ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂದಾಪುರ | ಮದುವೆ ಮಂಟಪದಲ್ಲಿ ಕೊರೊನಾ ಜಾಗೃತಿ

ವಿನೂತನ ಪ್ರಯತ್ನ
Last Updated 15 ಜೂನ್ 2020, 11:51 IST
ಅಕ್ಷರ ಗಾತ್ರ

ಬೈಂದೂರು: ಲಾಕ್‌ಡೌನ್ ನಿರ್ಬಂಧಗಳ ನಡುವೆ ಕುಂದಾಪುರ ತಾಲ್ಲೂಕಿನ ಸೇನಾಪುರ ಗ್ರಾಮದ ಒಳಬೈಲು ಎಂಬಲ್ಲಿ ಭಾನುವಾರ ನಡೆದ ಸರಳ ವಿವಾಹದ ಮಂಟಪ ಕೊರೊನಾ ಸೋಂಕು ವಿರುದ್ಧ ಜಾಗೃತಿ ಮೂಡಿಸುವ ವೇದಿಕೆಯಾಗಿಯೂ ಬಳಕೆಯಾಯಿತು. ಕಾಲದ ಅಗತ್ಯಕ್ಕೆ ವಿಶಿಷ್ಟವಾಗಿ ಸ್ಪಂದಿಸಿದ ಎರಡು ಕುಟುಂಬಗಳ ನಡೆ ಮೆಚ್ಚುಗೆಯನ್ನೂ ಗಳಿಸಿತು.

ಅದು ಒಳಬೈಲು ಶಾರದಾ-ಗೋಪಾಲ ದಂಪತಿಯ ಪುತ್ರ ರಾಜಗುರು ಪಡುಕೋಣೆ ಮತ್ತು ಮೂಡುಹಂಗಳೂರು ಅಂಕದಕಟ್ಟೆಯ ವಿನೋದಾ-ಉದಯ ಕುಮಾರ ಅವರ ಪುತ್ರಿ ಸಹನಾರಾಣಿ ಎಂಬುವರ ವಿವಾಹ ಸಮಾರಂಭ. ವಿವಾಹ ಸಮಾರಂಭಗಳಲ್ಲಿ ಅತಿಥಿಗಳನ್ನು ಹೂವು ನೀಡಿ, ಪನ್ನೀರು ಚಿಮುಕಿಸಿ ಬರಮಾಡಿಕೊಳ್ಳುವ ಸಂಪ್ರದಾಯವನ್ನು ತ್ಯಜಿಸಿ, ಅವರು ಮದುವೆ ಮನೆ ಪ್ರವೇಶಿಸುವ ಹಂತದಲ್ಲಿ ಥರ್ಮಲ್ ಸ್ಕ್ಯಾನಿಂಗ್ ಮೂಲಕ ಜ್ವರ ಪರೀಕ್ಷೆ ನಡೆಸಲಾಯಿತು. ಸ್ಯಾನಿಟೈಸರ್ ನೀಡಿ ಕೈಗಳನ್ನು ಸೋಂಕು ಮುಕ್ತಗೊಳಿಸಲಾಯಿತು. ಎಲ್ಲರಿಗೂ ಮುಖಗವಸು ಕೊಟ್ಟು ಅದನ್ನು ಕಡ್ಡಾಯವಾಗಿ ಧರಿಸುವಂತೆ. ಅಂತರ ಪಾಲಿಸಿ ಕುಳಿತುಕೊಳ್ಳುವಂತೆ ಮಾಡಲಾಯಿತು.

ವಿವಾಹದ ವಿಧಿಗಳು ಮುಗಿದ ಬಳಿಕ ಮಂಟಪದಲ್ಲಿ ವದೂವರರು ಮತ್ತು ಗಣ್ಯರು ಡಾ. ಹೇಮಂತ್‌ಕುಮಾರ್ ಸಾಸ್ತಾನ ಬರೆದಿರುವ ’ಕೊರೊನಾ ವಿರುದ್ಧ ಜಯಗಳಿಸಲು 20 ಸೂತ್ರಗಳು’ ಎನ್ನುವ ಕೈಪಿಡಿಯನ್ನು ಬಿಡುಗಡೆಗೊಳಿಸಿದರು. ಅದನ್ನು ಬಂದಿದ್ದ ಎಲ್ಲರಿಗೆ ವಿತರಿಸಿ, ಅದರ ಮುಖ್ಯಾಂಶಗಳತ್ತ ಗಮನ ಸೆಳೆಯಲಾಯಿತು. ನಾಡ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮತ್ತು ಕುಂದಾಪುರದ ಇಎಸ್‌ಐ ಆಸ್ಪತ್ರೆಗೆ ಪೆಡಲ್ ಸ್ಯಾನಿಟೈಸರ್ ಯಂತ್ರಗಳನ್ನು ಕೊಡುಗೆಯಾಗಿ ನೀಡಲಾಯಿತು.

ಗೋಪಾಲಕೃಷ್ಣ ವಿವಿಧೋದ್ದೇಶ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಮೇಶ ಗಾಣಿಗ ಕೊಲ್ಲೂರು, ಪಡುಕೋಣೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಾಜೀವ ಪಡುಕೋಣೆ, ಕರ್ಣಾಟಕ ಬ್ಯಾಂಕಿನ ನಿವೃತ್ತ ಮೆನೇಜರ್ ಫಿಲಿಪ್ ಡಿಸಿಲ್ವ, ನಾಡ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಚಿಕ್ಮರಿ, ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಎರಡು ಕುಟುಂಬಗಳ ವಿಶಿಷ್ಟ ಉಪಕ್ರಮದ ಬಗೆಗೆ ಮೆಚ್ಚುಗೆಯ ನುಡಿಗಳೊಂದಿಗೆ ನೂತನ ವಧುವರರನ್ನು ಹರಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT