ಉಡುಪಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ನಿವೃತ್ತ ನೌಕರರ ವೇದಿಕೆ ವತಿಯಿಂದ ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಮಂಗಳವಾರ ಕಪ್ಪು ಪಟ್ಟಿ ಧರಿಸಿ ಧರಣಿ ಸತ್ಯಾಗ್ರಹ ನಡೆಯಿತು.
2022ರ ಜುಲೈ 1ರಿಂದ 2024 ಜುಲೈ 31ರ (25 ತಿಂಗಳು) ನಡುವೆ ನಿವೃತ್ತರಾಗಿರುವ ನೌಕರರಿಗೆ ನಿವೃತ್ತಿ ಸೌಲಭ್ಯಗಳಾದ ಡಿಸಿಆರ್‌ಜಿ, ಇ.ಎಲ್. ಎನ್‌ಕ್ಯಾಶ್‌ಮೆಂಟ್, ಕಮ್ಯುಟೇಶನ್‌ಗಳನ್ನು 7ನೇ ವೇತನ ಆಯೋಗದ ಪರಿಷ್ಕೃತ ವೇತನದನ್ವಯ ಸಾಂಪ್ರದಾಯಿಕವಾಗಿ ನೀಡಬೇಕು ಎಂದು ಧರಣಿ ನಿರತರು ಒತ್ತಾಯಿಸಿದರು.
2022 ಮತ್ತು 2024ರ ನಡುವಿನ 25 ತಿಂಗಳಲ್ಲಿ ರಾಜ್ಯದಲ್ಲಿ 17,963 ಮಂದಿ ನಿವೃತ್ತರಾಗಿದ್ದಾರೆ. ಶಿಕ್ಷಕರು, ಆರೋಗ್ಯ ಇಲಾಖೆ ನೌಕರರು ಸೇರಿದಂತೆ ವಿವಿಧ ಇಲಾಖೆಗಳ ನೌಕರರು ಇದರಲ್ಲಿ ಒಳಗೊಂಡಿದ್ದಾರೆ ಎಂದು ವೇದಿಕೆಯ ಜಿಲ್ಲಾ ಘಟಕದ ಸಂಚಾಲಕ ಪ್ರಕಾಶ್ಚಂದ್ರ ಶೆಟ್ಟಿ ತಿಳಿಸಿದರು.
ನಾವು ಕೂಡ 7ನೇ ವೇತನ ಆಯೋಗದ ಷರಿಷ್ಕೃತ ವೇತನದ ಮೇಲೆ ಆರ್ಥಿಕ ಸೌಲಭ್ಯ ಪಡೆಯಲು ಅರ್ಹರಿದ್ದರೂ ನಮಗೆ ಕೊಡದೆ ಹಳೆಯ ವೇತನದಲ್ಲಿ ಸೌಲಭ್ಯ ನೀಡಲಾಗಿದೆ ಎಂದು ಅವರು ಹೇಳಿದರು.
35–40 ವರ್ಷ ಸುದೀರ್ಘ ಕಾರ್ಯ ನಿರ್ವಹಿಸಿ, ಕೆಳಹಂತದ ವೇತನ ಶ್ರೇಣಿಯಲ್ಲಿ ನೌಕರಿಗೆ ಸೇರಿ ನಿವೃತ್ತರಾದ ನಾವು, ನಿವೃತ್ತಿ ಸಂದರ್ಭದಲ್ಲಿ ಬರಬಹುದಾದ ಆರ್ಥಿಕ ಸೌಲಭ್ಯಗಳ ಮೇಲೆಯೇ ಅವಲಂಬಿತರಾಗಿದ್ದೇವೆ. ಸರ್ಕಾರದ ನಿರ್ಧಾರದಿಂದ ನಮಗೆ ತುಂಬಾ ಆರ್ಥಿಕ ನಷ್ಟ ಉಂಟಾಗಿದೆ ಎಂದು ಅವರು ತಿಳಿಸಿದರು.
‘ನಮಗೆ ಆಗಿರುವ ಅನ್ಯಾಯವನ್ನು ಸರ್ಕಾರ ಸರಿಪಡಿಸಬೇಕು. ಏಳನೇ ವೇತನ ಆಯೋಗದ ಆದೇಶವನ್ನು ಪರಿಶೀಲಿಸಿ ಪರಿಷ್ಕೃತ ಆದೇಶ ಹೊರಡಿಸಬೇಕು’ ಎಂದು ಧರಣಿ ನಿರತರು ಒತ್ತಾಯಿಸಿದರು.