ಬುಧವಾರ, ಮಾರ್ಚ್ 22, 2023
32 °C
'ಭಾರತದ ಸಂವಿಧಾನ ಹಾಗೂ ಧರ್ಮ ರಾಜಕಾರಣ' ಕಾರ್ಯಕ್ರಮದಲ್ಲಿ ಡಾ.ಸಿ.ಎಸ್‌.ದ್ವಾರಕಾನಾಥ್‌

ಬ್ರಾಹ್ಮಣತ್ವವೇ ಆರ್‌ಎಸ್‌ಎಸ್‌ನ ಹಿಂದುತ್ವ: ಡಾ.ಸಿ.ಎಸ್‌.ದ್ವಾರಕಾನಾಥ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ವೈದಿಕಶಾಹಿಯ ವಿರುದ್ಧ ಶತಮಾನಗಳಿಂದ ಹೋರಾಟ ಮಾಡಿಕೊಂಡು ಬಂದಿರುವ ಮಹಾನ್‌ ಹೋರಾಟಗಾರರ ಆಶಯಗಳನ್ನು ಸಂವಿಧಾನದಲ್ಲಿ ಕಟ್ಟಿಕೊಟ್ಟವರು ಬಾಬಾ ಸಾಹೇಬ್ ಅಂಬೇಡ್ಕರ್ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್‌.ದ್ವಾರಕಾನಾಥ್‌ ಹೇಳಿದರು.

ಕರ್ನಾಟಕ ದಲಿತ ಸಂಘರ್ಷಗಳ ಐಕ್ಯತಾ ಸಮಿತಿ ವತಿಯಿಂದ ಗುರುವಾರ ಮದರ್ ಆಫ್ ಸಾರೋಸ್‌ ಚರ್ಚ್‌ನ ಡಾನ್ ಬಾಸ್ಕೋ ಸಭಾಂಗಣದಲ್ಲಿ ನಡೆದ ಭಾರತದ ಸಂವಿಧಾನ ಹಾಗೂ ಧರ್ಮ ರಾಜಕಾರಣ ಕಾರ್ಯಕ್ರಮದಲ್ಲಿ ಮಾತನಾಡಿ, ಸಮಾನತೆ, ಸಹೋದರತ್ವ, ಸಹಬಾಳ್ವೆ, ಜಾತ್ಯತೀತತೆ ಹಾಗೂ ಜೀವ ವಿರೋಧಿಗಳಾಗಿರುವ ಸಂಘ ಪರಿವಾರ ದಶಕಗಳಿಂದಲೂ ಸಂವಿಧಾನವನ್ನು ವಿರೋಧಿಸಿಕೊಂಡೇ ಬಂದಿದೆ ಎಂದು ವಾಗ್ದಾಳಿ ನಡೆಸಿದರು.

ಹಿಂದೂ, ರಾಷ್ಟ್ರೀಯತೆ, ಭಾರತೀಯತೆ ಹೆಸರಿನಲ್ಲಿ ಜನರನ್ನು ದಾರಿ ತಪ್ಪಿಸುತ್ತಿದೆ. 100 ವರ್ಷಗಳ ಆರ್‌ಎಸ್‌ಎಸ್ ಇತಿಹಾಸದಲ್ಲಿ ಎಂದೂ ಜಾತಿ ಪದ್ಧತಿ, ಅಸ್ಪೃಶ್ಯತೆ, ಬಡತನವನ್ನು ಪ್ರಶ್ನೆ ಮಾಡಿಲ್ಲ. ಕೆಳ ವರ್ಗಕ್ಕೆ ಸೇರಿದ ಹಿಂದೂಗಳ ಸಮಸ್ಯೆಗಳು ಕಾಣುತ್ತಿಲ್ಲ.

ಆರ್‌ಎಸ್‌ಎಸ್‌ ಹಿಂದುತ್ವ ಎಂದರೆ ಬ್ರಾಹ್ಮಣತ್ವವಾಗಿದೆ. ಆರ್‌ಎಸ್‌ಎಸ್‌ 97 ವರ್ಷಗಳಲ್ಲಿ 7 ಸರಸಂಘ ಚಾಲಕರನ್ನು ಕಂಡಿದ್ದು ಅವರಲ್ಲಿ 6 ಮಂದಿ ಬ್ರಾಹ್ಮಣರು, ಒಬ್ಬರು ಮಾತ್ರ ಬನಿಯಾ. ಇದುವರೆಗೂ ಒಬ್ಬ ಶೂದ್ರ, ಒಬ್ಬ ದಲಿತ, ಆದಿವಾಸಿ, ಅಲೆಮಾರಿ ಸರಸಂಘ ಚಾಲಕನಾಗಿಲ್ಲ. ಇವರೆಲ್ಲ ಹಿಂದೂಗಳಲ್ಲವೇ ಎಂದು ಪ್ರಶ್ನಿಸಿದರು.

ಆರ್‌ಎಸ್‌ಎಸ್‌ಗೆ ಬೇಕಿರುವುದು ವೈದಿಕ ಶ್ರೇಷ್ಠತೆ, ಅಧಿಕಾರವೇ ಹೊರತು ತಳ ಸಮುದಾಯಗಳ ಬಗ್ಗೆ ಕಾಳಜಿ ಇಲ್ಲ. ಮುಗ್ಧ ಹಿಂದುಳಿದ ವರ್ಗಗಳನ್ನು ಮತ್ತೊಂದು ಧರ್ಮದ ಮೇಲೆ ಸಮುದಾಯಗಳ ಮೇಲೆ ಎತ್ತಿಕಟ್ಟು ಕೆಲಸ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಸಂವಿಧಾನದಲ್ಲಿ ಧರ್ಮ ನಿರಪೇಕ್ಷತೆಯ ಅಂಶವಿದ್ದರೂ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲಾಗಿದೆ. ಕೈಸ್ತರು ಹಿಂದೂಗಳನ್ನು ಮತಾಂತರ ಮಾಡುತ್ತಿದ್ದಾರೆ ಎಂದು ದೂರುತ್ತಾರೆ. ಆದರೆ, ದೇಶಕ್ಕೆ ಸ್ವಾತಂತ್ಯ ಬಂದಾಗ ಇದ್ದ ಕ್ರೈಸ್ತರ ಜನಸಂಖ್ಯೆ ಪ್ರಸ್ತುತ ಕುಸಿತ ಕಂಡಿದೆ. ಮತಾಂತರ ಮಾಡಿದ್ದರೆ ಕ್ರೈಸ್ತರ ಸಂಖ್ಯೆ ಹೆಚ್ಚಾಗಬೇಕಿತ್ತಲ್ಲವೇ ಎಂದು ಪ್ರಶ್ನಿಸಿದರು.

ಧರ್ಮ ಹುಟ್ಟಿನಿಂದ ಬರಬಾರದು, ಪ್ರಜ್ಞೆ ಬಂದ ಬಳಿಕ ಆಯ್ಕೆಯಾಗಬೇಕು ಎಂದು ಅಂಬೇಡ್ಕರ್ ಬಲವಾಗಿ ಪ್ರತಿಪಾದಿಸಿದ್ದರು ಎಂದರು.

ಜಯನ್ ಮಲ್ಪೆ ಪ್ರಾಸ್ತಾವಿಕವಾಗಿ ಮಾತನಾಡಿ ‘ಕೋಮುವಾದಿಗಳ ಪ್ರಯೋಗ ಶಾಲೆಯಾಗಿರುವ ಉಡುಪಿ ಜಿಲ್ಲೆಯಲ್ಲಿ ದಲಿತ ಸಂಘಟನೆಗಳು ಒಟ್ಟಾಗಿ ಐಕ್ಯತಾ ಸಮಿತಿ ರಚಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ನಗರಸಭೆಯ ಬಿಜೆಪಿ ಸದಸ್ಯೆ ಎಡ್ಲಿನ್ ಕರ್ಕಡ ಅಂಬೇಡ್ಕರ್ ಸೇನೆಗೆ ಸೇರ್ಪಡೆಯಾದರು. 

ಉಡುಪಿ ಚರ್ಚ್‌ನ ಧರ್ಮಗುರು ಚಾರ್ಲ್ಸ್‌ ಮಿನೇಜಸ್‌,ಮುಸ್ಲಿಂ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಇದ್ರಿಸ್ ಹೂಡೆ, ನಿವೃತ್ತ ಬಿಇಒ ವಿಠಲದಾಸ್ ಬನ್ನಂಜೆ, ಕರ್ನಾಟಕ ದಲಿತ ಸಂಘರ್ಷಗಳ ಐಕ್ಯತಾ ಸಮಿತಿಯ ಪ್ರಧಾನ ಸಂಚಾಲಕ ಮಂಜುನಾಥ್ ಗಿಳಿಯಾರು, ಕೊರಗ ಮುಖಂಡರಾದ ಸುಂದರ್, ಮುಖಂಡರಾದ ಶೇಖರ್ ಹೆಜಮಾಡಿ, ಹರೀಶ್ ಸಾಲ್ಯಾನ್, ಹರೀಶ್ ಮಲ್ಪೆ, ವಿಶ್ವನಾಥ್ ಬೆಳ್ಳಂಪಳ್ಳಿ, ರಮೇಶ್‌ ಕೆಳಾರ್ಕಳ ಬೆಟ್ಟು, ವಾಸುದೇವ ಮುದೂರು, ಶ್ಯಾಮರಾಜ್ ಬಿರ್ತಿ, ಸುಂದರ್ ಗುಜ್ಜರಬೆಟ್ಟು, ಡಾ.ಪ್ರೇಮದಾಸ್ ಇದ್ದರು.

ಕರ್ನಾಟಕ ದಲಿತ ಸಂಘರ್ಷಗಳ ಐಕ್ಯತಾ ಸಮಿತಿಯ ಸಂಚಾಲಕ ಸುಂದರ್ ಮಾಸ್ತರ್ ಸ್ವಾಗತಿಸಿದರು.

‘ಸಂವಿಧಾನ ಬರೆದಿದ್ದು ಅಂಬೇಡ್ಕರ್ ಮಾತ್ರ’

ಅಂಬೇಡ್ಕರ್ ಸಂವಿಧಾನ ಬರೆಯಲಿಲ್ಲ ಎಂದು ಆರೋಪ ಮಾಡುತ್ತಾರೆ. ಇಂತಹ ಅಪಪ್ರಚಾರ ಆರಂಭಿಸಿದ್ದು ಆರ್‌ಎಸ್‌ಸ್‌. 1949, ಸೆ.29ರ ಆರ್‌ಎಸ್‌ಸ್ ಮುಖವಾಣಿಯಾದ ಆರ್ಗನೈಸರ್‌ ಪತ್ರಿಕೆಯಲ್ಲಿ ಅಂಬೇಡ್ಕರ್ ಸಂವಿಧಾನವು ದಿಕ್ಕು ದಿಸೆ ಇಲ್ಲದ ತೇಲುವ ಸಂವಿಧಾನ ಎಂದು ವ್ಯಂಗ್ಯಮಾಡಲಾಗಿತ್ತು. ಮನುಧರ್ಮ ಶಾಸ್ತ್ರದ ವಿಚಾರಗಳು ಇಲ್ಲ ಎಂಬ ಕಾರಣಕ್ಕೆ ಸಂವಿಧಾನ, ತ್ರಿವರ್ಣ ಹಾಗೂ ರಾಷ್ಟ್ರಗೀತೆಯನ್ನೂ ಟೀಕಿಸಲಾಯಿತು. 7 ಜನ ಸಂವಿಧಾನ ರಚನಾ ಸಭೆಯ ಸದಸ್ಯರಲ್ಲಿ ಇಬ್ಬರು ಮರಣ ಹೊಂದುತ್ತಾರೆ, ಇಬ್ಬರು ದೇಶಬಿಟ್ಟು ಹೋಗುತ್ತಾರೆ. ಇಬ್ಬರು ರಾಜಕಾರಣದಲ್ಲಿ ಮಗ್ನರಾಗಿರುತ್ತಾರೆ, ಒಬ್ಬರು ಸಭೆಗೆ ಬರುವುದೇ ಇಲ್ಲ. ಇಂತಹ ಸನ್ನಿವೇಶದಲ್ಲಿ ಅಂಬೇಡ್ಕರ್ ಒಬ್ಬರೇ ಸಂವಿಧಾನ ರಚಿಸುತ್ತಾರೆ. ಇವೆಲ್ಲವೂ ಅಧಿಕೃತ ದಾಖಲೆಗಳಲ್ಲಿವೆ. ಹಾಗಾಗಿ, ಸಂವಿಧಾನ ಬರೆದವರು ಅಂಬೇಡ್ಕರ್ ಎಂದು ಧೈರ್ಯವಾಗಿ ಹೇಳಬಹುದು ಎಂದು ದ್ವಾರಕಾನಾಥ್ ಹೇಳಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು