ಬುಧವಾರ, ಮೇ 25, 2022
30 °C
ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರು

ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಬೆಳಕಿನ ಹಬ್ಬ ದೀಪಾವಳಿಯನ್ನು ಸಾರ್ವಜನಿಕರು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಬುಧವಾರ ನಗರದ ಹೂ, ಹಣ್ಣು, ತರಕಾರಿ ಮಾರುಕಟ್ಟೆಗಳಲ್ಲಿ ಗ್ರಾಹಕರ ದಟ್ಟಣೆ ಹೆಚ್ಚಾಗಿ ಕಂಡುಬಂತು.

ಅಗತ್ಯ ವಸ್ತುಗಳ ಬೆಲೆ ಏರಿಕೆ ಮಧ್ಯೆಯೂ ಸಾರ್ವಜನಿಕರು ಹಬ್ಬಕ್ಕೆ ಅಗತ್ಯವಾಗಿ ಬೇಕಾದ ವಸ್ತುಗಳನ್ನು ಖರೀದಿಸಿದರು. ಹೊರ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಹೂ ಮಾರಾಟಾರರು ಉಡುಪಿ ನಗರಕ್ಕೆ ಬಂದಿದ್ದು, ಉಡುಪಿ–ಮಣಿಪಾಲ ರಸ್ತೆಯ ಇಕ್ಕೆಲ, ಕೃಷ್ಣಮಠದ ರಥಬೀದಿ, ಕೆ.ಎಂ. ಮಾರ್ಗ ಸೇರಿದಂತೆ ಹಲವು ಕಡೆಗಳಲ್ಲಿ ವ್ಯಾಪಾರ ನಡೆಸುತ್ತಿದ್ದಾರೆ.

ಮಾರು ಸೇವಂತಿಗೆ ಹೂವಿಗೆ ₹ 60 ರಿಂದ ₹ 70 ದರ ಇದ್ದರೆ, ಚೆಂಡು ಹೂವಿಗೆ ₹ 40ರಿಂದ 50 ದರ ಇತ್ತು. ಟೊಮೆಟೊ 50, ಈರುಳ್ಳಿ 45 ಸೇರಿದಂತೆ ಎಲ್ಲ ತರಕಾರಿ ದರ ಕೂಡ ಗಗನಕ್ಕೇರಿವೆ. ಸೇಬು ಕೆ.ಜಿಗೆ ₹ 150ರ ಗಡಿ ದಾಟಿತ್ತು. ಹಬ್ಬಕ್ಕೆ ಮಣ್ಣಿನ ಹಣತೆ ಖರೀದಿಗೆ ಸಾರ್ವಜನಿಕರಿಂದ ಉತ್ಸುಕತೆ ಕಂಡುಬಂತು. 

ರಸ್ತೆಯ ಇಕ್ಕೆಲಗಳಲ್ಲಿ ಹೂ, ಹಣ್ಣು ಹಾಗೂ ಪಟಾಕಿಗಳ ಮಾರಾಟ ಮಳಿಗೆಗಳನ್ನು ಇಡಲಾಗಿದೆ. ಕಳೆದ ವರ್ಷ ವ್ಯಾಪಾರ ಇಲ್ಲದೆ ಕಳೆಗುಂದಿದ್ದ ಉದ್ಯಮ ವಹಿವಾಟು ಈ ವರ್ಷ ಚೇತರಿಕೆ ಹಾದಿಗೆ ಮರಳಿದೆ. ಮಾಲ್‌ಗಳಲ್ಲಿ ಹಬ್ಬಕ್ಕೆ ಬಟ್ಟೆ ಖರೀದಿ ಜೋರಾಗಿತ್ತು. ಗೃಹೋಪಯೋಗಿ ವಸ್ತುಗಳ ಮಾರಾಟ ಮಳಿಗೆಗಳಲ್ಲೂ ಜನಜಂಗುಳಿ ಕಂಡುಬಂತು.

ಹಬ್ಬದ ಸಂಭ್ರಮಕ್ಕೆ ಮಳೆ ಅಡ್ಡಿ:

ಬೆಳಿಗ್ಗಿನಿಂದ ಮಧ್ಯಾಹ್ನದವರೆಗೂ ಇದ್ದ ಬಿಸಿಲಿನ ವಾತಾವರಣ ಸಂಜೆಯಾಗುತ್ತಿದ್ದಂತೆ ಬದಲಾಗಿ ಬಿರುಸಾಗಿ ಮಳೆ ಸುರಿಯಿತು. 2 ತಾಸು ಸುರಿದ ಮಳೆಯಿಂದ ಹಬ್ಬದ ಸಂಭ್ರಮಕ್ಕೆ ಅಡ್ಡಿಯಾಯಿತು. ರಾತ್ರಿ ಮಳೆ ನಿಂತ ಬಳಿಕ ಬಾನಿನಲ್ಲಿ ಸಿಡಿಮದ್ದುಗಳ ಚಿತ್ತಾರ ಮೂಡಿತು. ಸಾರ್ವಜನಿಕರು ಮನೆಯ ಮುಂದೆ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.