ಗುರುವಾರ , ಜೂನ್ 24, 2021
29 °C
ಮಾಧ್ಯಮ ಸಂವಾದದಲ್ಲಿ ವೈದ್ಯರ ಅಭಿಮತ

ಕೋವಿಡ್ ನಿಯಂತ್ರಣಕ್ಕೆ ಲಾಕ್‌ಡೌನ್ ಪರಿಣಾಮಕಾರಿ: ಡಾ.ಶಶಿಕಿರಣ್ ಉಮಾಕಾಂತ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಕೋವಿಡ್‌ ನಿಯಂತ್ರಣಕ್ಕೆ ಲಾಕ್‌ಡೌನ್ ಪರಿಣಾಮಕಾರಿ ಮಾರ್ಗ. ಆದರೆ, ಲಾಕ್‌ಡೌನ್‌ನಿಂದ ಬಡವರ ಹಾಗೂ ಕೂಲಿ ಕಾರ್ಮಿಕರ ಜೀವನಕ್ಕೆ ಪೆಟ್ಟು ಬೀಳಲಿದೆ. ಕೋವಿಡ್‌ ಹೆಚ್ಚುತ್ತಿರುವ ಕಾಲಘಟ್ಟದಲ್ಲಿ ಜನರ ಪ್ರಾಣ ಉಳಿಸುವುದು ಮುಖ್ಯವಾಗಲಿದೆ ಎಂದು ಉಡುಪಿಯ ಟಿಎಂಎ ಪೈ ಆಸ್ಪತ್ರೆಯ ಅಧೀಕ್ಷಕ ಡಾ.ಶಶಿಕಿರಣ್ ಉಮಾಕಾಂತ್ ಅಭಿಪ್ರಾಯಪಟ್ಟರು.

ನಗರದ ಐಎಂಎ ಭವನದಲ್ಲಿ ಗುರುವಾರ ನಡೆದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೊರೊನಾ ಮಾರಣಾಂತಿಕ ಸೋಂಕು ಅಲ್ಲ. ಸೋಂಕು ತಗುಲಿದವರ ಪೈಕಿ ಶೇ 95ರಷ್ಟು ಮಂದಿ ಗುಣಮುಖರಾಗುತ್ತಾರೆ. ಶೇ 5 ರಿಂದ 8ರಷ್ಟು ಜನರು ಮಾತ್ರ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಾರೆ. ಅವರಲ್ಲಿ ಶೇ 1ರಷ್ಟು ಮಂದಿಗೆ ಐಸಿಯುನಲ್ಲಿ ಚಿಕಿತ್ಸೆ ಬೇಕಾಗುತ್ತಿದೆ ಎಂದರು.

ವೈದ್ಯರ ಸಲಹೆ ಇಲ್ಲದೆ ಸೋಂಕಿತರು ಮೆಡಿಸನ್‌ ತೆಗೆದುಕೊಳ್ಳಬಾರದು. ಆ್ಯಂಟಿ ಬಯಾಟಿಕ್‌, ಸ್ಟಿರಾಯಿಡ್ ತೆಗೆದುಕೊಳ್ಳುವುದು ಅಪಾಯಕಾರಿ ಎಂದು ಎಚ್ಚರಿಕೆ ನೀಡಿದರು.

ಸೋಂಕಿನ ಲಕ್ಷಣಗಳು ಕಂಡುಬಂದ ಕೂಡಲೇ ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳಬೇಕು. ಸೋಂಕು ಖಚಿತವಾದರೆ ಚಿಕಿತ್ಸೆ ಪಡೆಯಬೇಕು. ಲಕ್ಷಣಗಳು ಕಾಣಿಸಿಕೊಂಡು ಐದು ದಿನಗಳ ನಂತರ ಅಸ್ವಸ್ಥತೆ ಕಂಡುಬಂದರೆ ನಿರ್ಲಕ್ಷ್ಯ ಮಾಡದೆ ಆಸ್ಪತ್ರೆ ಹೋಗುವುದು ಮುಖ್ಯ ಎಂದು ಹೇಳಿದರು.

ಸೋಂಕಿತರು ರಕ್ತದಲ್ಲಿರುವ ಆಮ್ಲಜನಕ ಪ್ರಮಾಣವನ್ನು ಆಕ್ಸಿಮೀಟರ್ ಮೂಲಕ ಪರಿಶೀಲಿಸಬಹುದು. ಆಮ್ಲಜನಕ ಪ್ರಮಾಣ 94 ಕ್ಕಿಂತ ಕಡಿಮೆ ಇದ್ದರೆ ವೈದ್ಯರನ್ನು ಸಂಪರ್ಕಿಸಬೇಕಾಗುತ್ತದೆ. ಆಸ್ಪತ್ರೆಗೆ ತೆರಳುವವರೆಗೂ ಕವುಚಿ ಮಲಗಿದರೆ ದೇಹದಲ್ಲಿ ಆಮ್ಲಜನಕ ಪ್ರಮಾಣವನ್ನು ಸ್ವಲ್ಪ ಮಟ್ಟಿಗೆ ಹೆಚ್ಚಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.

ಐಎಂಎ ಉಡುಪಿ ಕರಾವಳಿ ಅಧ್ಯಕ್ಷ ಡಾ. ಉಮೇಶ್ ಪ್ರಭು ಮಾತನಾಡಿ, ಎರಡನೇ ಅಲೆ ತೀವ್ರವಾಗಿದ್ದು, ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸಿ. ಅರ್ಹರು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಿ. ಸೋಂಕಿತರ ಸಂಖ್ಯೆ ಹೆಚ್ಚಿದಂತೆಲ್ಲ ವೈದ್ಯಕೀಯ ಸಿಬ್ಬಂದಿ ಕೊರತೆ ಉಂಟಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಡಾ.ವೈ.ಸುದರ್ಶನ ರಾವ್ ಮಾತನಾಡಿ, ವೈದ್ಯರ ಸಲಹೆ ಪಡೆದು ಮನೆಯಲ್ಲಿಯಲ್ಲಿದ್ದುಕೊಂಡು ಸೋಂಕಿತರು ಚಿಕಿತ್ಸೆ ಪಡೆಯಬಹುದು. ಆದರೆ ಮನೆಯ ಸದಸ್ಯರಿಗೆ ಹರಡದಂತೆ ಎಚ್ಚರಿಕೆ ವಹಿಸುವುದು ಬಹಳ ಮುಖ್ಯ ಎಂದರು.

ಆದರ್ಶ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಜಿ.ಎಸ್. ಚಂದ್ರಶೇಖರ್ ಮಾತನಾಡಿ, ಲಸಿಕೆ ಪಡೆದವರಿಗೆ ಸೋಂಕು ತಗುಲುವುದಿಲ್ಲ ಎನ್ನಲಾಗುವುದಿಲ್ಲ. ತಗುಲಿದರೂ ರೋಗದ ಉಲ್ಬಣತೆ ಪ್ರಮಾಣ ಕಡಿಮೆ ಇರುತ್ತದೆ. ಕೊರೊನಾ ಸಂಪೂರ್ಣವಾಗಿ ತೊಲಗುವುದಿಲ್ಲ. ಸೋಂಕಿನೊಂದಿಗೆ ಜೀವನ ಮಾಡಬೇಕಾದ ಅನಿವಾರ್ಯತೆ ಇದೆ ಎಂದರು.

ಮನಶಾಸ್ತ್ರಜ್ಞ ಡಾ.ವಿರೂಪಾಕ್ಷ ದೇವರಮನೆ ಮಾತನಾಡಿ, ಸೋಂಕಿತರು ಮತ್ತೊಬ್ಬರಿಗೆ ಸೋಂಕು ಹರಡಿಸದಂತೆ ಸ್ವಯಂ ಎಚ್ಚರಿಕೆ ವಹಿಸಬೇಕು. ಸೋಂಕಿನ ಬಗ್ಗೆ ಸುದ್ದಿ ಪ್ರಸಾರ ಮಾಡುವಾಗ ಮಾಧ್ಯಮದವರು ಜವಾಬ್ದಾರಿಯುತವಾಗಿ ಸುದ್ದಿ ನೀಡಬೇಕು ಎಂದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ ಶೆಟ್ಟಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ವಂದಿಸಿದರು. ಐಎಂಎ ಕಾರ್ಯದರ್ಶಿ ಡಾ. ಪ್ರಕಾಶ್ ಭಟ್ ನಿರೂಪಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು