ಶುಕ್ರವಾರ, ಸೆಪ್ಟೆಂಬರ್ 24, 2021
21 °C
ಆರೋಗ್ಯ ಇಲಾಖೆ ಜತೆಗೆ ಚರ್ಚಿಸಿ ತೀರ್ಮಾನ ಸಚಿವ ಕೋಟ

ದೇವಸ್ಥಾನಗಳ ಪ್ರವೇಶ ಕುರಿತು ಶೀಘ್ರ ನಿರ್ಧಾರ: ಸಚಿವ ಕೋಟ ಶ್ರೀನಿವಾಸ ಪೂಜಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಂದಾಪುರ: ರಾಜ್ಯದ 'ಎ' ದರ್ಜೆಯ ದೇವಸ್ಥಾನಗಳಲ್ಲಿ ಭಕ್ತರಿಗೆ ಪ್ರವೇಶ ನೀಡುವ ಬಗ್ಗೆ ಶೀಘ್ರವೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಇಲ್ಲಿಗೆ ಸಮೀಪದ ತೆಕ್ಕಟ್ಟೆ ಹಾಗೂ ಗೋಪಾಡಿ ಗ್ರಾಮ ಪಂಚಾಯಿತಿಗೆ ಮಂಗಳವಾರ ಭೇಟಿ ನೀಡಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿದರು.

ದೇವಸ್ಥಾನಗಳಲ್ಲಿ ಭಕ್ತರಿಗೆ ಪ್ರವೇಶ ನೀಡುವುದರಿಂದ ಜನದಟ್ಟಣೆ ಹೆಚ್ಚಾಗುವ ಸಾಧ್ಯತೆ ಇದ್ದು, ಅಂತರ ಕಾಪಾಡುವುದು ಕಷ್ಟವಾಗಬಹುದು. ಈ ಬಗ್ಗೆ ಶೀಘ್ರವೇ ತೀರ್ಮಾನ ತೆಗೆದುಕೊಳ್ಳಲಾಗುವುದು. ಎರಡನೇ ಹಂತದ ಲಾಕ್‌ಡೌನ್‌ ಸಡಿಲಿಕೆ ಅವಧಿ ಜುಲೈ 5 ರವರೆಗೆ ಇದ್ದು, ಅದರ ಒಳಗಾಗಿ ಆರೋಗ್ಯ ಇಲಾಖೆ ಜತೆಗೆ ಚರ್ಚೆ ಮಾಡಿ ದೇವಸ್ಥಾನಕ್ಕೆ ಭಕ್ತರಿಗೆ ಪ್ರವೇಶ ನೀಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಆರಂಭದಲ್ಲಿ ದರ್ಶನ, ಪೂಜೆ ಹಾಗೂ ಅನ್ನ ದಾಸೋಹಗಳಿಗೆ ಅವಕಾಶ ನೀಡುವ ಬಗ್ಗೆಯೂ ಚರ್ಚೆ ಇದೆ. ಬುಧವಾರ ಬೆಂಗಳೂರಿಗೆ ತೆರಳುತ್ತಿದ್ದು, ಗುರುವಾರ ಅಥವಾ ಶುಕ್ರವಾರ ಆರೋಗ್ಯ ಇಲಾಖೆ ಹಾಗೂ ಮುಖ್ಯಮಂತ್ರಿ ಜತೆಗೆ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಮುಜರಾಯಿ ಅಧೀನದ ದೇವಸ್ಥಾನಗಳಲ್ಲಿ ಯಕ್ಷಗಾನ ಮೇಳದ ಕಲಾವಿದರಿಗೆ ಒಪ್ಪಂದದಂತೆ ಹಣ ನೀಡಬೇಕು ಎನ್ನುವ ಆದೇಶ ನೀಡಿದ್ದರೂ, ಒಂದೆರಡು ದೇವಸ್ಥಾನಗಳು ಸರ್ಕಾರದ ಆದೇಶವನ್ನು ಕಡೆಗಣಿಸಿ, ಕಲಾವಿದರಿಗೆ ಹಣ ನೀಡುತ್ತಿಲ್ಲ ಎನ್ನುವ ವಿಚಾರದ ಕುರಿತು ಮಾತನಾಡಿದ ಸಚಿವರು, ಮಾನವೀಯ ನೆಲೆಯಲ್ಲಿ ಒಪ್ಪಂದದಂತೆ ಪೂರ್ತಿ ಹಣ ನೀಡಲು ಸೂಚಿಸಲಾಗಿದೆ. ಯಾವ ದೇವಸ್ಥಾನಗಳಲ್ಲಿ ಆದೇಶ ಪಾಲನೆಯಾಗುತ್ತಿಲ್ಲ ಎನ್ನುವ ಬಗ್ಗೆ ವರದಿ ತರಿಸಿಕೊಂಡು, ಸಂಘರ್ಷವಿಲ್ಲದೆ ಆದೇಶ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು