ಶುಕ್ರವಾರ, ಆಗಸ್ಟ್ 12, 2022
21 °C
ಸೆ.15ರಂದು ಕೋಲಾರದಲ್ಲಿ ಚಾಲನೆ; ಮೂರು ಹಂತಗಳಲ್ಲಿ ಸೈಕಲ್ ಯಾತ್ರೆ

ಸ್ವಚ್ಛ ರಾಜಕಾರಣಕ್ಕಾಗಿ ‘ಚಲಿಸು ಕರ್ನಾಟಕ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಜನರಿಗೆ ಸ್ವಚ್ಛ, ಪ್ರಾಮಾಣಿಕ ಹಾಗೂ ಜನಪರ ರಾಜಕಾರಣದ ಅವಶ್ಯಕತೆಯ ಬಗ್ಗೆ ತಿಳಿಸಲು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ರಾಜ್ಯದಾದ್ಯಂತ ‘ಚಲಿಸು ಕರ್ನಾಟಕ’ ಸೈಕಲ್ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ರಾಜ್ಯ ಉಪಾಧ್ಯಕ್ಷ ಅಮೃತ್ ಶೆಣೈ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2,700 ಕಿ.ಮೀ ಸೈಕಲ್‌ ಯಾತ್ರೆಯು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರವಿಕೃಷ್ಣಾರೆಡ್ಡಿ ಅವರ ನೇತೃತ್ವದಲ್ಲಿ ಮೂರು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತದ ಯಾತ್ರೆ ಸೆ.15ರಂದು ಕೋಲಾರದಲ್ಲಿ ಆರಂಭವಾಗಿ ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ, ಮಂಡ್ಯ, ಚಾಮರಾಜನಗರ, ಮೈಸೂರು, ಕೊಡಗು, ಹಾಸನ, ಚಿತ್ರದುರ್ಗ ಮಾರ್ಗವಾಗಿ ತುಮಕೂರಿನ ಶಿರಾದಲ್ಲಿ ಸಮಾಪನವಾಗಲಿದೆ.

ಎರಡನೇ ಹಂತದ ಯಾತ್ರೆ ಅ.5ರಿಂದ ಉತ್ತರ ಹಾಗೂ ಕಲ್ಯಾಣ ಕರ್ನಾಟಕ ಭಾಗಗಳಲ್ಲಿ ನಡೆಯಲಿದೆ. ಮೂರನೇ ಹಂತದ ಯಾತ್ರೆ ನ.23ರಿಂದ ಉತ್ತರ ಕರ್ನಾಟಕ, ಮಲೆನಾಡು ಹಾಗೂ ಕರಾವಳಿಯಲ್ಲಿ ನಡೆಯಲಿದೆ. ಯಾತ್ರೆಯಲ್ಲಿ ಭಾಗವಹಿಸಲು ಇಚ್ಛಿಸುವವರು http://www.krsparty.org/registration/cycle.php ವೆಬ್‌ಸೈಟ್‌ನಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು ಎಂದರು.

ಜಿಲ್ಲೆಯಲ್ಲಿ ಶವ ಅದಲು ಬದಲು ಪ್ರಕರಣ, ಕೋವಿಡ್‌ ಪರೀಕ್ಷಾ ವರದಿ ವ್ಯತ್ಯಾಸ, ಐಸಿಯು ಬೆಡ್‌, ವೆಂಟಿಲೇಟರ್ ಸಮಸ್ಯೆಗಳು ಹೆಚ್ಚಾಗಿವೆ. ಕೋವಿಡ್‌ ಹೊರತುಪಡಿಸಿದ ಇತರೆ ಗಂಭೀರ ಕಾಯಿಲೆಗಳಿಗೆ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ಸಿಗದೆ ಸಾರ್ವಜನಿಕರು ಒದ್ದಾಡುತ್ತಿದ್ದಾರೆ ಎಂದು ಅಮೃತ್ ಶೆಣೈ ಅಸಮಾಧಾನ ವ್ಯಕ್ತಪಡಿಸಿದರು.

ಮಾರ್ಚ್‌ನಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡರೂ ಇದುವರೆಗೂ ಐಸಿಯು ಬೆಡ್‌ಗಳ ವ್ಯವಸ್ಥೆ ಮಾಡಿಲ್ಲ ಎಂದರೆ ತಲೆತಗ್ಗಿಸುವ ವಿಚಾರ. ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಇದ್ದರೆ, ಬೇರೆ ಜಿಲ್ಲೆಗಳಿಂದ ಸೇವೆ ಪಡೆಯಬೇಕು. ಸಮರೋಪಾದಿಯಲ್ಲಿ ತಾತ್ಕಾಲಿಕ ಆಸ್ಪತ್ರೆಗಳನ್ನು ನಿರ್ಮಾಣ ಮಾಡಬೇಕು. ವೆಂಟಿಲೇಟರ್‌ ಹಾಗೂ ಐಸಿಯು ಬೆಡ್‌ಗಳಿಲ್ಲ ಎಂಬ ಕಾರಣಕ್ಕೆ ರೋಗಿಗಳಿಗೆ ಚಿಕಿತ್ಸೆ ನಿರಾಕರಿಸಿದರೆ ಕೆಆರ್‌ಎಸ್‌ ಪಕ್ಷದಿಂದ ತೀವ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಶೆಣೈ ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಶಹೀದ್ ಅಲಿ, ಪ್ರಸಾದ್ ಕರ್ಕಡ, ಕಿರಣ್ ಕುಮಾರ್, ಕಿರಣ್ ವಿನುತಾ, ಇಕ್ಬಾಲ್, ವಿನೋದ್ ಬಂಗೇರ, ಪ್ರೀತೇಶ್, ರಾಮ್ ದಾಸ್ ಪೈ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.