ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಐಸಿಯುನಲ್ಲಿ ಜಿಲ್ಲಾ ಆಸ್ಪತ್ರೆ ಡಯಾಲಿಸಿಸ್‌ ಘಟಕ

11ರಲ್ಲಿ 1 ಮಾತ್ರ ಕಾರ್ಯ ನಿರ್ವಹಣೆ; ಬಡ ರೋಗಿಗಳ ಪರದಾಟ; ಸಾವು ಬದುಕಿನ ಮಧ್ಯೆ ಹೋರಾಟ
Published 22 ಸೆಪ್ಟೆಂಬರ್ 2023, 6:00 IST
Last Updated 22 ಸೆಪ್ಟೆಂಬರ್ 2023, 6:00 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲಾ ಆಸ್ಪತ್ರೆಯಲ್ಲಿರುವ ಡಯಾಲಿಸಿಸ್‌ ಘಟಕ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದೆ ! ಘಟಕದಲ್ಲಿರುವ 11 ಡಯಾಲಿಸಿಸ್‌ ಯಂತ್ರಗಳ ಪೈಕಿ ಸದ್ಯ ಕಾರ್ಯ ನಿರ್ವಹಿಸುತ್ತಿರುವುದು ಒಂದು ಮಾತ್ರ. ಸುಸ್ಥಿತಿಯಲ್ಲಿರುವ ಯಂತ್ರವೂ ಯಾವುದೇ ಕ್ಷಣದಲ್ಲೂ ಕಾರ್ಯ ನಿಲ್ಲಿಸುವಂತಿದ್ದು, ಇಡೀ ಡಯಾಲಿಸಿಸ್‌ ಘಟಕವನ್ನೇ ಮುಚ್ಚಬೇಕಾದ ಆತಂಕ ಎದುರಾಗಿದೆ.

ರೋಗಿಗಳ ಅಳಲು: ಹೆಬ್ರಿ, ಕುಂದಾಪುರ, ಕಾರ್ಕಳ, ಬ್ರಹ್ಮಾವರ, ಬೈಂದೂರು ಹಾಗೂ ಕಾಪು ತಾಲ್ಲೂಕುಗಳಿಂದ ನಿತ್ಯ ಜಿಲ್ಲಾ ಆಸ್ಪತ್ರೆಗೆ ಡಯಾಲಿಸಿಸ್‌ ಮಾಡಿಸಿಕೊಳ್ಳಲು ರೋಗಿಗಳು ಬರುತ್ತಾರೆ. ಘಟಕದಲ್ಲಿ ಒಂದು ಯಂತ್ರ ಮಾತ್ರ ಕಾರ್ಯ ನಿರ್ವಹಿಸುತ್ತಿರುವುದರಿಂದ ಬಂದ ರೋಗಿಗಳನ್ನು ವಾಪಸ್ ಕಳಿಸಲಾಗುತ್ತಿದೆ. ಪರಿಣಾಮ ಬಡ ರೋಗಿಗಳು ಜೀವನ್ಮರಣ ಸ್ಥಿತಿಯಲ್ಲಿ ನರಳುವಂತಾಗಿದೆ.

ಹೆಚ್ಚು ಹಣ ಕೊಟ್ಟು ಖಾಸಗಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್‌ ಮಾಡಿಸಿಕೊಳ್ಳಲು ಆರ್ಥಿಕವಾಗಿ ಶಕ್ತರಾಗಿಲ್ಲದ ಬಡ ರೋಗಿಗಳು ದಿಕ್ಕು ತೋಚದ ಸ್ಥಿತಿಯಲ್ಲಿದ್ದಾರೆ. ಸಮಯಕ್ಕೆ ಸರಿಯಾಗಿ ಡಯಾಲಿಸಿಸ್‌ ಮಾಡಿಸಿಕೊಳ್ಳಲಾಗದೆ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ.

ಗುರುವಾರ ಜಿಲ್ಲಾ ಆಸ್ಪತ್ರೆಯ ಡಯಾಲಿಸಿಸ್‌ ಕೇಂದ್ರಕ್ಕೆ ಬ್ರಹ್ಮಾವರ ತಾಲ್ಲೂಕಿನ ಮಾರಾಳಿಯಿಂದ ಬಂದಿದ್ದ 66ರ ಪ್ರಾಯದ ರಮೇಶ್ ಪೂಜಾರಿ ಕೇಂದ್ರದ ಎದುರು ಏದುಸಿರು ಬಿಡುತ್ತ ಕುಳಿತಿದ್ದ ದೃಶ್ಯ ಸಮಸ್ಯೆಯ ಗಂಭೀರತೆಯನ್ನು ಸಾರುವಂತಿತ್ತು. ಡಯಾಲಿಸಿಸ್‌ಗೆ ಬಂದು ಮೂರ್ನಾಲ್ಕು ತಾಸು ಕಳೆದರೂ ಯಾರೂ ಕೇಳುವವರು ಇಲ್ಲ ಎಂದು ಅವರು ಉಸಿರು ಬಿಗಿಹಿಡಿದು ಸಮಸ್ಯೆ ಹೇಳಿಕೊಂಡರು.

ಘಟಕದಲ್ಲಿರುವ ಒಂದು ಯಂತ್ರದಲ್ಲಿ ಎಷ್ಟು ಮಂದಿಗೆ ಡಯಾಲಿಸಿಸ್ ಮಾಡಲು ಸಾಧ್ಯ ಎಂದು ಸಿಬ್ಬಂದಿ ಹೇಳುತ್ತಾರೆ. ಹಾಗಾದರೆ, ಬಡ ರೋಗಿಗಳು ಡಯಾಲಿಸಿಸ್‌ ಮಾಡಿಸಿಕೊಳ್ಳಲು ಎಲ್ಲಿಗೆ ಹೋಗಬೇಕು ? ವಾರಕ್ಕೆರಡು ಸಲ ಸಾವಿರಾರು ರೂಪಾಯಿ ಖರ್ಚು ಮಾಡಿ ಖಾಸಗಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್‌ ಮಾಡಿಸಿಕೊಳ್ಳಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಪ್ರತಿ ಬಾರಿ ರಿಕ್ಷಾಗೆ ₹1 ಸಾವಿರ ಬಾಡಿಗೆ ಕೊಟ್ಟು ಬರಬೇಕು. ಇಲ್ಲಿನ ಅವ್ಯವಸ್ಥೆಯಿಂದ ಕೇಂದ್ರದ ಎದುರು ತಾಸುಗಟ್ಟಲೆ ಕಾಯಬೇಕು. ಅನ್ನ, ನೀರು ಇಲ್ಲದೆ ನಿಲ್ಲಬೇಕು. ಬಡವರ ಪ್ರಾಣಕ್ಕೆ ಬೆಲೆ ಇಲ್ಲವೇ ಎಂದು ಅವರು ವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸಿಬ್ಬಂದಿ ಅಸಹಾಯಕತೆ: ಡಯಾಲಿಸಿಸ್‌ ಯಂತ್ರಗಳು ಕಾರ್ಯ ನಿರ್ವಹಿಸದ ಪರಿಣಾಮ ಹೊಸ ರೋಗಿಗಳ ದಾಖಲಾತಿ ಮಾಡಿಕೊಳ್ಳಲಾಗುತ್ತಿಲ್ಲ. ಡಯಾಲಿಸಿಸ್‌ಗೆ ಅಗತ್ಯವಾಗಿ ಬೇಕಾಗಿರುವ ಡಯಾಲೈಸರ್‌, ‌ಟ್ಯುಬಿನ್ಸ್‌, ಇಂಜೆಕ್ಷನ್‌, ನೀಡಲ್, ಸಿರೆಂಜ್‌ ಸೇರಿದಂತೆ ಹಲವು ವಸ್ತುಗಳ ಪೂರೈಕೆ ನಿಂತುಹೋಗಿದೆ. ಘಟಕದಲ್ಲಿರುವ ಐವರು ಟೆಕ್ನಿಷನ್ಸ್ ಹಾಗೂ ಮೂವರು ಗ್ರೂಪ್ ಡಿ ನೌಕರರಿಗೂ 2 ತಿಂಗಳಿನಿಂದ ಸಂಬಳ ಕೊಟ್ಟಿಲ್ಲ. ಮುಂದಿನ ತಿಂಗಳಿನಿಂದ ಕೇಂದ್ರದ ಎಲ್ಲ ಸಿಬ್ಬಂದಿಯೂ ಕೆಲಸ ನಿಲ್ಲಿಸಲು ನಿರ್ಧರಿಸಿದ್ದೇವೆ ಎಂದು ಘಟಕದ ಸಿಬ್ಬಂದಿ ಅಳಲು ತೋಡಿಕೊಂಡರು.

ಸಮಸ್ಯೆಗೆ ಕಾರಣ: ಜಿಲ್ಲಾ ಆಸ್ಪತ್ರೆಯ ಡಯಾಲಿಸಿಸ್‌ ಘಟಕದ ನಿರ್ವಹಣೆಯ ಹೊಣೆಯನ್ನು ರಾಜ್ಯ ಸರ್ಕಾರ ಇಎಸ್‌ಕೆಎಜಿ ಸಂಜೀವಿನಿ ಸಂಸ್ಥೆಗೆ ವಹಿಸಿದೆ. ಸರ್ಕಾರ ಬಾಕಿ ಹಣ ಪಾವತಿಸಿಲ್ಲ ಎಂದು ಸಂಜೀವಿನಿ ಸಂಸ್ಥೆಯು ಡಯಾಲಿಸಿಸ್‌ ಘಟಕಗಳ ನಿರ್ವಹಣೆಯಿಂದ ಹಿಂದೆ ಸರಿದಿದೆ. ಡಯಾಲಿಸಿಸ್‌ಗೆ ಅಗತ್ಯವಾಗಿ ಬೇಕಾಗಿರುವ ವಸ್ತುಗಳನ್ನು ಖರೀದಿಸಲು, ಸಿಬ್ಬಂದಿಗೆ ವೇತನ ನೀಡಲು ಹಾಗೂ ಘಟಕಗಳ ನಿರ್ವಹಣೆ ಮಾಡಲು ಸರ್ಕಾರ ಬಾಕಿ ಹಣ ಬಿಡುಗಡೆ ಮಾಡಿಲ್ಲ. ಅ.1ರಿಂದ ಉಡುಪಿ ಜಿಲ್ಲಾ ಆಸ್ಪತ್ರೆಯೂ ಸೇರಿದಂತೆ 16 ಜಿಲ್ಲೆಗಳ ಜಿಲ್ಲಾ ಆಸ್ಪತ್ರೆಗಳ ಡಯಾಲಿಸಿಸ್‌ ಕೇಂದ್ರಗಳ ಸೇವೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಸಂಜೀವಿನಿ ಸಂಸ್ಥೆ ಸರ್ಕಾರಕ್ಕೆ ಪತ್ರ ಬರೆದಿದೆ.

ಇಷ್ಟಾದರೂ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳದೆ ಬಡ ರೋಗಿಗಳ ಜೀವದ ಜತೆಗೆ ಚೆಲ್ಲಾಟವಾಡುತ್ತಿದೆ ಎಂದು ರೋಗಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

‘ಸೇವೆ ಸ್ಥಗಿತ ಪತ್ರ ಬರೆದ ಸಂಜೀವಿನಿ’

ಸರ್ಕಾರದಿಂದ ಬಾಕಿ ಹಣ ಪಾವತಿಯಾಗಿಲ್ಲ ಎಂಬ ಕಾರಣಕ್ಕೆ ಇಎಸ್‌ಕೆಎಜಿ ಸಂಜೀವಿನಿ ಸಂಸ್ಥೆ ಡಯಾಲಿಸಿಸ್‌ ಘಟಕದ ನಿರ್ವಹಣೆ ಸಾಧ್ಯವಿಲ್ಲ ಎಂದು ಪತ್ರ ಬರೆದಿದೆ. ಸಮಸ್ಯೆಯನ್ನು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಡಯಾಲಿಸಿಸ್‌ ಕೇಂದ್ರದ ಡಿಡಿ ಅವರ ಗಮನಕ್ಕೆ ತರಲಾಗಿದೆ. ಇದುವರೆಗೂ ಸ್ಪಂದನ ಸಿಕ್ಕಿಲ್ಲ. ಡಯಾಲಿಸಿಸ್‌ ಕೇಂದ್ರಗಳಲ್ಲಿರುವ ಯಂತ್ರಗಳು ಕೆಟ್ಟಿಲ್ಲ. ಬದಲಾಗಿ ನಿರ್ವಹಣೆ ಕೊರತೆ ಇದೆ. ನಿರ್ವಹಣೆ ಮಾಡದೆ ಬಳಸಿದರೆ ರೋಗಿಗಳ ಪ್ರಾಣಕ್ಕೆ ಅಪಾಯವಾಗುವ ಸಾಧ್ಯತೆಗಳಿರುವುದರಿಂದ ಯಂತ್ರಗಳನ್ನು ಬಳಸಲಾಗುತ್ತಿಲ್ಲ. ಬಡ ರೋಗಿಗಳಿಗೆ ತೊಂದರೆಯಾಗುತ್ತಿರುವ ವಿಚಾರ ಗಮನಕ್ಕೆ ಬಂದಿದ್ದರೂ ಸಮಸ್ಯೆಗೆ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ. ಡಾ.ವೀಣಾ ಜಿಲ್ಲಾ ಸರ್ಜನ್‌

‘ಹೊರೆಯಾದ ಪಿಪಿಪಿ ಮಾದರಿ’

ದಾನಿಗಳ ನೆರವು ಪಡೆದು ಜಿಲ್ಲಾ ಆಸ್ಪತ್ರೆಯ ಡಯಾಲಿಸಿಸ್‌ ಘಟಕದಲ್ಲಿ 11 ಡಯಾಲಿಸಿಸ್ ಯಂತ್ರಗಳನ್ನು ಹಾಕಲಾಗಿದೆ. ಆರಂಭದಲ್ಲಿ ಬಿಆರ್‌ಎಸ್‌ ಸಂಸ್ಥೆ ಘಟಕವನ್ನು ನಿರ್ವಹಣೆ ಮಾಡುತ್ತಿತ್ತು. ಆರ್ಥಿಕ ಸಮಸ್ಯೆಯ ಕಾರಣ ನೀಡಿ ಸಂಸ್ಥೆ ನಿರ್ವಹಣೆಯಿಂದ ಹಿಂದೆ ಸರಿದಾಗ ಜಿಲ್ಲಾ ಆಸ್ಪತ್ರೆಯೇ ನಿರ್ವಹಣೆಯ ಹೊಣೆ ವಹಿಸಿಕೊಂಡಿತು. ಈ ಸಂದರ್ಭ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದ ಘಟಕವನ್ನು ರಾಜ್ಯ ಸರ್ಕಾರ 2022 ಜ.17ರಿಂದ ಸಂಜೀವಿನಿ ಸಂಸ್ಥೆಗೆ ನಿರ್ವಹಣೆಯ ಜವಾಬ್ದಾರಿ ವಹಿಸಿತು. ಆರಂಭದಲ್ಲಿ ಸಮರ್ಪಕವಾಗಿ ಕಾರ್ಯ ನಿರ್ವಹಿಸಿದ ಘಟಕ ಕೆಲವೇ ತಿಂಗಳಲ್ಲಿ ಸಮಸ್ಯೆ ಶುರುವಾಯಿತು. ಹಂತ ಹಂತವಾಗಿ ಘಟಕದ ಯಂತ್ರಗಳು ಕೆಟ್ಟುನಿಂತವು. ಈಗ 11 ಯಂತ್ರಗಳಲ್ಲಿ ಒಂದು ಮಾತ್ರ ಕಾರ್ಯ ನಿರ್ವಹಿಸುತ್ತಿದೆ.

‘ನ್ಯಾಯಾಲಯಕ್ಕೆ ಪಿಐಎಲ್‌’

ಜಿಲ್ಲಾ ಆಸ್ಪತ್ರೆಯ ಡಯಾಲಿಸಿಸ್ ಘಟಕ ಸಮರ್ಪಕವಾಗಿ ಕಾರ್ಯ ನಿರ್ವಹಿಸದೆ ಬಡ ರೋಗಿಗಳಿಗೆ ಸಮಸ್ಯೆಯಾಗಿದೆ. ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಂಡಿದೆ. ಕೂಡಲೇ ಎಚ್ಚೆತ್ತುಕೊಂಡು ಸಮಸ್ಯೆ ಬಗೆಹರಿಸಬೇಕು. ಇಲ್ಲವಾದರೆ ಡಯಾಲಿಸಿಸ್ ರೋಗಿಗಳೊಂದಿಗೆ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಲಾಗುವುದು. ಆರೋಗ್ಯ ಕ್ಷೇತ್ರದ ವಿಚಾರದಲ್ಲಿ ಉಡುಪಿ ಜಿಲ್ಲೆ ನತದೃಷ್ಟ ಜಿಲ್ಲೆಯಾಗಿದ್ದು ಜನಪ್ರತಿನಿಧಿಗಳು ಸಮಸ್ಯೆಯ ಬಗ್ಗೆ ಧನಿ ಎತ್ತದಿರುವುದು ಬೇಸರದ ಸಂಗತಿ. ಪಿ.ವಿ.ಭಂಡಾರಿ ಮನೋವೈದ್ಯ ಸಾಮಾಜಿಕ ಹೋರಾಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT