ಶನಿವಾರ, ಜೂನ್ 25, 2022
24 °C
ಬೆಳಿಗ್ಗೆ 6ರಿಂದ 2ವರೆಗೆ ಚಟವಟಿಕೆಗಳಿಗೆ ಅವಕಾಶ

14ರಿಂದ ನಿರ್ಧಿಷ್ಟ ಚಟುವಟಿಕೆಗಳಿಗೆ ಮಾತ್ರ ಅನುಮತಿ: ಜಿಲ್ಲಾಧಿಕಾರಿ ಜಿ.ಜಗದೀಶ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಜಿಲ್ಲೆಯಲ್ಲಿ ಜೂನ್ 14ರ ಬೆಳಿಗ್ಗೆ 6ರಿಂದ ಕೆಲವು ನಿರ್ಬಂಧಗಳು ತೆರವಾಗಲಿದ್ದು, ಸರ್ಕಾರ ಸೂಚಿಸಿರುವ ಚಟುವಟಿಕೆಗಳನ್ನು ಹೊರತುಪಡಿಸಿ ಇತರೆ ಚಟುವಟಿಕೆಗಳನ್ನು ನಡೆಸುವಂತಿಲ್ಲ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಸಿದ್ದಾರೆ.

‌ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಿರುವ ಕಾರಣ ರಾಜ್ಯ ಸರ್ಕಾರ ಲಾಕ್‌ಡೌನ್‌ ನಿರ್ಬಂಧಗಳನ್ನು ಸಡಿಲಿಸಿದೆ. ಜೂನ್ 14 ರಿಂದ 21ರ ವರೆಗೆ ಜಿಲ್ಲೆಯಲ್ಲಿ ಕೆಲವು ಚಟುವಟಿಕೆಗಳ ಆರಂಭಕ್ಕೆ ಅನುಮತಿ ನೀಡಲಾಗಿದೆ ಎಂದರು.

ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 6 ರಿಂದ 2 ಗಂಟೆಯವರೆಗೆ ಉತ್ಪಾದನಾ ಚಟುವಟಿಕೆಗಳನ್ನು ನಿರ್ವಹಿಸುವ ಕೈಗಾರಿಕೆಗಳು, ಸಂಸ್ಥೆಗಳು ಶೇ 50 ರಷ್ಟು ಕಾರ್ಮಿಕರೊಂದಿಗೆ ಕಾರ್ಯನಿರ್ವಹಿಸಬಹುದು. ಗಾರ್ಮೆಂಟ್ಸ್‌ಗಳಲ್ಲಿ ಶೇ 30 ಸಿಬ್ಬಂದಿ ಕಾರ್ಯನಿರ್ವಹಿಸಬಹುದು. ಸಿಮೆಂಟ್, ಕಬ್ಬಿಣ ಸೇರಿದಂತೆ ಅಗತ್ಯ ವಸ್ತುಗಳ ಮಾರಾಟ ಮಳಿಗೆಗಳು ತೆರೆಯಲು ಅವಕಾಶವಿದೆ.

ಆಹಾರ ಪದಾರ್ಥಗಳು, ದಿನಸಿ, ಹಣ್ಣು ಮತ್ತು ತರಕಾರಿ, ಮೀನು ಮತ್ತು ಮಾಂಸ, ಡೈರಿ ಮತ್ತು ಹಾಲಿನ ಬೂತ್‌ಗಳು ತೆರೆಯಲು ಮತ್ತು ಪಶು ಆಹಾರ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಬೀದಿ ಬದಿ ವ್ಯಾಪಾರಿಗಳು ಹಾಗೂ ಪಡಿತರ ಅಂಗಡಿಗಳು ಕಾರ್ಯನಿರ್ವಹಿಸಬಹುದು. ಆದರೆ ಬೀದಿಬದಿ ವ್ಯಾಪಾರಿಗಳು ಆಹಾರ ಪದಾರ್ಥಗಳನ್ನು ಮಾರುವಂತಿಲ್ಲ. ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಮದ್ಯ ಪಾರ್ಸೆಲ್‌ಗೆ ಅವಕಾಶವಿದೆ. ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಪಾರ್ಸೆಲ್‌ಗೆ ಅನುಮತಿ ಇದೆ. ಹೋಂ ಡೆಲಿವರಿಗೆ ಅಡ್ಡಿಯಿಲ್ಲ. ಉಳಿದಂತೆ ಯಾವುದೇ ಅಂಗಡಿಗಳನ್ನು ತೆರೆಯುವಂತಿಲ್ಲ ಎಂದರು.

ಕೈಗಾರಿಕೆಗಳು ಕಡ್ಡಾಯವಾಗಿ ಕೋವಿಡ್ ನಿಯಂತ್ರಣ ಕ್ರಮಗಳನ್ನು ಪಾಲಿಸಬೇಕು. ಸಿಬ್ಬಂದಿ ವಿವರ ಒದಗಿಸಬೇಕು. ನಿಗದಿಗಿಂತ ಹೆಚ್ಚಿನ ಕಾರ್ಮಿಕರನ್ನು ಬಳಸುವಂತಿಲ್ಲ. ಅಂಗಡಿಗಳ ಮುಂದೆ ಅಂತರ ಪಾಲನೆಗೆ ಮಾರ್ಕಿಂಗ್ ವ್ಯವಸ್ಥೆ ಮಾಡಿರಬೇಕು. ಉದ್ಯಾನಗಳನ್ನು ಬೆಳಿಗ್ಗೆ 5 ರಿಂದ 10ರವರೆಗೆ ತೆರೆಯಬಹುದು. ಉದ್ಯಾನದಲ್ಲಿ ಕ್ರೀಡೆ ಸೇರಿದಂತೆ ಯಾವುದೇ ಚಟುವಟಿಕೆಗೆ ಅನುಮತಿಯಿಲ್ಲ. ಟ್ಯಾಕ್ಸಿ ಮತ್ತು ಆಟೋದಲ್ಲಿ ಗರಿಷ್ಠ ಇಬ್ಬರು ಪ್ರಯಾಣಿಕರು ಮಾತ್ರ ಸಂಚರಿಸಬಹುದು. ಕನ್ನಡಕದ ಅಂಗಡಿಗಳು ಬೆ.6 ರಿಂದ 10ರವರೆಗೆ ತೆರೆಯಲು ಅವಕಾಶವಿದೆ ಎಂದರು.

ಪ್ರತಿದಿನ ರಾತ್ರಿ 7 ಗಂಟೆಯಿಂದ ಮರುದಿನ ಬೆಳಿಗ್ಗೆ 5ರವರೆಗೆ ನೈಟ್ ಕರ್ಫ್ಯೂ ಇದೆ. ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳುವವರು, ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲು ಹೋಗುವವರಿಗೆ, ಟೆಲಿಕಾಂ ಮತ್ತು ಇಂಟರ್ನೆಟ್ ಸೇವೆ ಒದಗಿಸುವ ನೌಕರರು, ವೈದ್ಯಕೀಯ ಸಿಬ್ಬಂದಿ ಸಂಚಾರಕ್ಕೆ ನಿರ್ಬಂಧಗಳಿಲ್ಲ. ಸರಕು ಸಾಗಾಣಿಕೆ ವಾಹನಗಳು, ಇ ಕಾಮರ್ಸ್‌, ಹೋಂ ಡೆಲಿವರಿ ಸೇವೆ ನೀಡುವ ವಾಹನಗಳು ಹಾಗೂ ರೈಲು ಮತ್ತು ವಿಮಾನ ಪ್ರಯಾಣಕ್ಕೆ ತೆರಳುವವರು ಪ್ರಯಾಣದ ಟಿಕೆಟ್ ನೊಂದಿಗೆ ಪ್ರಯಾಣಿಸಲು ಅನುಮತಿ ಇದೆ.

ಶುಕ್ರವಾರ ರಾತ್ರಿ 7 ಗಂಟೆಯಿಂದ ಸೋಮವಾರ ಬೆಳಿಗ್ಗೆ 5 ಗಂಟೆಯವರೆಗೆ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರಲಿದೆ. ಈ ಅವಧಿಯಲ್ಲಿ ಆಹಾರ ಪದಾರ್ಥಗಳು, ದಿನಸಿ ವಸ್ತುಗಳು, ಹಣ್ಣು ಮತ್ತು ತರಕಾರಿ, ಮೀನು ಮತ್ತು ಮಾಂಸ ಡೈರಿ ಮತ್ತು ಹಾಲಿನ ಬೂತ್ ಗಳು ತೆರೆಯಲು ಮತ್ತು ಪಶು ಆಹಾರ ಮಾರಾಟಕ್ಕೆ ಅನುಮತಿ ನೀಡಲಾಗಿದೆ.

ಅನುಮತಿಯೊಂದಿಗೆ ಗರಿಷ್ಠ 40 ಮಂದಿ ಮೀರದಂತೆ ಮದುವೆಗಳನ್ನು ಮನೆಗಳಲ್ಲಿ ನಡೆಸಲು ಅನುಮತಿ ಇದೆ. ಶವಸಂಸ್ಕಾರ ದಲ್ಲಿ ಗರಿಷ್ಠ 5 ಮಂದಿ ಮಾತ್ರ ಭಾಗವಹಿಸಬಹುದು ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಡಾ.ನವೀನ್ ಭಟ್, ಹೆಚ್ಚುವರಿ ಜಿಲ್ಲಾದಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪ ವಿಬಾಗಾಧಿಕಾರಿ ರಾಜು, ಎಎಸ್‌ಪಿ ಕುಮಾರ ಚಂದ್ರ ಹಾಗೂ ತಹಸೀಲ್ದಾರ್ ಇದ್ದರ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು