ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪವಿತ್ರ ವಸ್ತ್ರ ಅಭಿಯಾನ ಸೆ.13ರಿಂದ 16ರವರೆಗೆ

ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘದಿಂದ ಆಯೋಜನೆ
Last Updated 11 ಸೆಪ್ಟೆಂಬರ್ 2021, 13:55 IST
ಅಕ್ಷರ ಗಾತ್ರ

ಉಡುಪಿ: ನೈಸರ್ಗಿಕ ಬಣ್ಣ ಹಾಗೂ ಕೈಮಗ್ಗದಿಂದ ತಯಾರಾಗಿರುವ ಚರಕ ಸಂಸ್ಥೆಯ ಉತ್ಪನ್ನಗಳ ಮಾರಾಟ ಹಾಗೂ ಪ್ರದರ್ಶನವಾದ ‘ಪವಿತ್ರ ವಸ್ತ್ರ ಅಭಿಯಾನ’ ಸೆ.13ರಿಂದ 16ರವರೆಗೆ ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಹಾಗೂ ಕೃಷ್ಣಮಠದ ರಾಜಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘದ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕಿ ಪದ್ಮಶ್ರೀ ಮನವಿ ಮಾಡಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 13ರಂದು ಬೆಳಿಗ್ಗೆ 11ಕ್ಕೆ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಅತಿಥಿಗಳು ಕೈಮಗ್ಗದ ಉತ್ಪನ್ನ ಖರೀದಿಸುವ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಚರಕ ಸಂಸ್ಥೆಯ ಸಿದ್ಧ ಉಡುಪಿಗಳು, ಅಖಿಲ ಭಾರತ ಕೈಮಗ್ಗ ಸಂಸ್ಥೆಯ ಉತ್ಪನ್ನಗಳ ಜತೆಗೆ ಇತರೆ ಕೈಮಗ್ಗ ಸಂಸ್ಥೆಗಳ ಉತ್ಪನ್ನಗಳು ಹಾಗೂ ಸಾವಯವ ಆಹಾರ ಪದಾರ್ಥಗಳು ಮೇಳದಲ್ಲಿ ಮಾರಾಟಕ್ಕೆ ಲಭ್ಯವಿದೆ ಎಂದರು.

ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘಕ್ಕೆ ಕಳೆದ ವರ್ಷ ‘ಪವಿತ್ರ ವಸ್ತ್ರ’ ಯೋಜನೆಯಡಿ ಸರ್ಕಾರದಿಂದ ಅನುದಾನ ಮಂಜೂರಾಗಿತ್ತು. ಆದರೆ, ಅನುದಾನ ಪಡೆಯಲು ವಿಧಿಸಲಾಗಿದ್ದ ಕಠಿಣ ಷರತ್ತುಗಳು ಹಾಗೂ ನಿಯಮಗಳಿಂದ ಬೇಸತ್ತ ಚರಕ ಸಂಸ್ಥೆಯು ಸರ್ಕಾರದ ಅನುದಾನವನ್ನು ನಿರಾಕರಿಸಿ, ಸರ್ಕಾರದ ಬದಲಾಗಿ ಗ್ರಾಹಕರ ಬಳಿಗೆ ತೆರಳಲು ನಿರ್ಧರಿಸಿತು. ಸಂಕಷ್ಟಕ್ಕೆ ಸಿಲುಕಿರುವ ಸಾವಿರಾರು ನೇಕಾರರಿಗೆ ನೆರವಾಗಲು ಪವಿತ್ರ ವಸ್ತ್ರ ಯೋಜನೆಯನ್ನು ಪವಿತ್ರ ವಸ್ತ್ರ ಅಭಿಯಾನವನ್ನಾಗಿ ಬದಲಿಸಿ ರಾಜ್ಯದಾದ್ಯಂತ ಮೇಳಗಳನ್ನು ಆಯೋಜಿಸುತ್ತಿದೆ ಎಂದು ವಿವರ ನೀಡಿದರು.

ಸೆ.6ರಂದು ಶಿವಮೊಗ್ಗದಲ್ಲಿ ಆರಂಭವಾದ ಪವಿತ್ರ ವಸ್ತ್ರ ಅಭಿಯಾನಕ್ಕೆ ಗ್ರಾಹಕರಿಂದ ಉತ್ತಮ ಸ್ಪಂದನ ವ್ಯಕ್ತವಾಗಿದೆ. ಪರಿಸರ ಸ್ನೇಹಿ ಕೈಉತ್ಪನ್ನಗಳಿಗೆ ನೆರವು ನೀಡುವ ಸಂಸ್ಥೆಗಳ ಸಹಯೋಗದಲ್ಲಿ ಮೇಳ ನಡೆಯುತ್ತಿದೆ.

ಉಪನ್ಯಾಸಕ ಮಂಜುನಾಥ್ ಕಾಮತ್ ಮಾತನಾಡಿ, ಹಿಂದೆ ಎಂಜಿಎಂ ಕಾಲೇಜಿನಲ್ಲಿ ನಡೆದ ಪುಸ್ತಕೋತ್ಸವ ಹಾಗೂ ಕೃಷಿ ಸಮ್ಮಿಲನ ಕಾರ್ಯಕ್ರಮಕ್ಕೆ ನಿರೀಕ್ಷೆಗೂ ಮೀರಿ ಬೆಂಬಲ ವ್ಯಕ್ತವಾಗಿತ್ತು. ಈಗ ಪವಿತ್ರ ವಸ್ತ್ರ ಅಭಿಯಾನ ನಡೆಯುತ್ತಿದ್ದು, ಸಾರ್ವಜನಿಕರು ಬೆಂಬಲವಾಗಿ ನಿಲ್ಲುವ ಮೂಲಕ ನೇಕಾರರ ನೆರವಿಗೆ ನಿಲ್ಲಬೇಕು. ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ಮಾರಾಟ ಮೇಳ ನಡೆಯಲಿದೆ ಎಂದರು.

ನೈಸರ್ಗಿಕ ಬಣ್ಣ, ಹತ್ತಿಯನ್ನು ಬಳಸಿ ಕೈಮಗ್ಗದ ಬಟ್ಟೆಗಳನ್ನು ತಯಾರಿಸಿ ‘ದೇಸಿ’ ಹೆಸರಿನಲ್ಲಿ ರಾಜ್ಯದಾದ್ಯಂತ 14 ಮಳಿಗೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ. 5 ಜಿಲ್ಲೆಯ 800 ಸದಸ್ಯರು ಸಂಸ್ಥೆಯ ಜತೆ ಕೆಲಸ ಮಾಡುತ್ತಿದ್ದಾರೆ ಎಂದರು.

ಸಂಸ್ಥೆಯ ಅಧ್ಯಕ್ಷೆ ಗೌರಮ್ಮ, ಸಿಬ್ಬಂದಿ ಚೈತ್ರಾ ಸುದ್ದಿಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT