ಶನಿವಾರ, ಮಾರ್ಚ್ 25, 2023
28 °C
ಕೊರೊನಾ ಸೋಂಕಿಗೆ ತಂದೆ ಅಥವಾ ತಾಯಿಯನ್ನು ಕಳೆದುಕೊಂಡು ಅನಾಥರಾದ ಮಕ್ಕಳು

ಉಡುಪಿ: 78 ಮಕ್ಕಳ ಭವಿಷ್ಯ ಕಸಿದ ಕೋವಿಡ್‌

ಬಾಲಚಂದ್ರ.ಎಚ್‌ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಪೋಷಕರ ಪಾಲನೆ, ಪೋಷಣೆಯಲ್ಲಿ ಬೆಳೆಯಬೇಕಿದ್ದ ಹಲವು ಮಕ್ಕಳ ಭವಿಷ್ಯವನ್ನು ಕೋವಿಡ್‌–19 ಕಿತ್ತುಕೊಂಡಿದೆ. ಜಿಲ್ಲೆಯಲ್ಲಿ ಇದುವರೆಗೂ 78 ಮಕ್ಕಳ ತಂದೆ ಅಥವಾ ತಾಯಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಸುಂದರ ಬದುಕಿನ ಕನಸು ಕಾಣುತ್ತಿದ್ದ ಮಕ್ಕಳಿಗೆ ಈಗ ಅನಾಥಭಾವ ಕಾಡುತ್ತಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಾಹಿತಿಯ ಪ್ರಕಾರ 2020ರ ಮಾರ್ಚ್‌ 1ರಿಂದ 2021ರ ಜೂನ್‌ವರೆಗೂ ಜಿಲ್ಲೆಯಲ್ಲಿ 78 ಮಕ್ಕಳು ತಂದೆ ಅಥವಾ ತಾಯಿಯನ್ನು ಕಳೆದುಕೊಂಡು ಏಕ ಪೋಷಕರ ಆರೈಕೆಯಲ್ಲಿದ್ದಾರೆ. ಕೆಲವರು ಅಪ್ಪನ ಪ್ರೀತಿ ಕಳೆದುಕೊಂಡಿದ್ದರೆ, ಕೆಲವರು ಅಮ್ಮನ ವಾತ್ಸಲ್ಯದಿಂದ ವಂಚಿತರಾಗಿದ್ದಾರೆ.

ಕೋವಿಡ್‌ ಮಕ್ಕಳ ಭವಿಷ್ಯಕ್ಕೆ ಮಾತ್ರ ಕೊಳ್ಳಿ ಇಟ್ಟಿಲ್ಲ. ಮನೆಯ ಆಧಾರ ಸ್ಥಂಭಗಳನ್ನೇ ಕೆಡವಿದೆ. ಕುಟುಂಬಕ್ಕೆ ಆಧಾರವಾಗಿದ್ದ ತಂದೆಯಿಂದ ಮಕ್ಕಳು ದೂರವಾಗಿದ್ದಾರೆ. ಹಾಗೆಯೇ, ಮನೆಯ ನಿರ್ವಹಣೆಯ ಹೊಣೆ ಹೊತ್ತುಕೊಂಡಿದ್ದ ಅಮ್ಮನನ್ನು ಕಳೆದುಕೊಂಡು ಮಕ್ಕಳಿಗೆ ದಿಕ್ಕು ತೋಚದಂತಾಗಿದೆ. ಹೆಚ್ಚಿನ ಮಕ್ಕಳು ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಸರ್ಕಾರದ ನೆರವು:

ಕೋವಿಡ್‌ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳ ನೆರವಿಗೆ ಸರ್ಕಾರ ಧಾವಿಸಿದ್ದು, ಜಿಲ್ಲೆಯಲ್ಲಿ ಅನಾಥರಾಗಿರುವ ಮಕ್ಕಳ ವಿವರ, ಅವರ ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಗತಿಯ ವಿವರ ಸಲ್ಲಿಸುವಂತೆ ಸೂಚನೆ ನೀಡಿದೆ. ಅದರಂತೆ, ಅಂಗನವಾಡಿ ಕಾರ್ಯಕರ್ತೆಯರಿಂದ ಹಾಗೂ ನಾಲ್ಕು ಪ್ರಾಜೆಕ್ಟ್‌ಗಳಿಂದ ಮಾಹಿತಿ ಸಂಗ್ರಹಿಸಲಾಗಿದ್ದು, ಸದ್ಯ 78 ಮಕ್ಕಳ ವಿವರಗಳು ಲಭ್ಯವಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕುಮಾರ್ ಮಾಹಿತಿ ನೀಡಿದರು.

ಶೀಘ್ರವೇ ಮೃತರಾದವರ ಮನೆಗಳಿಗೆ ಭೇಟಿನೀಡಿ ಕುಟುಂಬದ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಯ ಬಗ್ಗೆ ಮಾಹಿತಿ ಪಡೆದು, ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಮಕ್ಕಳ ಭವಿಷ್ಯಕ್ಕೆ ಅಗತ್ಯವಾಗಿ ಬೇಕಾದ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು.

ಎಲ್ಲ ಮಕ್ಕಳು ಸದ್ಯ ಏಕ ಪೋಷಕರ ಆರೈಕೆಯಲ್ಲಿದ್ದಾರೆ. ಸದ್ಯ ‘ಪ್ರಾಯೋಜಕತ್ವ’ ಯೋಜನೆಯಡಿ ತಿಂಗಳಿಗೆ ₹ 1 ಸಾವಿರ ನೀಡಲಾಗುತ್ತಿದೆ. ಸರ್ಕಾರ ಈಚೆಗೆ ‘ಬಾಲಸೇವಾ’ ಯೋಜನೆ ಘೋಷಿಸಿದ್ದು, ಅನುಷ್ಠಾನಕ್ಕೆ ಬಂದರೆ ಕೋವಿಡ್‌ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಮಾಸಿಕ ₹ 3.500 ಆರ್ಥಿಕ ದೊರೆಯಲಿದೆ ಎಂದರು.

ಮಕ್ಕಳನ್ನು ಸಾಕಲು ಕಷ್ಟವಾದರೆ ಅಂತಹ ಮಕ್ಕಳನ್ನು ಬಾಲಮಂದಿರದಲ್ಲಿರಿಸಿ ಅವರಿಗೆ ಶಿಕ್ಷಣ ಸೇರಿದಂತೆ ಅಗತ್ಯವಾದ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು.

ಏಕ ಪೋಷಕರ ಆರೈಕೆಯಲ್ಲಿರುವ ಮಕ್ಕಳು

ತಾಲ್ಲೂಕು–ಮಕ್ಕಳ ಸಂಖ್ಯೆ

ಉಡುಪಿ–29

ಕಾರ್ಕಳ–11

ಕುಂದಾಪುರ–23

ಬ್ರಹ್ಮಾವರ–15

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು