ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆನ್‌ಲೈನ್ ಟ್ರೇಡಿಂಗ್ ಹೆಸರಲ್ಲಿ ಮೋಸ: ನಾಲ್ವರ ಸೆರೆ

₹13 ಲಕ್ಷ ನಗದು, ಮೊಬೈಲ್‌ ಪೋನ್‌ಗಳ ವಶ
Published 23 ಆಗಸ್ಟ್ 2024, 6:41 IST
Last Updated 23 ಆಗಸ್ಟ್ 2024, 6:41 IST
ಅಕ್ಷರ ಗಾತ್ರ

ಉಡುಪಿ: ಆನ್‌ಲೈನ್‌ ಟ್ರೇಡಿಂಗ್‌ ಹೆಸರಿನಲ್ಲಿ ₹33.10 ಲಕ್ಷ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಪುತ್ತೂರಿನ ಕುರಿಯ ಗ್ರಾಮದ ಮಹಮ್ಮದ್‌ ಮುಸ್ತಾಫ ಪಿ. (36), ಕಾಸರಗೋಡಿನ ಕುಂಬಳೆ ಸಮೀಪದ ಬಂಬ್ರಾಣ ಗ್ರಾಮದ ಖಾಲಿದ್ ಬಿ. (39), ಕಾಸರಗೋಡಿನ ನೀರ್ಚಾಲ್‌ ಕನ್ಯಾಪಾಡಿಯ ಮೊಹಮ್ಮದ್‌ ಸಫ್ವಾನ್‌ ಕೆ.ಎ. (22), ಮಂಗಳೂರಿನ ಪ್ರಗತಿ ಬಿಜೈನ ಸತೀಶ್‌ ಶೇಟ್‌(52) ಬಂಧಿತ ಆರೋಪಿಗಳು. ಉಡುಪಿಯ ಕಿದಿಯೂರಿನ ಉಪೇಂದ್ರ ಭಟ್‌ ಎಂಬುವವರು ನೀಡಿದ ದೂರಿನ ಆಧಾರದಲ್ಲಿ ಇವರನ್ನು ಬಂಧಿಸಲಾಗಿದೆ.

ಉಪೇಂದ್ರ ಭಟ್‌ ಅವರಿಗೆ ಅಪರಿಚಿತ ವ್ಯಕ್ತಿಗಳು ಕರೆ ಮಾಡಿ, ವಾಟ್ಸ್‌ಆ್ಯಪ್‌ನಲ್ಲಿ ಅವರನ್ನು ಮೋತಿಲಾಲ್‌ ಒಸ್ವಾಲ್‌ ಪ್ರೈವೇಟ್ ವೆಲ್ತ್ ಮ್ಯಾನೇಜ್‌ಮೆಂಟ್ ಗ್ರೂಪ್‌ಗೆ ಸೇರಿಸಿದ್ದರು. ಉಪೇಂದ್ರ ಅವರಿಗೆ ಮೋತಿಲಾಲ್‌ ಒಸ್ವಾಲ್‌ ಪ್ರೈವೇಟ್ ವೆಲ್ತ್ ಮ್ಯಾನೇಜ್‌ಮೆಂಟ್ ಗ್ರೂಪ್‌ನ ಬ್ಯಾಂಕ್‌ ಖಾತೆಯ ನಂಬರನ್ನೂ ನೀಡಿದ್ದರು.

ಬಳಿಕ ಟ್ರೇಡಿಂಗ್ ಮೂಲಕ ಹೆಚ್ಚಿನ ಲಾಭ ಪಡೆಯಬಹುದು ಎಂದು ಆಮಿಷ ತೋರಿಸಿ, ಉಪೇಂದ್ರ ಅವರಿಂದ ₹33.10 ಲಕ್ಷ ಹಣವನ್ನು ಪಡೆದು ವಂಚಿಸಿದ್ದರು. ಈ ಕುರಿತು ಉಡುಪಿಯ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆಗೆ ಸೆನ್‌ ಠಾಣೆಯ ಪೊಲೀಸ್‌ ನಿರೀಕ್ಷಕ ರಾಮಚಂದ್ರ ನಾಯಕ್‌ ನೇತೃತ್ವದಲ್ಲಿ ಎಎಸ್‌ಐ ರಾಜೇಶ್‌, ಸಿಬ್ಬಂದಿ ಎಚ್‌.ಸಿ. ಪ್ರವೀಣ ಕುಮಾರ್‌, ಅರುಣ ಕುಮಾರ್‌, ವೆಂಕಟೇಶ್‌, ಯತೀನ್‌ ಕುಮಾರ್‌, ರಾಘವೇಂದ್ರ, ಪ್ರಶಾಂತ್‌, ಪ್ರಸನ್ನ ಸಿ. ಸಾಲ್ಯಾನ್‌ ಅವರನ್ನು ಒಳಗೊಂಡ ವಿಶೇಷ ತಂಡವನ್ನು ರಚಿಸಲಾಗಿತ್ತು.

ಈ ತಂಡವು ಆರೋಪಿಗಳನ್ನು ಬಂಧಿಸಿ, 5 ಮೊಬೈಲ್‌ ಫೋನ್‌ಗಳನ್ನು ಹಾಗೂ ₹13 ಲಕ್ಷ ನಗದನ್ನು ವಶಪಡಿಸಿಕೊಂಡಿದೆ. ಈ ಪ್ರಕರಣದ ಪ್ರಮುಖ ಸೂತ್ರಧಾರಿಗಳು ತಲೆಮರೆಸಿಕೊಂಡಿದ್ದು ಅವರ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT