ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ | ಡೆಂಗಿ ಅಬ್ಬರ; ಸಾರ್ವಜನಿಕರು ತತ್ತರ

Published 25 ಸೆಪ್ಟೆಂಬರ್ 2023, 6:16 IST
Last Updated 25 ಸೆಪ್ಟೆಂಬರ್ 2023, 6:16 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲೆಯಲ್ಲಿ ಡೆಂಗಿ ಉಲ್ಬಣಗೊಂಡಿದ್ದು ರಾಜ್ಯದಲ್ಲೇ ಅತಿ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಆರೋಗ್ಯ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಜಿಲ್ಲೆಯಲ್ಲಿ 578 ಮಂದಿ ಡೆಂಗಿ ಸೋಂಕಿನಿಂದ ಬಳಲುತ್ತಿದ್ದು, ಇಬ್ಬರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ (ಒಂದು ಶಂಕಿತ ಸಾವು). ನೂರಾರು ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಾಮಾನ್ಯವಾಗಿ ಪ್ರತಿವರ್ಷ ಗ್ರಾಮೀಣ ಭಾಗಗಳಲ್ಲಿ ಹೆಚ್ಚಾಗಿ ಡೆಂಗಿ ಕಾಣಿಸಿಕೊಳ್ಳುತ್ತಿತ್ತು. ಬೈಂದೂರು ಹಾಗೂ ಕುಂದಾಪುರ ತಾಲ್ಲೂಕುಗಳು ಡೆಂಗಿಗೆ ಹೆಚ್ಚು ಬಾಧಿತವಾಗುತ್ತಿದ್ದವು. ಬೈಂದೂರು ತಾಲ್ಲೂಕಿನ ಕೊಲ್ಲೂರು, ಮುದೂರು, ಜಡ್ಕಲ್ ಪ್ರದೇಶದಲ್ಲಿರುವ ರಬ್ಬರ್ ಪ್ಲಾಂಟೇಷನ್‌ಗಳು, ಅಡಿಕೆ ಹಾಗೂ ಅನಾನಸ್‌ ತೋಟಗಳು ಡೆಂಗಿ ಸೊಳ್ಳೆಗಳ ಉತ್ಪತ್ತಿಯ ತಾಣವಾಗುತ್ತಿತ್ತು.

ಆದರೆ, ಈ ಬಾರಿ ಡೆಂಗಿ ಹಾವಳಿ ನಗರ ಪ್ರದೇಶಗಳಲ್ಲಿ ಹೆಚ್ಚಾಗಿದೆ. ಜಿಲ್ಲೆಯ ಅರ್ಧದಷ್ಟು ಡೆಂಗಿ ಪ್ರಕರಣಗಳು ಉಡುಪಿ ಹಾಗೂ ಮಣಿಪಾಲ ನಗರ ವ್ಯಾಪ್ತಿಯಲ್ಲಿ ಪತ್ತೆಯಾಗಿದೆ. ಉಡುಪಿಯಲ್ಲಿ 206, ಮಣಿಪಾಲದಲ್ಲಿ 100 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು ಅವಳಿ ನಗರಗಳು ಡೆಂಗಿಗೆ ಸಂಪೂರ್ಣವಾಗಿ ನಲುಗಿ ಹೋಗಿವೆ. 

ಉಳಿದಂತೆ ಮಲ್ಪೆಯಲ್ಲಿ 26, ಕೆಮ್ಮಣ್ಣು 24, ಪಡುಬಿದ್ರಿ 21, ಹಿರೇಬೆಟ್ಟು 18, ಬ್ರಹ್ಮಾವರ 18, ಹೆಬ್ರಿ 11, ಕಾಪು, ಮೂಡಬೆಟ್ಟು ಭಾಗಗಳಲ್ಲಿ ತಲಾ 10, ಶಿರ್ವದಲ್ಲಿ 8, ಕುಕ್ಕೆಹಳ್ಳಿ 8, ಮಣಿಪುರ 7, ಮುದರಂಗಡಿ 5, ಕಿರಿ ಮಂಜೇಶ್ವರ 5, ಕೊಳಲಗಿರಿ, ಪೆರ್ಣಂಕಿಲ 4, ಸಾಲಿಗ್ರಾಮ 4 ಪ್ರದೇಶಗಳಲ್ಲಿ ತಲಾ ನಾಲ್ಕು ಡೆಂಗಿ ಪ್ರಕರಣಗಳು ಪತ್ತೆಯಾಗಿವೆ.

ಡೆಂಗಿ ಉಲ್ಬಣಕ್ಕೆ ಕಾರಣ: ಜಿಲ್ಲೆಯಲ್ಲಿ ಡೆಂಗಿ ಅಬ್ಬರಕ್ಕೆ ವಾತಾವರಣದಲ್ಲಾಗಿರುವ ಬದಲಾವಣೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಸಾಮಾನ್ಯವಾಗಿ ಪ್ರತಿವರ್ಷ ಮಳೆಗಾಲದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದ ಪರಿಣಾಮ ಡೆಂಗಿ ಹರಡುವ ಸೊಳ್ಳೆಗಳ ಉತ್ಪತ್ತಿ ತಕ್ಕಮಟ್ಟಿಗೆ ನಿಯಂತ್ರಣವಾಗುತ್ತಿತ್ತು. ನಿಂತ ನೀರಿನಲ್ಲಿ ಉತ್ಪತ್ತಿಯಾಗುತ್ತಿದ್ದ ಸೊಳ್ಳೆಯ ಮೊಟ್ಟೆಗಳು ಜೋರು ಮಳೆಗೆ ಕೊಚ್ಚಿಹೋಗುತ್ತಿತ್ತು.

ಆದರೆ, ಈ ಬಾರಿ ಸೊಳ್ಳೆಗಳು ಮೊಟ್ಟೆ ಇಡಲು ಪೂರಕವಾದ ವಾತಾವರಣ ನಿರ್ಮಾಣವಾಗಿದೆ. ಸೊಳ್ಳೆಗಳು ಬಹುಬೇಗನೆ ಉತ್ಪತ್ತಿಯಾಗಲು ಪ್ರಶಸ್ತವಾಗಿರುವ ಬಿಸಿಲು ಹಾಗೂ ಮಳೆಯ ವಾತಾವರಣ ಇರುವುದು ಡೆಂಗಿ ಸಮಸ್ಯೆ ಗಂಭೀರವಾಗಲು ಕಾರಣ ಎನ್ನುತ್ತಾರೆ ವೈದ್ಯರು.

ರಕ್ತ ಕೇಂದ್ರಗಳಲ್ಲಿ ಪ್ಲೇಟ್‌ಲೇಟ್‌ ಕೊರತೆ: ಡೆಂಗಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಜಿಲ್ಲೆಯ ಪ್ರಮುಖ ರಕ್ತನಿಧಿ ಕೇಂದ್ರಗಳಲ್ಲಿ ಪ್ಲೇಟ್‌ಲೇಟ್‌ಗಳ ಕೊರತೆ ಎದುರಾಗಿದೆ. ಡೆಂಗಿ ಸೋಂಕಿತರಲ್ಲಿ ಪ್ಲೇಟ್‌ಲೇಟ್‌ಗಳ ಸಂಖ್ಯೆ 10,000ಕ್ಕಿಂತ ಕಡಿಮೆಯಾದರೆ ಪ್ಲೇಟ್‌ಲೇಟ್‌ಗಳನ್ನು ಒದಗಿಸಬೇಕಾಗುತ್ತದೆ. ಇಲ್ಲವಾದರೆ ರೋಗಿಗಳಿಗೆ ಪ್ರಾಣಾಪಾಯ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಜಿಲ್ಲೆಯ ರಕ್ತನಿಧಿ ಕೇಂದ್ರಗಳಲ್ಲಿ ಪ್ಲೇಟ್‌ಲೇಟ್‌ಗಳ ಕೊರತೆ ಎದುರಾಗಿರುವುದರಿಂದ ರೋಗಿಗಳ ಸಂಬಂಧಿಗಳು, ಸ್ನೇಹಿತರು ಬದಲಿ ರಕ್ತದಾನಿಗಳ ವ್ಯವಸ್ಥೆ ಮಾಡಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.

ಪ್ಲೇಟ್‌ಲೇಟ್‌ ಜೀವಿತಾವಧಿ 5 ದಿನ ಮಾತ್ರ: ರಕ್ತವನ್ನು ಒಂದು ತಿಂಗಳ ಕಾಲ ಶೇಖರಿಸಿಡಬಹುದು, ಆದರೆ, ಪ್ಲೇಟ್‌ಲೇಟ್‌ಗಳ ಆಯುಷ್ಯ ಕೇವಲ 5 ದಿನ ಮಾತ್ರ. ಏಕಕಾಲದಲ್ಲಿ ಹೆಚ್ಚಿನ ಪ್ರಮಾಣದ ಪ್ಲೇಟ್‌ಲೇಟ್‌ಗಳನ್ನು ಸಂಗ್ರಹಿಸಿಟ್ಟುಕೊಳ್ಳಲು ಸಾಧ್ಯವಿಲ್ಲದಿರುವುದರಿಂದ ನಿಯಮಿತವಾಗಿ ರಕ್ತದಾನಿಗಳು ರಕ್ತದಾನ ಮಾಡಿದರೆ ಮಾತ್ರ ಪ್ಲೇಟ್‌ಲೇಟ್‌ಗಳ ಕೊರತೆ ನೀಗಿಸಬಹುದು ಎನ್ನುತ್ತಾರೆ ಕೆಎಂಸಿ ರಕ್ತನಿಧಿ ಕೇಂದ್ರದ ಮುಖ್ಯಸ್ಥೆ ಶಮಿ ಶಾಸ್ತ್ರೀ.

ಪ್ಲೇಟ್‌ಲೇಟ್‌ ದಾನಿಗಳು ಅಗತ್ಯ: ಡೆಂಗಿ ಪ್ರಕರಣಗಳು ಹೆಚ್ಚಾಗಿರುವ ಈ ಹೊತ್ತಿನಲ್ಲಿ ರಕ್ತದಾನ ಮಾಡುವುದಕ್ಕಿಂತ ನೇರವಾಗಿ ಪ್ಲೇಟ್‌ಲೇಟ್‌ (ಅಪೆರೆಸಿಸ್‌) ದಾನ ಮಾಡಿದರೆ ಅನುಕೂಲ. ಐವರು ಯೂನಿಟ್‌ ರಕ್ತದಿಂದ ಸಂಗ್ರಹವಾಗುವ ಪ್ಲೇಟ್‌ಲೇಟ್‌ಗಳ ಪ್ರಮಾಣ, ಒಬ್ಬ ಅಪರೆಸಿಸ್‌ ದಾನಿಯಿಂದ ಪಡೆಯುವ ಪ್ಲೇಟ್‌ಲೇಟ್‌ಗಳಿಗೆ ಸಮನಾಗಿರುತ್ತದೆ.

ರಕ್ತದಾನಿಗಳಿಂದ ಅಪೆರೆಸಿಸ್‌ ಪಡೆಯುವ ಪ್ರಕ್ರಿಯೆ ಸುಮಾರು 1 ತಾಸಿಗೂ ಹೆಚ್ಚು ಕಾಲ ತಗುಲುತ್ತದೆ. ಈ ಪ್ರಕ್ರಿಯೆಯಲ್ಲಿ ದಾನಿಗಳಿಂದ ರಕ್ತವನ್ನು ಪಡೆಯುವುದಿಲ್ಲ; ಬದಲಾಗಿ ಪ್ಲೇಟ್‌ಲೆಟ್‌ಗಳನ್ನು ಮಾತ್ರ ತೆಗೆಯಲಾಗುತ್ತದೆ. ಅಪರೆಸಿಸ್‌ ದಾನದ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಎನ್ನುತ್ತಾರೆ ಶಮಿ ಶಾಸ್ತ್ರೀ.

ಉಡುಪಿಯ ಕಲ್ಸಂಕ ಬಳಿಯ ರಾಜಕಾಲುವೆಯ ಬಳಿ ಸೊಳ್ಳೆಗಳು ಉತ್ಪತ್ತಿಯಾಗುತ್ತಿರುವುದು
ಉಡುಪಿಯ ಕಲ್ಸಂಕ ಬಳಿಯ ರಾಜಕಾಲುವೆಯ ಬಳಿ ಸೊಳ್ಳೆಗಳು ಉತ್ಪತ್ತಿಯಾಗುತ್ತಿರುವುದು
ಡೆಂಗಿ ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪ್ಲೇಟ್‌ಲೇಟ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಆದರೆ ಸಮಸ್ಯೆ ಗಂಭೀರವಾಗಿಲ್ಲ. ನಿರಂತರವಾಗಿ ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗುತ್ತಿರುವುದರಿಂದ ಅಗತ್ಯ ಪ್ರಮಾಣದ ರಕ್ತ ಸಂಗ್ರಹವಾಗುತ್ತಿದೆ
– ಡಾ.ವೀಣಾ, ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ಮುಖ್ಯಸ್ಥೆ
ಡೆಂಗೆ ಪ್ರಕರಣಗಳು ಹೆಚ್ಚಾಗಿರುವುದರಿಂದ ವಾರಾಂತ್ಯದಲ್ಲಿ ಪ್ಲೇಟ್‌ಲೇಟ್‌ಗಳ ಕೊರತೆ ಕಾಡುತ್ತಿದೆ. ನಿರಂತರ ರಕ್ತದಾನ ಶಿಬಿರಗಳು ನಡೆಯುತ್ತಿರುವುದರಿಂದ ಸಮಸ್ಯೆ ಹೆಚ್ಚಾಗಿಲ್ಲ. ಸಾರ್ವಜನಿಕರು ಸ್ವಯಂಪ್ರೇರಿತವಾಗಿ ಅಪೆರೆಸಿಸ್‌ ದಾನ ಮಾಡಬೇಕು
–ಶಮಿ ಶಾಸ್ತ್ರಿ ಕೆಎಂಸಿ ರಕ್ತನಿಧಿ ಕೇಂದ್ರದ ಮುಖ್ಯಸ್ಥೆ

ಡೆಂಗಿ ಬಾಧಿತ ಗ್ರಾಮಗಳು

  • ಉಡುಪಿ–206

  • ಮಣಿಪಾಲ–100‌

  • ಮಲ್ಪೆ–26‌

  • ಕೆಮ್ಮಣ್ಣು–24

  • ಪಡುಬಿದ್ರಿ–21

  • ಹಿರೇಬೆಟ್ಟು–18

  • ಬ್ರಹ್ಮಾವರ–18

  • ಹೆಬ್ರಿ–11

  • ಕಾಪು–10

  • ಮೂಡಬೆಟ್ಟು–10

  • ಶಿರ್ವ–8

  • ಕುಕ್ಕೆಹಳ್ಳಿ–8

  • ಮಣಿಪುರ–7

  • ಮುದರಂಗಡಿ–5

  • ಕಿರಿ ಮಂಜೇಶ್ವರ–5 

  • ಕೊಳಲಗಿರಿ–4

  • ಪೆರ್ಣಂಕಿಲ–4

  • ಸಾಲಿಗ್ರಾಮ–4 

  • ಹಾಲಾಡಿ–3

  • ದೊಡ್ಡರಂಗಡಿ–3

  • ಇರ್ಗಾನ–3

  • ಕೊರ್ಗಿ–3

  • ಕುಕ್ಕುಂದೂರು–3

  • ಮಾಳ–3

  • ನಿಟ್ಟೆ–3

  • ಪೇತ್ರಿ–3

  • ವಂಡ್ಸೆ–2

  • ಸಿದ್ದಾಪುರ–2

  • ಶಂಕರನಾರಾಯಣ–2

  • ಸೈಬರಕಟ್ಟೆ–2

  • ಮಂದಾರ್ತಿ–2

  • ಕುಂಭಾಶಿ–2

  • ಕೋಟ–2

  • ಕೊಕ್ಕರ್ಣೆ–2

  • ಅಜೆಕಾರು–2

  • ಕೆದೂರು–2

  • ಕರ್ಜೆ–2

  • ಬಾರ್ಕೂರು–2

  • ಹಿರಿಯಡ್ಕ–2

ಗಂಗೊಳ್ಳಿ ಬೆಳ್ಮಣ್ಣು ಬಸ್ರೂರು  ಜಿ.ಎಚ್‌ ಕಾರ್ಕಳ ಇನ್ನಾ ಕೋಡಿಬೆಂಗ್ರೆ ಕೊಲ್ಲೂರುಮರವಂತೆ ಪಳ್ಳಿ ಸಾಸ್ತಾನ ಬೈಲೂರು ಬಜಗೋಳಿಯಲ್ಲಿ ತಲಾ ಒಂದು ಡೆಂಗಿ ಪ್ರಕರಣಗಳು ಪತ್ತೆಯಾಗಿವೆ.

ಡೆಂಗಿ ಎಲ್ಲಿ ಎಷ್ಟು ಪ್ರಕರಣ

ತಾಲ್ಲೂಕು;ಡೆಂಗಿ ಪ್ರಕರಣ

ಬ್ರಹ್ಮಾವರ;39

ಉಡುಪಿ;431

ಕಾಪು;46

ಬೈಂದೂರು;5

ಕುಂದಾಪುರ;22

ಹೆಬ್ರಿ;19

ಕಾರ್ಕಳ;21

ಟಾಪ್‌ 10 ಡೆಂಗಿ ಬಾಧಿತ ಜಿಲ್ಲೆಗಳು (ಅ.22ರವರೆಗೆ)

  1. ಉಡುಪಿ;578

  2. ಮೈಸೂರು;480

  3. ಶಿವಮೊಗ್ಗ;232

  4. ಕಲಬುರ್ಗಿ;219

  5. ದಕ್ಷಿಣ ಕನ್ನಡ;210

  6. ವಿಜಯಪುರ;195

  7. ಚಿತ್ರದುರ್ಗ;167

  8. ಚಿಕ್ಕಮಗಳೂರು;156

  9. ಬೆಳಗಾವಿ;154

  10. ದಾವಣಗೆರೆ;152

ನಗರ ಪ್ರದೇಶಗಳಲ್ಲಿ ಹೆಚ್ಚು
ಸಾಮಾನ್ಯವಾಗಿ ಗ್ರಾಮಾಂತರ ಭಾಗಗಳಲ್ಲಿ ಪ್ರತಿವರ್ಷ ಡೆಂಗಿ ಪ್ರಕರಣಗಳು ಪತ್ತೆಯಾಗುತ್ತಿದ್ದವು. ಈ ವರ್ಷ ಹವಾಮಾನ ಬದಲಾವಣೆಯಿಂದ ನಗರ ಭಾಗಗಳಲ್ಲಿ ಡೆಂಗೆ ಹೆಚ್ಚಾಗಿದೆ. ಉಡುಪಿಯ ಅಜ್ಜರಕಾಡು ಮಣಿಪಾಲದಲ್ಲಿ ಸಮಸ್ಯೆ ಗಂಭೀರವಾಗಿದೆ. ಡೆಂಗಿ ನಿಯಂತ್ರಣ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯಿಂದ ಲಾರ್ವಾ ಗುರುತಿಸಿ ನಾಶಪಡಿಸುವ ಕಾರ್ಯ ಜಿಲ್ಲೆಯಾದ್ಯಂತ ನಡೆಯುತ್ತಿದೆ. ಡೆಂಗಿ ಬಾಧಿತ ಸ್ಥಳಗಳಲ್ಲಿ ಸೊಳ್ಳೆಗಳ ನಿಯಂತ್ರಣಕ್ಕೆ ನಿಯಮಿತವಾಗಿ ಫಾಗಿಂಗ್ ಮಾಡಲಾಗುತ್ತಿದೆ. ಸಾರ್ವಜನಿಕರಲ್ಲಿ ಡೆಂಗಿ ನಿಯಂತ್ರಿಸುವ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. –ಡಾ.ಪ್ರಶಾಂತ್ ಭಟ್ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ
ಡೆಂಗಿ ಲಕ್ಷಣ ಚಿಕಿತ್ಸೆ
ಸೋಂಕಿತ ಈಡಿಸ್ ಸೊಳ್ಳೆ ಮನುಷ್ಯರಿಗೆ ಕಚ್ಚುವುದರಿಂದ ಡೆಂಗಿ ಜ್ವರವು ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತಾ ಹೋಗುತ್ತದೆ. ಈಡಿಸ್ ಸೊಳ್ಳೆಗಳು ಸಾಮಾನ್ಯವಾಗಿ ಹಗಲು ಹೊತ್ತಿನಲ್ಲಿ ಕಚ್ಚುತ್ತದೆ. ಸೊಳ್ಳೆ ಕಚ್ಚಿದ 5ರಿಂದ7 ದಿನಗಳಲ್ಲಿ ವಿಪರೀತ ಜ್ವರ ಕಣ್ಣಿನ ಗುಡ್ಡೆಗಳ ಹಿಂಭಾಗದಲ್ಲಿ ನೋವು ತೀವ್ರ ತಲೆನೋವು ಮೈಕೈ; ಕೀಲು ನೋವು ವಾಕರಿಕೆ ವಾಂತಿ ತೀವ್ರ ಹೊಟ್ಟೆ ನೋವು ಬಾಯಿ ಮೂಗು ವಸಡುಗಳಲ್ಲಿ ರಕ್ತಸಾವ ಚರ್ಮದ ಮೇಲೆ ಅಲ್ಲಲ್ಲಿ ಕೆಂಪಾದ ಗಂಧೆಗಳು ರಕ್ತಸ್ರಾವದ ಗುರುತುಗಳು ಕಪ್ಪು ಬಣ್ಣದ ಮಲ ವಿಸರ್ಜನೆ ವಿಪರೀತ ಬಾಯಾರಿಕೆ ಚರ್ಚ ಬಿಳುಚಿಕೊಳ್ಳುವುದು ಜ್ಞಾನ ತಪ್ಪುವುದು ರಕ್ತದೊತ್ತಡ ಕುಸಿತ ನಾಡಿ ಬಡಿತ ಕುಸಿತದಂತಹ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಡೆಂಗಿಗೆ ನಿರ್ದಿಷ್ಟ ಚಿಕಿತ್ಸೆ ಇರುವುದಿಲ್ಲ ರೋಗ ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡಲಾಗುತ್ತದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯದಿದ್ದರೆ ಸಾವು ಸಂಭವಿಸಬಹುದು.
ಡೆಂಗಿ ತಡೆಗೆ ಮುನ್ನೆಚ್ಚರಿಕೆ
ನೀರು ಸಂಗ್ರಹವಾಗುವ ತೊಟ್ಟಿ ಬ್ಯಾರೆಲ್ ಡ್ರಂ ಹೂ ಕುಂಡಗಳ ಕೆಳಗಿನ ತಟ್ಟೆಗಳು ಏರ್-ಕೂಲರ್ ಮನೆಯ ಪರಿಸರದಲ್ಲಿ ಬಿಸಾಡಿದ ಬಾಟಲಿ ಟೈರ್ ಪ್ಲಾಸ್ಟಿಕ್ ಗ್ಲಾಸ್ ಎಳನೀರಿನ ಚಿಪ್ಪು ಹಾಗೂ ಇತರ ವಸ್ತುಗಳಲ್ಲಿ ಸಂಗ್ರಹವಾದ ಮಳೆಯ ನೀರಿನಲ್ಲಿ ಈಡಿಸ್ ಸೊಳ್ಳೆಗಳು ಹೇರಳವಾಗಿ ಉತ್ಪತ್ತಿಯಾಗುತ್ತವೆ. ಮನೆಯ ಚಾವಣಿ ನೀರಿನ ತೊಟ್ಟಿಗಳನ್ನು ಕನಿಷ್ಠ ವಾರಕ್ಕೊಮ್ಮೆ ಖಾಲಿ ಮಾಡಿ ಸ್ವಚ್ಛಗೊಳಿಸಿ ಮುಚ್ಚಬೇಕು. ಮನೆಯ ಪರಿಸರದಲ್ಲಿರುವ ವಸ್ತುಗಳಲ್ಲಿ ನೀರು ಸಂಗ್ರಹವಾಗದಂತೆ ಎಚ್ಚರವಹಿಸಬೇಕು. ಮೈ ತುಂಬಾ ಬಟ್ಟೆ ಧರಿಸಬೇಕು. ಸೊಳ್ಳೆ ಪರದೆ ಉಪಯೋಗಿಸಬೇಕು. ಜ್ವರ ಪೀಡಿತರು ಹೆಚ್ಚು ದ್ರವರೂಪದ ಆಹಾರ ಸೇವಿಸಬೇಕು ಮನೆಯ ಕಿಟಕಿ ಬಾಗಿಲುಗಳಿಗೆ ಸೊಳ್ಳೆ ನಿರೋಧಕ ಜಾಲರಿ ಅಳವಡಿಸಬೇಕು. ಜ್ವರದ ಲಕ್ಷಣಗಳಿದ್ದಲ್ಲಿ ಬ್ರೂಫಿನ್ ಅಥವಾ ಇತರ ನೋವು ನಿವಾರಕ ಸೇವಿಸಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT