ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜನರಿಗೆ ಬದುಕು ಕೊಟ್ಟದ್ದು ಕಾಂಗ್ರೆಸ್‌: ವೀರಪ್ಪ ಮೊಯಿಲಿ

Published 23 ಏಪ್ರಿಲ್ 2024, 13:09 IST
Last Updated 23 ಏಪ್ರಿಲ್ 2024, 13:09 IST
ಅಕ್ಷರ ಗಾತ್ರ

ಹೆಬ್ರಿ: ‘ಕಾಂಗ್ರೆಸ್‌ ಎಲ್ಲ ವರ್ಗಗಳಿಗೂ ಸಾಮಾಜಿಕ ನ್ಯಾಯ ಕಲ್ಪಿಸುವುದರ ಜತೆಗೆ ದೇಶದ ಅಭಿವೃದ್ಧಿಯ ಮೂಲಕ ಜನರಿಗೆ ಬದುಕು ಕಟ್ಟಿಕೊಟ್ಟಿದೆ’ ಎಂದು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಹೇಳಿದರು.

ಹೆಬ್ರಿಯ ಚೈತನ್ಯ ಯುವ ವೃಂದದ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಿಂದೆ ನಾನು ಪ್ರತಿನಿಧಿಸಿದ್ದ ಕ್ಷೇತ್ರ ವ್ಯಾಪ್ತಿಯ ಹೆಬ್ರಿಯು ಹಂತಹಂತವಾಗಿ ಅಭಿವೃದ್ಧಿಯಾಗಿದೆ. ಹೆಬ್ರಿ ಸ್ವತಂತ್ರ ತಾಲ್ಲೂಕಾಗಲು ಶ್ರಮಿಸಿದ್ದೇನೆ. ಕ್ಷೇತ್ರಕ್ಕೆ ₹350 ಕೋಟಿ ಅನುದಾನ ತಂದು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮಂಜೂರು ಮಾಡಿಸಿಕೊಂಡಿದ್ದು 10 ವರ್ಷವಾದರೂ ಕಾಮಗಾರಿ ಪೂರ್ಣಗೊಳಿಸಲು ಬಿಜೆಪಿ ನಾಯಕರಿಗೆ ಸಾಧ್ಯವಾಗಿಲ್ಲ’ ಎಂದರು.

ಶೈಕ್ಷಣಿಕ ಕ್ರಾಂತಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗ್ರಾಮ ಮಟ್ಟದಲ್ಲಿ ಹತ್ತಾರು ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ, 10 ಕಿ.ಮೀಗೆ ಒಂದು ಪದವಿಪೂರ್ವ ಕಾಲೇಜು, 20 ಕಿ.ಮೀಗೆ ಒಂದು ಪದವಿ ಕಾಲೇಜು ಮಾಡಿದ್ದೇವೆ. ಮಂಗಳೂರಿನಲ್ಲಿ ವಿವಿ, ಮಣಿಪಾಲ, ನಿಟ್ಟೆ, ಮೂಡುಬಿದರೆಯಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳು ಸ್ಥಾಪನೆಯಾಗಿವೆ. ಜಿಲ್ಲೆಯ ಸಮಗ್ರ ಬೆಳವಣಿಗೆಗೆ ಕಾಂಗ್ರೆಸ್‌ ಕಾರಣ ಎಂದರು.

ಉದ್ಯೋಗದ ಮೂಲಕ ಬದುಕು ಕೊಟ್ಟ ಕಾಂಗ್ರೆಸ್‌: ಶೈಕ್ಷಣಿಯ ಕ್ರಾಂತಿಯ ಜೊತೆಗೆ ಎಂಆರ್‌ಪಿಎಲ್‌, ಥರ್ಮಲ್‌ ಪ್ಲಾಂಟ್‌ ಸಹಿತ ಹಲವಾರು ಕೈಗಾರಿಕೆಗಳು ಕರಾವಳಿಯಲ್ಲಿ ಆರಂಭವಾಗಲು ಅವಕಾಶ ನೀಡಿ ಸಾವಿರಾರು ಮಂದಿ ಉದ್ಯೋಗ ಪಡೆದು ಬದುಕು ಕಟ್ಟಿಕೊಂಡಿದ್ದಾರೆ. ಬಿಜೆಪಿ ಮತ್ತು ಮೋದಿ ಈ ಭಾಗದ ಜನರ ಬದುಕಿಗೆ ಏನು ಮಾಡಿದ್ದಾರೆ ಎಂದು ಮೊಯಿಲಿ ಪ್ರಶ್ನಿಸಿದರು.

ಮೀನುಗಾರ ಸಮುದಾಯದವರಿಗೆ ಶಕ್ತಿ: ಬಂದರು ಸ್ಥಾಪನೆ, ಬಂದರು ವಿಸ್ತರಣೆಯ ಮೂಲಕ ಮೀನುಗಾರಿಕಾ ಕ್ಷೇತ್ರಕ್ಕೆ ಶಕ್ತಿ ತುಂಬುವ ಕೆಲಸವನ್ನು ಕಾಂಗ್ರೆಸ್‌ ಮಾಡಿದೆ. ಪರಿಶಿಷ್ಟ ವರ್ಗದ ಮೀಸಲಾತಿಯನ್ನು ಮೀನುಗಾರ ಸಮುದಾಯಕ್ಕೆ ನೀಡಿ, ಆರ್ಥಿಕ ಶಕ್ತಿ ನೀಡಲು ಅಂದಿನ ಮನಮೋಹನ್‌ ಸಿಂಗ್‌ ನೇತೃತ್ವದ ಸರ್ಕಾರದಲ್ಲಿ ಯೋಜನೆ ರೂಪಿಸಲಾಗಿತ್ತು. ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪ್ರಸ್ತಾವ ಕೈಬಿಡಲಾಯಿತು ಎಂದು ಟೀಕಿಸಿದರು.

ನೀಟ್‌ ಜಾರಿ; ಕರ್ನಾಟಕಕ್ಕೆ ಅನ್ಯಾಯ: ಸಿಇಟಿ ಪದ್ಧತಿ ಜಾರಿ ಮಾಡಿದ್ದರಿಂದ ಎಂಜಿನಿಯರ್‌, ಡಾಕ್ಟರ್‌ಗಳಾಗಬೇಕು ಎಂಬ ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಕನಸು ನನಸಾಗಿದೆ. ವೈದ್ಯರಾಗಿ ದೇಶ ವಿದೇಶದಲ್ಲಿ ಸೇವೆ ಮಾಡುತ್ತಿದ್ದಾರೆ. ಬಿಜೆಪಿಯವರು ನೀಟ್‌ ಪದ್ಧತಿ ಜಾರಿ ಮಾಡಿದ್ದರಿಂದ ಬಡವರಿಗೆ ಅನ್ಯಾಯವಾಗಿದೆ ಎಂದು ಮೊಯಿಲಿ ಬೇಸರ ವ್ಯಕ್ತಪಡಿಸಿದರು.

ಶ್ರೀಮಂತರಿಗೆ ಮಣೆ: ಉಳುವವನೇ ಹೊಲದೊಡೆಯ ಕಾನೂನಿನಿಂದ ಶ್ರೀಮಂತರ ಭೂಮಿಯನ್ನು ಬಡವರಿಗೆ ನೀಡಿದ್ದು ಕಾಂಗ್ರೆಸ್‌. ಅಕ್ರಮ ಸಕ್ರಮ ಯೋಜನೆಯಡಿ 45 ಲಕ್ಷಕ್ಕೂ ಅಧಿಕ ಕುಟುಂಬಗಳಿಗೆ ಜಮೀನು ನೀಡಿದ್ದೇವೆ. ಬಿಜೆಪಿ ಶ್ರೀಮಂತರನ್ನು ಮತ್ತಷ್ಟು ಶ್ರೀಮಂತರನ್ನಾಗಿಸುತ್ತಿದ್ದು ಬಡವರು ಬೀದಿ ಪಾಲಾಗುತ್ತಿದ್ದಾರೆ.

ಕೇಂದ್ರದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೆ ಹೆಚ್ಚುವರಿ ಗ್ಯಾರಂಟಿಗಳು ಜನರಿಗೆ ಸಿಗಲಿವೆ. ರಾಜ್ಯದಲ್ಲಿ 25 ಸೀಟುಗಳನ್ನು ಕಾಂಗ್ರೆಸ್‌ ಗೆಲ್ಲುವ ವಿಶ್ವಾಸವಿದೆ. ಉತ್ತಮ ಬದುಕಿಗಾಗಿ ಮತದಾರರು ಕಾಂಗ್ರೆಸ್‌ಗೆ ಮತ ನೀಡಿ ಎಂದು ಮನವಿ ಮಾಡಿದರು.

ಅಡಿಕೆ ಬೆಳೆಗಾರರಿಗೆ ಅನ್ಯಾಯ: ಭೂತಾನ್‌ ಮತ್ತು ಬರ್ಮಾ ದೇಶದಿಂದ ಗುಜರಾತ್ ಮೂಲದ ವ್ಯಕ್ತಿಯ ಏಜೆನ್ಸಿಗೆ ಅಡಿಕೆ ಆಮದು ಮಾಡಲು ಮೋದಿ ಅವಕಾಶ ನೀಡಿದ್ದರಿಂದ ದೇಶದಲ್ಲಿ ಅಡಿಕೆ ಬೆಲೆ ಕುಸಿಯಿತು. ಬಿಜೆಪಿಗೆ ರೈತರು, ಜನಸಾಮಾನ್ಯರ ಕಷ್ಟ ಗೊತ್ತಿಲ್ಲ ಎಂದು ಟೀಕಿಸಿದರು.

ಹೆಬ್ರಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕಬ್ಬಿನಾಲೆ ಚಂದ್ರಶೇಖರ ಬಾಯರಿ, ಕೆಪಿಸಿಸಿ ಸದಸ್ಯರಾದ ನೀರೆ ಕೃಷ್ಣ ಶೆಟ್ಟಿ, ಸುರೇಂದ್ರ ಶೆಟ್ಟಿ ಕಾರ್ಕಳ, ಕಾಂಗ್ರೆಸ್‌ ನಾಯಕರಾದ ಮುದ್ರಾಡಿ ಮಂಜುನಾಥ ಪೂಜಾರಿ, ಹೆಬ್ರಿ ಪ್ರವೀಣ್‌ ಬಲ್ಲಾಳ್‌, ಡಿ.ಆರ್.ರಾಜು ಕಾರ್ಕಳ, ಕಿರಣ್‌ ಹೆಗ್ಡೆ ಕಾರ್ಕಳ, ನವೀನ್‌ ಕೆ ಅಡ್ಯಂತಾಯ, ಶೀನ ಪೂಜಾರಿ ಹೆಬ್ರಿ, ಭಾಸ್ಕರ ಮೊಯಿಲಿ ಮಂಗಳೂರು, ಪ್ರಭಾಕರ ಬಂಗೇರ ಕಾರ್ಕಳ, ಸೀತಾನದಿ ರಮೇಶ ಹೆಗ್ಡೆ ಇದ್ದರು.

ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುತ್ತೇನೆ ಎಂದಿದ್ದ ದೇವೇಗೌಡರು ಇದೀಗ ಮೋದಿ ಜೊತೆಗೆ ಸೇರಿಕೊಂಡಿದ್ದು ಏನು ಮಾತನಾಡುತ್ತಿದ್ದೇನೆ ಎಂದು ಅವರಿಗೆ ಅರಿವಿಲ್ಲದಂತಾಗಿದೆ.

–ವೀರಪ್ಪ ಮೊಯ್ಲಿ ಕಾಂಗ್ರೆಸ್ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT