ಬುಧವಾರ, ಜೂನ್ 23, 2021
21 °C
ಸೋಂಕಿತರು ಕಡ್ಡಾಯವಾಗಿ ಪ್ರಯಾಣ ವಿವರ ನೀಡಬೇಕು: ಡಿಸಿ ಎಚ್ಚರಿಕೆ

ಉಡುಪಿ: ಪ್ರಾಥಮಿಕ ಸಂಪರ್ಕ ಮುಚ್ಚಿಟ್ಟರೆ ಕ್ರಿಮಿನಲ್ ಕೇಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಪ್ರಾಥಮಿಕ ಸಂಪರ್ಕಕ್ಕೆ ಬಂದವರ ಮಾಹಿತಿಯನ್ನು ಮುಚ್ಚಿಡುವ ಹಾಗೂ ಪ್ರಯಾಣದ ವಿವರ ನೀಡದ ಕೋವಿಡ್‌ ಸೋಂಕಿತರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಕೆ ನೀಡಿದ್ದಾರೆ.

ಈಚೆಗೆ ಕೆಲವು ಸೋಂಕಿತರು ಅಧಿಕಾರಿಗಳಿಗೆ ಪ್ರಾಥಮಿಕ ಸಂಪರ್ಕಕ್ಕೆ ಬಂದವರ ಮಾಹಿತಿ ಕೊಡುತ್ತಿಲ್ಲ. ಜತೆಗೆ ಭೇಟಿ ನೀಡಿರುವ ಸ್ಥಳಗಳ ಮಾಹಿತಿಯನ್ನೂ ಮುಚ್ಚಿಡುತ್ತಿದ್ದಾರೆ. ಕೆಲವರ ಮೊಬೈಲ್‌ ಕರೆ ವಿವರಗಳನ್ನು ಪರಿಶೀಲಿಸಿದಾಗ ಈ ಅಂಶಗಳು ಬಹಿರಂಗವಾಗಿವೆ ಜಿಲ್ಲಾಧಿಕಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನು ಪರೀಕ್ಷೆಗೊಳಪಡಿಸಿದಾಗ ಶೇ 50ರಷ್ಟು ಜನರಲ್ಲಿ ಸೋಂಕು ಪತ್ತೆಯಾಗುತ್ತಿರುವುದು ಕಂಡುಬಂದಿದೆ. ಪ್ರಾಥಮಿಕ ಸಂಪರ್ಕ ಹಾಗೂ ಪ್ರಯಾಣದ ಮಾಹಿತಿ ಮುಚ್ಚಿಟ್ಟರೆ, ಸೋಂಕು ವ್ಯಾಪಕವಾಗುವ ಆತಂಕವಿದ್ದು, ಅಗತ್ಯ ಮಾಹಿತಿಗಳನ್ನು ಕಡ್ಡಾಯವಾಗಿ ನೀಡಬೇಕು ಎಂದು ಸೂಚನೆ ನೀಡಿದ್ದಾರೆ.

ಕೋವಿಡ್‌ ಪರೀಕ್ಷೆಗೊಳಪಟ್ಟ ಬಳಿಕ ಪಾಸಿಟಿವ್‌ ಬಂದರೆ ಆರೋಗ್ಯ ಇಲಾಖೆ ಅಧಿಕಾರಿಗಳು ಕರೆ ಮಾಡಿ ವಿಷಯ ಮುಟ್ಟಿಸುತ್ತಾರೆ. ಈ ಸಂದರ್ಭ ಅಧಿಕಾರಿಗಳಿಗೆ ಸೂಕ್ತ ಮಾಹಿತಿ ನೀಡಬೇಕು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದಾದರೆ ಇಲಾಖೆಯ ವಾಹನದಲ್ಲಿ ಬರಬೇಕು, ಮನೆಯಲ್ಲಿ ಚಿಕಿತ್ಸೆ ಪಡೆಯಲಿಚ್ಚಿಸಿದರೆ ಹೋಂ ಐಸೊಲೇಷನ್‌ಗೆ ಒಳಗಾಗಬೇಕು. ಬದಲಾಗಿ ವೈದ್ಯರ ಜತೆ ಅನುಚಿತವಾಗಿ ವರ್ತಿಸಿದರೆ, ಸರಿಯಾಗಿ ಮಾತನಾಡದಿದ್ದರೆ ಅಂಥವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.

ಸೋಂಕಿತರ ಪ್ರಾಥಮಿಕ ಸಂಪರ್ಕವನ್ನು ಪತ್ತೆಹಚ್ಚಿ ಪರೀಕ್ಷೆಗೊಳಪಡಿಸಿ ಹೋಂ ಕ್ವಾರಂಟೈನ್‌ ಮಾಡಿದರೆ ಸೋಂಕು ಹರಡುವುದನ್ನು ತಪ್ಪಿಸಬಹುದು. ಅಧಿಕಾರಿಗಳ ಸೂಚನೆಗಳನ್ನು ಎಲ್ಲರು ಪಾಲಿಸಬೇಕು ಎಂದು ಡಿಸಿ ಮನವಿ ಮಾಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು