ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಕೋವಿಡ್ ಲಸಿಕೆ ಸಂಗ್ರಹಕ್ಕೆ ಸಿದ್ಧವಾಯ್ತು ಕೊಠಡಿ

ಉಡುಪಿಯ ಡಿಎಚ್‌ಒ ಕಚೇರಿಯಲ್ಲಿ ಅತ್ಯಾಧುನಿಕ ವಾಕ್ ಇನ್‌ ಕೂಲರ್‌ ವ್ಯವಸ್ಥೆಯಡಿ ನಿರ್ಮಾಣ
Last Updated 5 ನವೆಂಬರ್ 2020, 12:52 IST
ಅಕ್ಷರ ಗಾತ್ರ

ಉಡುಪಿ: ವಿಶ್ವದ ಹಲವು ರಾಷ್ಟ್ರಗಳಲ್ಲಿ ಕೋವಿಡ್‌–19ಗೆ ಲಸಿಕೆ ಕಂಡು ಹಿಡಿಯುವ ಪ್ರಯತ್ನ ಅಂತಿಮ ಹಂತದಲ್ಲಿದ್ದು, ಶೀಘ್ರ ಮಾರುಕಟ್ಟೆಗೆ ಬಿಡುಗಡೆಯಾಗುವ ನಿರೀಕ್ಷೆಗಳಿವೆ. ಇದರ ಬೆನ್ನಲ್ಲೇ ಜಿಲ್ಲೆಗೆ ಪೂರೈಕೆಯಾಗಲಿರುವ ಕೋವಿಡ್‌ ಲಸಿಕೆಗಳನ್ನು ಸುರಕ್ಷಿತವಾಗಿ ಹಾಗೂ ವೈಜ್ಞಾನಿಕವಾಗಿ ಸಂಗ್ರಹಿಸಿಡಲು ಜಿಲ್ಲಾ ಆರೋಗ್ಯ ಇಲಾಖೆಯು ಪ್ರತ್ಯೇಕ ಲಸಿಕಾ ಕೊಠಡಿಯನ್ನು (ವಾಕ್ ಇನ್‌ ಕೂಲರ್‌) ಸಿದ್ಧಪಡಿಸಿದೆ.

ಡಿಎಚ್‌ಒ ಕಚೇರಿಯಲ್ಲಿ ಕೊಠಡಿ:ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿಯಲ್ಲಿ ನಿರ್ಮಾಣವಾಗಿರುವ ಲಸಿಕಾ ಸಂಗ್ರಹ ಕೊಠಡಿಯಲ್ಲಿ 2.28 ಕೋಟಿ ಡೋಸ್ ಲಸಿಕೆಯನ್ನು ಸಂಗ್ರಹಿಸಿಡಬಹುದು. ಈ ಕೊಠಡಿ ಸಂಪೂರ್ಣ ಹವಾ ನಿಯಂತ್ರಣ ಸೌಲಭ್ಯ ಹೊಂದಿದೆ.

ಕೋಲ್ಡ್‌ ಚೈನ್‌ ವ್ಯವಸ್ಥೆ:ಕೋವಿಡ್ ಲಸಿಕೆ ತಯಾರಿಯಿಂದ ಹಿಡಿದು ಸಾರ್ವಜನಿಕರಿಗೆ ಲಸಿಕೆ ಹಾಕುವವರೆಗಿನ ಹಂತದಲ್ಲಿ ತಾಪಮಾನ ವ್ಯತ್ಯಯವಾಗದಂತೆ ಎಚ್ಚರ ವಹಿಸಬೇಕು. ಲಸಿಕೆಗಳನ್ನು ಲಸಿಕಾ ಸ್ಥಳಗಳಿಗೆ ಸಾಗಿಸುವಾಗ, ಸಂಗ್ರಹ ಕೊಠಡಿಯಲ್ಲಿ ಶೇಖರಿಸುವಾಗ 2 ರಿಂದ 8 ಡಿಗ್ರಿ ತಾಪಮಾನ ಕಾಯ್ದುಕೊಳ್ಳಬೇಕಿರುವುದು ಬಹಳ ಅವಶ್ಯ.

ತಾಪಮಾನ ಏರುಪೇರಾಗದಂತೆ ನಿಗಾ ವಹಿಸಲು ಜಿಲ್ಲೆಯಲ್ಲಿ ಈಗಾಗಲೇ ಒಟ್ಟು 77 ಕೋಲ್ಡ್ ಚೈನ್ ಸಿಸ್ಟಂ ಸ್ಥಳಗಳನ್ನು ಗುರುತಿಸಲಾಗಿದೆ. ಈ ಸ್ಥಳಗಳಲ್ಲಿ ಲಸಿಕೆ ಸಂರಕ್ಷಣೆಗೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಲಸಿಕೆಗಳ ಸಾಗಾಟಕ್ಕೆ 1,324 ವಾಹನಗಳು, 9,370 ಐಸ್ ಪ್ಯಾಕ್‌ಗಳ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದ್ದು, ಲಸಿಕೆ ಹಾಕಲು ನುರಿತ ಸಿಬ್ಬಂದಿಯನ್ನೂ ಗುರುತಿಸಲಾಗಿದೆ ಎಂದು ಡಿಎಚ್‌ಒ ಡಾ. ಸುಧೀರ್ ಚಂದ್ರ ಸೂಡಾ ಮಾಹಿತಿ ನೀಡಿದರು.

ವಿಶ್ವದಾದ್ಯಂತ 248ಕ್ಕೂ ಅಧಿಕ ಕಂಪೆನಿಗಳು ಕೋವಿಡ್‌ಗೆ ಲಸಿಕೆ ಕಂಡು ಹಿಡಿಯುವ ಪ್ರಯತ್ನದಲ್ಲಿ ನಿರತರಾಗಿದ್ದು, ಅದರಲ್ಲಿ 197 ಲಸಿಕೆಗಳು ಪ್ರೀ ಕ್ಲಿನಿಕಲ್, 23 ಲಸಿಕೆಗಳು ಮೊದಲ ಹಂತ, 16 ಲಸಿಕೆಗಳು ಮೊದಲ ಹಾಗೂ 2ನೇ ಹಂತ, 2 ಲಸಿಕೆಗಳು 2ನೇ ಹಂತ, 10 ಲಸಿಕೆಗಳು ಮೂರನೇ ಹಂತದಲ್ಲಿ ಪರೀಕ್ಷೆಗೆ ಒಳಪಟ್ಟಿವೆ. ಇದುವರೆಗೆ ಯಾವುದೇ ಲಸಿಕೆಗಳಿಗೆ ಅನುಮತಿ ದೊರೆತಿಲ್ಲ. ಶೀಘ್ರ ಅನುಮತಿ ದೊರೆಯುವ ನಿರೀಕ್ಷೆಯಿದೆ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT