ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ವಾರಂಟೈನ್‌ ಮೇಲೆ ನಿಗಾ ಇರಲಿ: ಪ್ರತಿದಿನ ವರದಿ ಕಡ್ಡಾಯ

ಗ್ರಾಮ ಪಂಚಾಯಿತಿವಾರು ಕೋವಿಡ್‌ ಕಾರ್ಯಪಡೆಗಳು ಜವಾಬ್ದಾರಿ ನಿಭಾಯಿಸಿ: ಸಿಇಒ ಡಾ.ನವೀನ್‌ ಭಟ್‌
Last Updated 3 ಮೇ 2021, 16:36 IST
ಅಕ್ಷರ ಗಾತ್ರ

ಉಡುಪಿ: ಕೋವಿಡ್‌ ಪರೀಕ್ಷೆ, ಕ್ವಾರಂಟೈನ್, ಸೋಂಕು ನಿಯಂತ್ರಣ, ಚಿಕಿತ್ಸೆ, ಹಾಗೂ ಲಸಿಕಾಕರಣಗಳನ್ನು ಪರಿಣಾಮಕಾರಿಯಾಗಿ ಮಾಡಲು ಗ್ರಾಮ ಪಂಚಾಯಿತಿವಾರು ಕೋವಿಡ್ ಕಾರ್ಯಪಡೆಗಳು ಕಾರ್ಯನಿರ್ವಹಿಸುತ್ತಿದ್ದು, ಮತ್ತಷ್ಟು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕು ಎಂದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್ ಸೂಚನೆ ನೀಡಿದರು.

ಸೋಮವಾರ ನಡೆದ ಸಭೆಯಲ್ಲಿ ಮಾತನಾಡಿದ ಸಿಇಒ ‘ಪಂಚಾಯಿತಿ ಮಟ್ಟದಲ್ಲಿ ರಚನೆಯಾಗಿರುವ ಕಾರ್ಯಪಡೆಯು ಸಾರ್ವಜನಿಕರು ವೈಯಕ್ತಿಕ ಅಂತರ ಕಾಪಾಡುವುದು, ಮಾಸ್ಕ್ ಧರಿಸುವುದು, ಸಾನಿಟೈಸರ್ ಬಳಕೆ, ಲಾಕ್ ಡೌನ್ ನಿಯಮಗಳ ಪಾಲನೆಯ ಮೇಲ್ವಿಚಾರಣೆ ಮಾಡಬೇಕು. ಹೋಂ ಐಸೊಲೇಷನ್ ಹಾಗೂ ಹೋಂ ಕ್ವಾರಂಟೈನ್‌ನಲ್ಲಿರುವ ವ್ಯಕ್ತಿಗಳ ಮನೆಗಳಿಗೆ ಪ್ರತಿದಿನ ಭೇಟಿನೀಡಿ ಪರಿಶೀಲಿಸಬೇಕು ಎಂದು ಸೂಚನೆ ನೀಡಿದರು.

ಐಸೊಲೇಷನ್ ಹಾಗೂ ಕ್ವಾರಂಟೈನ್ ನಿಯಮಗಳನ್ನು ಪಾಲಿಸುತ್ತಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು, ಕ್ವಾರಂಟೈನ್‌ನಲ್ಲಿ ಇರುವವರ ಪ್ರತಿದಿನದ ಆರೋಗ್ಯ ಸ್ಥಿತಿಯ ವರದಿಯನ್ನು ಕೋವಿಡ್ ನೋಡೆಲ್ ಅಧಿಕಾರಿಗಳ ಮೂಲಕ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿಗಳಿಗೆ ಸಲ್ಲಿಸಬೇಕು. ರೋಗಿಯನ್ನು ಆಸ್ಪತ್ರೆಗೆ ಸ್ಥಳಾಂತರಿಸುವ ಅಗತ್ಯವಿದ್ದಲ್ಲಿ ಕೂಡಲೇ ಕ್ರಮವಹಿಸಬೇಕು ಎಂದು ನಿರ್ದೇಶನ ನೀಡಿದರು.

ಕಾರ್ಯಪಡೆಗಳ ಮೇಲ್ವಿಚಾರಣೆಗೆ ಗ್ರಾಮ ಪಂಚಾಯಿತಿವಾರು ಕೋವಿಡ್ ನೋಡೆಲ್ ಅಧಿಕಾರಿಗಳನ್ನು ನೇಮಿಸಲಾಗಿದ್ದು, ನೋಡಲ್ ಅಧಿಕಾರಿಗಳು ಪ್ರತಿದಿನ ಕಾರ್ಯನಿರ್ವಾಹಕ ಅಧಿಕಾರಿಗೆ ವರದಿ ಸಲ್ಲಿಸಬೇಕು. ತಾಲ್ಲೂಕುವಾರು ಮೇಲ್ವಿಚಾರಣೆಯನ್ನು ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿಗಳು ನಿರ್ವಹಿಸಬೇಕು. ಪ್ರತಿ ದಿನ ಮಧ್ಯಾಹ್ನ ನೋಡೆಲ್‌ ಅಧಿಕಾರಿಗಳು ಸಲ್ಲಿಸಿದ ಗ್ರಾಮ ಪಂಚಾಯಿತಿವಾರು ವರದಿಯಂತೆ ಪ್ರಕರಣವಾರು ಕ್ರಮಕೈಗೊಳ್ಳಬೇಕು. ಕ್ರೋಢೀಕೃತ ವರದಿಯನ್ನು ಜಿಲ್ಲಾ ಪಂಚಾಯಿತಿಗೆ ಪ್ರತಿ ದಿನ ಸಂಜೆ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಕೋವಿಡ್ ಆಸ್ಪತ್ರೆ, ಆಂಬುಲೆನ್ಸ್ ಮಾಹಿತಿ ಸಾರ್ವಜನಿಕರಿಗೆ ಸಿಗುವಂತೆ ಗ್ರಾಮ ಮಟ್ಟದಲ್ಲಿ ಸಹಾಯವಾಣಿ ಹಾಗೂ ಸಹಾಯ ಕೇಂದ್ರಗಳನ್ನು ಆರಂಭಿಸಿ. ಮಾಹಿತಿ, ಶಿಕ್ಷಣ, ಸಂವಹನ ಯೋಜನೆಯನ್ನು ಸಂಘ ಸಂಸ್ಥೆಗಳು, ಎನ್‌ಜಿಒಗಳ ಸಹಕಾರದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಎಂದು ಸೂಚಿಸಿದರು.

ರೋಟರಿ ಕ್ಲಬ್, ರೆಡ್ ಕ್ರಾಸ್, ನಮ್ಮ ಭೂಮಿ, ಭಾರತೀಯ ವಿಕಾಸ ಟ್ರಸ್ಟ್, ಸ್ಕೌಟ್ಸ್‌ ಹಾಗೂ ಗೈಡ್ಸ್, ನೆಹರೂ ಯುವಕೇಂದ್ರ ನೆರವಿಗೆ ಆಸಕ್ತಿ ತೋರಿವೆ. ಸಂಘ ಸಂಸ್ಥೆಗಳು, ಸ್ವ ಸ್ವಹಾಯ ಸಂಘಗಳು ಆಯಾ ಗ್ರಾಮ ಪಂಚಾಯಿತಿ ಅಥವಾ ತಾಲ್ಲೂಕು ಕಾರ್ಯ ನಿರ್ವಾಹಕ ಅಧಿಕಾರಿಯನ್ನು ಸಂಪರ್ಕಿಸಿ, ಕೋವಿಡ್ ಕಾರ್ಯಪಡೆಗಳಿಗೆ ಅಗತ್ಯ ಸಹಕಾರ ನೀಡಬೇಕು ಎಂದು ಸಿಇಒ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT