ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿಯಲ್ಲಿ ರಾಜ್ಯದಲ್ಲೇ ಹೆಚ್ಚು ಕೋವಿಡ್‌ ಸೋಂಕಿತರು

ಕೃಷ್ಣನೂರಿಗೆ ‘ಮುಂಬೈ’ ಮಹಾ ಆಘಾತ: ಒಂದೇ ದಿನ 150 ಮಂದಿಗೆ ಸೋಂಕು
Last Updated 3 ಜೂನ್ 2020, 2:02 IST
ಅಕ್ಷರ ಗಾತ್ರ

ಉಡುಪಿ: ಮೇ 14ರವರೆಗೂ ಜಿಲ್ಲೆಯಲ್ಲಿ ಒಂದೂ ಕೋವಿಡ್‌–19 ಸಕ್ರಿಯ ಪ್ರಕರಣಗಳಿರಲಿಲ್ಲ. ಇದಾಗಿ, ಕೇವಲ 19 ದಿನ ಕಳೆಯುವಷ್ಟರಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಸೋಂಕಿತರು ಇರುವ ಜಿಲ್ಲೆಗಳಲ್ಲಿ ಉಡುಪಿ (410) ಮೊದಲ ಸ್ಥಾನಕ್ಕೇರಿದೆ. ಮಂಗಳವಾರ ಒಂದೇ ದಿನ ಜಿಲ್ಲೆಯಲ್ಲಿ 150 ಜನರಲ್ಲಿ ಸೋಂಕು ಪತ್ತೆಯಾಗಿದೆ. ದಿಢೀರ್ ಸೋಂಕಿನ ಪ್ರಮಾಣ ಹೆಚ್ಚಳಕ್ಕೆ ಕಾರಣ ಮಹಾರಾಷ್ಟ್ರ ಸಂಪರ್ಕ.

ಮಹಾ’ಆಘಾತ:

ಮಹಾರಾಷ್ಟ್ರದಲ್ಲಿ ಜಿಲ್ಲೆಯ 25 ಸಾವಿರಕ್ಕೂ ಹೆಚ್ಚು ಮಂದಿ ಬದುಕು ಕಟ್ಟಿಕೊಂಡಿದ್ದು, ಹೆಚ್ಚಿನವರು ಹೋಟೆಲ್‌ ಉದ್ಯಮದಲ್ಲಿ ದುಡಿಯುತ್ತಿದ್ದಾರೆ. ಲಾಕ್‌ಡೌನ್ ಬಳಿಕ ಉದ್ಯೋಗ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಇವರೆಲ್ಲ ತವರಿಗೆ ಮರಳಲು ಕಾದು ಕುಳಿತಿದ್ದರು. ಈ ಅವಧಿಯಲ್ಲೇ ಮುಂಬೈ ದೇಶದ ಕೊರೊನಾ ಹಾಟ್‌ಸ್ಪಾಟ್‌ ನಗರಗಳಲ್ಲಿ ಒಂದಾಗಿ ಗುರುತಿಸಿಕೊಂಡಿತ್ತು.

ಮೇ ಆರಂಭದಲ್ಲಿ ಕೇಂದ್ರ ಸರ್ಕಾರ ಲಾಕ್‌ಡೌನ್ ನಿಯಮ ಸಡಿಲಗೊಳಿಸಿ, ಹೊರ ರಾಜ್ಯಗಳಲ್ಲಿ ಸಿಲುಕಿದವರು ತವರು ರಾಜ್ಯಗಳಿಗೆ‌ ತೆರಳಲು ಅನುಮತಿ ನೀಡುತ್ತಿದ್ದಂತೆ, ಮಹಾರಾಷ್ಟ್ರವೊಂದರಿಂದಲೇ ಉಡುಪಿಗೆ 7 ಸಾವಿರಕ್ಕೂ ಹೆಚ್ಚು ಜನ ವಾಪಾಸಾದರು. ವಿದೇಶಗಳಿಂದಲೂ ನೂರಾರು ಮಂದಿ ಬಂದರು. ಹೀಗೆ ಬಂದವರನ್ನು ಜಿಲ್ಲಾಡಳಿತ ಸರ್ಕಾರಿ ಸಾಂಸ್ಥಿಕ ಹಾಗೂ ಹೋಟೆಲ್‌ ಕ್ವಾರಂಟೈನ್‌ನಲ್ಲಿಟ್ಟಿತ್ತು.‌‌

ಇಲ್ಲಿಯವರೆಗೂ ಸಮಸ್ಯೆ ಎದುರಾಗಿರಲಿಲ್ಲ. ಮೇ 15ರಂದು ದುಬೈನಿಂದ ಬಂದಿದ್ದ ಐವರಲ್ಲಿ ಸೋಂಕು ಕಾಣಿಸಿಕೊಂಡಿತು. ಬಳಿಕ ‘ಮುಂಬೈ’ ಸರಣಿ ಸೋಂಕು ಆರಂಭವಾಯಿತು.

ಮೇ 19ರಂದು 6 ಪ್ರಕರಣ, 20ರಂದು 6, 21ರಂದು 27, 22ರಂದು 5, 24ರಂದು 23, 25ರಂದು 32, 26ರಂದು 3, 27ರಂದು 9, 28ರಂದು 29, 29ರಂದು 15, 30ರಂದು 13, 31ರಂದು 10, ಜೂನ್‌ 1ರಂದು 73 ಹಾಗೂ ಜೂನ್‌ 2ರಂದು 150 ಪಾಸಿಟಿವ್ ಪ್ರಕರಣಗಳು ಜಿಲ್ಲೆಯಲ್ಲಿ ದೃಡಪಟ್ಟಿವೆ. ಸದ್ಯ ಜಿಲ್ಲೆಯಲ್ಲಿ 410 ಸೋಂಕಿತರಿದ್ದು, ಶೇ 85ಕ್ಕೂ ಹೆಚ್ಚು ಮಂದಿ ಮುಂಬೈನಿಂದ ಬಂದವರು ಎಂಬುದು ಆಘಾತಕಾರಿ ವಿಚಾರ.

ಕ್ವಾರಂಟೈನ್‌ನಲ್ಲಿದ್ದವರು ಮನೆಗೆ:

ಕೇಂದ್ರ ಸರ್ಕಾರದ ಸೂಚನೆಯಂತೆ 7 ದಿನ ಸರ್ಕಾರಿ ಕ್ವಾರಂಟೈನ್‌ ಅವಧಿ ಮುಗಿಸಿದವರನ್ನು ಜಿಲ್ಲಾಡಳಿತ ಹೋಂ ಕ್ವಾರಂಟೈನ್‌ಗೆ ಕಳುಹಿಸಿದೆ. ಆರೋಗ್ಯ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಜಿಲ್ಲೆಯ 5,846 ವರದಿಗಳು ಪ್ರಯೋಗಾಲಯಗಳಿಂದ ಬರಬೇಕಿದೆ. ವರದಿ ಬರುವುದಕ್ಕೂ ಮುನ್ನವೇ ಸೋಂಕಿತರು ಮನೆಗೆ ತೆರಳಿರುವುದು ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಹೋಂ ಕ್ವಾರಂಟೈನ್‌ನಲ್ಲಿರುವ ಸೋಂಕಿತರನ್ನು ಈಗ ಮತ್ತೆ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದರೊಟ್ಟಿಗೆ ಸೋಂಕಿತರ ಪ್ರಾಥಮಿಕ ಸಂಪರ್ಕಿತರ ಸಂಖ್ಯೆಯೂ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು 1120 ಬೆಡ್‌ಗಳಿವೆ. ಸೋಮವಾರ ಒಂದೇ ದಿನ 2000 ವರದಿಗಳು ಬಂದಿದ್ದರಿಂದ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT