ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ | ಕೋವಿಡ್‌–19: ಪಂಚ ಸೂತ್ರಗಳ ಪಾಲನೆಗೆ ಕಟ್ಟುನಿಟ್ಟಿನ ನಿರ್ದೇಶನ

ಹೊರ ರಾಜ್ಯ, ವಿದೇಶಗಳಿಂದ ಬಂದವರ ಮೇಲೆ ಹೆಚ್ಚಿನ ನಿಗಾ: ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್‌
Last Updated 4 ಡಿಸೆಂಬರ್ 2021, 15:37 IST
ಅಕ್ಷರ ಗಾತ್ರ

ಉಡುಪಿ: ಕೋವಿಡ್‌–19 ಕಣ್ಗಾವಲು, ನಿಯಂತ್ರಣ ಹಾಗೂ ಜಾಗೃತಿಗೆ ಸರ್ಕಾರದ ಪರಿಷ್ಕೃತ ಮಾರ್ಗಸೂಚಿ ಬಿಡುಗಡೆಮಾಡಿದ್ದು, ಪಂಚ ಸೂತ್ರಗಳ ಪಾಲನೆಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ಅದರಂತೆ ಜಿಲ್ಲೆಯಲ್ಲಿ ಕೋವಿಡ್‌ ಪರೀಕ್ಷೆ, ಪತ್ತೆ, ಚಿಕಿತ್ಸೆ, ಲಸಿಕಾರಣ ಹಾಗೂ ಸುರಕ್ಷತಾ ಕ್ರಮಗಳ ಪಾಲನೆಗೆ ಆದ್ಯತೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್‌ ಹೇಳಿದರು.

ಶನಿವಾರ ಕಚೇರಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಆಫ್ರಿಕಾ, ಬೋತ್ಸ್ವಾನ, ಹಾಂಕಾಂಗ್‌ನಲ್ಲಿ ಒಮೈಕ್ರಾನ್ ಕೋವಿಡ್‌ ರೂಪಾಂತರಿ ಪ್ರಬೇಧ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಈ ಮೂರು ದೇಶಗಳಿಂದ ಬರುವ ಪ್ರಯಾಣಿಕರಿಗೆ ವಿಮಾನ ನಿಲ್ದಾಣಗಳಲ್ಲಿ ಕಡ್ಡಾಯ ಆರ್‌ಟಿಪಿಸಿಆರ್ ಮಾಡಲಾಗುವುದು, ನೆಗೆಟಿವ್ ಬಂದವರಿಗೆ ಮಾತ್ರ ನಿಲ್ದಾಣದಿಂದ ನಿರ್ಗಮಿಸಲು ಅನುಮತಿಸಲಾಗುತ್ತಿದೆ.

ಮೂರು ದೇಶಗಳಿಂದ ನ.12ರಿಂದ 27ರವರೆಗೆ ಬಂದಿರುವ ಪ್ರಯಾಣಿಕರನ್ನು ಪತ್ತೆ ಹಚ್ಚಿ ಆರ್‌ಟಿಪಿಸಿಆರ್‌ ಪರೀಕ್ಷೆಗೊಳಪಡಿಸಿ ಸೋಂಕಿತರಾಗಿದ್ದಲ್ಲಿ 10 ದಿನ ಸಾಂಸ್ಥಿಕ ಕ್ವಾರಂಟೈನ್‌ಗೊಳಪಡಿಸಿ ಅವರಿಗೆ ಜನೊಮಿಕ್ ಸೀಕ್ವೆನ್ಸಿಂಗ್ ಪರೀಕ್ಷೆಗೊಳಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ನಡೆಯುವ ಸಭೆ, ಸಮಾರಂಭ, ಸಮ್ಮೇಳನಗಳಲ್ಲಿ 500ಕ್ಕಿಂತ ಹೆಚ್ಚು ಜನರು ಭಾಗವಹಿಸುವಂತಿಲ್ಲ. ಸಮಾರಂಭಗಳ ಆಯೋಜಕರು ಕಡ್ಡಾಯವಾಗಿ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು. ಶೈಕ್ಷಣಿಕ ಸಂಸ್ಥೆಗಳು ಸಾಂಸ್ಕೃತಿಕ ಚಟುವಟಿಕೆಗಳು, ಹಬ್ಬ, ಸಮಾರಂಭಗಳನ್ನು ಜ.15ರವರೆಗೆ ನಡೆಸುವಂತಿಲ್ಲ. ಶಾಲೆ ಕಾಲೇಜುಗಳಿಗೆ ತೆರಳುವ 18 ವರ್ಷದೊಳಗಿನ ಮಕ್ಕಳ ಪೋಷಕರು ಕಡ್ಡಾಯವಾಗಿ 2 ಡೋಸ್ ಲಸಿಕೆ ಪಡೆದಿರಬೇಕು ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಎರಡು ಡೋಸ್ ಲಸಿಕೆ ಪಡೆದಿರುವವರಿಗೆ ಮಾತ್ರ ಮಾಲ್‌, ಚಿತ್ರಮಂದಿರಗಳ ಪ್ರವೇಶಕ್ಕೆ ಅನುಮತಿಸಲಾಗುವುದು. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದವರಿಗೆ ₹ 100 ದಂಡ ವಿಧಿಸಲಾಗುವುದು, ಹೆಚ್ಚಿನ ಸೋಂಕು ಪತ್ತೆಯಾದರೆ ಮೈಕ್ರೊ ಕಂಟೈನ್‌ಮೆಂಟ್ ವಲಯಗಳನ್ನು ರಚಿಸಿ ಸೋಂಕು ನಿಯಂತ್ರಣಕ್ಕೆ ತರಲಾಗುವುದು ಎಂದರು.

ಉಡುಪಿ ಜಿಲ್ಲೆಯಲ್ಲಿ ಸೋಂಕಿನ ಪಾಸಿಟಿವಿಟಿ ದರ ಇಳಿಮುಖವಾಗುತ್ತಿದ್ದು, ಕಳೆದ 7 ದಿನಗಳಲ್ಲಿ ಶೇ 0.4 ಪಾಸಿಟಿವಿಟಿ ದರ ದಾಖಲಾಗಿದೆ. ಕೋವಿಡ್ ಪರೀಕ್ಷಾ ಪ್ರಮಾಣವನ್ನು ದಿನಕ್ಕೆ 5,000ಕ್ಕೆ ಹೆಚ್ಚಿಸಲಾಗಿದೆ. ಕೇರಳ ಹಾಗೂ ಮಹಾರಾಷ್ಟ್ರದಿಂದ ಜಿಲ್ಲೆಗೆ ಬರುವವರು 72 ಗಂಟೆಯೊಳಗಿನ ಕೋವಿಡ್ ನೆಗೆಟಿವ್ ಪ್ರಮಾಣ ಪತ್ರ ಹೊಂದಿರಬೇಕು. ಕೇರಳದಿಂದ ಬಂದವರ ಮೇಲೆ ಒಂದು ವಾರ ನಿಗಾವಣೆ ಇರಿಸಿದ ಬಳಿಕ ಮತ್ತೊಮ್ಮೆ ಕೋವಿಡ್ ಪರೀಕ್ಷೆ ಮಾಡಲಾಗುವುದು ಎಂದರು.

ಜಿಲ್ಲೆಯಲ್ಲಿ ಆರೋಗ್ಯ ಸುರಕ್ಷತಾ ಕ್ರಮಗಳ ಪಾಲನೆಗೆ ಜಿಲ್ಲಾಮಟ್ಟದಲ್ಲಿ 12 ಕಾರ್ಯತಂಡಗಳನ್ನು ರಚಿಸಿ ಪ್ರತಿದಿನ ವರದಿ ನೀಡಲು ಸೂಚಿಸಲಾಗಿದೆ. ಸೋಂಕಿತರು ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಲು ಬೆಡ್‌ ಹಾಗೂ ಆಮ್ಲಜನಕ ವ್ಯವಸ್ಥೆಯ ಬೆಡ್‌ಗಳ ವ್ಯವಸ್ಥೆಗೆ 25 ಖಾಸಗಿ ಆಸ್ಪತ್ರೆಗಳಿಗೆ ನೋಡೆಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಚೆಕ್‌ಪೋಸ್ಟ್ ಕೇಂದ್ರಗಳನ್ನು ಸ್ಥಾಪಿಸಿ ತಪಾಸಣೆ ನಡೆಸಲಾಗುತ್ತಿದೆ ಎಂದು ವಿವರ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿಸಿ ಸಿಇಒ ಡಾ.ವೈ.ನವೀನ್ ಭಟ್‌, ಹೆಚ್ಚುವರಿ ಜಿಲ್ಲಾಧಿಕಾರಿ ಬಾಲಕೃಷ್ಣಪ್ಪ, ಎಸ್‌ಪಿ ಎನ್‌.ವಿಷ್ಣುವರ್ಧನ್ ಇದ್ದರು.

21 ಮಂದಿಯಲ್ಲಿ ಸೋಂಕು: ಡಿಸಿ

‘ಕಳೆದ ಒಂದು ವಾರದಲ್ಲಿ ಮುಂಬೈನಿಂದ ಉಡುಪಿಗೆ 266 ಮಂದಿ ಬಂದಿದ್ದು, 12 ಜನರಲ್ಲಿ ಸೋಂಕು ಪತ್ತೆಯಾಗಿದೆ, ಕೇರಳದಿಂದ ಬಂದಿರುವ 69 ಮಂದಿಯಲ್ಲಿ 9 ಮಂದಿಗೆ ಕೋವಿಡ್‌ ದೃಢಪಟ್ಟಿದೆ. ವಿದೇಶಗಳಿಂದ ಬಂದಿರುವ 91 ಜನರಲ್ಲಿ ಸೋಂಕು ಪತ್ತೆಯಾಗಿಲ್ಲ. ಒಮೈಕ್ರಾನ್ ಪತ್ತೆಯಾಗಿರುವ ಹೈರಿಸ್ಕ್‌ ದೇಶಗಳಿಂದ ಮೂವರು ಪ್ರಯಾಣಿಕರು ಜಿಲ್ಲೆಗೆ ಬಂದಿದ್ದು, ಎಲ್ಲರ ವರದಿ ನೆಗೆಟಿವ್ ಆಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಹೋಂ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. 8 ದಿನಗಳ ಬಳಿಕ ಅವರಿಗೆ ಮತ್ತೊಮ್ಮೆ ಕೋವಿಡ್ ಪರೀಕ್ಷೆ ಮಾಡಲಾಗುವುದು’ ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಹೇಳಿದರು.

‘ಶಾಲಾ ಮಕ್ಕಳಿಗೆ ಕೋವಿಡ್ ಪರೀಕ್ಷೆ’

ಕೋವಿಡ್‌ ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರುವ ಸಾದ್ಯತೆಗಳಿರುವುದರಿಂದ ಜಿಲ್ಲೆಯ ಪ್ರೌಢ ಶಾಲೆ ಹಾಗೂ ಕಾಲೇಜುಗಳಲ್ಲಿ ಒಟ್ಟು ವಿದ್ಯಾರ್ಥಿಗಳ ಶೇ 10ರಷ್ಟು ಮಕ್ಕಳಿಗೆ ಕೋವಿಡ್‌ ಪರೀಕ್ಷೆ ಮಾಡಲು ನಿರ್ದೇಶನ ನೀಡಲಾಗಿದೆ. ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸದಂತೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT