ಶುಕ್ರವಾರ, ಡಿಸೆಂಬರ್ 4, 2020
22 °C
ಮಾರುಕಟ್ಟೆಯಲ್ಲಿ ಹಬ್ಬದ ಖರೀದಿ ಭರಾಟೆ ಜೋರು: ಗೂಡುದೀಪಗಳಿಗೆ ಬೇಡಿಕೆ, ಪಟಾಕಿಗೆ ನಿರುತ್ಸಾಹ

ಬಲಿಪಾಡ್ಯಮಿ: ಗೋಗ್ರಾಸ ಸಮರ್ಪಣೆ, ಗೋಪೂಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ದೀಪಾವಳಿ ಹಬ್ಬದ ಬಲಿಪಾಡ್ಯಮಿ ದಿನವಾದ ಭಾನುವಾರ ಸಂಪ್ರದಾಯದಂತೆ ಗೋಗ್ರಾಸ ನೀಡಿ ಗೋಪೂಜೆ ನೆರವೇರಿಸಲಾಯಿತು. ಗೋವಿಗೆ ಆರತಿ ಬೆಳಗಿ ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥನೆ ಸಲ್ಲಿಸಲಾಯಿತು.

ಕೃಷ್ಣ ಮಠದಲ್ಲಿ ಕನಕನ ಕಿಂಡಿಯ ಎದುರು ಪರ್ಯಾಯ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ಗೋಗ್ರಾಸ ನೀಡಿದರು. ಮಠದ ಪುರೋಹಿತರಾದ ಮುದರಂಗಡಿ ಲಕ್ಷ್ಮೀಶ ಆಚಾರ್ಯರು ‘ಗೋ ಪೂಜೆ ನೆರವೇರಿಸಿದರು. ಬಳಿಕ ರಥ ಬೀದಿಯಲ್ಲಿ ಬಿರುದು ಬಾವಲಿ ವಾದ್ಯ ಮೇಳಗಳೊಂದಿಗೆ ಗೋವುಗಳ ಮೆರವಣಿಗೆ ನಡೆಯಿತು.

ಅದಮಾರು ಮಠದ ಗೋಶಾಲೆಯ ಗೋವುಗಳಿಗೆ ಹಿರಿಯ ಯತಿಗಳಾದ ವಿಶ್ವಪ್ರಿಯ ತೀರ್ಥರು ಗೋಗ್ರಾಸ ನೀಡಿ ‘ಗೋ ಪೂಜೆ ಮಾಡಿದರು. ಮಠದ ವ್ಯವಸ್ಥಾಪಕರಾದ ರಾಘವೇಂದ್ರ ಭಟ್, ವಿದ್ವಾಂಸರಾದ ವಂಶಿಕೃಷ್ಣ ಆಚಾರ್ಯ, ಜನಾರ್ದನ ಕೊಟ್ಟಾರಿ ಉಪಸ್ಥಿತರಿದ್ದರು.

ಮಾಜಿ ಸಚಿವ ಪ್ರಮೋದ್ ಮಧ್ವರಾಜ್‌ ತಮ್ಮ ಗೋಶಾಲೆಯಲ್ಲಿ ಗೋ ಪೂಜೆ ನೆರವೇರಿಸಿದರೆ ಹಾಗೂ ಶಾಸಕ ಕೆ.ರಘುಪತಿ ಭಟ್‌ ನಿವಾಸದಲ್ಲಿ ಗೋಗ್ರಾಸ ನೀಡಿದರು.

ಮಹತೋಬಾರ ಕೊಡವೂರು ಶಂಕರನಾರಾಯಣ ದೇವಳದಲ್ಲಿ ಸಾಮೂಹಿಕ ಗೋಪೂಜೆ ನಡೆಯಿತು. ದೇವಸ್ಥಾನದ ಎದುರಿನಲ್ಲಿ ಹಸು, ಕರುವಿಗೆ ಭಕ್ತರು ಗೋಪೂಜೆ ಮಾಡಿದರು. ಗೋವಿನ ಕಾಲು ತೊಳೆದು, ಅರಿಶಿನ, ಕುಂಕುಮ ಹಚ್ಚಿ ಪೂಜೆ ಆರತಿ ಬೆಳಗಲಾಯಿತು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ್, ಸದಸ್ಯ ಜನಾರ್ದನ್ ಕೊಡವೂರು, ರಾಜ ಎ.ಸೇರಿಗಾರ್, ಬಾಬಾ, ನಗರಸಭಾ ಸದಸ್ಯ ಕೆ. ಶ್ರೀಶ ಕೊಡವೂರು ಇದ್ದರು.

ಉಡುಪಿ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ದೇವಳದ ಪ್ರದಾನ ಅರ್ಚಕರು ಆರತಿ ಬೆಳಗಿ ಗೋವಿಗೆ ಪೂಜೆ ನೆರವೇರಿಸಿದರು. ದೇವಳದ ಆಡಳಿತ ಮಂಡಳಿ ಸದಸ್ಯರಾದ ಗಣೇಶ ಕಿಣಿ , ಗಿರೀಶ ಭಟ್, ನರಸಿಂಹ ಕಿಣಿ, ವಿನಾಯಕ ಭಟ್, ಶಾಮಪ್ರಸಾದ್ ಕುಡ್ವ ಇದ್ದರು.

ಹಬ್ಬದ ಸಂಭ್ರಮ:

ಕೊರೊನಾ ಸೋಂಕಿನ ಭೀತಿಯ ನಡುವೆಯೂ ನಗರದಲ್ಲಿ ದೀಪಾವಳಿ ಸಂಭ್ರಮ ಮನೆಮಾಡಿದೆ. ಮಾರುಕಟ್ಟೆಯಲ್ಲಿ ಎರಡು ದಿನಗಳಿಂದ ಹಬ್ಬಕ್ಕೆ ಖರೀದಿ ಭರಾಟೆ ಜೋರಾಗಿದೆ. ಹೂ, ಹಣ್ಣು ಮಾರುಕಟ್ಟೆಗಳು ಗಿಜಿಗುಡುತ್ತಿವೆ. ಹೊರ ಜಿಲ್ಲೆಗಳಿಂದ ಹೂ, ಹಣ್ಣು ಮಾರಾಟಗಾರರ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದು, ನಗರದ ಪ್ರಮುಖ ರಸ್ತೆಗಳ ಇಕ್ಕೆಲಗಳಲ್ಲಿ ಮಾರಾಟ ಮಾಡುತ್ತಿದ್ದಾರೆ.

ಬಟ್ಟೆ ಮಾರಾಟ ಮಳಿಗೆಗಳು ಹಾಗೂ ಆಭರಣ ಮಾರಾಟ ಮಳಿಗೆಗಳು ಗ್ರಾಹಕರಿಂದ ತುಂಬಿದ್ದವು. ನಗರದ ಪ್ರಮುಖ ಮಾಲ್‌ಗಳಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಾಗಿತ್ತು. ಗ್ರಾಹಕರನ್ನು ಸೆಳೆಯಲು ಉತ್ಪನ್ನಗಳ ಮೇಲೆ ರಿಯಾಯಿತಿ ನೀಡಲಾಗಿದೆ. ಸಂಜೆಯಾಗುತ್ತಿದ್ದಂತೆ ರಸ್ತೆಗಳು ವಾಹನಗಳಿಂದ ಗಿಜಿಗಿಡುತ್ತಿದ್ದು, ಕಲ್ಸಂಕ ಜಂಕ್ಷನ್‌, ಸಿಟಿ ಬಸ್ ನಿಲ್ದಾಣ, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಎದುರು ಸಂಚಾರ ಸಮಸ್ಯೆ ಎದುರಾಗಿದೆ. ಖರೀದಿಗೆ ಬರುವ ಗ್ರಾಹಕರು ಎಲ್ಲೆಂದರಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡುತ್ತಿದ್ದು, ಸಮಸ್ಯೆ ಹೆಚ್ಚಾಗಿದೆ.

ಗೂಡು ದೀಪಗಳಿಗೆ ಬೇಡಿಕೆ:

ಮಾರುಕಟ್ಟೆಗೆ ಬಗೆಬಗೆಯ ಗೂಡುದೀಪಗಳು ಲಗ್ಗೆಯಿಟ್ಟಿದ್ದು, ಕೊರೊನಾ ಸೋಂಕು ತಡೆ ಜಾಗೃತಿ ಮೂಡಿಸುವ ಗೂಡುದೀಪಗಳು ಗಮನ ಸೆಳೆದವು. ಸ್ಥಳೀಯವಾಗಿ ಸಿದ್ಧಪಡಿಸಿದ್ದ ಗೂಡು ದೀಪಗಳ ಖರೀದಿಗೆ ಜನರು ಉತ್ಸಾಹ ತೋರಿದರು. ಸಂಜೆಯಾಗುತ್ತಿದ್ದಂತೆ ಮನೆಯ ಮುಂದೆ ಪ್ರಜ್ವಲಿಸಿದ ಗೂಡುದೀಪಗಳು ಹಬ್ಬದ ಸಂಭ್ರಮ ಹೆಚ್ಚಿಸಿದವು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು