ಕೊಡೇರಿ ಬಂದರು ಅಭಿವೃದ್ಧಿ ಕಾಮಗಾರಿಗೆ ₹ 2 ಕೋಟಿ ತೆಗೆದಿರಿಸಿರಲಾಗಿರದೆ.

ಬೈಂದೂರು ತಾಲ್ಲೂಕಿನ ಮರವಂತೆಯ ಹೊರ ಬಂದರಿನ ಎರಡನೇ ಹಂತದ ಕಾಮಗಾರಿ ಪೂರ್ಣಕ್ಕೆ ₹ 85 ಕೋಟಿ ಮೀಸಲಿಡಲಾಗಿದೆ. ಇದರಿಂದ ನನೆಗುದಿಗೆ ಬಿದ್ದಿರುವ ಕಾಮಗಾರಿ ಪೂರ್ಣಗೊಳ್ಳಲಿದ್ದು, ಈ ಭಾಗದ ನಾಡದೋಣಿ ಮೀನುಗಾರಿಕೆಗೆ ಅನುಕೂಲವಾಗಲಿದೆ.

ಉಡುಪಿ, ದಾವಣಗೆರೆ, ದೊಡ್ಡಬಳ್ಳಾಪುರದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್‌ ಕೇಂದ್ರಗಳಿಗೆ ₹ 4 ಕೋಟಿ ಅನುದಾನ ಸಿಗಲಿದ್ದು, ಸ್ಕೌಟ್ಸ್‌ ಚಟುವಟಿಕೆಗಳಿಗೆ ನೆರವು ಸಿಕ್ಕಂತಾಗಿದೆ.

ಕಾರ್ಕಳದಲ್ಲಿ ನೂತನ ಜವಳಿ ಪಾರ್ಕ್‌ ಆರಂಭಕ್ಕೆ ಸರ್ಕಾರ ನಿರ್ಧರಿಸಿದ್ದು, ಈ ಭಾಗದಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಯಾಲಿಗವೆ. ನಿರುದ್ಯೋಗಿ ಯುವಕರು ನಗರಗಳಿಗೆ ವಲಸೆ ಹೋಗುವ ಪ್ರಮಾಣ ಕಡಿಮೆಯಾಗಲಿದೆ.

ಇದಲ್ಲದೆ ರಾಜ್ಯದ ಕಿರು ಬಂದರುಗಳ ಅಭಿವೃದ್ಧಿ, ಕರಾವಳಿ ಸಂರಕ್ಷಣ ಮತ್ತು ಕಡಲ ತೀರದ ಪ್ರವಾಸೋದ್ಯಮ ಅಭಿವೃದ್ಧಿಗೆ ಕರ್ನಾಟಕ ಜಲ ಸಾರಿಗೆಯ ಸಮಗ್ರ ಯೋಜನೆ ಜಾರಿಗೆ ನಿರ್ಧರಿಸಲಾಗಿದ್ದು, ಉಡುಪಿ ಜಾಗತಿಕ ಪ್ರವಾಸೋದ್ಯಮ ಕೇಂದ್ರವಾಗಿ ಬೆಳೆಯಲು ಸಹಕಾರಿಯಾಗಲಿದೆ. ಜತೆಗೆ, ಪ್ರವಾಸಿ ಸ್ನೇಹಿ ಯೋಜನೆಗಳನ್ನು ಒಳಗೊಂಡ ಹೊಸ ಪ್ರವಾಸೋದ್ಯಮ ನೀತಿ ಜಾರಿ ಜಾರಿಯಿಂದ ಕರಾವಳಿಯ ಪ್ರವಾಸೋದ್ಯಮಕ್ಕೆ ಹೆಚ್ಚಿನ ಬಂಡವಾಳ ಹರಿದು ಬರಲಿದ್ದು, ಸಾವಿರಾರು ಉದ್ಯೋಗಗಳು ಸೃಷ್ಟಿಯಾಗಲಿವೆ.

ಕೇಂದ್ರ ಸರ್ಕಾರದ ಭಾರತೀಯ ಒಳನಾಡು ಜಲಸಾರಿಗೆ ಪ್ರಾಧಿಕಾರ ಸಂಸ್ಥೆಯ ಸಹಭಾಗಿತ್ವದಲ್ಲಿ ರಾಜ್ಯದ ಜಲಸಾರಿಗೆ ನದಿಗಳಾದ ಕಾಳಿ, ಶರಾವತಿ, ಹಂಗಾರಕಟ್ಟೆ, ಗುರುಪುರ, ನೇತ್ರಾವಿ ಜಲಸಾರಿಗೆ ಮಾರ್ಗಗಳು ಹಾಗೂ ದ್ವೀಪಗಳ ಅಭಿವೃದ್ಧಿಯಿಂದ ಮತ್ಸ್ಯೋದ್ಯಮ ಹಾಗೂ ಪ್ರವಾಸೋದ್ಯಮಕ್ಕೆ ಒತ್ತು ಸಿಗಲಿದೆ.

ಶೋಲಾ ಅರಣ್ಯಗಳ ಸರ್ವೇಕ್ಷಣೆ ಜೀವ ವೈವಿಧ್ಯ ಸಂರಕ್ಷಣೆಗೆ ಐದು ಕೋಟಿ ನೀಡಲಾಗಿದ್ದು, ಪಶ್ಚಿಮಘಟ್ಟಗಳ ಜೀವವೈವಿಧ್ಯ ಅಧ್ಯಯನಕ್ಕೆ ನೆರವಾಗಲಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)